More

    ಇಂದು ಇಂಗ್ಲೆಂಡ್ ವಿರುದ್ಧ 3ನೇ ಟಿ20, ಮುನ್ನಡೆಯ ತವಕದಲ್ಲಿ ಟೀಮ್ ಇಂಡಿಯಾ

    ಅಹಮದಾಬಾದ್: ಆರಂಭಿಕ ಆಘಾತದ ಬಳಿಕ ಪುಟಿದೆದ್ದು ನಿಲ್ಲುವ ಛಲವನ್ನು ಮತ್ತೊಮ್ಮೆ ಪ್ರದರ್ಶಿಸಿರುವ ಭಾರತ ತಂಡ ಇದೀಗ ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಮುನ್ನಡೆ ಸಾಧಿಸುವ ಹಂಬಲದಲ್ಲಿದೆ. ಸದ್ಯ 1-1 ಸಮಬಲದಲ್ಲಿರುವ 5 ಪಂದ್ಯಗಳ ಸರಣಿಯ 3ನೇ ಚುಟುಕು ಕ್ರಿಕೆಟ್ ಕದನ ಮಂಗಳವಾರ ನಡೆಯಲಿದ್ದು, ವಿರಾಟ್ ಕೊಹ್ಲಿ ಬಳಗ ಮುನ್ನಡೆ ಸಾಧಿಸುವ ಮೂಲಕ ಸರಣಿ ಗೆಲುವಿನತ್ತ ಮುನ್ನಡೆಯುವ ಗುರಿ ಹೊಂದಿದೆ.

    ನರೇಂದ್ರ ಮೋದಿ ಸ್ಟೇಡಿಯಂನಲ್ಲೇ ನಡೆದ ಮೊದಲ ಪಂದ್ಯದಲ್ಲಿ ಕೆಟ್ಟ ಬ್ಯಾಟಿಂಗ್ ನಿರ್ವಹಣೆ ತೋರಿ ಎಡವಿದ್ದ ಭಾರತ ತಂಡ 2ನೇ ಪಂದ್ಯದಲ್ಲಿ ಬ್ಯಾಟಿಂಗ್‌ನಲ್ಲೇ ಗಮನಾರ್ಹ ಸುಧಾರಣೆ ಕಂಡಿತ್ತು. ಇದಕ್ಕೆ ಕಾರಣವಾಗಿದ್ದು ಪದಾರ್ಪಣೆ ಪಂದ್ಯದಲ್ಲೇ ಮಿಂಚಿದ ಇಶಾನ್ ಕಿಶನ್ ಅವರ ನಿರ್ಭೀತಿಯ ಬ್ಯಾಟಿಂಗ್. ಇದು ನಾಯಕ ವಿರಾಟ್ ಕೊಹ್ಲಿಗೂ ಒತ್ತಡ ರಹಿತವಾಗಿ ಆಡುವ ಮೂಲಕ ಬ್ಯಾಟಿಂಗ್ ಲಯ ಕಂಡುಕೊಳ್ಳಲು ನೆರವಾಗಿರುವುದು ಇನ್ನೊಂದು ಪ್ಲಸ್ ಪಾಯಿಂಟ್. ಎರಡನೇ ಪಂದ್ಯದಲ್ಲಿ ಆಂಗ್ಲರಿಗೆ ತಿರುಗೇಟು ನೀಡಿದ ನಡುವೆಯೂ ಟೀಮ್ ಇಂಡಿಯಾದಲ್ಲಿ ಕೆಲವು ಕಳವಳ ಇನ್ನೂ ಬಾಕಿ ಉಳಿದಿದೆ. ಅದರಲ್ಲಿ ಪ್ರಮುಖವಾದುದು ಕನ್ನಡಿಗ ಕೆಎಲ್ ರಾಹುಲ್ ಅವರ ವೈಫಲ್ಯ. ಮೊದಲೆರಡು ಪಂದ್ಯಗಳಲ್ಲಿ ಒಟ್ಟಾಗಿ 1 ರನ್ ಮಾತ್ರ ಗಳಿಸಿರುವ ರಾಹುಲ್, ಆರಂಭಿಕರಾಗಿ ಹಿಂದಿನ ಲಯಕ್ಕೆ ಮರಳಲು ಪರದಾಡುತ್ತಿದ್ದಾರೆ.

    ಇದನ್ನೂ ಓದಿ: ಮದುವೆಯ ಮೂಲಕ ಸಚಿನ್, ಕೊಹ್ಲಿ, ಪಾಂಡ್ಯ, ಧವನ್ ಸಾಲಿಗೆ ಸೇರಿದ ಬುಮ್ರಾ!

    ಆಸ್ಟ್ರೇಲಿಯಾ, ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗಳಲ್ಲಿ ಮೊದಲ ಪಂದ್ಯದಲ್ಲಿ ಸೋತರೂ ನಂತರ ಸರಣಿ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ ಟೀಮ್ ಇಂಡಿಯಾ, ಇದೀಗ ಟಿ20 ಸರಣಿಯಲ್ಲೂ ಅದನ್ನೇ ಪುನರಾವರ್ತಿಸುವ ತವಕದಲ್ಲಿದೆ.

    ಚಿಂತೆಯಲ್ಲಿ ಆಂಗ್ಲರು
    ಮೊದಲ ಪಂದ್ಯದಲ್ಲಿ ಎಲ್ಲ ವಿಭಾಗಗಳಲ್ಲಿ ಮೇಲುಗೈ ಸಾಧಿಸಿದ್ದ ಆಂಗ್ಲರು 2ನೇ ಪಂದ್ಯದಲ್ಲಿ ಇದಕ್ಕೆ ತದ್ವಿರುದ್ಧವಾದ ಆಟವಾಡಿದರು. ನಿಧಾನಗತಿಯ ಪಿಚ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದಾಗ ಪರದಾಡಿದ ಆಂಗ್ಲರು, ಬೌಲಿಂಗ್‌ನಲ್ಲೂ ಇಶಾನ್ ಕಿಶನ್ ಆರ್ಭಟದ ಎದುರು ಲಯ ತಪ್ಪಿದರು. ಜೇಸನ್ ರಾಯ್ ಎರಡೂ ಪಂದ್ಯಗಳಲ್ಲಿ ಉತ್ತಮ ಆರಂಭ ಕಂಡಿದ್ದರೂ ಅದನ್ನು ದೊಡ್ಡ ಮೊತ್ತವಾಗಿ ಪರಿವರ್ತಿಸಲು ವಿಲರಾಗಿದ್ದಾರೆ.

    *ಪಂದ್ಯ ಆರಂಭ: ರಾತ್ರಿ 7.00
    *ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್1.

    ಟೀಮ್ ನ್ಯೂಸ್:
    ಭಾರತ: 3ನೇ ಪಂದ್ಯಕ್ಕೆ ಗೆಲುವಿನ ಕಾಂಬಿನೇಷನ್ ಉಳಿಸಿಕೊಳ್ಳುವ ನಿರೀಕ್ಷೆ ಇದೆ. ಆದರೆ ಮೊದಲೆರಡು ಪಂದ್ಯಗಳ ವಿಶ್ರಾಂತಿಯ ಬಳಿಕ ರೋಹಿತ್ ಶರ್ಮ ತಂಡಕ್ಕೆ ಮರಳಿದರೆ ಆಗ ರಾಹುಲ್ ಸ್ಥಾನ ಬಿಟ್ಟುಕೊಡಬೇಕಾದೀತು. ಆದರೆ ವಿಶ್ವಕಪ್ ತಂಡದಲ್ಲಿರಲು ಅರ್ಹರಾಗಿರುವ ರಾಹುಲ್‌ರನ್ನು ಇಷ್ಟು ಬೇಗ ಹೊರಗಿಡುವುದು ಸರಿ ಎನಿಸದು. ಪದಾರ್ಪಣೆ ಪಂದ್ಯದಲ್ಲಿ ಬ್ಯಾಟಿಂಗ್ ಅವಕಾಶ ಪಡೆಯದ ಸೂರ್ಯಕುಮಾರ್ ಯಾದವ್ ಸಹಜವಾಗಿಯೇ ಮತ್ತೊಂದು ಅವಕಾಶ ಪಡೆಯಲಿದ್ದಾರೆ.
    ಇಂಗ್ಲೆಂಡ್: ಗಾಯದ ಸಮಸ್ಯೆಯಿಂದಾಗಿ 2ನೇ ಟಿ20 ಪಂದ್ಯದಿಂದ ಹೊರಗುಳಿದ್ದ ಇಂಗ್ಲೆಂಡ್ ವೇಗಿ ಮಾರ್ಕ್ ವುಡ್, 3ನೇ ಪಂದ್ಯಕ್ಕೆ ತಂಡಕ್ಕೆ ಮರಳುವ ನಿರೀಕ್ಷೆ ಇದೆ. ಇದರಿಂದ ಟಾಮ್ ಕರ‌್ರನ್ ಮತ್ತೆ ತಂಡದಿಂದ ಹೊರಗುಳಿಯಬಹುದು. 3ನೇ ಪಂದ್ಯದ ಪಿಚ್ ಸ್ಪಿನ್‌ಗೆ ಹೆಚ್ಚಿನ ನೆರವಾಗುವ ಬಗ್ಗೆ ನಾಯಕ ಮಾರ್ಗನ್ ಈಗಾಗಲೆ ಹೇಳಿಕೊಂಡಿರುವುದರಿಂದ ಕ್ರಿಸ್ ಜೋರ್ಡನ್ ಬದಲಿಗೆ ಸ್ಪಿನ್ ಬೌಲಿಂಗ್ ಆಲ್ರೌಂಡರ್ ಮೊಯಿನ್ ಅಲಿ ಅವಕಾಶ ಪಡೆಯಬಹುದು.

    ಬಲ ಹೆಚ್ಚಿಸಿದ ಇಶಾನ್ ಕಿಶನ್
    ಮೊದಲ ಪಂದ್ಯದಲ್ಲಿ ಬ್ಯಾಟಿಂಗ್ ವಿಭಾಗ ಕೈಕೊಟ್ಟ ಕಾರಣ ಸೋತಿದ್ದ ಭಾರತ ತಂಡ 2ನೇ ಪಂದ್ಯದಲ್ಲಿ ಬಲಿಷ್ಠ ಬ್ಯಾಟಿಂಗ್‌ನಿಂದಲೇ ಜಯಿಸಿತು. ಇಶಾನ್ ಕಿಶನ್ ಬಿರುಸಿನ ಆಟದ ಮೂಲಕ ತಂಡದ ಮನೋಸ್ಥೈರ್ಯವನ್ನು ಹೆಚ್ಚಿಸುವಂಥ ಆಟವಾಡಿದ್ದು ಇದಕ್ಕೆ ಕಾರಣ. ಶಿಖರ್ ಧವನ್ ಬದಲಿಗೆ ಅವಕಾಶ ಪಡೆದ 22 ವರ್ಷದ ಎಡಗೈ ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಅದನ್ನು ಎರಡೂ ಕೈಗಳಿಂದ ಬಾಚಿಕೊಂಡರು. ಇಂಗ್ಲೆಂಡ್ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಇಶಾನ್ ಕಿಶನ್, ಮುಂಬೈ ಇಂಡಿಯನ್ಸ್ ನೆಟ್‌ನಲ್ಲಿ ಜಸ್‌ಪ್ರೀತ್ ಬುಮ್ರಾ, ಟ್ರೆಂಟ್ ಬೌಲ್ಟ್ ಅವರಂಥ ವೇಗಿಗಳನ್ನು ಎದುರಿಸಿರುವ ಅನುಭವ ನೆರವಿಗೆ ಬಂತು ಎಂದಿದ್ದಾರೆ. ಈ ಮೂಲಕ ಇಶಾನ್ ಕಿಶನ್ ಹಾಲಿ ವರ್ಷ ತವರಿನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೂ ಭಾರತ ತಂಡದಲ್ಲಿ ಸ್ಥಾನ ಪಡೆಯುವ ಪೈಪೋಟಿಯಲ್ಲಿ ಕಾಣಿಸಿಕೊಂಡಿದ್ದಾರೆ.

    ಪಿಚ್ ರಿಪೋರ್ಟ್
    ಮೊದಲ ಎರಡೂ ಪಂದ್ಯಗಳಲ್ಲಿ ಟಾಸ್ ಗೆದ್ದ ತಂಡವೇ ಗೆಲುವು ದಾಖಲಿಸಿದೆ. ಅಂದರೆ ಮೊಟೆರಾ ಪಿಚ್‌ನಲ್ಲಿ ಚೇಸಿಂಗ್ ಸುಲಭವಾಗಿ ಕಾಣಿಸುತ್ತಿದೆ. ಹೀಗಾಗಿ ಈ ಪಂದ್ಯದಲ್ಲೂ ಉಭಯ ತಂಡಗಳ ನಾಯಕರ ಮೊದಲ ಗಮನ ಟಾಸ್ ಗೆಲುವಿನ ಮೇಲೆಯೇ ಇದ್ದರೆ ಅಚ್ಚರಿ ಇಲ್ಲ. ಟೆಸ್ಟ್ ಸರಣಿಯಲ್ಲಿ ಆಡಿದ್ದ ಕೆಂಪು ಮಣ್ಣಿನ ಪಿಚ್‌ನಲ್ಲಿ 3ನೇ ಪಂದ್ಯ ನಡೆಯಲಿದ್ದು, ಸ್ಪಿನ್ನರ್‌ಗಳಿಗೆ ನೆರವಾಗುವ ನಿರೀಕ್ಷೆಯೂ ಇದೆ.

    ಪ್ರೇಕ್ಷಕರಿಲ್ಲದೆ ಪಂದ್ಯ
    ದೇಶದಲ್ಲಿ ಕರೊನಾ ಪ್ರಕರಣಗಳ ಉಲ್ಬಣದಿಂದಾಗಿ ಅಹಮದಾಬಾದ್‌ನಲ್ಲಿ ಭಾರತ-ಇಂಗ್ಲೆಂಡ್ ನಡುವಿನ ಕೊನೇ 3 ಟಿ20 ಪಂದ್ಯಗಳು ಪ್ರೇಕ್ಷಕರಿಲ್ಲದೆ ಖಾಲಿ ಕ್ರೀಡಾಂಗಣದಲ್ಲಿ ನಡೆಯಲಿವೆ. ಈಗಾಗಲೆ ಮಾರಾಟ ಮಾಡಲಾಗಿರುವ ಟಿಕೆಟ್ ಹಣವನ್ನು ಹಿಂದಿರುಗಿಸಲಾಗುವುದು ಎಂದು ಗುಜರಾತ್ ಕ್ರಿಕೆಟ್ ಸಂಸ್ಥೆ ಸೋಮವಾರ ತಿಳಿಸಿದೆ. ಈ ಮುನ್ನ ಶೇ. 50 ಪ್ರೇಕ್ಷಕರಿಗೆ ಅವಕಾಶ ನೀಡಲಾಗಿತ್ತು. ಭಾನುವಾರ ನಡೆದ ಸರಣಿಯ 2ನೇ ಪಂದ್ಯವನ್ನು ಸುಮಾರು 66 ಸಾವಿರ ಪ್ರೇಕ್ಷಕರು ವೀಕ್ಷಿಸಿದ್ದರು.

    ಕೊಹ್ಲಿ ಯಶಕ್ಕೆ ಎಬಿಡಿ ಕಾರಣ!
    ಸತತ 2 ಶೂನ್ಯ ಸೇರಿದಂತೆ ಕಳೆದ ಇನಿಂಗ್ಸ್‌ಗಳಿಂದ ರನ್‌ಗಾಗಿ ಪರದಾಡುತ್ತಿದ್ದ ವಿರಾಟ್ ಕೊಹ್ಲಿ ಭಾನುವಾರ ಅಜೇಯ 73 ರನ್ ಸಿಡಿಸಿ ಹಿಂದಿನ ಲಯಕ್ಕೆ ಮರಳಿದ್ದಾರೆ. ಇದಕ್ಕೆ ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್ ಹಾಗೂ ಆರ್‌ಸಿಬಿ ತಂಡದ ಸಹ-ಆಟಗಾರ ಎಬಿ ಡಿವಿಲಿಯರ್ಸ್‌ ಕಾರಣ ಎಂದು ಕೊಹ್ಲಿ ಹೇಳಿಕೊಂಡಿದ್ದಾರೆ. ಪಂದ್ಯಕ್ಕೆ ಮುನ್ನ ಎಬಿಡಿ ಜತೆಗೆ ನಡೆಸಿದ ವಿಶೇಷ ಮಾತುಕತೆ ನಡೆಸಿದೆ. ಚೆಂಡಿನ ಮೇಲೆ ಗಮನವಿಟ್ಟು ಆಡುವಂತೆ ಅವರು ಹೇಳಿದ್ದರು. ಅದರಂತೆ ನಾನು ಆಡಿದೆ ಎಂದು ಕೊಹ್ಲಿ ಪಂದ್ಯದ ಬಳಿಕ ವಿವರಿಸಿದರು.

    ಭಾರತ ತಂಡಕ್ಕೆ ದಂಡ
    2ನೇ ಟಿ20 ಪಂದ್ಯದಲ್ಲಿನ ನಿಧಾನಗತಿ ಓವರ್‌ಗಾಗಿ ಭಾರತ ತಂಡಕ್ಕೆ ಪಂದ್ಯ ಸಂಭಾವನೆಯ ಶೇ. 20 ದಂಡ ವಿಧಿಸಲಾಗಿದೆ. ನಿಗದಿತ ಸಮಯದ ವೇಳೆ ವಿರಾಟ್ ಕೊಹ್ಲಿ ಪಡೆ 1 ಓವರ್ ಹಿಂದುಳಿದಿತ್ತು ಎಂದು ಪರಿಗಣಿಸಿರುವ ಐಸಿಸಿ ಮ್ಯಾಚ್ ರೆಫ್ರಿ ಜಾವಗಲ್ ಶ್ರೀನಾಥ್ ಈ ಶಿಕ್ಷೆ ವಿಧಿಸಿದ್ದಾರೆ.

    ಕ್ರೀಡಾ ನಿರೂಪಕಿಯನ್ನು ವಿವಾಹವಾದ ಕ್ರಿಕೆಟಿಗರಲ್ಲಿ ಬುಮ್ರಾ ಮೊದಲಿಗರಲ್ಲ!

    ಮತ್ತೆ ಬಸಿರಾದ ಗೀತಾ ಬಾಸ್ರಾ, 2ನೇ ಮಗುವಿನ ನಿರೀಕ್ಷೆಯಲ್ಲಿ ಹರ್ಭಜನ್ ಸಿಂಗ್

    VIDEO | ಐಪಿಎಲ್‌ಗೆ ಮುನ್ನ ಸನ್ಯಾಸಿ ಅವತಾರದಲ್ಲಿ ಎಂಎಸ್ ಧೋನಿ ಪ್ರತ್ಯಕ್ಷ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts