

ಕಾರವಾರ: ಟೆನಲ್, ಟೋಲ್ ಈಗ ಬಹು ರ್ಚಚಿತ ವಿಷಯವಾಗಿದೆ.
ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಜಿಲ್ಲೆಯ ಮೂರು ಕಡೆಗಳಲ್ಲಿ ಟೋಲ್ ಶುಲ್ಕ ವಸೂಲಿಯನ್ನು ತಕ್ಷಣ ನಿಲ್ಲಿಸುವಂತೆ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರು ನೀಡಿರುವ ಆದೇಶ ಜಾರಿಯಾಗಿಲ್ಲ. ಈ ಬಗ್ಗೆ ಜಿಲ್ಲೆಯಲ್ಲಿ ಪರ, ವಿರೋಧ ಚರ್ಚೆ ಶುರುವಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವರು ಆಡಿದ ಮಾತಿನಂತೆ ತಕ್ಷಣ ಟೋಲ್ ಶುಲ್ಕ ನಿಲ್ಲಿಸಬೇಕು ಎಂದು ಬಿಜೆಪಿ ಒತ್ತಾಯಿಸಿದೆ. ಜೆಡಿಎಸ್ ಹಾಗೂ ಕಾಂಗ್ರೆಸ್ ಮುಖಂಡರು ಸಚಿವರ ನಡೆಯನ್ನು ಸಮರ್ಥಿಸಿಕೊಂಡಿವೆ. ಜಾಲತಾಣಗಳಲ್ಲೂ ಈ ಬಗ್ಗೆ ವಿಭಿನ್ನ ಚರ್ಚೆಗಳು ನಡೆದಿವೆ.
ಜೂನ್ನಲ್ಲಿ ಕಾರವಾರ-ಬಿಣಗಾ ಸುರಂಗ ಮಾರ್ಗವನ್ನು ಶಾಸಕ ಸತೀಶ ಸೈಲ್ ಉದ್ಘಾಟಿಸಿದರು.
ಈಗ ಅವರೇ ಸಚಿವರ ಜತೆ ಕುಳಿತು ಬಂದ್ ಮಾಡಲೂ ಆದೇಶ ನೀಡಿದ್ದಾರೆ. ಹಾಗಾದರೆ ಉದ್ಘಾಟನೆಗೂ ಮುಂಚೆ ಸುರಕ್ಷತಾ ಪ್ರಮಾಣಪತ್ರ ಪಡೆದಿರಲಿಲ್ಲವೇ. ಪ್ರಯಾಣಿಕರ ಬಗೆಗಿನ ಕಾಳಜಿ ಆಗ ಎಲ್ಲಿ ಹೋಗಿತ್ತು? ಈ ಎಲ್ಲ ಘಟನೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಐಆರ್ಬಿ ಕಂಪನಿಯ ಜತೆ ವ್ಯವಹಾರ ಕುದುರಿಸುವ ಶಂಕೆ ಉಂಟಾಗಿದೆ ಎಂದು ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ಸುಭಾಷ ಗುನಗಿ ಆರೋಪಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವರು ನೀಡಿದ ಹೇಳಿಕೆಯಂತೆ ತಕ್ಷಣ ಟೋಲ್ ಶುಲ್ಕವನ್ನು ಬಂದ್ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಸೂರಜ್ ಬೆಂಬಲ: ಕುಮಟಾ ಜೆಡಿಎಸ್ ಮುಖಂಡ ಸೂರಜ್ ನಾಯ್ಕ ಸೋನಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ನಡೆಯನ್ನು ಸ್ವಾಗತಿಸುತ್ತೇನೆ ಎಂದಿದ್ದಾರೆ. ಇದು ಜನರ ಪರವಾಗಿ ಇರುವ ಕಾಳಜಿಯಾಗಿದೆ.
ಈ ಬಗ್ಗೆ ನಾನು ಹೋರಾಟ ಮಾಡುತ್ತ ಬಂದಿದ್ದೇನೆ. 2020ರ ಫೆಬ್ರವರಿಯಲ್ಲಿ ಐಆರ್ಬಿ ಟೋಲ್ ಪ್ರಾರಂಭಿಸಿದೆ. 6 ತಿಂಗಳಲ್ಲಿ ಕಾಮಗಾರಿ ಮುಗಿಸುವುದಾಗಿ ಹೇಳಿ ಇದುವರೆಗೂ ಕಾಮಗಾರಿ ಮುಗಿಸಿಲ್ಲ.
ಈ ಹಿಂದೆ ನಾನು ಹೋರಾಟ ಮಾಡಿದಾಗ ಹಿಂದಿನ ಉಸ್ತುವಾರಿ ಸಚಿವರು, ಶಾಸಕರು ಯಾರೂ ನನ್ನ ಬೆಂಬಲಕ್ಕೆ ನಿಂತಿರಲಿಲ್ಲ. ಈಗ ಮಂಕಾಳ ವೈದ್ಯ ಸಾಮಾನ್ಯ ಜನರ ಪರವಾಗಿದ್ದಾರೆ ಎಂದರು.
ಸಂಪೂರ್ಣ ಕೆಲಸವನ್ನೆ ಮಾಡದೇ ಟೋಲ್ ಸಂಗ್ರಹ ಮಾಡುತ್ತಿರುವುದು ಕಾನೂನಿಗೆ ವಿರುದ್ಧವಾಗಿದೆ. ಐಆರ್ಬಿ ಕಂಪನಿ ಸಚಿವರ ಮಾತಿಗೂ ಬೆಲೆ ಕೊಟ್ಟಂತೆ ಕಾಣುತ್ತಿಲ್ಲ. ಕಾನೂನು ವ್ಯಾಪ್ತಿಯಲ್ಲಿ ಟೋಲ್ ಬಂದ್ ಮಾಡಿಸಬೇಕು. ಅವರೊಟ್ಟಿಗೆ ಯಾವ ಹೋರಾಟಕ್ಕೂ ನಾವೂ ಸಿದ್ಧರಿದ್ದೇವೆ.| ಭಾಸ್ಕರ ಪಟಗಾರ ಕರವೇ ಜಿಲ್ಲಾಧ್ಯಕ್ಷ