More

    ಕೆಲ ಸರ್ಕಾರಿ ಬ್ಯಾಂಕುಗಳ ಷೇರುಗಳು 2023ರಲ್ಲಿ ನೀಡಿದ ಲಾಭ ಶೇಕಡಾ 50ಕ್ಕೂ ಅಧಿಕ: ಹೊಸ ವರ್ಷದಲ್ಲಿ ಏನಾಗಬಹುದು?

    ನವದೆಹಲಿ: ಸಾರ್ವಜನಿಕ ವಲಯದ (PSU- ಪಬ್ಲಿಕ್​ ಸೆಕ್ಟರ್ ಯುನಿಟ್) ಬಹುತೇಕ ಬ್ಯಾಂಕ್​ಗಳ ಷೇರುಗಳು 2023ನೇ ವರ್ಷದಲ್ಲಿ ಗಣನೀಯ ಲಾಭವನ್ನು ದಾಖಲಿಸಿವೆ, ಸರಳವಾಗಿ ಹೇಳುವುದಾದರೆ ಬಹುತೇಕ ಸರ್ಕಾರಿ ಬ್ಯಾಂಕ್​ಗಳ ಷೇರುಗಳ ಬೆಲೆಗಳು ಈ ವರ್ಷದಲ್ಲಿ ಸಾಕಷ್ಟು ಲಾಭ ಕಂಡಿವೆ.

    ನಿಫ್ಟಿ ಪಿಎಸ್​ಯು ಬ್ಯಾಂಕ್ ಸೂಚ್ಯಂಕವು 2023 ರಲ್ಲಿ ಇಲ್ಲಿಯವರೆಗೆ ಶೇಕಡಾ 28 ರಷ್ಟು ಹೆಚ್ಚಳವನ್ನು (2023ರ ಜನವರಿ 1ರಿಂದ ಡಿಸೆಂಬರ್ 20ರವರೆಗೆ) ಕಂಡಿದೆ. ಅಂದರೆ, ಸಾರ್ವಜನಿಕ ವಲಯದ ಬ್ಯಾಂಕುಗಳ ಷೇರುಗಳ ಬೆಲೆಯು ಸರಾಸರಿ ಶೇಕಡಾ 28ರಷ್ಟು ಹೆಚ್ಚಾಗಿದೆ. ಇದನ್ನೇ ನಿಫ್ಟಿ ಪಿಎಸ್​ಯು ಬ್ಯಾಂಕ್​ ಸೂಚ್ಯಂಕ ಎನ್ನಲಾಗುತ್ತದೆ. ಇದು ಬೆಂಚ್​ ಮಾರ್ಕ್​ ನಿಫ್ಟಿ 50 ಸೂಚ್ಯಂಕಕ್ಕಿಂತ ಸಾಕಷ್ಟು ಅಧಿಕವಾಗಿದೆ. ನಿಫ್ಟಿ 50 ಸೂಚ್ಯಂಕವು ಈ ಅವಧಿಯಲ್ಲಿ ಶೇಕಡಾ 17ರಷ್ಟು ಏರಿಕೆ ಕಂಡಿದೆ. ಅಂದರೆ, ಎನ್​ಎಸ್ಇ ಷೇರು ವಿನಿಯಮ ಕೇಂದ್ರದಲ್ಲಿ ಪಟ್ಟಿ ಮಾಡಿರುವ 50 ಬೃಹತ್ ಕಂಪನಿಗಳ ಸರಾಸರಿ ಸೂಚ್ಯಂಕ ಇದಾಗಿರುತ್ತದೆ. ಈ 50 ಪ್ರಮುಖ ಕಂಪನಿಗಳ ಷೇರುಗಳ ಬೆಲೆ ಈ ಸಾಲಿನಲ್ಲಿ ಏರಿಕೆ ಕಂಡಿದ್ದು ಶೇಕಡಾ 17ರಷ್ಟು.

    ಪಂಜಾಬ್ ನ್ಯಾಷನಲ್ ಬ್ಯಾಂಕ್ ಮತ್ತು ಇಂಡಿಯನ್ ಬ್ಯಾಂಕ್‌ನಂತಹ ಷೇರುಗಳ ಬೆಲೆಯು ಈ ವರ್ಷ ಶೇಕಡಾ 50ಕ್ಕೂ ಹೆಚ್ಚು ಏರಿಕೆ ಕಂಡರೆ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಮಹಾರಾಷ್ಟ್ರ ಮತ್ತು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಶೇರುಗಳು 40 ಪ್ರತಿಶತದಷ್ಟು ಹೆಚ್ಚಳವಾಗಿವೆ.

    ಮುಂಗಡಗಳಲ್ಲಿ ಆರೋಗ್ಯಕರ ಬೆಳವಣಿಗೆ, ನಿವ್ವಳ ಬಡ್ಡಿ ಆದಾಯ, ಒಟ್ಟು ಎನ್‌ಪಿಎ (ನಾನ್​ ಪರ್ಫಾಮಿಂಗ್ ಅಸೆಟ್​- ಕಾರ್ಯನಿರ್ವಹಿಸದ ಆಸ್ತಿ) ಗಳಲ್ಲಿನ ಕಡಿತ ಮತ್ತು ಲಾಭದಾಯಕತೆಯ ಬಲವಾದ ಬೆಳವಣಿಗೆಯು ಪಿಎಸ್‌ಯು ಬ್ಯಾಂಕ್ ಷೇರುಗಳ ಹೆಚ್ಚಳಕ್ಕೆ ಕಾರಣವಾದ ಕೆಲವು ಅಂಶಗಳಾಗಿವೆ. ಇದಲ್ಲದೆ, ಹೂಡಿಕೆದಾರರು ಈ ಷೇರುಗಳನ್ನು ತಮ್ಮ ಆಕರ್ಷಕವಾದ ಕಡಿಮೆ ಬೆಲೆಯ ಕಾರಣಕ್ಕಾಗಿಯೂ ಖರೀದಿಸಿದ್ದಾರೆ.

    2023 ರ ಉದ್ದಕ್ಕೂ ಪಿಎಸ್‌ಯು ಬ್ಯಾಂಕ್‌ಗಳ ಪ್ರಗತಿಗೆ ಮುಖ್ಯ ಕಾರಣವೆಂದರೆ 2018-19 ರಲ್ಲಿ ನಡೆದ ಬ್ಯಾಂಕ್​ಗಳ ವಿಲೀನ. ಇದಾದ ನಂತರ ಇವುಗಳ ಕಾರ್ಯಾಚರಣೆಯ ದಕ್ಷತೆಯಲ್ಲಿ ಹೆಚ್ಚಳ ಕಂಡುಬಂದಿದೆ ಎಂದು ವಿಶ್ಲೇಷಕರು ಹೇಳುತ್ತಾರೆ.

    ಸರ್ಕಾರದ ಕನಿಷ್ಠ ಹಸ್ತಕ್ಷೇಪವು ಹೆಚ್ಚಿನ ಸಾರ್ವಜನಿಕ ಬ್ಯಾಂಕ್​ಗಳ ಆಸ್ತಿ ಗುಣಮಟ್ಟದಲ್ಲಿ ಗಮನಾರ್ಹ ಸುಧಾರಣೆಗೆ ಕಾರಣವಾಗಿದೆ ಎಂದೂ ಅವರು ಹೇಳುತ್ತಾರೆ.

    2024ರಲ್ಲಿ ಏನಾಗಬಹುದು?:

    ಮುಂದಿನ ವರ್ಷಕ್ಕೆ ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಭವಿಷ್ಯದ ಬಗ್ಗೆ ತಜ್ಞರು ಸಕಾರಾತ್ಮಕವಾಗಿದ್ದಾರೆ.
    ಮುಂಗಡಗಳ ಬೆಳವಣಿಗೆ ಮತ್ತು ಜಿಎನ್‌ಪಿಎ (ಗ್ರಾಸ್​ ನಾನ್​​ ಪರ್ಫಾಮಿಂಗ್ ಅಸೆಟ್​)ಗಳಲ್ಲಿನ ಕಡಿತದ ಕಾರಣದಿಂದಾಗಿ ಪಿಎಸ್‌ಯು ಬ್ಯಾಂಕ್‌ಗಳು ದೀರ್ಘಾವಧಿಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ ಎಂದು ಪರಿಣತರು ನಿರೀಕ್ಷಿಸುತ್ತಾರೆ. ಅಂದರೆ, ಬಳಕೆಯಾದ ಬ್ಯಾಂಕ್​ ಆಸ್ತಿಯ ಪ್ರಮಾಣವು ಕಡಿಮೆಯಾಗಲಿದೆ ಎಂಬ ಅಂದಾಜು ಇವರದ್ದಾಗಿದೆ.

    “ವೈಯಕ್ತಿಕ ಸಾಲಗಳು, ಸೇವೆಗಳು, ಸಣ್ಣ ಮತ್ತು ಮಧ್ಯಮ ಗಾತ್ರ ಉದ್ಯಮಗಳಿಂದ ಸಾಲ ಬೆಳವಣಿಗೆಯನ್ನು ನಾವು ನಿರೀಕ್ಷಿಸುತ್ತೇವೆ. ಬ್ಯಾಂಕ್‌ಗಳ ಸುಧಾರಿತ ಹಣಕಾಸು ಸೇವೆಗಳು ಸಹ ಅವರ ಸಾಲ ಬೆಳವಣಿಗೆಯನ್ನು ಬೆಂಬಲಿಸುವ ನಿರೀಕ್ಷೆಯಿದೆ. ಅಲ್ಪಾವಧಿಯಲ್ಲಿ ಬಡ್ಡಿ ದರಗಳು ಮತ್ತು ಹಣದುಬ್ಬರದಲ್ಲಿ ಯಾವುದೇ ಬದಲಾವಣೆಗಳನ್ನು ನಾವು ನಿರೀಕ್ಷಿಸುವುದಿಲ್ಲ” ಪರಿಣತರು ಹೇಳುತ್ತಾರೆ.

    ಸುಧಾರಿತ ಆಸ್ತಿ ಗುಣಮಟ್ಟ ಮತ್ತು ಕಾರ್ಯಕ್ಷಮತೆಯ ಪ್ರವೃತ್ತಿಯು ನಿರಂತರವಾಗಿದ್ದರೆ, ಪಿಎಸ್​ಯು ಬ್ಯಾಂಕುಗಳು 2024 ರಲ್ಲಿ ತಮ್ಮ ಮೇಲ್ಮುಖ ಪಥವನ್ನು ಕಾಪಾಡಿಕೊಳ್ಳಬಹುದು. ಇದರಿಂದಾಗಿ, ಈ ಷೇರುಗಳಲ್ಲಿ ನಿರಂತರ ಮಾರುಕಟ್ಟೆ ಆಸಕ್ತಿ ಮತ್ತು ಹೂಡಿಕೆಗೆ ಕಾರಣವಾಗಬಹುದು. ಈ ಮೂಲಕ ಷೇರುಗಳ ಬೆಲೆಗಳು ಹೆಚ್ಚಾಗಬಹುದು ಎಂದು ಅವರು ಅಂದಾಜಿಸುತ್ತಾರೆ.

    ಈ ವರ್ಷದಲ್ಲಿ ಸರ್ಕಾರಿ ಬ್ಯಾಂಕ್​ಗಳ ಷೇರುಗಳ ಲಾಭ ಪ್ರಮಾಣ

    ಪಂಜಾಬ್ ನ್ಯಾಷನಲ್​ ಬ್ಯಾಂಕ್​ 53.78%
    ಇಂಡಿಯನ್​ ಬ್ಯಾಂಕ್​ 50.64%
    ಸೆಂಟ್ರಲ್​ ಬ್ಯಾಂಕ್ ಆಫ್​ ಇಂಡಿಯಾ 48.37%
    ಬ್ಯಾಂಕ್​ ಆಫ್​ ಮಹಾರಾಷ್ಟ್ರ 46.13%
    ಯೂನಿಯನ್​ ಬ್ಯಾಂಕ್​ ಆಫ್​ ಇಂಡಿಯಾ 44.71%
    ಇಂಡಿಯನ್​ ಓವರ್​ಸೀಸ್​ ಬ್ಯಾಂಕ್​ 31.43%
    ಕೆನರಾ ಬ್ಯಾಂಕ್​ 27.72%
    ಪಂಜಾಬ್​ ಆ್ಯಂಡ್​ ಸಿಂದ್​ ಬ್ಯಾಂಕ್​ 24.10%
    ಬ್ಯಾಂಕ್​ ಆಫ್​ ಇಂಡಿಯಾ 22.22%
    ಯುಕೊ ಬ್ಯಾಂಕ್ 21.56%
    ಬ್ಯಾಂಕ್​ ಆಫ್​ ಬರೋಡಾ 18.07%
    ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾ 3.74%

    ಹೊಸ ಹೂಡಿಕೆದಾರರಿಗೆ ಫ್ಲೆಕ್ಸಿ ಕ್ಯಾಪ್​ ಮ್ಯೂಚುವಲ್ ಫಂಡ್​ಗಳು ಸೂಕ್ತ ಏಕೆ? ಇವುಗಳು ಸುರಕ್ಷಿತವೇ? ಲಾಭ ಎಷ್ಟು?

    ಕರಡಿಯನ್ನು ಓಡಿಸಿದ ಗೂಳಿಯ ಗುಟುರು: ಚೇತರಿಸಿದ ಸೂಚ್ಯಂಕದಲ್ಲಿ ಲಾಭ ಮಾಡಿದ ಷೇರುಗಳು ಯಾವವು?

    ತಾಜ್​ ಮಹಲ್​ಗೊಂದು ಪ್ರತಿಸ್ಪರ್ಧಿ: ಉತ್ತರ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ಮಸೀದಿ ಬಗ್ಗೆ ಬಿಜೆಪಿ ಮುಖಂಡ ನೀಡಿದ ವಿವರಗಳು ಕುತೂಹಲಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts