More

    ಸೂಕ್ತ ಮಾರ್ಗದರ್ಶನದಿಂದ ಯಶಸ್ಸು ಸಾಧ್ಯ

    ಮೈಸೂರು: ಸ್ಪರ್ಧಾತ್ಮಕ ಪರೀಕ್ಷೆಗೆ ಬದ್ಧತೆಯ ತಯಾರಿ ಜತೆಗೆ ಸೂಕ್ತ ಮಾರ್ಗದರ್ಶನ ಸಿಕ್ಕರೆ ಯಶಸ್ಸು ಸಾಧ್ಯ ಎಂದು ನಗರದ ಆಡಳಿತ ತರಬೇತಿ ಸಂಸ್ಥೆಯಲ್ಲಿ ತರಬೇತಿಯಲ್ಲಿರುವ ಭಾರತೀಯ ಆಡಳಿತ ಸೇವೆ (ಐಎಎಸ್) ಪ್ರಶಿಕ್ಷಣಾರ್ಥಿ ಪಿ. ಶ್ರವಣ್‌ಕುಮಾರ್ ತಿಳಿಸಿದರು.
    ಜ್ಞಾನ ಬುತ್ತಿ ಸಂಸ್ಥೆಯಿಂದ ಲಕ್ಷ್ಮೀಪುರಂ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಸೋಮವಾರ ಅಯೋಜಿಸಿದ್ದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಹಾಗೂ ಗ್ರಾಮ ಲೆಕ್ಕಾಧಿಕಾರಿ (ವಿಎ) ಪರೀಕ್ಷೆಯ ತರಬೇತಿಯ ಉದ್ಘಾಟನೆಯಲ್ಲಿ ಶಿಬಿರಾರ್ಥಿಗಳಿಗೆ ಶುಭ ಹಾರೈಸಿ ಅವರು ಮಾತನಾಡಿದರು.
    ಪ್ರತಿಯೊಬ್ಬರಿಗೂ ಸೂಕ್ತ ಮಾರ್ಗದರ್ಶನ, ತರಬೇತಿ ಸಿಕ್ಕಿದರೆ ಇವತ್ತಿನ ಯುವಕರು ಪಿಡಿಒ, ವಿಎ ಸೇರಿದಂತೆ ಯುಪಿಎಸ್‌ಸಿ, ಕೆಪಿಎಸ್‌ಸಿಯಂತಹ ನಾಗರಿಕ ಸೇವಾ ಪರೀಕ್ಷೆಗಳನ್ನು ಯಶಸ್ವಿಯಾಗಿ ಎದುರಿಸಬಹುದು. ಉನ್ನತ ಶಿಕ್ಷಣ ಮುಗಿಸುವ ಪ್ರತಿಯೊಬ್ಬರಿಗೂ ಉದ್ಯೋಗದ ಆಕಾಂಕ್ಷೆ ಇರುತ್ತದೆ. ಅದನ್ನು ಸಾಧಿಸಲು ಪರಿಶ್ರಮಪಡಬೇಕು ಎಂದು ಹೇಳಿದರು.
    ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾಲ, ಕಾಲಕ್ಕೆ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿಕೊಂಡು ಬರುತ್ತಿವೆ. ಈಗ ರಾಜ್ಯ ಸರ್ಕಾರ ಪಿಡಿಒ, ವಿಎ ಸೇರಿದಂತೆ ನಾನಾ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗಳಿಗೆ ಪರೀಕ್ಷೆ ಗಳನ್ನು ಎದುರಿಸಬೇಕಾದರೆ, ಯುವಕರಿಗೆ ಜ್ಞಾನಬುತ್ತಿ ಯಂತಹ ಸಂಸ್ಥೆಗಳ ಮಾರ್ಗದರ್ಶನ ಅತ್ಯಗತ್ಯ ಎಂದು ಹೇಳಿದರು.
    ಹುಣಸೂರು ಉಪವಿಭಾಗಾಧಿಕಾರಿ ಮಹಮ್ಮದ್ ಹ್ಯಾರಿಸ್ ಸುಮೇರ್ ಮಾತನಾಡಿ, ಯಾವುದೇ ಪರೀಕ್ಷೆಗೆ ನಿಮ್ಮ ಸ್ವಂತ ಟಿಪ್ಪಣಿಗಳನ್ನು ಸಿದ್ಧಪಡಿಸುವುದು ಅತ್ಯಗತ್ಯ. ನೀವು ಒಮ್ಮೆ ಸಿದ್ಧಪಡಿಸಿದರೆ, ಮುಂದಿನ ಬಾರಿ ಓದುವಾಗ ನೀವು ಪ್ರಶ್ನೆಗಳಿಗೆ ಉತ್ತರಗಳನ್ನು ಸುಲಭವಾಗಿ ನೆನಪಿಸಿಕೊಳ್ಳಬಹುದು. ನೀವು ಸರಿಯಾಗಿ ಅಭ್ಯಾಸ ಮಾಡಿದರೆ ಮಾತ್ರ ಯಶಸ್ವಿಯಾಗಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
    ದಿನಪತ್ರಿಕೆಗಳನ್ನು ಓದಿ ಪ್ರಸ್ತುತ ವಿದ್ಯಮಾನಗಳನ್ನು ನೋಟ್ಸ್ ಬರೆದುಕೊಳ್ಳಬೇಕು, ತಿಂಗಳಿಗೊಮ್ಮೆ ಬರುವ ನಿಯತಕಾಲಿಕೆಗಳನ್ನು ಅವಲಂಬಿಸುವ ಬದಲು, ದಿನನಿತ್ಯದ ವಿದ್ಯಮಾನಗಳನ್ನು ಬರೆಯುವುದನ್ನು ಅಭ್ಯಾಸ ಮಾಡಿದರೆ ಸಾಧನೆ ಮಾಡಲು ಸುಲಭವಾಗುತ್ತದೆ ಎಂದು ಸಲಹೆ ನೀಡಿದರು.
    ಸಂಸ್ಥೆಯ ಮಾರ್ಗದರ್ಶಿ ಪ್ರೊ.ಎಂ.ಕೃಷ್ಣೇಗೌಡ, ಪ್ರಧಾನ ಕಾರ್ಯದರ್ಶಿ ಜೈನಹಳ್ಳಿ ಸತ್ಯನಾರಾಯಣಗೌಡ, ಕಾರ್ಯದರ್ಶಿ ಎಚ್.ಬಾಲಕೃಷ್ಣ, ಸಂಪನ್ಮೂಲ ವ್ಯಕ್ತಿಗಳಾದ ಪ್ರೊ. ಕೆ.ಎಂ ಪ್ರಸನ್ನಕುಮಾರ್ ಡಾ. ಹೊನ್ನಯ್ಯ, ಡಾ. ನಾಗಚಾರ್, ಡಾ. ಉಮೇಶ್ ಬೇವಿನಹಳ್ಳಿ, ಡಿ.ಎ. ಹೇಮಚಂದ್ರ, ಡಾ. ಪಿ.ಎನ್. ಹೇಮಚಂದ್ರ, ಮೋಹನ್ ಸಿ. ಡಾ. ಈ .ಶಿವಪ್ರಸಾದ್, ಕೃ.ಪ.ಗಣೇಶ, ಡಾ. ಪಳನಿಸ್ವಾಮಿ ಮೂಡಗೂರು, ಡಾ. ಎಚ್. ಎಂ ಸುದರ್ಶನ್, ವಿ. ಜಯಪ್ರಕಾಶ್. ಯು.ಎಂ. ಶರದ್‌ರಾವ್ ನಾಗರಾಜು ಬೀಜಗನಹಳ್ಳಿ. ರಾಜೀವ್‌ಶರ್ಮ, ಡಾ. ವಸಂತಕುಮಾರ್ ಐಪನಹಳ್ಳಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts