More

    ಇಂದು ಸುಪ್ರೀಂ ಅಂಗಳದಲ್ಲಿ ಕಾವೇರಿ ಸಮಸ್ಯೆ; ಯರ್‍ಯಾರ ವಾದ ಹೇಗಿದೆ?

    ಬೆಂಗಳೂರು: ಕಾವೇರಿ ನೀರು ಹಂಚಿಕೆ ಸಂಬಂಧಿತ ಕರ್ನಾಟಕ ಹಾಗೂ ತಮಿಳುನಾಡು ನಡುವಿನ ಕಾನೂನು ಸಮರ ನಡೆಯುತ್ತಿದ್ದು ಇಂದು ಸುಪ್ರೀಂ ಕೋರ್ಟ್‍ನಲ್ಲಿ ವಿಚಾರಣೆ ನಡೆಯಲಿದೆ. ಇಂದಿನ ಮಹತ್ವ ವಿಚಾರಣೆ ಮೇಲೆ ಮಂಡ್ಯ ರೈತರ ಬದುಕು ನಿಲ್ಲಲಿದೆ. ಒಂದು ವೇಳೆ ತೀರ್ಪು ವ್ಯತಿರಿಕ್ತವಾಗಿ ಬಂದರೆ ರೈತರಿಗೆ ಮರಣ ಶಾಸನ ವಿಧಿಸಿದ ಹಾಗೆ ಆಗಲಿದೆ ಎನ್ನಲಾಗುತ್ತಿದೆ. ಈಗಾಗಲೇ ಮಂಡ್ಯದಲ್ಲಿ ಕಾವೇರಿ ಕಿಚ್ಚು ಹೆಚ್ಚಾಗಿದ್ದು ತಮಿಳುನಾಡಿಗೆ ನೀರು ಬಿಡ್ತಿರೋದಕ್ಕೆ ಅನ್ನದಾತರು ಸಿಡಿದೆದ್ದಿದ್ದಾರೆ. ಇಂದು ರೈತರ ಪ್ರತಿಭಟನೆ ಮುಂದುವರೆಯಲಿದ್ದು ನಾನಾ ಸಂಘಟನೆಗಳು ವಿನೂತನವಾಗಿ ವಿರೋಧ ವ್ಯಕ್ತಪಡಿಸುತ್ತಿವೆ.

    ಇದನ್ನೂ ಓದಿ: ತಮಿಳುನಾಡಿಗೆ ಕಾವೇರಿ ನೀರು ನಿಲ್ಲಿಸಲಿ

    ಸದ್ಯ ರಾಜ್ಯ ಸರ್ಕಾರ ವಿರೋಧದ ನಡುವೆಯೂ ಪ್ರಾಧಿಕಾರದ ಆದೇಶದಂತೆ ತಮಿಳುನಾಡಿಗೆ ನೀರು ಬಿಡುತ್ತಿದೆ. ಕಳೆದ 7 ದಿನಗಳಿಂದ ಪ್ರತಿ ನಿತ್ಯ 5 ಸಾವಿರ ಕ್ಯೂಸೆಕ್ ನೀರು ಸರ್ಕಾರ ಹರಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಸರ್ಕಾರದ ನಡೆಗೆ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸದ್ಯ ಪ್ರಾಧಿಕಾರದ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡುವ ವಿಶ್ವಾಸದಲ್ಲಿ ಹೋರಾಟಗಾರರು ಇದ್ದಾರೆ.

    ಕಸ್ತೂರಿ ಕರ್ನಾಟಕ ಜನಪರ ವೇದಿಕೆಯು, ಸುಪ್ರೀಂ ಕೋರ್ಟ್‍ ತೀರ್ಪು ಕರ್ನಾಟಕದ ಪರ ಬರುವಂತೆ ಬೇಡಿಕೊಂಡಿದ್ದು ಈ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ 7 ಗಂಟೆಗೆ ಉರುಳುಸೇವೆ ನಡೆಸಲಿದೆ. ಇನ್ನು ಕನ್ನಡ ಸೇನೆ, ಚಡ್ಡಿ ಹಾಗೂ ಖಾಲಿ ಬಿಂದಿಗೆ ಚಳುವಳಿಯನ್ನು ಮಂಡ್ಯದ ಸಂಜಯ್ ವೃತ್ತದಲ್ಲಿ ಬೆಳಿಗ್ಗೆ 10 ಗಂಟೆಗೆ ನಡೆಸಲಿದೆ. ಇದೇ ರೀತಿ ಭೂಮಿತಾಯಿ ಹೋರಾಟ ಸಮಿತಿ ಕೂಡ ಚಡ್ಡಿ ಚಳುವಳಿಯನ್ನು ನಡೆಸಲಿದೆ. ಈ ಚಳವಳಿಯ ಭಾಗವಾಗಿ ಮಧ್ಯಾಹ್ನ 12 ಗಂಟೆಗೆ ಪಟೆಪಟೆ ಚಡ್ಡಿ ಧರಿಸಿ ಅನ್ನದಾತರು ರಸ್ತೆಗಿಳಿಯಲಿದ್ದಾರೆ. ಕಳೆದ 8 ದಿನಗಳಿಂದಲೂ ಮಂಡ್ಯ ಜಿಲ್ಲಾದ್ಯಂತ ರೈತರ ಪ್ರತಿಭಟನೆ KRSನಲ್ಲಿ ಕರ್ನಾಟಕ ರಾಜ್ಯ ರೈತ ಸಂಘದಿಂದ ನಡೆಯುತ್ತಿರುವ ಅಹೋರಾತ್ರಿ ಧರಣಿ ಮುಂದುವರೆಯುತ್ತಿದೆ.

    ಇದನ್ನೂ ಓದಿ: ಕಾವೇರಿಮಾತೆಗೆ ಜಲಾಭಿಷೇಕದೊಂದಿಗೆ ಪ್ರಾರ್ಥನೆ: ಕಸ್ತೂರಿ ಕರ್ನಾಟಕ ಜನಪರ ವೇದಿಕೆಯಿಂದ ಪ್ರತಿಭಟನೆ

    ಇಂದು ಕಾವೇರಿ ನೀರಿನ ಸಂಬಂಧ ಸುಪ್ರೀಂಕೋರ್ಟ್‌ನಲ್ಲಿ ಮಹತ್ವದ ವಿಚಾರಣೆ ನಡೆಯಲಿದ್ದು ಕಾವೇರಿ ಕೊಳ್ಳದ ರೈತರ ಅಳಿವು-ಉಳಿವು ಸುಪ್ರೀಂ ಆದೇಶದ ಮೇಲೆ ನಿಲ್ಲಲಿದೆ. ನಿನ್ನೆಯಷ್ಟೇ ಸುಪ್ರೀಂ ಕೋರ್ಟ್ಗೆ ಹಿರಿಯ ವಕೀಲರ ಮೂಲಕ ಅರ್ಜಿ ರೈತಸಂಘ ಸಲ್ಲಿಸಿದೆ. ಈ ಹಿನ್ನೆಲೆಯಲ್ಲಿ ತಮಿಳುನಾಡು, ಕರ್ನಾಟಕ ಸರ್ಕಾರದ ಅರ್ಜಿ ಜತೆ ರೈತಸಂಘದ ಅರ್ಜಿ ವಿಚಾರಣೆಯೂ ನಡೆಯುವ ಸಾಧ್ಯತೆ ಇದೆ.  ಇಂದಿನ ವಿಚಾರಣೆ ಮೇಲೆ ಭಾರೀ ನಿರೀಕ್ಷೆ ಇಟ್ಟಿರುವ ಕಾವೇರಿ ಕೊಳ್ಳದ ಜನರು, ತಮಿಳುನಾಡಿಗೆ ನೀರು ಬಿಡುವುದಕ್ಕೆ ಸುಪ್ರೀಂ ತಡೆ ನೀಡುವ ವಿಶ್ವಾಸದಲ್ಲಿದ್ದಾರೆ.

    ತಮಿಳುನಾಡು ಸರ್ಕಾರದ ಅರ್ಜಿಯಲ್ಲಿ ಏನಿದೆ?

    ತಮಿಳುನಾಡು ಸರ್ಕಾರ ನ್ಯಾಯಾಲಯದ ಬಳಿ, ಜೂನ್, ಜುಲೈ, ಆಗಸ್ಟ್ ತಿಂಗಳ ನೀರು ಕೊಡಿಸಬೇಕು ಎಂದು ಕೇಳಿಕೊಂಡಿದೆ. ಮೂರು ತಿಂಗಳ ಅವಧಿಯಲ್ಲಿ ಕರ್ನಾಟಕ 80 ಟಿಎಂಸಿ ನೀರು ಕೊಡಬೇಕು. ಮೆಟ್ಟೂರು ಡ್ಯಾಂನಲ್ಲಿ ನೀರಿನ ಸಂಗ್ರಹ ಕಡಿಮೆ ಆಗುತ್ತಿದೆ. ಮೆಟ್ಟೂರು ಡ್ಯಾಂ ವ್ಯಾಪ್ತಿ ಕೃಷಿ ಜಮೀನಿಗೆ ನೀರು ಅಗತ್ಯ. ಸದ್ಯ ಕರ್ನಾಟಕ ಬಿಡುತ್ತಿರುವ ನೀರು ಸಾಲುತ್ತಿಲ್ಲ. ಪ್ರತಿದಿನ 24 ಸಾವಿರ ಕ್ಯೂಸೆಕ್ ನೀರು ಬಿಡಲು ಸೂಚಿಸುವಂತೆ ಅರ್ಜಿ ಸಲ್ಲಿಸಿದೆ.

    ಇದನ್ನೂ ಓದಿ: ತ.ನಾಡಿಗೆ ಹರಿಯುತ್ತಲೇ ಇರುವ ಕಾವೇರಿ ನೀರು: ಬಾಯಿ ಬಡಿದುಕೊಂಡು ರೈತರ ಆಕ್ರೋಶ

    ಕರ್ನಾಟಕ ಸರ್ಕಾರದ ಅರ್ಜಿಯಲ್ಲಿ ಏನಿದೆ?

    ಇದಕ್ಕೆ ತಕ್ಕ ಪ್ರತಿಕ್ರಿಯೆ ನೀಡಿರುವ ಕರ್ನಾಟಕ ಸರ್ಕಾರ ತನ್ನ ಅರ್ಜಿಯಲ್ಲಿ, “ಕಾವೇರಿ ಜಲಾನಯನ ಪ್ರದೇಶದಲ್ಲಿ ಮುಂಗಾರು ಮಳೆ ಕೈ ಕೊಟ್ಟಿದೆ. ರಾಜ್ಯದ ಕಾವೇರಿ ಕೊಳ್ಳದ ಡ್ಯಾಂಗಳಲ್ಲಿ ಸಂಗ್ರಹ ಇರುವ ನೀರು ಕುಡಿಯಲು ಸಾಲದು. ಕೆ.ಆರ್.ಎಸ್, ಕಬಿನಿ, ಹೇಮಾವತಿ, ಹಾರಂಗಿ ಡ್ಯಾಂನಲ್ಲಿ ನೀರಿನ ಅಭಾವ ಎದುರಾಗುತ್ತಿದೆ. ಹೀಗಾಗಲೇ ನಾವು ಕಾವೇರಿ ಪ್ರಾಧಿಕಾರ ಹೇಳಿದಷ್ಟು ನೀರನ್ನು ತಮಿಳುನಾಡಿಗೆ ಬಿಟ್ಟಿದ್ದೇವೆ. ನಮ್ಮ ಡ್ಯಾಂನಲ್ಲಿ ನೀರು ಸಂಗ್ರಹ ಕಡಿಮೆ ಇದ್ದರೂ 3 ತಿಂಗಳಲ್ಲಿ ತಮಿಳುನಾಡಿಗೆ 35 ಟಿಎಂಸಿ ನೀರು ಬಿಟ್ಟಿದ್ದೇವೆ. ತಮಿಳುನಾಡು ಕೇಳಿದಷ್ಟು ನೀರು ಬಿಡಲು ನಮ್ಮ ಮೂರು ಡ್ಯಾಂಗಳಲ್ಲೂ ನೀರು ಇಲ್ಲ. ತಮಿಳುನಾಡು ಕೃಷಿಗೆ ನೀರು ಕೇಳುತ್ತಿದೆ, ನಮಗೆ ಕುಡಿಯೋದಕ್ಕೆ ನೀರಿಲ್ಲ. ಇರುವ ನೀರು ಕೊಟ್ಟರೆ ನಮಗೆ ಕುಡಿಯುವ ನೀರಿಗೆ ಸಮಸ್ಯೆ ಎದುರಾಗುತ್ತೆ” ಎಂದು ವಾದ ಮಂಡಿಸಿದೆ.

    ಇದನ್ನೂ ಓದಿ: ತ.ನಾಡಿಗೆ ಕಾವೇರಿ ನೀರು ಹರಿಸುತ್ತಿರುವುದಕ್ಕೆ ಆಕ್ರೋಶ: ಕಣ್ಣಿಗೆ ಕಪ್ಪುಪಟ್ಟಿ ಕಟ್ಟಿಕೊಂಡು ಯೂತ್ ಗ್ರೂಪ್ ವಿನೂತನ ಪ್ರತಿಭಟನೆ

    ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಅಫಿಡೆವಿಟ್ನಲ್ಲೇನಿದೆ?

    “ಕರ್ನಾಟಕ ತಮಿಳುನಾಡಿಗೆ ಮೂರು ತಿಂಗಳಲ್ಲಿ 35 ಟಿಎಂಸಿ ನೀರು ಬಿಟ್ಟಿದೆ. ಪ್ರಾಧಿಕಾರ ಸೂಚನೆ ನೀಡಿದಾಗಲೇಲ್ಲಾ ಕರ್ನಾಟಕ ನೀರು ಬಿಟ್ಟಿದೆ. ತಮಿಳುನಾಡು ನೀರನ್ನು ಸಮರ್ಪಕವಾಗಿ ಬಳಸಿಕೊಂಡಿಲ್ಲ. ಜೂನ್ ನಲ್ಲಿ ಮೆಟ್ಟೂರು ಡ್ಯಾಂನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರಿತ್ತು. ಸರಿಯಾಗಿ ಬಳಕೆ ಮಾಡಿಕೊಳ್ಳದ ಪರಿಣಾಮ ನೀರಿನ ಮಟ್ಟ ಕುಸಿದಿದೆ. ಕುಡಿಯುವ ನೀರಿನ ಕಡೆ ಗಮನ ಕೊಡುವುದು ಸೂಕ್ತ” ಎಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸಲ್ಲಿಸಿರುವ ಅಫಿಡವಿಟ್‍ನಲ್ಲಿ ಉಲ್ಲೇಖವಾಗಿದೆ.

    ಇದನ್ನೂ ಓದಿ: ಕಾವೇರಿ ಹೋರಾಟವನ್ನು ಗಂಭೀರವಾಗಿ ಪರಿಗಣಿಸಿ: ಸಿಎಂಗೆ ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಸಲಹೆ

    ಇನ್ನು ರೈತ ಸಂಘ ಸಲ್ಲಿಸಿರುವ ಅರ್ಜಿಯಲ್ಲಿ “ರಾಜ್ಯದ ಕಾವೇರಿ ಕೊಳ್ಳದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ನಾವು ಕೃಷಿಗೆ ನೀರು ಕೇಳುತ್ತಿಲ್ಲ, ಕುಡಿಯಲು ನೀರುಳಿಸಿ ಎಂದು ಕೇಳುತ್ತಿದ್ದೇವೆ. ಕಾವೇರಿ ಜಲಾನಯನ ಪ್ರದೇಶದಲ್ಲಿ  ಮಳೆ ಬೀಳು ಕಾಲ ಬಹುತೇಕ ಮುಗಿದಿದೆ. ಸದ್ಯ ತಮಿಳುನಾಡಿಗೆ‌ ಹರಿಸುತ್ತಿರೋ ನೀರನ್ನು ನಿಲ್ಲಿಸಲು ಆದೇಶಿಸಬೇಕು. ಪ್ರಾಧಿಕಾರ ಡ್ಯಾಂಗಳ ಬಳಿಗೆ ಬಂದು ವಸ್ತು ಸ್ಥಿತಿಯನ್ನು ತಿಳಿಯಬೇಕು. ಇರುವ ನೀರನ್ನು ಕುಡಿಯುವ ನೀರಿಗೆ ಉಳಿಸಬೇಕಾಗಿದೆ” ಎಂದು ಉಲ್ಲೇಖಿಸಲಾಗಿದೆ.

    ಒಟ್ಟಿನಲ್ಲಿ ಇಂದಿನ ವಿಚಾರಣೆ ತೀರ್ಪಿನ ಮೇಲೆ ಪ್ರಭಾವ ಬೀರುವ ಎಲ್ಲಾ ಸಾಧ್ಯತೆ ಇದ್ದು ಮಂಡ್ಯ ಭಾಗದ ಜನರು ಕಾತರದಿಂದ ಕಾಯುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts