More

    ದ.ಕ.ದಲ್ಲಿ ಇಂದಿನಿಂದ ಕರ್ಫ್ಯೂ ಬಿಗಿ

    ಮಂಗಳೂರು: ಕೋವಿಡ್ ನಿಯಂತ್ರಣ ಹಿನ್ನೆಲೆಯಲ್ಲಿ ದ.ಕ.ಜಿಲ್ಲೆಯಲ್ಲಿ ಮೇ 7ರಿಂದ ಕರ್ಫ್ಯೂವನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ. ಅಗತ್ಯ ವಸ್ತುಗಳ ಖರೀದಿಗೆ ಬೆಳಗ್ಗೆ 6ರಿಂದ 9ರವರೆಗಷ್ಟೇ ಅವಕಾಶ. 10 ಗಂಟೆಯೊಳಗೆ ಪ್ರತಿಯೊಬ್ಬರು ಮನೆ ಸೇರಬೇಕು.

    ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೋವಿಡ್ ನಿಯಂತ್ರಣ ಸಂಬಂಧಿತ ತುರ್ತು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಜಿಲ್ಲೆಯಾದ್ಯಂತ ಪೂರ್ವನಿಗದಿತ ಸಭೆ, ಸಮಾರಂಭಗಳಿಗೆ ಮೇ 15ರವರೆಗೆ ಮಾತ್ರ ಅವಕಾಶ ನೀಡಬೇಕು. ಹೊಸದಾಗಿ ಸಭೆ ಸಮಾರಂಭಕ್ಕೆ ಅವಕಾಶ ನೀಡಬಾರದು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

    ಕರ್ಫ್ಯೂ ಜಾರಿಯಾಗಿ 8 ದಿನವಾದರೂ ಜಿಲ್ಲೆಯಲ್ಲಿ ಕರೊನಾ ಪ್ರಕರಣಗಳು ಹೆಚ್ಚಾಗುತ್ತಿದೆ. ಸಾರ್ವಜನಿಕರು ಅನವಶ್ಯಕ ಓಡಾಡಿ ಮಾರ್ಗಸೂಚಿಗಳನ್ನು ಪಾಲಿಸದಿರುವುದು ಇದಕ್ಕೆ ಕಾರಣ ಎಂದ ಸಚಿವರು, ಕರ್ಫ್ಯೂ ಅವಧಿಯಲ್ಲಿ ವಾಹನಗಳಲ್ಲಿ ಸಂಚರಿಸುವವರನ್ನು ತಡೆದು ವಿಚಾರಿಸಬೇಕು. ನಕಲಿ ಗುರುತಿನ ಚೀಟಿ ತೋರಿಸುವವರು, ಅನಗತ್ಯವಾಗಿ ವಾಹನಗಳಲ್ಲಿ ಓಡಾಡುವುದು ಕಂಡುಬಂದರೆ ಅಂತಹ ವಾಹನಗಳನ್ನು ನಿರ್ದಾಕ್ಷಿಣ್ಯವಾಗಿ ಮುಟ್ಟುಗೋಲು ಹಾಕಬೇಕು ಎಂದರು.

    ಸಂಸದ ನಳಿನ್‌ಕುಮಾರ್ ಕಟೀಲ್ ಮಾತನಾಡಿ, ಜನರಿಗೆ, ವ್ಯಾಪಾರಸ್ಥರಿಗೆ ಹೆಚ್ಚಿನ ಸಮಸ್ಯೆ ಆಗದಂತೆ ನೋಡಿಕೊಂಡು ಲಾಕ್‌ಡೌನ್ ಜಾರಿ ಮಾಡಬೇಕು. ಆನ್‌ಲೈನ್ ಆಹಾರ ಪೂರೈಕೆದಾರರು ರಾತ್ರಿ 10ರೊಳಗೆ ಮಾತ್ರ ಕಾರ್ಯನಿರ್ವಹಿಸಿ, 11 ಗಂಟೆಯೊಳಗೆ ಮನೆ ಸೇರಬೇಕು ಎಂದರು.
    ಶಾಸಕರಾದ ಡಾ.ವೈ.ಭರತ್ ಶೆಟ್ಟಿ, ಡಿ.ವೇದವ್ಯಾಸ ಕಾಮತ್, ಹರೀಶ್ ಪೂಂಜ, ರಾಜೇಶ್ ನಾಕ್, ಸಂಜೀವ ಮಠಂದೂರು, ಉಮಾನಾಥ್ ಕೋಟ್ಯಾನ್, ಯು.ಟಿ ಖಾದರ್, ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಮೊದಲಾದವರು ಇದ್ದರು.

    ಸೆಕ್ಟರ್ ಮ್ಯಾಜಿಸ್ಟ್ರೇಟ್ ನೇಮಕ: ಅನಗತ್ಯ ಸಂಚಾರಕ್ಕೆ ಕಡಿವಾಣ ಹಾಕಲು ಮಂಗಳೂರು ನಗರದ ಆಯ್ದ ಪ್ರದೇಶಗಳಲ್ಲಿ ಚೆಕ್‌ಪೋಸ್ಟ್ ನಿರ್ಮಿಸಲಾಗುವುದು ಎಂದು ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ ಹೇಳಿದರು. ಜಿಲ್ಲೆಯ ಕಟ್ಟುನಿಟ್ಟಿನ ಲಾಕ್‌ಡೌನ್ ಜಾರಿಗೆ ಸೆಕ್ಟರ್ ಮ್ಯಾಜಿಸ್ಟ್ರೇಟ್‌ಗಳನ್ನು ನೇಮಿಸಲಾಗುವುದು. ಇವರು ತಮ್ಮ ವ್ಯಾಪ್ತಿಯಲ್ಲಿ ಲಾಕ್‌ಡೌನ್ ನಿಯಮ ಉಲ್ಲಂಘನೆ ಆಗದಂತೆ ನೋಡಿಕೊಳ್ಳಬೇಕು. ನಿರ್ಗತಿಕರು ಹಾಗೂ ವಲಸೆ ಕಾರ್ಮಿಕರಿಗೆ ನಗರದ ನಿರಾಶ್ರಿತ ಕೇಂದ್ರಗಳಲ್ಲಿ ಊಟೋಪಚಾರ ವ್ಯವಸ್ಥೆ ಮಾಡಬೇಕು. ಅವರ ಆರೋಗ್ಯ ತಪಾಸಣೆ ನಡೆಸಿ ಡೆಂಘೆ, ಮಲೇರಿಯಾದಂತಹ ರೋಗಗಳನ್ನು ಹರಡುವುದನ್ನು ತಡೆಯಲು ಸಾಧ್ಯವಾಗುತ್ತದೆ ಎಂದರು.

    ಶನಿವಾರ, ಭಾನುವಾರ ಲಾಕ್: ಶನಿವಾರ ಮತ್ತು ಭಾನುವಾರ ಪೂರ್ಣಪ್ರಮಾಣದ ಲಾಕ್‌ಡೌನ್ ಇರಲಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಕರೊನಾ ಪ್ರಕರಣಗಳು ಏರುಗತಿಯಲ್ಲಿರುವಾಗ ಈ ಕ್ರಮ ಅನಿವಾರ್ಯ. ಆ ದಿನಗಳಲ್ಲಿ ದಿನಸಿ ಅಂಗಡಿ ತೆರೆಯಲು ಅವಕಾಶವಿಲ್ಲ. ಹಾಪ್ ಕಾಮ್ಸ್, ಹಾಲಿನ ಅಂಗಡಿಗಳು, ತರಕಾರಿ, ಹಣ್ಣು ತಳ್ಳುಗಾಡಿಗಳಿಗೆ ಅವಕಾಶ ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು.

    ವ್ಯಾಕ್ಸಿನ್ ಪಡೆಯಲು ಅಡ್ಡಿಯಿಲ್ಲ: ಕೋವಿಡ್ ನಿರೋಧಕ ಚುಚ್ಚುಮದ್ದು ಪಡೆಯಲು ಕಟ್ಟುನಿಟ್ಟಿನ ಕರ್ಫ್ಯೂ ವೇಳೆ ಲಸಿಕಾ ಕೇಂದ್ರಗಳಿಗೆ ತೆರಳುವವರಿಗೆ ಅಡ್ಡಿಯಿಲ್ಲ ಎಂದ ಸಚಿವ ಕೋಟ ಶ್ರೀನಿವಾಸ ಪೂಜಾರಿ, ವೈದ್ಯಕೀಯ ಚಿಕಿತ್ಸೆ ಹಾಗೂ ಇತರ ತುರ್ತು ಕೆಲಸ ಇರುವವರಿಗೂ ಅವಕಾಶ ನೀಡಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು.

    ಏನುಂಟು…ಏನಿಲ್ಲ?

    * ದೈನಂದಿನ ಅಗತ್ಯ ವಸ್ತುಗಳ ಖರೀದಿ ಬೆಳಗ್ಗೆ 6ರಿಂದ 9ರವರೆಗೆ ಮಾತ್ರ
    * ಉಳಿದ ಸಮಯ ಮನೆಯಲ್ಲೇ ಸುರಕ್ಷಿತವಾಗಿರಿ
    * ಕಟ್ಟಡ ಕಾಮಗಾರಿಗಳಿಗೆ ಅವಕಾಶವಿದೆ. ಮಾಲೀಕರ ಪಾಸ್ ಕಡ್ಡಾಯ
    * ಲಸಿಕೆಗೆ ತೆರಳುವವರು, ವೈದ್ಯಕೀಯ ಚಿಕಿತ್ಸೆಗೆ, ಮತ್ತಿತರ ತುರ್ತು ಕೆಲಸಗಳಿಗೆ ಅವಕಾಶ
    * ರಾತ್ರಿ 10ರೊಳಗೆ ಆನ್‌ಲೈನ್ ಆಹಾರ ಸೇವೆಗೆ ಪರ್ಮಿಷನ್
    * ವೀಕೆಂಡ್‌ನಲ್ಲಿ ಕಂಪ್ಲೀಟ್ ಲಾಕ್‌ಡೌನ್
    * ಶನಿವಾರ, ಭಾನುವಾರ ದಿನಸಿ ಅಂಗಡಿಯೂ ಇಲ್ಲ
    * ಹಾಪ್‌ಕಾಮ್ಸ್, ಹಾಲು, ತರಕಾರಿ, ಹಣ್ಣು ತಳ್ಳುಗಾಡಿಗಳಿಗೆ ಅವಕಾಶ
    *ವಾರಾಂತ್ಯದಲ್ಲಿ ಮೀನು, ಆಹಾರ ವಸ್ತುಗಳ ಮಾರಾಟ ಇಲ್ಲ
    * ಹೊಟೇಲ್ ಪಾರ್ಸೆಲ್ ಎಲ್ಲ ದಿನಗಳಲ್ಲೂ ಅಬಾಧಿತ

    ಉಡುಪಿ ಇಂದು ನಿರ್ಧಾರ: ಉಡುಪಿ: ಸದ್ಯ ರಾಜ್ಯ ಸರ್ಕಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾತ್ರ ಕಠಿಣ ಕರ್ಫ್ಯೂ ಜಾರಿಗೆ ಅನುಮತಿ ನೀಡಿದೆ. ಉಡುಪಿಯಲ್ಲಿ ಸೋಂಕಿತರ ಸಂಖ್ಯೆ ಉಡುಪಿ ಜಿಲ್ಲೆಯಲ್ಲಿಯೂ ಏರುತ್ತಿದೆ. ಹೀಗಾಗಿ ಮುಂದಿನ ಕ್ರಮ ಏನೆಂಬ ಎಂಬ ಬಗ್ಗೆ ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts