More

    ರಾಜ್ಯದ ಹಲವು ಜಿಲ್ಲೆಗಳಲ್ಲಿ ಉತ್ತಮ ಮಳೆ; ಚಿಕ್ಕಮಗಳೂರಿನಲ್ಲಿ ಬಿತ್ತು ಒಂದು ಕಿಲೋ ಗಾತ್ರದ ಆಲಿಕಲ್ಲು!

    ಬೆಂಗಳೂರು: ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಶನಿವಾರ ಉತ್ತಮ ಮಳೆಯಾಗಿದ್ದು, ಕೆಲವೆಡೆ ಆಲಿಕಲ್ಲು ಮಳೆ ಬಿದ್ದಿರುವುದು ವರದಿಯಾಗಿದೆ.

    ಆಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕು ಕೆ.ಹೊಸೂರು ಗ್ರಾಮದ ಮನೆಯ ಮೇಲ್ಛಾವಣಿ ಮೇಲಂತೂ ಸುಮಾರು ಒಂದು ಕೆಜಿ ಗಾತ್ರದ ಆಲಿಕಲ್ಲು ಬಿದ್ದು ಗ್ರಾಮಸ್ಥರನ್ನು ಅಚ್ಚರಿಗೀಡು ಮಾಡಿದೆ. ಹುಬ್ಬಳ್ಳಿಯಲ್ಲೂ ಶನಿವಾರ ಸಂಜೆ ಆಲಿಕಲ್ಲು ಮಳೆ ಸುರಿದಿದೆ.

    ವಿಜಯಪುರ ಜಿಲ್ಲೆಯ ವಿವಿಧೆಡೆ ಶನಿವಾರ ಗುಡುಗು ಸಹಿತ ಆಲಿಕಲ್ಲು ಮಳೆ ಸುರಿದಿದೆ. ತಿಕೋಟಾ ತಾಲೂಕಿನ ಬಾಬಾನಗರ, ಬಿಜ್ಜರಗಿ, ಹೊನವಾಡ ಗ್ರಾಮಗಳಲ್ಲಿ ಆಲಿಕಲ್ಲು ಮಳೆಯಾಗಿದೆ. ಮಧ್ಯಾಹ್ನದಿಂದಲೇ ಮೋಡ ಕವಿದ ವಾತಾವರಣ ಸೃಷ್ಟಿಯಾಗಿತ್ತು. ವಿಜಯಪುರ, ಚಡಚಣ ತಾಲೂಕು ಸೇರಿದಂತೆ ಇತರ ಕಡೆ ಸ್ವಲ್ಪ ಹೊತ್ತು ಮಳೆಯಾಗಿದೆ.

    ಈ ಮಧ್ಯೆ ಚಿಕ್ಕಮಗಳೂರು ಜಿಲ್ಲೆಯ ಕಳಸ ಸಮೀಪದ ಬಾಳೆಹೊಳೆಯ ಹಿತ್ತಲಮಕ್ಕಿ ಗ್ರಾಮದಲ್ಲಿ ಶನಿವಾರ ಸಿಡಿಲು ಬಡಿದು ತಮಿಳುನಾಡು ಮೂಲದ ಮೂವರು ಕೂಲಿ ಕಾರ್ಮಿಕ ಮಹಿಳೆಯರು ಮೃತಪಟ್ಟಿದ್ದಾರೆ. ಕಾಫಿ ತೋಟದ ಲೈನ್ ಮನೆ ಮುಂಭಾಗದಲ್ಲಿ ನಿಂತಿದ್ದಾಗ ಭಾರಿ ಸಿಡಿಲೆರಗಿದೆ. ಸಿಡಿಲಿನ ಅಬ್ಬರಕ್ಕೆ ಸ್ಥಳದಲ್ಲೇ ಅವರು ಅಸುನೀಗಿದ್ದಾರೆ. ತಮಿಳುನಾಡಿನ ಸೇಲಂ ಧರ್ಮಪುರಿ ಜಿಲ್ಲೆಯಿಂದ ಕಾಫಿ ತೋಟದ ಕೂಲಿ ಕೆಲಸಕ್ಕಾಗಿ ಇಲ್ಲಿ ಬಂದು ವಾಸವಾಗಿದ್ದರು.

    ಎನ್.ಆರ್.ಪುರ, ಶೃಂಗೇರಿ, ಮೂಡಿಗೆರೆ, ಕೊಪ್ಪದ ವಿವಿಧ ಭಾಗಗಳಲ್ಲಿ ಮಳೆಯಾಗಿದೆ. ಕಳಸ ಹೋಬಳಿಯ ಬಹುತೇಕ ಕಡೆ ಶನಿವಾರ ಬಿರುಸಿನ ಮಳೆಯಾಗಿದೆ. ಕಳೆದ ಕೆಲ ದಿನಗಳಿಂದ ಕಣ್ಣುಮುಚ್ಚಾಲೆಯಾಡುತ್ತಿದ್ದ ಮಳೆ ಶುಕ್ರವಾರ ಮಧ್ಯಾಹ್ನ ಒಂದು ಗಂಟೆಗೂ ಹೆಚ್ಚು ಕಾಲ ಮಳೆ ಸುರಿದಿದೆ. ಮಳೆಯು ಕೃಷಿ ಚಟುವಟಿಕೆಗೆ ಪೂರಕವಾದ್ದರಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

    ಬೀದರ್ ಜಿಲ್ಲೆಯ ಔರಾದ್, ಹುಲಸೂರು, ಕಮಲನಗರ, ಬಸವಕಲ್ಯಾಣ, ಹುಮನಾಬಾದ್ ಸೇರಿ ವಿವಿಧೆಡೆ ಗುಡುಗು ಮಿಂಚು ಸಹಿತ ಭಾರಿ ಮಳೆಯಾಗಿದೆ. ಇದರಿಂದ ನಾಗೂರದಲ್ಲಿ ಈರುಳ್ಳಿ ಬೆಳೆ ಹಾಳಾಗಿದೆ. ಖೇರ್ಡಾದಲ್ಲಿ 15 ಕುರಿಗಳು ಸಿಡಿಲಿಗೆ ಬಲಿಯಾಗಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಸೋಲದಾಬಕಾದ ಭೀಮರಾವ ಮೋರೆ ಎಂಬುವರ ಎತ್ತು ಸಿಡಿಲಿಗೆ ಬಲಿಯಾಗಿದೆ. ಭದ್ರತೆಗೆ ಅಳವಡಿಸಿದ್ದ ಬ್ಯಾರಿಕೇಡ್‌ಗಳು ಕಿತ್ತು ಬಿದ್ದಿದ್ದು, ಪತ್ರಾಸ್‌ಗಳು ಹಾರಿ ಹೋಗಿವೆ.

    ಕಲಬುರಗಿ ಜಿಲ್ಲೆಯ ಕಲಬುರಗಿ, ಸೇಡಂ, ಚಿಂಚೋಳಿ, ಕಮಲಾಪುರ ತಾಲೂಕಿನ ವಿವಿಧೆಡೆ ಕೂಡ ಸೋಮವಾರ ಸಂಜೆ ಗುಡುಗು-ಮಿಂಚಿನ ಮಳೆಯಾಗಿದೆ.

    ರಾಜ್ಯದಲ್ಲಿ ಮಳೆ ಮುಂದುವರಿಕೆ:
    ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿ ಪರಿಣಾಮ ರಾಜ್ಯದಲ್ಲಿ ವಿವಿಧೆಡೆ ಮಳೆಯಾಗುತ್ತಿದ್ದು, ಏ.23ರವರಗೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಕರಾವಳಿಯ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ವಿಜಯಪುರ ಹಾಗೂ ದಕ್ಷಿಣ ಒಳನಾಡಿನ ಬೆಂಗಳೂರು, ಬೆಂ.ಗ್ರಾ, ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು ಹಾಗೂ ಶಿವಮೊಗ್ಗ ಮತ್ತಿತರರ ಜಿಲ್ಲೆಗಳಲ್ಲಿ ಗುಡುಗು ಮಿಂಚು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮೂನ್ಸೂಚನೆ ನೀಡಿದೆ. ಕೆಲ ದಿನಗಳಿಂದ ವಿವಿಧ ಭಾಗಗಳಲ್ಲಿ ಸುರಿದ ಮಳೆಯಿಂದಾಗಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ.

    ತಾವೇ ವಿನ್ಯಾಸಗೊಳಿಸಿದ ಮಾಸ್ಕ್​ ಧರಿಸಿ ಮಿಂಚುತ್ತಿರುವ ಸಚಿನ್​, ದ್ರಾವಿಡ್​, ಗಂಗೂಲಿ… ಏಕೆ ಗೊತ್ತೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts