More

    ಚರಂಡಿ ಮೇಲೆ ಕಾಂಪೌಂಡ್ ನಿರ್ಮಾಣ; ಗ್ರಾಪಂ ಸದಸ್ಯನ ವಿರುದ್ಧ ಗ್ರಾಮಸ್ಥರ ಪ್ರತಿಭಟನೆ

    ಬಾಳೆಹೊನ್ನೂರು: ಪಟ್ಟಣದ ಬಿ.ಕಣಬೂರು ಗ್ರಾಪಂ ವ್ಯಾಪ್ತಿಯ ಮಲೆಯಾಳಿ ಕಾಲನಿಯಲ್ಲಿ ಮಳೆ ನೀರು ಹರಿದು ಹೋಗುತ್ತಿದ್ದ ಚರಂಡಿಯ ಮೇಲೆ ಗ್ರಾಪಂ ಸದಸ್ಯರೊಬ್ಬರು ಅನಧಿಕೃತವಾಗಿ ಕಾಂಪೌಂಡ್ ನಿರ್ಮಾಣ ಮಾಡುತ್ತಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ಗ್ರಾಪಂ ಕಚೇರಿ ಮುಂಭಾಗದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

    ಗ್ರಾಮಸ್ಥ ಸಿದ್ದಿಕ್ ಮಾತನಾಡಿ, ಮಲೆಯಾಳಿ ಕಾಲನಿಯಲ್ಲಿ ಈ ಹಿಂದೆ ಕ್ಲಿಫರ್ಡ್ ಎಂಬುವರ ಜಾಗದಲ್ಲಿ ಮಳೆಗಾಲದಲ್ಲಿ ನೀರು ಹರಿದು ಕೆರೆಗೆ ಸೇರುತ್ತಿತ್ತು. ಈ ಜಾಗವನ್ನು ಕೆಲ ವರ್ಷಗಳ ಹಿಂದೆ ಗ್ರಾಪಂ ಸದಸ್ಯ ಪ್ರಭಾಕರ್ ಖರೀದಿಸಿ ಕಟ್ಟಡ ನಿರ್ಮಿಸಿದ್ದು, ಇದೀಗ ನೀರು ಹರಿಯುತ್ತಿದ್ದ ಜಾಗದಲ್ಲಿ ಕಾಂಪೌಂಡ್ ನಿರ್ಮಾಣ ಮಾಡುತ್ತಿದ್ದಾರೆ ಎಂದು ದೂರಿದರು.
    ಕಾಂಪೌಂಡ್ ನಿರ್ಮಾಣ ಮಾಡುವುದರಿಂದ ಮಲೆಯಾಳಿ ಕಾಲನಿಯ ಹಲವು ಮನೆಗಳಿಗೆ ತೊಂದರೆಯಾಗಲಿದೆ. ಮಳೆಗಾಲದಲ್ಲಿ ನೀರು ಸಮರ್ಪಕವಾಗಿ ಹರಿಯದೆ ಮನೆಗಳಿಗೆ ನೀರು ನುಗ್ಗುವ ಸಾಧ್ಯತೆ ಹೆಚ್ಚಾಗಿದೆ. ಇದನ್ನು ಪ್ರಶ್ನಿಸಿದರೆ, ಪ್ರಭಾಕರ್ ಅವರು ನನ್ನ ಜಾಗದಲ್ಲಿ ಚರಂಡಿ ನೀರು ಹರಿಯಲು ಬಿಡುವುದಿಲ್ಲ ಎನ್ನುತ್ತಿದ್ದಾರೆ. ಇದಕ್ಕೆ ಪರಿಹಾರ ಸೂಚಿಸಿ ಎಂದು ಆಗ್ರಹಿಸಿದರು.
    ಗ್ರಾಮಸ್ಥ ಎಸ್.ಎಸ್.ಜಗದೀಶ್ ಮಾತನಾಡಿ, ಚರಂಡಿ ಮುಚ್ಚಿ ಕಾಂಪೌಂಡ್ ನಿರ್ಮಿಸುತ್ತಿರುವ ಬಗ್ಗೆ ದೂರು ನೀಡಿದರೂ ಗ್ರಾಪಂ ಸೂಕ್ತವಾಗಿ ಸ್ಪಂದಿಸುತ್ತಿಲ್ಲ. ದೂರು ನೀಡಿದ ಗ್ರಾಮಸ್ಥರಿಗೆ ಭಾನುವಾರ ರಾತ್ರಿ ದಿಢೀರ್ ಗ್ರಾಪಂನಿಂದ ನೋಟಿಸ್ ನೀಡಲಾಗಿದೆ. ಮನೆಯ ಸೂಕ್ತ ದಾಖಲಾತಿಗಳನ್ನು ತೆಗೆದುಕೊಂಡು ಬರುವಂತೆ ಪಿಡಿಒ ಸೂಚಿಸಿದ್ದಾರೆ. ನೋಟಿಸ್ ಸ್ವೀಕರಿಸಲು ನಿರಾಕರಿಸಿದವರ ಮನೆಗಳಿಗೆ ಸೋಮವಾರ ಬೆಳಗ್ಗೆ ಕುಡಿಯುವ ನೀರನ್ನು ಸರಬರಾಜು ಮಾಡಿಲ್ಲ. ಪಿಡಿಒ, ಗ್ರಾಪಂ ಸದಸ್ಯ ಪ್ರಭಾಕರ್ ಜತೆ ಸೇರಿಕೊಂಡು ಅಧ್ಯಕ್ಷರಿಗೆ ತಿಳಿಸದೆ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದರು.
    ಕೂಡಲೇ ಕಾಂಪೌಂಡ್ ನಿರ್ಮಾಣ ಕಾಮಗಾರಿ ಸ್ಥಗಿತಗೊಳಿಸಬೇಕು. ಇಲ್ಲವಾದರೆ ಗ್ರಾಮಸ್ಥರೇ ಒಗ್ಗೂಡಿ ಕಾಂಪೌಂಡ್ ತೆರವುಗೊಳಿಸುತ್ತೇವೆ ಎಂದು ಎಚ್ಚರಿಸಿದರು.
    ದೂರು ಆಲಿಸಿದ ಗ್ರಾಪಂ ಅಧ್ಯಕ್ಷ ಸದಾಶಿವ ಆಚಾರ್ಯ ಪ್ರತಿಕ್ರಿಯಿಸಿ, ಈಗಾಗಲೇ ಸ್ಥಳ ಪರಿಶೀಲನೆ ನಡೆಸಲಾಗಿದೆ. ತಾತ್ಕಾಲಿಕವಾಗಿ ಕಾಮಗಾರಿ ಸ್ಥಗಿತಗೊಳಿಸುವಂತೆ ಸೂಚಿಸಲಾಗುವುದು. ಮತ್ತೊಮ್ಮೆ ಸ್ಥಳಕ್ಕೆ ಅಧಿಕಾರಿಗಳೊಂದಿಗೆ ಆಗಮಿಸಿ ಪರಿಶೀಲಿಸಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು. ಗ್ರಾಪಂ ಸದಸ್ಯರಾದ ಎಂ.ಎಸ್.ಅರುಣೇಶ್, ರವಿಚಂದ್ರ, ಶಶಿಕಲಾ, ಜಂಶೀದ್ ಅಹ್ಮದ್, ಇಬ್ರಾಹಿಂ ಶಾಫಿ, ಗ್ರಾಮಸ್ಥರಾದ ಆನಂದ್, ರಫೀಕ್, ಲತೀಫ್, ಫಾರೂಕ್, ಮಂಜುನಾಥ್ ಶೆಟ್ಟಿ, ಸುಹಾಸ್, ಖಾಲಿದ್ ಇತರರಿದ್ದರು.

    ನಾನು ಖರೀದಿಸಿದ ಜಾಗದಲ್ಲಿ ಈ ಹಿಂದೆಯೇ ಕಾಂಪೌಂಡ್ ಇತ್ತು. ಕೆಲ ಗ್ರಾಮಸ್ಥರು ಕಾಂಪೌಂಡ್‌ನ್ನು ಅನಧಿಕೃತವಾಗಿ ಉರುಳಿಸಿ ಮನೆಗಳ ಕೊಳಚೆನೀರನ್ನು ನನ್ನ ಜಾಗದೊಳಗೆ ಬಿಡುತ್ತಿದ್ದರು. ಇಂಗುಗುಂಡಿ ಮಾಡಿಸಿಕೊಂಡು ಕೊಳಚೆನೀರು ನೀಡು ಬಿಡಲು ಹೇಳಿದರೂ ಕೇಳಲಿಲ್ಲ. ಈ ಹಿನ್ನೆಲೆಯಲ್ಲಿ ನಾನು ದುರಸ್ತಿಗೊಂಡಿದ್ದ ಕಾಂಪೌಂಡ್‌ನ್ನು ರಿಪೇರಿ ಮಾಡಿಸುತ್ತಿದ್ದೇನೆ. ಅನಧಿಕೃತವಾಗಿ ಯಾವುದೇ ಕಂಪೌಂಡ್ ನಿರ್ಮಾಣ ಮಾಡುತ್ತಿಲ್ಲ.
    ಪ್ರಭಾಕರ್, ಗ್ರಾಪಂ ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts