More

  ರೈತರು ಅವಕಾಶ ಸದ್ಬಳಕೆ ಮಾಡಿಕೊಳ್ಳಲಿ

  ಹನಗೋಡು: ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಪೌತಿ ಖಾತೆ ಆಂದೋಲನವನ್ನು ಮನೆ ಬಾಗಿಲಿಗೆ ತಂದಿದ್ದು, ರೈತರು ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಹಸೀಲ್ದಾರ್ ಜೆ.ಮಂಜುನಾಥ್ ಮನವಿ ಮಾಡಿದರು.

  ಹನಗೋಡಿನ ನಾಡ ಕಚೇರಿ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಪೌತಿ ಖಾತೆ ಆಂದೋಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
  ಹಲವು ಕುಟುಂಬಗಳು ಎರಡು-ಮೂರು ತಲೆಮಾರುಗಳಿಂದ ಪೌತಿ ಖಾತೆ ಮಾಡಿಸಿಕೊಳ್ಳದ ಪರಿಣಾಮ ಸರಕಾರದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ, ಬರ ಪರಿಹಾರ ಯೋಜನೆ ಸೇರಿದಂತೆ ಯಾವುದೇ ಸವಲತ್ತು, ಪರಿಹಾರ ಪಡೆಯಲು ಸಾಧ್ಯವಾಗುತ್ತಿಲ್ಲ. ಇದನ್ನು ಮನಗಂಡ ಪೌತಿಖಾತೆ ಆಂದೋಲನ ನಡೆಸುವಂತೆ ಸರಕಾರ ಸುತ್ತೋಲೆ ಹೊರಡಿಸಿದ್ದು, ಅದರಂತೆ ಎಲ್ಲ ನಾಡ ಕಚೇರಿಗಳಲ್ಲಿ ಆಂದೋಲನ ನಡೆಸಲಾಗುತ್ತಿದೆ ಎಂದರು.

  ತಾಲೂಕಿನಲ್ಲಿ 1,32,622ಖಾತಾ ಜಮೀನುಗಳಿದ್ದು, ಈ ಪೈಕಿ 1.03 ಲಕ್ಷ ಜಮೀನು ಮಾತ್ರ ಫ್ರೂಟ್ಸ್ ಐಡಿ ಮಾಡಿಸಿಕೊಂಡಿದ್ದು, ಇನ್ನು 28 ಸಾವಿರ ಜಮೀನಿಗೆ ಸಂಬಂಧಿಸಿದಂತೆ ಖಾತೆ ಬದಲಾವಣೆ ಆಗದಿರುವುದು, ಭೂ ಪರಿವರ್ತನೆ ಸೇರಿದಂತೆ ವಿವಿಧ ಕಾರಣಗಳಿಗಾಗಿ ಫ್ರೂಟ್ಸ್ ಐಡಿ ಆಗದೇ ಈ ರೈತರಿಗೆ ಯಾವುದೇ ಸವಲತ್ತು ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ನಿಮ್ಮ ಮನೆ ಬಾಗಿಲಿಗೆ ಬಂದು ಪೌತಿಖಾತೆ ಮಾಡಿ ಕೊಡಲಾಗುತ್ತಿದೆ. ರೈತರು ನಿಗದಿತ ಅರ್ಜಿ ನಮೂನೆಯಲ್ಲಿ ಚಾಲ್ತಿ ಸಾಲಿನ ಎಂಆರ್, ಪಹಣಿಪತ್ರ, ಆರ್‌ಡಿ ವಂಶವೃಕ್ಷ, ಮೃತ ಖಾತೆದಾರರ ಮರಣಪತ್ರ, ಅರ್ಜಿದಾರರ ಹಾಗೂ ಕುಟುಂಬ ಸದಸ್ಯರ ಆಧಾರ್‌ಕಾರ್ಡ್, ರೇಷನ್‌ಕಾರ್ಡ್ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿದಲ್ಲಿ ಏಳು ದಿನದೊಳಗೆ ಖಾತೆ ಮಾಡಿಕೊಡಲಾಗುವುದು. 15 ದಿನದಲ್ಲಿ ಆರ್‌ಟಿಸಿ ಸಿಗಲಿದೆ. ಈ ಪ್ರಕ್ರಿಯೆ ನಿರಂತರವಾಗಿ ನಡೆಯಲಿದೆ ಎಂದು ಮಾಹಿತಿ ನೀಡಿದರು.

  ರಾಜಸ್ವ ನಿರೀಕ್ಷಕ ಪ್ರಶಾಂತ ರಾಜೇಅರಸ್ ಮಾತನಾಡಿ, ಹನಗೋಡು ಹೋಬಳಿಯಲ್ಲಿ ಪೌತಿ ಖಾತೆ ಆಗದ 1334 ಪ್ರಕರಣಗಳನ್ನು ಗುರುತಿಸಲಾಗಿದೆ. ಈ ಪೈಕಿ 142 ಅರ್ಜಿಗಳು ಬಂದಿದ್ದು, 70 ಅರ್ಜಿಗಳ ಇತ್ಯರ್ಥಕ್ಕೆ ತಹಸೀಲ್ದಾರ್ ಸ್ಥಳದಲ್ಲೇ ಆದೇಶ ನೀಡಿದರು.

  ಸಭೆಯಲ್ಲಿ ಉಪತಹಸೀಲ್ದಾರ್ ಚೆಲುವರಾಜು, ಜಿಲ್ಲಾ ಎಸ್‌ಸಿ-ಎಸ್‌ಟಿ ಸಮಿತಿ ಸದಸ್ಯ ನೇರಳಕುಪ್ಪೆ ಮಹದೇವ್, ಗ್ರಾಪಂ ಉಪಾಧ್ಯಕ್ಷೆ ಜಯಲಕ್ಷ್ಮೀ, ಸದಸ್ಯರಾದ ಬೋರೇಗೌಡ, ರತ್ನ ಶ್ರೀಧರ್, ಸಂತೋಷ್, ಈಶ್ವರ, ಸಂಗೀತಾ, ಮಹದೇವ್, ವೆಂಕಟೇಶ್, ಪಿಡಿಒ ಅನಿತಾ, ಮುಖಂಡರಾದ ಹೊಂಬೇಗೌಡ, ಗೋವಿಂದರಾಜು ಗ್ರಾಮ ಆಡಳಿತಾಧಿಕಾರಿಗಳಾದ ಕರಿಬಸಪ್ಪ, ಮಹದೇವ್, ಶಿವಕುಮಾರ್, ಲಕ್ಷ್ಮೀಕಾಂತ ಅರಸ್, ಸುನಿಲ್, ಮಲ್ಲೇಶ್ ಮತ್ತಿತರರು ಭಾಗವಹಿಸಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts