More

    ನಿಮಗೆ ಸಂತೋಷ ಬೇಕೇ? ಅನ್ಯರನ್ನೂ ಖುಷಿಪಡಿಸಿ

    ಚಿಕ್ಕಮಗಳೂರು: ಜೀವನದಲ್ಲಿ ಕಷ್ಟ ಬರುವುದು ಸಹಜ. ಹಾಗಿದ್ದರೂ ಎಲ್ಲವನ್ನೂ ಸಕಾರಾತ್ಮಕವಾಗಿ ತೆಗೆದುಕೊಳ್ಳಬೇಕೆನ್ನುವುದೇ ನಮ್ಮ ಗುರಿಯಾಗಬೇಕು ಎಂದು ಎಎಸ್ಪಿ ಎಸ್.ಎನ್.ಶ್ರುತಿ ಹೇಳಿದರು.

    ನಗರದ ಪಾಲಿಟೆಕ್ನಿಕ್ ಕಾಲೇಜು ಆವರಣದಲ್ಲಿ ಭಾನುವಾರ ಕರ್ನಾಟಕ ಟೈಲರ್ಸ್ ಅಸೋಸಿಯೇಶನ್ ಜಿಲ್ಲಾ, ಕ್ಷೇತ್ರ ಮತ್ತು ನಗರ ಸಮಿತಿ ಹಮ್ಮಿಕೊಂಡಿದ್ದ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.

    ಜೀವನದಲ್ಲಿ ತಾನು ಸಂತೋಷದಿಂದ ಇರುವುದರ ಜತೆಗೆ ಮತ್ತೊಬ್ಬರನ್ನೂ ಸಂತೋಷಪಡಿಸಬೇಕು. ಆಗ ಜೀವನಕ್ಕೊಂದು ಅರ್ಥ ಬರುತ್ತದೆ. ಮನೆಯಲ್ಲಿರುವ ಮಕ್ಕಳಿಗೆ ಕ್ರೀಡೆ, ಕಲೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಲು ಪ್ರೋತ್ಸಾಹಿಸಬೇಕು. ಅವರು ಬಹುಮಾನ ಗಳಿಸಬೇಕು ಎನ್ನುವುದಕ್ಕಿಂತ ಭಾಗವಹಿಸುವಿಕೆ ಮುಖ್ಯ ಎಂದರು.

    ಪರಿಸರವನ್ನು ಮುಂದಿನ ಪೀಳಿಗೆಗೂ ಬಿಟ್ಟುಕೊಡಬೇಕು ಎಂದರೆ ಅದರ ಜಾಗೃತಿ ನಮಗಿರಬೇಕು. ಯಾವುದೆ ವಿಷಯದಲ್ಲಿ ಅತಿಯಾಸೆಪಟ್ಟರೆ ಗತಿಕೇಡು ಎಂಬುದು ಸ್ಪಷ್ಟ. ಚಿಕ್ಕಮಗಳೂರಿನಲ್ಲಿ ಹುಟ್ಟಿದ ಜನರು ಬಹಳ ಅದೃಷ್ಟಶಾಲಿಗಳು. ಆಮ್ಲಜನಕವೇ ಇಲ್ಲದೆ ಉಸಿರಾಡುವುದಕ್ಕೂ ಕಷ್ಟದ ಸ್ಥಿತಿಯಲ್ಲಿ ಲಡಾಖ್​ನಲ್ಲಿ ಜನರಿದ್ದಾರೆ ಎಂಬುದು ಪ್ರವಾಸದ ಸಂದರ್ಭ ಗಮನಕ್ಕೆ ಬಂದಿದೆ. ಅಂತಹ ಕಡೆ ನಮ್ಮ ಸೈನಿಕರು ಕಷ್ಟಪಟ್ಟು ಗಡಿ ಕಾಯುತ್ತಿದ್ದಾರೆ. ಹಾಗಾಗಿ ಮುಂದಿನ ಪೀಳಿಗೆಗೂ ಉತ್ತಮ ಆಮ್ಲಜನಕವನ್ನು ಬಿಡಬೇಕು ಎಂದರೆ ಪರಿಸರ ಕಾಳಜಿ ತೋರಬೇಕು. ನಾವು, ನಮ್ಮ ಮನೆ ಬದಲಾವಣೆಯಾದಾಗ ದೇಶ ಬದಲಾಗುತ್ತದೆ ಎಂದರು.

    ಮಹಿಳೆಯರು ಮಾಡುತ್ತಿರುವ ಟೈಲರಿಂಗ್ ಕೆಲಸ ಉತ್ತಮವಾದದ್ದು. ಶ್ರದ್ಧೆ, ಪ್ರಾಮಾಣಿಕತೆಯಿಂದ ಕೆಲಸ ಮಾಡಿದರೆ ತಾನಾಗಿಯೇ ಕೈತುಂಬ ಕೆಲಸ ಹುಡುಕಿಕೊಂಡು ಬರುತ್ತದೆ. ಕೆಲಸದ ಸಂದರ್ಭದಲ್ಲಿ ಮೊಬೈಲ್ ನೋಡುವುದನ್ನು ಬಿಡಬೇಕು ಎಂದು ಹೇಳಿದರು.

    ಅಸೋಸಿಯೇಶನ್ ಮಾಜಿ ಅಧ್ಯಕ್ಷ ಎಸ್.ಪಿ.ಅಶೋಕ್ ಶೆಟ್ಟಿ ಮಾತನಾಡಿ, ಹಲವು ವರ್ಷಗಳಿಂದ ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್​ನಿಂದ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಬಂದಿದ್ದು, ಜ.16ರಂದು ಹಿರಿಯ ವೃತ್ತಿ ಬಾಂಧವರಿಗೆ ಸನ್ಮಾನ ಮತ್ತು ವಿದ್ಯಾರ್ಥಿ ವೇತನ ನೀಡುವ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.

    ಕೆಎಸ್​ಟಿಎ ಜಿಲ್ಲಾಧ್ಯಕ್ಷ ಸಯ್ಯದ್ ರೆಹಮಾನ್, ಮಹಿಳೆಯರು ಮತ್ತು ಮಕ್ಕಳಿಗಾಗಿ ಮ್ಯೂಸಿಕಲ್ ಛೇರ್, 100 ಮೀ ಓಟ, ಮಡಿಕೆ ಒಡೆಯುವುದು, ಲೆಮನ್ ಮತ್ತು ಸ್ಪೂನ್ ಸ್ಪರ್ಧೆಗಳು ನಡೆದರೆ, ಪುರುಷರಿಗಾಗಿ 100 ಮೀ.ಓಟ, ಗುಂಡು ಎಸೆತ, ಹಗ್ಗಜಗ್ಗಾಟ ಮತ್ತು ಕಬಡ್ಡಿ ಪಂದ್ಯಗಳು ನಡೆದವು.

    ಅಸೋಸಿಯೇಶನ್ ಕ್ಷೇತ್ರ ಸಮಿತಿ ಅಧ್ಯಕ್ಷ ಎಚ್.ಆರ್.ಸುಧಿರ್, ಶೋಭಾ, ನೂರ್​ಜಹಾನ್, ರಾಜು, ಸತೀಶ್, ಅನಿಲ್, ಯುವರಾಜ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts