More

    ಕಾಯಕಲ್ಪ ನಿರೀಕ್ಷೆಯಲ್ಲಿ ಸುಲ್ತಾನ್ ಬತ್ತೇರಿ

    ಹರೀಶ್ ಮೋಟುಕಾನ ಮಂಗಳೂರು
    ಹಲವು ಶತಮಾನಗಳ ಇತಿಹಾಸ ಹೊಂದಿರುವ ಬ್ರಿಟಿಷರ ಕಾಲದ ಸುಲ್ತಾನ್ ಬತ್ತೇರಿ ಕೋಟೆ ಪುರಾತತ್ವ ಇಲಾಖೆಯ ಸಂರಕ್ಷಿತ ತಾಣ ಇದೀಗ ನಿರ್ಲಕ್ಷೃಕ್ಕೆ ಒಳಗಾಗಿದ್ದು, ಐತಿಹಾಸಿಕ, ಸುಂದರ ಕೋಟೆಯ ಕಾಯಕಲ್ಪಕ್ಕೆ ಸರ್ಕಾರ ಮುಂದಾಗಬೇಕಿದೆ.

    ಲಾಕ್‌ಡೌನ್ ಸಡಿಲಗೊಂಡ ಬಳಿಕ ಮಂಗಳೂರು ನಗರಕ್ಕೆ ಹೊಂದಿಕೊಂಡಿರುವ ಸುಲ್ತಾನ್ ಬತ್ತೇರಿ ಕೋಟೆ ಪ್ರವಾಸಿಗರ ವೀಕ್ಷಣೆಗೆ ತೆರೆದುಕೊಂಡಿದೆ. ತಣ್ಣೀರುಬಾವಿ ಬೀಚ್ ವೀಕ್ಷಣೆಗೆ ಆಗಮಿಸುವ ಹೆಚ್ಚಿನ ಮಂದಿ ನಗರದ ಬೋಳೂರಿನಲ್ಲಿರುವ ಸುಲ್ತಾನ್ ಬತ್ತೇರಿ ಕೋಟೆ ನೋಡದೆ ಹಿಂತಿರುಗುವುದಿಲ್ಲ.

    ಕೋಟೆಯನ್ನು ಪ್ರವೇಶಿಸಬೇಕಾದರೆ ಯಾವುದೇ ತಪಾಸಣೆಯಿಲ್ಲ. ಭದ್ರತಾ ಸಿಬ್ಬಂದಿ ಪ್ರತಿ ದಿನ ಇರುವುದಿಲ್ಲ. ಯಾರ ಅನುಮತಿಯೂ ಇಲ್ಲದೆ ಸರಾಗವಾಗಿ ಕೋಟೆ ಹತ್ತಬಹುದು. ಕೋಟೆಯ ಗೋಡೆಯಲ್ಲಿ ಅಶ್ಲೀಲ ಶಬ್ದಗಳಿಂದ ಗೀಚಿದ್ದು, ಪ್ಲಾಸ್ಟಿಕ್ ಬಾಟಲಿ, ಚೀಲಗಳನ್ನು ಎಸೆಯಲಾಗಿದೆ. ಕುಳಿತುಕೊಳ್ಳಲಿರುವ ಕಲ್ಲು ಬೆಂಚುಗಳು ಮುರಿದಿವೆ. ಕೋಟೆಯ ಎಡಬದಿಯಲ್ಲಿರುವ ಸಣ್ಣ ಗೇಟಿಗೆ ಬೀಗ ಜಡಿಯಲಾಗಿದೆ.

    ಕೋಟೆಯ ಸುತ್ತಲೂ ಹುಲ್ಲು, ಕಾಡು ಬೆಳೆದಿದೆ. ಹುಲ್ಲುಗಳ ನಡುವೆ ತ್ಯಾಜ್ಯ ತುಂಬಿಕೊಂಡಿದೆ. ಸುತ್ತ ಕಬ್ಬಿಣದ ಬೇಲಿ ನಿರ್ಮಾಣ ಮಾಡಲಾಗಿದೆ. ಇದೀಗ ಈ ಬೇಲಿಗೆ ತುಕ್ಕು ಹಿಡಿಯಲಾರಂಭಿಸಿದೆ. ಉಪ್ಪು ಅಂಶ ಇರುವ ಗಾಳಿ ಬೀಸುವುದರಿಂದ ಕಬ್ಬಿಣ ಬೇಗನೆ ತುಕ್ಕು ಹಿಡಿಯುತ್ತಿದೆ. ಪೈಂಟ್ ಬಳಿದು ಅದರ ನಿರ್ವಹಣೆ ತುರ್ತು ಅವಶ್ಯವಾಗಿದೆ.

    ಹದಗೆಟ್ಟ ಸಂಪರ್ಕ ರಸ್ತೆ: ಮಂಗಳೂರು ನಗರದಿಂದ ಸುಲ್ತಾನ್ ಬತ್ತೇರಿಗೆ ಬರಲು ಮಣ್ಣಗುಡ್ಡೆ ಬಸ್ ತಂಗುದಾಣದ ಬಳಿ ಎಡಕ್ಕೆ ತಿರುಗಿ ಉರ್ವ ಮಾರುಕಟ್ಟೆ ರಸ್ತೆ ಮೂಲಕ ಸಂಚರಿಸಬೇಕು. ಉರ್ವ ಮಾರುಕಟ್ಟೆಯಿಂದ ಸುಲ್ತಾನ್ ಬತ್ತೇರಿಗೆ ಹೋಗುವ ರಸ್ತೆ ಹದಗೆಟ್ಟಿದೆ. ಈ ರಸ್ತೆ ಮೂಲಕ ಪ್ರತಿ ದಿನ ಸಾವಿರಾರು ವಾಹನಗಳು ಸಂಚರಿಸುತ್ತಿವೆ. ಅರೆ ಬರೆ ಕಾಮಗಾರಿ ನಡೆದಿದ್ದು, ಮ್ಯಾನ್‌ಹೋಲ್‌ಗಳು ರಸ್ತೆ ಮಟ್ಟದಿಂದ ಮೇಲೆ ಇದೆ. ಮಳೆ ಬರುವಾಗ ರಸ್ತೆಯಲ್ಲಿ ಕೃತಕ ನೆರೆ ಉಂಟಾಗುತ್ತಿದೆ. ಕೋಟೆಯ ಪ್ರವೇಶ ದ್ವಾರದಲ್ಲಿ ಬೃಹತ್ ಲಾರಿಗಳನ್ನು ಪಾರ್ಕ್ ಮಾಡಲಾಗುತ್ತಿರುವುದರಿಂದ ಪ್ರವಾಸಿಗರಿಗೆ ತೊಂದರೆಯಾಗುತ್ತಿದೆ.

    ನಿಯಮ ಪಾಲನೆ ಇಲ್ಲ: ಸುಲ್ತಾನ್ ಬತ್ತೇರಿ ಸುರಕ್ಷಿತ ಸ್ಮಾರಕದ ಪ್ರವೇಶ ದ್ವಾರದಲ್ಲಿ ಭಾರತೀಯ ಪುರಾತತ್ವ ಇಲಾಖೆ ಸೂಚನಾ ಫಲಕ ಅಳವಡಿಸಿದೆ. ಪುರಾತತ್ವ ಸ್ಥಳ ಮತ್ತು ಅವಶೇಷ ಅಧಿನಿಯಮ 2010ರ ಪ್ರಕಾರ ಯಾರಾದರೂ ಸ್ಮಾರಕವನ್ನು ನಾಶ ಮಾಡಿದರೆ, ಸ್ಥಳಾಂತರಗೊಳಿಸಿದರೆ, ಹಾನಿಯುಂಟು ಮಾಡಿದರೆ, ಬದಲಿಸಿದಲ್ಲಿ, ವಿಕೃತಿಗೊಳಿಸಿದರೆ, ದುರುಪಯೋಗಗೊಳಿಸಿದರೆ ಎರಡು ವರ್ಷಗಳ ಕಾಲ ಕಾರಾಗೃಹ ಶಿಕ್ಷೆ ಅಥವಾ ಒಂದು ಲಕ್ಷ ರೂ. ದಂಡ ವಿಧಿಸಬಹುದಾಗಿದೆ. ಆದರೆ ಇಲ್ಲಿನ ಸ್ಮಾರಕದ ರಕ್ಷಣೆಗೆ ಯಾರೂ ಮುಂದಾಗದಿರುವುದು ವಿಪರ್ಯಾಸ.

    ಬ್ರಿಟಿಷರ ಯುದ್ಧ ಹಡಗುಗಳು ಆಗಮಿಸುವುದನ್ನು ವೀಕ್ಷಿಸಲು ಟಿಪ್ಪು ಸುಲ್ತಾನ್ ಈ ಕೋಟೆಯನ್ನು ನಿರ್ಮಿಸಿದ್ದ. ಹೀಗಾಗಿ ಇದು ಯುದ್ಧ ಸಂಬಂಧಿ ಚಟುವಟಿಕೆಗಳಿಗೆ ಬಳಕೆಯಾಗುತ್ತಿತ್ತು ಎಂಬುದು ಇತಿಹಾಸ. ಈ ಗೋಪುರದ ಕೆಳಗೆ ನೆಲಮಾಳಿಗೆ ಇದ್ದು ಇದನ್ನು ಗನ್ ಪೌಡರ್ ಶೇಖರಿಸಿಡಲು ಅಂದು ಬಳಸಲಾಗುತ್ತಿತ್ತು. ಇಲ್ಲಿ ಪ್ರಮುಖ ವಸ್ತುಗಳು, ಅಗತ್ಯ ಸಾಮಗ್ರಿ ಗುಪ್ತವಾಗಿ ಇರಿಸುವ ಕಾರ್ಯ ರಾಜರ ಆಡಳಿತದಲ್ಲಿ ನಡೆಯುತ್ತಿತ್ತು.
    ಪ್ರಸ್ತುತ ಈ ಕೋಟೆ ಮದ್ಯ ಸೇವನೆ, ಅನೈತಿಕ ಚಟುವಟಿಕೆಗಳಿಗೆ ಬಳಕೆಯಾಗುತ್ತಿರುವುದು ದುರಂತ. ಕೋಟೆಗೆ ಕಾಯಂ ಭದ್ರತಾ ಸಿಬ್ಬಂದಿ ನೇಮಕ ಮಾಡಿ, ಗೇಟಿಗೆ ಬೀಗ ಹಾಕಿ ಸಂರಕ್ಷಿಸಬೇಕಿದೆ. ರಾತ್ರಿ ವೇಳೆ ಪೊಲೀಸ್ ಗಸ್ತು ಹೆಚ್ಚಿಸಿ ಯಾರೂ ಕೋಟೆಯ ಮೇಲೆ ಹತ್ತಿ ಕಾನೂನು ಬಾಹಿರ ಚಟುವಟಿಕೆಯಲ್ಲಿ ಭಾಗಿಯಾಗದಂತೆ ನಿಗಾ ಇಡಬೇಕಾಗಿದೆ.

    ಸುಲ್ತಾನ್ ಬತ್ತೇರಿ ಸ್ಮಾರಕ ವೀಕ್ಷಿಸಲು ಸಾವಿರಾರು ಪ್ರವಾಸಿಗರು ಆಗಮಿಸುತ್ತಿದ್ದು, ಇದರ ಅಭಿವೃದ್ಧಿಗೆ ಸರ್ಕಾರದ ಮಟ್ಟದಲ್ಲಿ ಯೋಜನೆ ರೂಪಿಸಲಾಗುವುದು. ಇದರ ಸುರಕ್ಷೆಗೆ ಪುರಾತತ್ವ ಸರ್ವೇಕ್ಷಣಾ ಇಲಾಖೆ ಆದ್ಯತೆ ನೀಡಬೇಕಾಗಿದ್ದು, ಸಂಬಂಧಪಟ್ಟ ಅಧಿಕಾರಿಗೆ ಈ ನಿಟ್ಟಿನಲ್ಲಿ ಸೂಚನೆ ನೀಡಲಾಗುವುದು.
    ವೇದವ್ಯಾಸ ಕಾಮತ್, ಶಾಸಕ, ದಕ್ಷಿಣ ವಿಧಾನಸಭಾ ಕ್ಷೇತ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts