More

    ಸತ್ಯ ಶಿವ ಘೋಸ್ಟ್!; ಕೋಟಿಗೊಬ್ಬ ‘ಮೂರರ’ ಗುಟ್ಟು ಬಿಚ್ಚಿಟ್ಟ ಕಿಚ್ಚ…

    ಬೆಂಗಳೂರು: ‘ಇದು ನನ್ನ ಮೊದಲ ಸೀಕ್ವೆಲ್. ಮುಂದುವರಿದ ಭಾಗ ಅನ್ನೋದು ರಿಸ್ಕ್ ಅಲ್ಲ. ಅದೊಂದು ಖುಷಿಯ ವಿಚಾರ. ಏಕೆಂದರೆ, ಒಂದು ಚಿತ್ರದ ಮುಂದುವರಿದ ಭಾಗ ಬರಬೇಕೆಂದರೆ, ಮೊದಲು ಅದು ಗೆದ್ದಿರಬೇಕು, ಜನರಿಗೆ ಖುಷಿಯಾಗಿರಬೇಕು. ಹಾಗಾದಾಗ ಮಾತ್ರ ಸೀಕ್ವೆಲ್​ಗಳು ಸಾಧ್ಯ. ‘ಕೋಟಿಗೊಬ್ಬ 2’ ಮುಂದುವರಿದ ಭಾಗ ಬರುತ್ತಿದೆ ಎಂದರೆ, ಅದು ಜನರಿಗೆ ಖುಷಿ ಕೊಟ್ಟಿದೆ ಎಂದರ್ಥ. ಅದೇ ಕಾರಣಕ್ಕೆ ಅದೇ ಹೆಸರಿನಲ್ಲಿ ಇನ್ನೊಂದು ಚಿತ್ರಕ್ಕೆ ಕೈಹಾಕಿದ್ದಾರೆ …’ ಸುದೀಪ್ ಹೇಳುತ್ತಾ ಹೋದರು. ‘ಕೋಟಿಗೊಬ್ಬ 3’ ಪ್ರಾರಂಭವಾಗಿ ಮೂರು ವರ್ಷಗಳೇ ಆಗಿವೆ. ಆದರೆ, ಸುದೀಪ್ ಈ ಚಿತ್ರದ ಬಗ್ಗೆ ಮಾತನಾಡಿದ್ದು ಕಡಿಮೆಯೇ. ಈಗ ಚಿತ್ರ ನಾಳೆ (ಅ.14) ಬಿಡುಗಡೆಗೆ ಸಜ್ಜಾಗುತ್ತಿದ್ದಂತೆಯೇ ಚಿತ್ರದ ಬಗ್ಗೆ ಮನಬಿಚ್ಚಿ ಮಾತನಾಡಿದರು.

    ‘ನಾನು ‘ಕೋಟಿಗೊಬ್ಬ 2’ ಚಿತ್ರದಲ್ಲಿ ಸತ್ಯ, ಶಿವ ಎರಡೂ ಪಾತ್ರಗಳನ್ನೂ ಒಬ್ಬನೇ ಮಾಡಿದ್ದೆ. ಇಲ್ಲಿ ಏನು ವಿಶೇಷ ಮಾಡಬಹುದು ಎಂದು ಯೋಚಿಸಿದಾಗ, ಘೋಸ್ಟ್ ಎಂಬ ಇನ್ನೊಂದು ಪಾತ್ರ ಹುಟ್ಟಿಕೊಂಡಿತು. ಅದೇ ಚಿತ್ರದ ಕಥೆ. ನಿಜ ಹೇಳಬೇಕೆಂದರೆ ಕಥೆ ನನ್ನದಲ್ಲ, ಐಡಿಯಾ ಮಾತ್ರ ನನ್ನದು. ನಿರ್ವಪಕರು, ನಿರ್ದೇಶಕರು ಒಪ್ಪಿದರು. ಈಗ ಚಿತ್ರ ನಿಮ್ಮ ಮುಂದಿದೆ. ಆ ಚಿತ್ರದಲ್ಲೂ ನಾಯಕ ರಾಬಿನ್​ಹುಡ್ ಆಗಿದ್ದ. ಜನರಿಗಾಗಿ ಹೋರಾಡುತ್ತಿದ್ದ. ಈಗಲೂ ಅದು ಮುಂದುವರಿದಿದೆ. ಆದರೆ, ಅದರ ಹಿಂದಿನ ಕಾರಣಗಳು ಮಾತ್ರ ಬೇರೆ. ಈ ಚಿತ್ರವು ‘ಕೋಟಿ ಗೊಬ್ಬ 2’ಗಿಂತ ಒಂದು ಲೆವೆಲ್ ಮೇಲಿದೆ’ ಎನ್ನುತ್ತಾರೆ ಸುದೀಪ್. ಈ ಚಿತ್ರದ ನಂತರ ‘ಕೋಟಿಗೊಬ್ಬ 4’ ಏನಾದರೂ ಬರುತ್ತದಾ? ಎಂದರೆ, ಇಲ್ಲಿ ಯಾವುದೂ ಅಸಾಧ್ಯ ಇಲ್ಲ ಎಂಬ ಉತ್ತರ ಅವರಿಂದ ಬರುತ್ತದೆ. ‘ಉದ್ದೇಶ ಚೆನ್ನಾಗಿದ್ದಾಗ ಎಲ್ಲವೂ ಸಾಧ್ಯ. ಉದ್ದೇಶದ ಜತೆಗೆ ಕಂಟೆಂಟ್ ಸಹ ಬಹಳ ಮುಖ್ಯ. ಒಳ್ಳೆಯ ಕಂಟೆಂಟ್ ಇದ್ದರೆ ಖಂಡಿತ ಮುಂದುವರಿಯ ಬಹುದು. ಆದಾಗ ನೋಡೋಣ. ಇನ್ನೊಂದು ಶುರುವಾದರೆ, ಇದು ಚೆನ್ನಾಗಿದೆ ಎಂದರ್ಥ. ಹಾಗಾಗಿ, ಕಾದು ನೋಡೋಣ. ಇಲ್ಲಿ ಇನ್ನೂ ಒಂದು ವಿಷಯವಿದೆ. ನಾವು ಉದ್ದೇಶಪೂರ್ವಕವಾಗಿ ಮಾಡಬೇಕು ಎಂದು ಮಾಡಬಾರದು. ಜನ ಸಹ ಕೇಳಬೇಕು. ಇದು ಇನ್ನಷ್ಟು ಮುಂದುವರಿದರೆ ಚೆನ್ನಾಗಿರುತ್ತದೆ ಎಂದು ಜನ ಅಭಿಪ್ರಾಯಪಟ್ಟರೆ, ಮುಂದೆ ನೋಡೋಣ’ ಎನ್ನುತ್ತಾರೆ.

    ತಮ್ಮೆದುರು ತುಂಬ ದೊಡ್ಡ ಸವಾಲಿದೆ ಎನ್ನುವ ಸುದೀಪ್, ‘‘ಕೋಟಿಗೊಬ್ಬ 3’ ಪ್ರಾರಂಭವಾಗಿ ಈ ಮೂರು ವರ್ಷಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಪ್ರಮುಖವಾಗಿ, ಜನರ ಮನಸ್ಥಿತಿ ಬದಲಾಗಿದೆ. ಒಂದೊಳ್ಳೆಯ ಸಿನಿಮಾ ಮಾಡಿದ್ದೇವೆ ಎಂಬ ನಂಬಿಕೆ. ಚೆನ್ನಾಗಿ ಹೋದರೂ ಕಲಿಯುತ್ತೇವೆ. ಹೋಗದಿದ್ದರೂ ಕಲಿಯುತ್ತೇವೆ. ನಾವು ಇದನ್ನು ಸಮಯಕ್ಕೆ ಬಿಡಬೇಕು. ಈಗಲೇ ಚಿತ್ರ ಗೆಲ್ಲುತ್ತದೆ, ಸೋಲುತ್ತದೆ ಎಂದು ಹೇಳುವುದು ಕಷ್ಟ. ಕಥೆಗೆ ಏನು ಬೇಕೋ ಮಾಡಿಯಾಗಿದೆ. ಮಿಕ್ಕಿದ್ದೆಲ್ಲವನ್ನೂ ಪ್ರೇಕ್ಷಕರಿಗೆ ಬಿಡಬೇಕು. ಟ್ರೇಲರ್​ಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಈಗ ಚಿತ್ರಕ್ಕೆ ಹೇಗೆ ಪ್ರತಿಕ್ರಿಯೆ ಸಿಗುತ್ತದೋ ನೋಡಬೇಕು’ ಎಂದು ಮಾತು ಮುಗಿಸುತ್ತಾರೆ.

    ಅಲ್ಲಿನ ಶಿಸ್ತು ಸುದೀಪ್​ಗಿಷ್ಟ.. ಇದುವರೆಗೂ ಹಲವು ಚಿತ್ರಗಳಲ್ಲಿ ಚೇಸ್ ದೃಶ್ಯಗಳಲ್ಲಿ ಪಾಲ್ಗೊಂಡಿದ್ದಾರೆ ಸುದೀಪ್. ಆದರೆ, ಈ ಚಿತ್ರದ ಚೇಸಿಂಗ್ ದೃಶ್ಯವನ್ನು ಅವರು ಇನ್ನೂ ಮರೆತಿಲ್ಲ. ‘ನಾನು ಇದುವರೆಗೂ ಹೊರದೇಶದಲ್ಲಿ ಚೇಸ್ ಮಾಡಿರಲಿಲ್ಲ. ಅಲ್ಲಿಯ ಶಿಷ್ಟಾಚಾರಗಳು ಬೇರೆ. ಇಲ್ಲಿ ಖಾಲಿ ರಸ್ತೆಯಲ್ಲಿ ಶೂಟ್ ಮಾಡಬಹುದು. ಅಲ್ಲಿ ಟ್ರಾಫಿಕ್ ಮಧ್ಯೆಯೇ ಮಾಡಬೇಕು ಇಡೀ ಟ್ರಾಫಿಕ್ ವ್ಯವಸ್ಥೆಯನ್ನು ಅವರು ನಿರ್ವಹಿಸಿದ್ದು ಖುಷಿ ಕೊಟ್ಟಿತು. ಆ ಶಿಸ್ತು ಬಹಳ ಇಷ್ಟವಾಯಿತು. ಒಬ್ಬ ವಿದ್ಯಾರ್ಥಿಯಾಗಿ ಕೂತು ಅವರು ಹೇಗೆ ನಿರ್ವಹಿಸುತ್ತಾರೆ ಎಂಬುದನ್ನು ನೋಡಿದೆ’ ಎನ್ನುತ್ತಾರೆ ಸುದೀಪ್.

    ರಾಜ್ಯದಲ್ಲಿ ಇನ್ನೆರಡು ದಿನ ಮಳೆ ಮತ್ತಷ್ಟು ಬಿರುಸು; ನಾಳೆ ಆರು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್..

    ತಪ್ಪಿಸಿಕೊಳ್ಳುವ ಭರದಲ್ಲಿ ಬಾವಿಗೆ ಬಿದ್ದ ಕಳ್ಳ; ಪ್ರಾಣಾಪಾಯಕ್ಕೆ ಸಿಲುಕಿದ ಆರೋಪಿಯನ್ನು ಬಚಾವ್ ಮಾಡಿದ ಕಾನ್​ಸ್ಟೇಬಲ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts