More

    ಬಿಜೆಪಿ ಭದ್ರಕೋಟೆಯಲ್ಲಿ ಭಾರತ್​ ಜೋಡೋ ಯಾತ್ರೆ: ರಾಹುಲ್​ ಜತೆ ಕೈಜೋಡಿಸಿದ ಸಹೋದರಿ ಪ್ರಿಯಾಂಕಾ

    ಖಾಂಡ್ವಾ: ಬಿಜೆಪಿಯ ಭದ್ರ ಕೋಟೆ ಮಧ್ಯಪ್ರದೇಶದಲ್ಲಿ ಸಾಗುತ್ತಿರುವ ಭಾರತ್​ ಜೋಡೋ ಯಾತ್ರೆಯಲ್ಲಿ ಕಾಂಗ್ರೆಸ್​ ನಾಯಕ ಹಾಗೂ ವಯನಾಡು ಸಂಸದ ರಾಹುಲ್​ ಗಾಂಧಿಗೆ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಸಾಥ್​ ನೀಡಿದ್ದಾರೆ.

    ಸೆಪ್ಟೆಂಬರ್​ 7ರಂದು ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ಆರಂಭವಾದ ಯಾತ್ರೆಯು ಇತ್ತೀಚೆಗಷ್ಟೇ ಮಹಾರಾಷ್ಟ್ರ ಪೂರ್ಣಗೊಳಿಸಿ, ನಿನ್ನೆ (ನ.23) ಬಿಜೆಪಿ ಆಡಳಿತವಿರುವ ಮಧ್ಯಪ್ರದೇಶದಕ್ಕೆ ಎಂಟ್ರಿ ಕೊಟ್ಟಿದೆ. ಇಂದಿನ ಯಾತ್ರೆಯ ಪ್ರಮುಖ ಆಕರ್ಷಣೀಯ ಎಂದರೆ, ಪ್ರಿಯಾಂಕಾ ಗಾಂಧಿ. ಕರ್ನಾಟಕದ ಯಾತ್ರೆಯ ಸಮಯದಲ್ಲೇ ಪ್ರಿಯಾಂಕಾ, ರಾಹುಲ್​ಗೆ ಜತೆಯಾಗಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಕಾರಣಾಂತರಗಳಿಂದ ಅದು ಸಾಧ್ಯವಾಗಿರಲಿಲ್ಲ. ಆದರೆ, ಇಂದು ಯಾತ್ರೆಗೆ ಕೈಜೋಡಿಸಿದ್ದಾರೆ. ಇಂದು ಬೆಳಗ್ಗೆ ಯಾತ್ರೆಯು ಖಾಂಡ್ವಾ ಜಿಲ್ಲೆಯ ಬೊರಂಗಾವ್​ನಿಂದ ಆರಂಭವಾಗಿದ್ದು, ಖಾರ್ಗೋನ್​ಗೆ ಪ್ರವೇಶ ಪಡೆಯುವ ಮುನ್ನ ಸ್ವಾಂತಂತ್ರ್ಯ ಹೋರಾಟಗಾರ ತಾಂತಿಯಾ ಭೀಲ್​ ಜನ್ಮ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ.

    ಬುಡಕಟ್ಟು ಸಮುದಾಯವನ್ನು ತಲುಪಲು ಕಾಂಗ್ರೆಸ್ ಪ್ರಯತ್ನಿಸುತ್ತಿದ್ದಂತೆ ಎಚ್ಚೆತ್ತಿರುವ ಬಿಜೆಪಿಯು ಕಾಂಗ್ರೆಸ್​ಗೆ ಕೌಂಟರ್ ಕೊಡಲು ಸಿದ್ಧವಾಗಿದೆ. ಆಡಳಿತ ಪಕ್ಷವು ನಿನ್ನೆ ತಾಂತ್ಯ ಭೀಲ್​ ಅವರ ಜನ್ಮಸ್ಥಳದಿಂದ ಜಂಜಾಟಿಯ ಗೌರವ ಯಾತ್ರೆಯನ್ನು ಪ್ರಾರಂಭಿಸಿದೆ. ಮೆರವಣಿಗೆಯ ಪ್ರಾರಂಭದಲ್ಲಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮತ್ತು ನಾಲ್ವರು ಸಚಿವರು ಭಾಗವಹಿಸಿದ್ದರು.

    ನಿನ್ನೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್​ ಗಾಂಧಿ, 2018ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ಪಕ್ಷವು ಗೆದ್ದ ನಂತರ ಕಮಲ್ ನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಉರುಳಿಸಲು ಬಿಜೆಪಿ ಪಕ್ಷವು ಶಾಸಕರಿಗೆ ಲಂಚ ನೀಡಿತು ಎಂದು ದೂರಿದರು. ನಾವು ಮಧ್ಯಪ್ರದೇಶದ ಚುನಾವಣೆಯಲ್ಲಿ ಗೆದ್ದಿದ್ದೇವೆ. ಆದರೆ, ಅವರು 20 ರಿಂದ 25 ಭ್ರಷ್ಟ ಶಾಸಕರಿಗೆ ಕೋಟಿಗಟ್ಟಲೆ ಹಣ ಕೊಟ್ಟು ಅವರನ್ನು ಖರೀದಿಸಿದರು ಎಂದು ರಾಹುಲ್​ ಬುರ್ಹಾನ್‌ಪುರದಲ್ಲಿ ಹೇಳಿದರು.

    ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಅಡಿಯಲ್ಲಿ ಎಲ್ಲಾ ಪ್ರಜಾಸತ್ತಾತ್ಮಕ ವ್ಯವಸ್ಥೆಗಳು ಮುಚ್ಚಿಹೋಗಿವೆ. ಈ ಬಗ್ಗೆ ಅರಿವು ಮೂಡಿಸಲೆಂದೇ ಭಾರತ್ ಜೋಡೋ ಯಾತ್ರೆಯನ್ನು ಪ್ರಾರಂಭಿಸಲಾಯಿತು. ಎಲ್ಲ ಸರ್ಕಾರಿ ಸಂಸ್ಥೆಗಳನ್ನು ಆರ್‌ಎಸ್‌ಎಸ್ ಮತ್ತು ಬಿಜೆಪಿ ಮೂಲೆಗುಂಪು ಮಾಡಿದೆ. ಎಲ್ಲಾ ಸಂಸ್ಥೆಗಳಲ್ಲೂ ಅವರ ಕಡೆಯವರೇ ತುಂಬಿದ್ದಾರೆ. ನ್ಯಾಯಾಂಗವು ಸಹ ಒತ್ತಡದಲ್ಲಿದೆ ಎಂದು ಆರೋಪ ಮಾಡಿದರು.

    ಭಾರತ್​ ಜೋಡೋ ಯಾತ್ರೆಯು ಪ್ರಮುಖ ಮೂರು ಗುರಿಗಳನ್ನು ಹೊಂದಿದೆ ಎಂದು ರಾಹುಲ್​ ಗಾಂಧಿ ಅವರು ಹೇಳಿದರು. ಮೊದಲನೆಯದಾಗಿ ಈ ಯಾತ್ರೆಯು ಭಾರತದಲ್ಲಿ ಹರಡುತ್ತಿರುವ ದ್ವೇಷ, ಹಿಂಸಾಚಾರ ಮತ್ತು ಭಯದ ವಿರುದ್ಧವಾಗಿದೆ. ಎರಡನೆಯದಾಗಿ ಇದು ನಿರುದ್ಯೋಗದ ವಿರುದ್ಧವಾಗಿದೆ ಮತ್ತು ಮೂರನೆಯದಾಗಿ ಇದು ಹಣದುಬ್ಬರದ ವಿರುದ್ಧವಾಗಿದೆ ಎಂದರು.

    ಕಾಂಗ್ರೆಸ್‌ನ ಅಧಿಕೃತ ಟ್ವಿಟರ್​ನಲ್ಲಿ ರಾಹುಲ್​ ಮತ್ತು ಪ್ರಿಯಾಂಕಾ ಫೋಟೋವನ್ನು ಹಂಚಿಕೊಂಡಿದ್ದು, ನಾವು ಒಟ್ಟಿಗೆ ನಡೆದಾಗ ನಮ್ಮ ಹೆಜ್ಜೆಗಳು ಬಲವಾಗಿರುತ್ತವೆ ಎಂದು ಬರೆದುಕೊಂಡಿದೆ. ಮಧ್ಯಪ್ರದೇಶದ ಪ್ರಮುಖ ಕಾಂಗ್ರೆಸ್ ನಾಯಕರಾದ ಕಮಲ್ ನಾಥ್ ಮತ್ತು ದಿಗ್ವಿಜಯ ಸಿಂಗ್ ಕೂಡ ಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ.

    ಮಧ್ಯಪ್ರದೇಶದ ಬಳಿಕ ರಾಹುಲ್ ಗಾಂಧಿ ನೇತೃತ್ವದ ಯಾತ್ರೆ ಮುಂದೆ ರಾಜಸ್ಥಾನ ಪ್ರವೇಶಿಸಲಿದೆ. ಈಗಾಗಲೇ ರಾಜಸ್ಥಾನದಲ್ಲಿ ಕಾಂಗ್ರೆಸ್‌ಗೆ ದೊಡ್ಡ ತೊಂದರೆಯಾಗಿದೆ. 2020ರಲ್ಲಿ ಬಂಡಾಯದ ನೇತೃತ್ವ ವಹಿಸಿದ್ದ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಮತ್ತು ಕಾಂಗ್ರೆಸ್‌ನ ಉನ್ನತ ನಾಯಕ ಸಚಿನ್‌ ಪೈಲಟ್‌ ನಡುವಿನ ಬಣ ಕಲಹ ಮತ್ತೆ ಬಿಕ್ಕಟ್ಟಿನ ಹಂತಕ್ಕೆ ತಲುಪಿದೆ. ಪೈಲಟ್ ಅವರನ್ನು ರಾಜಸ್ಥಾನ ಮುಖ್ಯಮಂತ್ರಿಯಾಗಿ ನೇಮಿಸದಿದ್ದರೆ ಯಾತ್ರೆಗೆ ಅಡ್ಡಿಪಡಿಸುವುದಾಗಿ ಸಮುದಾಯದ ಸಂಘಟನೆಯೊಂದು ಬೆದರಿಕೆ ಹಾಕಿದೆ. ಆದಾಗ್ಯೂ, ಕಾಂಗ್ರೆಸ್ ನಾಯಕರು ಈ ಬೆದರಿಕೆಯಿಂದ ದೂರವಿದ್ದು, ಬಿಜೆಪಿಯು ಗೊಂದಲಗಳನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದೆ. (ಏಜೆನ್ಸೀಸ್​)

    ಬಿಜೆಪಿ ಭದ್ರಕೋಟೆಯಲ್ಲಿ ಭಾರತ್​ ಜೋಡೋ ಯಾತ್ರೆ: ರಾಹುಲ್​ ಜತೆ ಕೈಜೋಡಿಸಿದ ಸಹೋದರಿ ಪ್ರಿಯಾಂಕಾ

    ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಕೆಲಸ ಕೊಡಿಸುವುದಾಗಿ ವಂಚಿಸುತ್ತಿದ್ದ ಖತರ್ನಾಕ್​ ದಂಪತಿ ಬಂಧನ!

    ತೊಂದರೆ ನಿವಾರಿಸಲು ತನ್ನ ಮುಂದೆಯೇ ಲೈಂಗಿಕ ಕ್ರಿಯೆ ನಡೆಸಲು ಒತ್ತಾಯ: ಮಾಂತ್ರಿಕನ ಮಾತು ನಂಬಿ ಬಲಿಯಾದ ಜೋಡಿ

    ವಿಚ್ಛೇದಿತ ಉದ್ಯಮಿ ಜತೆ ಮಾನುಷಿ ಚಿಲ್ಲರ್​ ಡೇಟಿಂಗ್​! ಸಂಬಂಧ ಗುಟ್ಟಾಗಿ ಇಡುವ ವಿಶ್ವ ಸುಂದರಿಯ ಪ್ರಯತ್ನ ವಿಫಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts