More

    ಜಾತಿ ನಿಂದನೆ ದಾಖಲೆ ಇದ್ದರೆ ಸಾಬೀತುಪಡಿಸಿ

    ವಿಜಯವಾಣಿ ಸುದ್ದಿಜಾಲ ಹಾವೇರಿ

    ನಾನು ಯಾರ ಮೇಲಾದರೂ ಅಟ್ರಾಸಿಟಿ (ಜಾತಿ ನಿಂದನೆ) ದೂರು ದಾಖಲಿಸಿದ ಸಾಕ್ಷಿಗಳಿದ್ದರೆ ರುದ್ರಪ್ಪ ಲಮಾಣಿ ಅವರು ದಾಖಲೆ ಸಮೇತ ಸಾಬೀತುಪಡಿಸಬೇಕು ಎಂದು ಶಾಸಕ ನೆಹರು ಓಲೇಕಾರ ಸವಾಲು ಹಾಕಿದರು.

    ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಗರಸಭೆಯ ಮೂವರು ಸದಸ್ಯರ ಮೇಲೆ ದೂರು ದಾಖಲಿಸಿದ ಆ ಮಹಿಳೆ ಯಾರು ಅನ್ನುವುದೇ ಗೊತ್ತಿಲ್ಲ. ಈ ಪ್ರಕರಣ ರಾಜಕೀಯ ತಿರುವು ಪಡೆದ ನಂತರ ವಿಚಾರಿಸಿದಾಗ, ಶಾಂತಮ್ಮ ಡೊಂಬರಳ್ಳಿ ಎಂಬ ಮಹಿಳೆಯನ್ನು ಮನೆಯಿಂದ ಓಡಿಸುವ ಹೀನ ಕೃತ್ಯಕ್ಕೆ ಮುಂದಾಗಿರುವ ವಿಷಯ ತಿಳಿಯಿತು’ ಎಂದರು.

    ನಾನು ಎಂದಿಗೂ ಕಾನೂನು ಬಿಟ್ಟು ಕೆಲಸ ಮಾಡಿಲ್ಲ. ರುದ್ರಪ್ಪ ಲಮಾಣಿ ಅವರೇ ಸಚಿವರಾಗಿದ್ದ ಸಮಯದಲ್ಲಿ ನಗರಸಭೆಗೆ ಪಿಎಸ್​ಐ ಕರೆಯಿಸಿ ನಮ್ಮ ಪಕ್ಷದ ಜಗದೀಶ ಮಲಗೋಡ ವಿರುದ್ಧ ದೂರು ದಾಖಲಿಸಿದ್ದರು. ಮರಳಿನ ಪ್ರತಿಭಟನೆ ನಡೆಸಿದರವರ ಮೇಲೆಯೂ ದೂರು ದಾಖಲಿಸಿದ್ದರು. ಈ ಚಾಳಿ ಅವರಿಗೆ ಮೊದಲಿನಿಂದಲೂ ಇದೆ. ಬ್ಯಾಡಗಿಯಲ್ಲಿ ನಾನು ಶಾಸಕನಾಗಿದ್ದ ಅವಧಿಯಲ್ಲಿ ಯಾವುದಾದರೊಂದು ದೂರು ದಾಖಲಿಸಿದ್ದರೆ, ದಾಖಲೆ ಸಮೇತ ಮಾಧ್ಯಮಗಳಿಗೆ ಬಿಡುಗಡೆಗೊಳಿಸಲಿ ಎಂದು ಸವಾಲೆಸೆದರು.

    ನಗರಸಭೆ ಸದಸ್ಯರ ಮೇಲೆ ನಾವು ದೂರು ಕೊಡಿಸಿದ್ದರೆ, ಗೃಹ ಸಚಿವರು ನಮ್ಮವರೇ ಇದ್ದು, ಸದಸ್ಯರನ್ನು ಬಂಧಿಸುತ್ತಿದ್ದೇವು. ಆದರೆ, ನಾವು ಕಾನೂನು ಮೀರಿ ಕೆಲಸ ಮಾಡಿಲ್ಲ. ನನ್ನ ಅವಧಿಯಲ್ಲಿನ ಅಭಿವೃದ್ಧಿ ಕೆಲಸಗಳನ್ನು ಸಹಿಸದೇ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ನಗರಸಭೆ ಸದಸ್ಯರಾದ ಬಸವರಾಜ ಬೆಳದಡಿ, ಗಿರೀಶ ತುಪ್ಪದ, ಚನ್ನಮ್ಮ ಬ್ಯಾಡಗಿ, ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ ಸಂಗೂರ, ಜಗದೀಶ ಮಲಗೋಡ, ಪರಶುರಾಮ ಅಗಡಿ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

    ಘಟನೆಯ ಹಿನ್ನಲೆ: 1983ರಲ್ಲಿ ಹಾವೇರಿ ನಾಗೇಂದ್ರನಮಟ್ಟಿಯ 268/1+2 ಪ್ಲಾಟ್ ನಂ 84 ಅನ್ನು ಶಾಂತಮ್ಮ ಡೊಂಬರಳ್ಳಿ ಅವರ ತಾಯಿ ಅಂಬಕ್ಕ ಡೊಂಬರಳ್ಳಿ ಅವರ ಹೆಸರಿನಲ್ಲಿ ಹಾವೇರಿ ಪುರಸಭೆಯಿಂದ ಪಟ್ಟಾ ನೀಡಲಾಗಿತ್ತು. ಸ್ಲಂ ಬೋರ್ಡ್​ನಿಂದ ಮಂಜೂರಾದ ಮನೆಯನ್ನು ನಿರ್ವಿುಸಿಕೊಂಡು ಶಾಂತಮ್ಮ ಹಾಗೂ ಅವರ ಸಹೋದರಿ ಅಲ್ಲಿ ವಾಸವಾಗಿದ್ದರು. ಈ ನಡುವೆ ನಗರಸಭೆಯ ಸದಸ್ಯರೊಬ್ಬರು ಖೊಟ್ಟಿ ದಾಖಲೆ ಸೃಷ್ಟಿಸಿ ಹುಳ್ಯಾಳ ಎಂಬುವರಿಗೆ ಈ ನಿವೇಶನವನ್ನು ಮಾರಾಟ ಮಾಡಿದ್ದರು. ನಿವೇಶನ ಪಡೆದ ಹುಳ್ಯಾಳ ಅವರು, ಶಾಂತಮ್ಮ ಅವರಿಗೆ ಮನೆ ಬಿಡುವಂತೆ ಕಳೆದ 10 ವರ್ಷಗಳಿಂದ ಪೀಡಿಸುತ್ತಿದ್ದರಂತೆ. ಆದರೆ, ಶಾಂತಮ್ಮ ಅವರ ಬಳಿ ದಾಖಲೆ ಇದ್ದುದರಿಂದ ಮನೆ ಬಿಟ್ಟಿಲ್ಲ. ಈ ವಿಷಯ ತಿಳಿದ ಹುಳ್ಯಾಳ, ತಮಗೆ ಮನೆ ಮಾರಿದ ನಗರಸಭೆಯ ಸದಸ್ಯರಿಗೆ ಹಣ ಮರಳಿಸುವಂತೆ ಬೆನ್ನು ಬಿದ್ದಿದ್ದಾರೆ ಎಂದು ತಿಳಿದುಬಂದಿದೆ. ಈ ಕಾರಣಕ್ಕೆ ಸದ್ಯ ಜಾತಿನಿಂದನೆ ದೂರು ದಾಖಲಾಗಿರುವ ಮೂವರು ಸದಸ್ಯರು ಸೇರಿ ಮನೆ ಬಿಡಿಸಲು ಹೋದಾಗ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ. ಆದರೆ, ಘಟನೆ ನಡೆದ ದಿನ ಮೂವರು ನಗರಸಭೆ ಸದಸ್ಯರಲ್ಲಿ ಇಬ್ಬರು ಹಾವೇರಿಯಲ್ಲಿಯೇ ಇರಲಿಲ್ಲ. ಹೀಗಾಗಿ, ಇದು ರಾಜಕೀಯ ಪ್ರೇರಿತ ದೂರು ಎಂಬುದು ಕಾಂಗ್ರೆಸ್​ನವರ ಆರೋಪ. ವಾಸ್ತವದಲ್ಲಿ ದೂರಿನ ಹಿಂದೆ ರಾಜಕೀಯದ ವಾಸನೆಯಿದ್ದರೂ ನೈಜ ಫಲಾನುಭವಿಯೊಬ್ಬರಿಗೆ ಅನ್ಯಾಯವೆಸಗುವ ಯತ್ನವಂತೂ ಇದೆ. ಘಟನೆ ನಡೆದ ಸಮಯದಲ್ಲಿಯೇ ನಗರಸಭೆ ಚುನಾವಣೆ ನಡೆದಿದ್ದು ಕಾಕತಾಳೀಯವೂ ಆಗಿ ದೂರಿಗೆ ನಾನಾ ಬಣ್ಣ ಮೂಡಿದೆ ಎಂಬ ಮಾತುಗಳು ನಾಗೇಂದ್ರನಮಟ್ಟಿಯ ವಾಸಿಗಳಲ್ಲಿ ಕೇಳಿಬರುತ್ತಿದೆ.

    ಅ. 28ರಂದು ನನ್ನ ಹಾಗೂ ಕುಟುಂಬದವರ ಮೇಲೆ ಕೆಲವರು ಹಲ್ಲೆ ನಡೆಸಿದ್ದಾರೆ. ಹೀಗಾಗಿ, ನಾನು ದೂರು ನೀಡಿದ್ದೇನೆ. ಈ ವಿಷಯದಲ್ಲಿ ಪದೇಪದೆ ನನಗೆ ಏನೂ ಕೇಳಬೇಡಿ.

    – ಶಾಂತಮ್ಮ ಡೊಂಬರಳ್ಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts