More

    ಸತತ ಮಳೆಯಿಂದ ತುಂಬಿ ಹರಿಯುತ್ತಿರುವ ಸುವರ್ಣಾವತಿ

    ಯಳಂದೂರು: ಪಟ್ಟಣವೂ ಸೇರಿದಂತೆ ತಾಲೂಕಿನಲ್ಲಿ ಹರಿಯುವ ಸುವರ್ಣಾವತಿ ನದಿ ಸತತ ಮಳೆಯಾಗುತ್ತಿರುವ ಕಾರಣ ತುಂಬಿ ಹರಿಯುತ್ತಿದ್ದು ಈ ಭಾಗದ ರೈತರು ಹಾಗೂ ಸಾರ್ವಜನಿಕರಲ್ಲಿ ಸಂತಸ ಮೂಡಿಸಿದೆ.


    ಕಳೆದ ಒಂದು ವರ್ಷದಿಂದಲೂ ನದಿಯಲ್ಲಿ ನೀರು ನಿಂತಿತ್ತು. ನದಿ ಒಣಗಿ ಕಳೆ ಸಸ್ಯಗಳು, ಕಸಕಡ್ಡಿಗಳಿಂದ ಹೂಳು ತುಂಬಿಕೊಂಡು ನದಿಯ ಸ್ವರೂಪವನ್ನೇ ಬದಲಿಸಿತ್ತು. ಈಗ ಮಳೆಯಾಗುತ್ತಿದ್ದು ಗುರುವಾರದಿಂದ ನದಿಯಲ್ಲಿ ನೀರು ಹರಿಯುತ್ತಿದೆ.
    ನದಿಗೆ ಕಲುಷಿತ ನೀರು: ಸುವರ್ಣಾವತಿ ನದಿಯಲ್ಲಿ ಚರಂಡಿಯ ಕಲುಷಿತ ನೀರು ಬಿಡಲಾಗುತ್ತಿದೆ. ಇಲ್ಲಿ ಪಟ್ಟಣವೂ ಸೇರಿದಂತೆ ಇದರ ವ್ಯಾಪ್ತಿಯಲ್ಲಿ ಬರುವ ವಿವಿಧ ಗ್ರಾಮಗಳ ಕಲುಷಿತ ಚರಂಡಿ ನೀರನ್ನು ಬಿಡಲಾಗುತ್ತಿದ್ದು, ಹೊನ್ನಿನ ಹೊಳೆ ಎಂದು ಕರೆಯಿಸಿಕೊಳ್ಳುತ್ತಿದ್ದ ಸುವರ್ಣಾವತಿ ಈಗ ಕಲಷಿತ ನದಿಯಾಗಿ ಮಾರ್ಪಟ್ಟಿದೆ. ಈ ಹೊಳೆಯಂಚಿನಲ್ಲಿ ಚುಕ್ಕೆ ಜಿಂಕೆ, ಸಾರಂಗ, ಮುಳ್ಳುಹಂದಿ, ಕಾಡುಹಂದಿ, ನವಿಲು ಸೇರಿದಂತೆ ವಿವಿಧ ಪ್ರಭೇದದ ಪ್ರಾಣಿ, ಪಕ್ಷಿಗಳ ಆವಾಸವಾಗಿದ್ದು, ಇವುಗಳ ಆರೋಗ್ಯಕ್ಕೆ ಮಾರಕವಾಗಿ ಪರಿಣಮಿಸುವ ಸಾಧ್ಯತೆ ಇದೆ. ಇದರೊಂದಿಗೆ ಇದರ ಅಕ್ಕಪಕ್ಕದಲ್ಲಿರುವ ಸಾರ್ವಜನಿಕರ ಆರೋಗ್ಯದ ಮೇಲೂ ಇದು ದುಷ್ಪರಿಣಾಮ ಬೀರುವ ಸಾಧ್ಯತೆಗಳಿದ್ದು, ಈ ಬಗ್ಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಇದರ ಸಂರಕ್ಷಣೆಗೆ ಮುಂದಾಗಬೇಕು ಎಂಬುದು ಪರಿಸರ ಪ್ರೇಮಿಗಳಾದ ಮನು, ಮಹೇಶ್, ಮಲ್ಲು, ನಾಗೇಂದ್ರ ಸೇರಿದಂತೆ ಹಲವರ ಆಗ್ರಹವಾಗಿದೆ.


    ಎಲ್ಲೆಲ್ಲೂ ಹೂಳು, ನದಿ ಒತ್ತುವರಿ: ನದಿ ಪಾತ್ರದ ಜಮೀನುಗಳಲ್ಲಿ ಹಲವರು ನದಿಯ ಜಾಗವನ್ನು ಒತ್ತುವರಿ ಮಾಡಿಕೊಂಡಿರುವುದರಿಂದ ಇದರ ಮೂಲ ಸ್ವರೂಪವೇ ಬದಲಾಗಿದೆ. ಅಲ್ಲದೆ ನದಿಯಲ್ಲಿ ಹಲವು ಗ್ರಾಮ ಪಂಚಾಯಿತಿಗಳ ತ್ಯಾಜ್ಯವನ್ನೂ ಸುರಿಯಲಾಗುತ್ತಿದೆ ಎಂಬುದು ಸಾರ್ವಜನಿಕರ ದೂರಾಗಿದೆ.
    ಒತ್ತುವರಿಯಿಂದ ಕಳೆದ 2 ವರ್ಷಗಳ ಹಿಂದೆ ನದಿಯಲ್ಲಿ ಪ್ರವಾಹ ಬಂದಿತ್ತು. ಆಗ ನದಿ ಬದಿಯಲ್ಲಿದ್ದ ಜಮೀನುಗಳಲ್ಲೇ ನೀರು ಹರಿದಿತ್ತು. ಕೆಲವು ಕಡೆ ಒಂದು ಕಾಲುವೆಯ ರೀತಿಯಲ್ಲೇ ನದಿ ಇದ್ದು ನದಿ ವ್ಯಾಪ್ತಿಗೆ ಒಳಪಡುವ ಜಮೀನಿನ ಪ್ರಮಾಣ ಎಷ್ಟು ಎಂಬುದು ತಿಳಿಯದಾಗಿದೆ. ಹಾಗಾಗಿ ಇದನ್ನು ಸರ್ವೇ ಮಾಡಿಸಿ ಇದರ ಗಡಿ ಗುರುತಿಸಿ, ಸುತ್ತಮುತ್ತಲ ಹಾಗೂ ನದಿಯ ಪಾತ್ರದ ಪ್ರದೇಶದ ಎಲ್ಲೆಯನ್ನು ಹೂಳು ತೆಗೆಯಿಸಿ ಇದನ್ನು ಶುಚಿಗೊಳಿಸುವ ಬೃಹತ್ ಕಾರ್ಯಕ್ಕೆ ಸಂಬಂಧಪಟ್ಟ ಸಚಿವರು, ಉಸ್ತುವಾರಿ ಸಚಿವರು, ಶಾಸಕರು ಕ್ರಮ ವಹಿಸಬೇಕು. ಈ ನದಿಯನ್ನು ಉಳಿಸಿಕೊಂಡು ಮತ್ತೆ ಇದನ್ನು ಜೀವ ನದಿಯಾಗಿ ಪರಿವರ್ತಿಸಲು ಸೂಕ್ತ ಕ್ರಮ ವಹಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts