More

    ಶಾಂತರೂಪ ಸಿದ್ಧಾರೂಢರಿಗೆ ಶರಣು

    ಹುಬ್ಬಳ್ಳಿ: ಮಹಾಶಿವರಾತ್ರಿ ನಿಮಿತ್ತ ನಗರದಲ್ಲಿ ಶ್ರೀ ಸಿದ್ಧ್ದಾರೂಢರ ಜಾತ್ರಾ ಮಹೋತ್ಸವ ನಿಮಿತ್ತ ಬುಧವಾರ ಸಂಜೆ ಅದ್ದೂರಿಯಿಂದ ರಥೋತ್ಸವ ಜರುಗಿತು.

    ಬೆಳಗ್ಗೆಯಿಂದ ಶ್ರೀ ಸಿದ್ಧಾರೂಢ ಹಾಗೂ ಶ್ರೀ ಗುರುನಾಥರೂಢರ ಮೂರ್ತಿಗೆ ಅಭಿಷೇಕ, ಅಲಂಕಾರ, ನೈವೇದ್ಯ ಅರ್ಪಿಸಲಾಯಿತು. ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ವಿವಿಧ ರಾಜ್ಯಗಳಿಂದ ಆಗಮಿಸಿದ್ದ ಭಕ್ತರು, ಉಭಯ ಶ್ರೀಗಳ ದರ್ಶನ ಪಡೆದರು. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಭಕ್ತರು, ಉಭಯ ಶ್ರೀಗಳ ಭಜನೆ ಮಾಡಿದರು. ಸಂಜೆ ವೇಳೆ ಪಲ್ಲಕ್ಕಿ ಉತ್ಸವ ಜರುಗಿತು. ನಂತರ ಭಕ್ತರ ಮಧ್ಯೆ ವಿಜೃಂಭಣೆಯಿಂದ ರಥವನ್ನು ಎಳೆಯಲಾಯಿತು. ಶ್ರೀಮಠದ ಆಡಳಿತಾಧಿಕಾರಿ ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಉಮೇಶ ಅಡಿಗ ಅವರು ರಥೋತ್ಸವಕ್ಕೆ ಪೂಜೆ ನೆರವೇರಿಸಿ ಚಾಲನೆ ನೀಡಿದರು. ನಂತರ ಶ್ರೀ ಸಿದ್ಧಾರೂಢ ಮಹಾರಾಜ್ಕೀ ಜೈ ಎನ್ನುವ ಭಕ್ತರ ಘೊಷಣೆ ಎಲ್ಲೆಡೆ ಮೊಳಗಿತು. ‘ಸಿದ್ಧಾರೂಢರ ಅಂಗಾರ, ದೇಶಕ್ಕೆಲ್ಲ ಬಂಗಾರ’ ಎನ್ನುವ ಹಾಡುಗಳನ್ನು ಹಾಡಿದರು. ರಥಕ್ಕೆ ಉತ್ತತ್ತಿ ಎಸೆದು ಭಕ್ತರು ಕೃತಾರ್ಥರಾದರು.

    ದೂರದ ಊರುಗಳಿಂದ ಆಗಮಿಸಿದ್ದ ಭಕ್ತರು, ಉಭಯ ಶ್ರೀಗಳಿಗೆ ಹಣ್ಣು-ಹಂಪಲು, ನೈವೇದ್ಯ ಅರ್ಪಿಸಿದರು. ಕೆಲವರು ಭಜನೆ ಮಾಡುತ್ತ ಶ್ರಿಗಳನ್ನು ಸ್ಮರಿಸಿದರು. ಭಕ್ತರಿಗಾಗಿ ಶ್ರೀಮಠದಿಂದ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಪೊಲೀಸರು ಸೂಕ್ತ ಬಂದೋಬಸ್ತ್ ಕಲ್ಪಿಸಿದ್ದರು.

    ಭಕ್ತರ ಪ್ರವಾಹ: ಕೋವಿಡ್ ಹಿನ್ನೆಲೆಯಲ್ಲಿ ರಾಜ್ಯ ಹಾಗೂ ಜಿಲ್ಲಾಡಳಿತ ಮಾರ್ಗಸೂಚಿಗಳನ್ನು ಪ್ರಕಟಿಸಿತ್ತು. ಈ ಹಿನ್ನೆಲೆಯಲ್ಲಿ ಎರಡು ವರ್ಷ ಜಾತ್ರೆಯನ್ನು ಮಾಡದೇ ಬರೀ ಧಾರ್ವಿುಕ ಕಾರ್ಯಕ್ರಗಳನ್ನು ಮಾತ್ರ ಶ್ರೀಮಠದಲ್ಲಿ ಏರ್ಪಡಿಸಲಾಗಿತ್ತು. ಈ ಬಾರಿ ಜಾತ್ರೆ ಆಗಮನಕ್ಕಿಂತ ಮುನ್ನವೇ ಮೂರನೇ ಅಲೆ ಬಂದು ಹೋಗಿದೆ. ಕೋವಿಡ್ ಮಾರ್ಗಸೂಚಿಗಳ ನಿರ್ಬಂಧವಿಲ್ಲ. ಹಾಗಾಗಿ ಬೇರೆ ರಾಜ್ಯ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಿಂದ ಲಕ್ಷಾಂತರ ಭಕ್ತರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು. ಬಹಳಷ್ಟು ಭಕ್ತರು, ಶ್ರೀಮಠದಲ್ಲಿ ಸೇವೆ ಸಲ್ಲಿಸಿದರು.

    ಸಂಭ್ರಮದ ಅಂಬಾರಿ ಉತ್ಸವ: ಶ್ರೀಸಿದ್ಧಾರೂಢರ, ಶ್ರೀ ಗುರುನಾಥರೂಢರ 10ನೇ ಅಂಬಾರಿ ಉತ್ಸವ ಹಾಗೂ ಸಮಕಾಲೀನ ಮಹಾತ್ಮರ ಭಾವಚಿತ್ರದ ಮೆರವಣಿಗೆಗೆ ಹುಬ್ಬಳ್ಳಿ ತಾಲೂಕಿನ ಬೆಂಗೇರಿ ಗ್ರಾಮದ ಶ್ರೀಧರಿಧೂಳೇಶ್ವರ ದೇವಸ್ಥಾನದಲ್ಲಿ ಬುಧವಾರ ಚಾಲನೆ ನೀಡಲಾಯಿತು.

    ಅಣ್ಣಿಗೇರಿಯ ಶ್ರೀ ಶಿವಕುಮಾರ ಸ್ವಾಮೀಜಿ, ಶ್ರೀ ಶಿವಬಸವ ಸ್ವಾಮೀಜಿ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಮಾಜಿ ಸಿಎಂ ಜಗದೀಶ ಶೆಟ್ಟರ್, ಶಾಸಕ ಪ್ರಸಾದ ಅಬ್ಬಯ್ಯ ಅವರು ಚಾಲನೆ ನೀಡಿದರು. ಮೆರವಣಿಗೆಯು ದೇವಾಂಗಪೇಟ ರಸ್ತೆಯ ಶ್ರೀಧರಿಧೂಳೇಶ್ವರ ದೇವಸ್ಥಾನದಿಂದ ಶ್ರೀಸಿದ್ಧಾರೂಢರ ಮಠದವರೆಗೆ ತಲುಪಿತು. ಸಮಿತಿ ಅಧ್ಯಕ್ಷ ಮನೋಜಕುಮಾರ ಗದಗಿನ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts