More

    ಪೂರ್ವ ನಿಗದಿತ ಕಾರ್ಯಕ್ರಮಗಳಿಗೆ ಈ ವಾರ ಅವಕಾಶ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ವಾರಾಂತ್ಯದ ಕರ್ಫ್ಯೂನಲ್ಲಿ ವಿವಾಹ, ಯಕ್ಷಗಾನ, ಕಂಬಳ ಇತ್ಯಾದಿ ಪೂರ್ವನಿಗದಿತ ಕಾರ್ಯಕ್ರಮಗಳನ್ನು 200 ಜನಕ್ಕೆ ಸೀಮಿತಗೊಳಿಸಿ ನಡೆಸಲು ಷರತ್ತುಬದ್ಧವಾಗಿ ಅನುಮತಿ ನೀಡಲಾಗುವುದು, ಆದರೆ ಮುಂದಿನ ವಾರದಿಂದ ವಾರಾಂತ್ಯ ಲಾಕ್‌ಡೌನ್ ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಕೆ.ವಿ.ರಾಜೇಂದ್ರ ತಿಳಿಸಿದರು.

    ಸುಬ್ರಹ್ಮಣ್ಯ, ಕಟೀಲು, ಧರ್ಮಸ್ಥಳ ಕ್ಷೇತ್ರ ಸೇರಿದಂತೆ ಎಲ್ಲಾ ದೇವಾಲಯ, ಚರ್ಚ್, ಮಸೀದಿಗಳಲ್ಲಿ ವೀಕೆಂಡ್ ಕರ್ಫ್ಯೂನಲ್ಲಿ ಭಕ್ತರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಕಂಬಳ, ಧರ್ಮನೇಮ, ಬ್ರಹ್ಮಕಲಶೋತ್ಸವ ಸೇರಿದಂತೆ ಸಾಂಪ್ರದಾಯಿಕ ಕಾರ್ಯಕ್ರಮಗಳನ್ನು ಕೂಡಾ ಮುಂದೂಡುವಂತೆ ಸೂಚಿಸಲಾಗಿದೆ. ನಿಗದಿತ ಸಮಯದಲ್ಲೇ ಮಾಡಬೇಕಾದ ಕೆಲವೊಂದು ಸಾಂಪ್ರದಾಯಿಕ ಕಾರ್ಯಕ್ರಮಗಳಿದ್ದಲ್ಲಿ ಅವುಗಳನ್ನು 200 ಮಂದಿಗೆ ಸೀಮಿತಗೊಳಿಸಿ ನಡೆಸಬಹುದಾಗಿದೆ ಎಂದರು.

    ಜಿ.ಪಂ ಸಿಇಒ ಡಾ.ಕುಮಾರ್, ಜಿಲ್ಲಾ ವೈದ್ಯಾಧಿಕಾರಿ ಡಾ. ಕಿಶೋರ್ ಕುಮಾರ್, ವೈದ್ಯಕೀಯ ತಜ್ಞ ಡಾ. ಶಾಂತಾರಾಮ ಬಾಳಿಗ ಹಾಗೂ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

    ಪರೀಕ್ಷೆಗೆ ಓಕೆ: ಶಾಲಾ ಕಾಲೇಜುಗಳು ವಾರಾಂತ್ಯ ಲಾಕ್‌ಡೌನ್ ಸಂದರ್ಭ ಬಂದ್ ಆಗಿರಲಿವೆ. ಆದರೆ ಪೂರ್ವನಿಗದಿತ ಪರೀಕ್ಷೆಗಳಿದ್ದಲ್ಲಿ ನಡೆಸಬಹುದಾಗಿದೆ. ವಿದ್ಯಾರ್ಥಿಗಳು ಹಾಲ್‌ಟಿಕೆಟ್‌ನೊಂದಿಗೆ ಪ್ರಯಾಣ ಬೆಳೆಸಬಹುದು. ದೂರದ ಊರುಗಳಿಗೆ ಹೋಗುವವರು ತಮ್ಮ ಬಸ್, ರೈಲು ಅಥವಾ ವಿಮಾನ ಯಾನದ ಟಿಕೆಟ್‌ನೊಂದಿಗೆ ವೀಕೆಂಡ್ ಕರ್ಫ್ಯೂ ಸಂದರ್ಭ ಸಂಚರಿಸಲು ಅವಕಾಶವಿದೆ. ದಿನಸಿ, ಹಾಲು, ಔಷಧಿ ಅಂಗಡಿಗಳು ವೀಕೆಂಡ್ ಕರ್ಫ್ಯೂ ಸಂದರ್ಭ ತೆರೆದಿರುತ್ತವೆ ಎಂದು ಡಿಸಿ ತಿಳಿಸಿದರು.

    ಗಡಿಯಲ್ಲಿ ಹೆಚ್ಚುವರಿ ಸಿಬ್ಬಂದಿ: ಕೇರಳ ಗಡಿಯಲ್ಲಿ ಎಲ್ಲ ಪ್ರಯಾಣಿಕರನ್ನು ತಪಾಸಣೆ ಮಾಡಲು ಹೆಚ್ಚುವರಿ ಅಧಿಕಾರಿಗಳು, ಸಿಬ್ಬಂದಿ ನಿಯೋಜಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕೇರಳದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಿರುವುದರಿಂದ ಗಡಿಯಲ್ಲಿ ತಪಾಸಣೆಯನ್ನು ಇನ್ನಷ್ಟು ಕಟ್ಟುನಿಟ್ಟುಗೊಳಿಸಲಾಗುವುದು ಎಂದ ಜಿಲ್ಲಾಧಿಕಾರಿ, ಕೋವಿಡ್‌ಗೆ ಸಂಬಂಧಿಸಿದ ಸಹಾಯಕ್ಕಾಗಿ ಸಾರ್ವಜನಿಕರಿಗೆ ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿ ಕಂಟ್ರೋಲ್ ರೂಮ್‌ಗಳನ್ನು ಸ್ಥಾಪನೆ ಮಾಡಲಾಗುವುದು ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts