More

    ಸುಸ್ಥಿರ ವಿತ್ತನೀತಿ ಸವಾಲು: 5 ವರ್ಷ ಎಚ್ಚರಿಕೆ ಅಗತ್ಯ ಎಂದಿದ್ದ ಆರ್ಥಿಕ ಸಮೀಕ್ಷೆ

    | ರುದ್ರಣ್ಣ ಹರ್ತಿಕೋಟೆ ಬೆಂಗಳೂರು

    ಬರಲಿರುವ ಚುನಾವಣೆಗೆ ಪೂರ್ವಭಾವಿಯಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ವರ್ಸ³ ಮುಂಗಡಪತ್ರವನ್ನೇನೋ ಮಂಡಿಸಿದ್ದಾರೆ. ಆದರೆ ಸರ್ಕಾರದ ಆರ್ಥಿಕ ಸ್ಥಿತಿಯನ್ನು ನಿಭಾಯಿಸುವ ಸವಾಲನ್ನು ಈಗ ಮತ್ತು ಮುಂದೆ ಹೇಗೆ ಎದುರಿಸಲಾಗುತ್ತದೆ ಎಂಬುದು ಕುತೂಹಲಕರ. ರಾಜ್ಯ ಸರ್ಕಾರವೇ ಮಂಡಿಸಿರುವ ಮಧ್ಯಮಾವಧಿ ವಿತ್ತೀಯ ಯೋಜನೆ, ವಿತ್ತೀಯ ನಿರ್ವಹಣಾ ಪರಿಶೀಲನಾ ಸಮಿತಿ ಹಾಗೂ ಆರ್ಥಿಕ ಸಮೀಕ್ಷೆಯಲ್ಲಿನ ಕೆಲ ಸಂಗತಿ ಗಮನಿಸಿದಾಗ ಹಲವು ಸಲಹೆ ಪಾಲನೆಯಾಗಿಲ್ಲ ಎಂಬುದು ಕಂಡು ಬರುತ್ತದೆ.

    ಒಟ್ಟಾರೆ ವೇತನ, ಪಿಂಚಣಿ, ಬಡ್ಡಿ ಪಾವತಿ, ಸಾಲದ ಪ್ರಮಾಣ ತಗ್ಗಿಸುವ ಮೂಲಕ ಆರ್ಥಿಕ ಶಿಸ್ತು ಕಾಪಾಡುವ ಹೊಣೆಯ ಬಗ್ಗೆ ಹೇಳಲಾಗಿದೆ. ಮುಂದಿನ ಮೂರು ತಿಂಗಳಲ್ಲಿ ಅಧಿಕಾರಕ್ಕೆ ಬರುವ ಸರ್ಕಾರದ ಮೇಲೆ ದೊಡ್ಡ ಹೊಣೆಯಂತೂ ಇದೆ. ಯೋಜನೇತರ ವೆಚ್ಚಗಳನ್ನು ಕಡಿಮೆ ಮಾಡುವ ಪ್ರಯತ್ನಗಳು ಕಂಡುಬಂದಿಲ್ಲ. ರಾಜ್ಯದ ಸಾಲ ಜಿಎಸ್​ಡಿಪಿಯ ಶೇ.25 ಮೀರುವಂತಿಲ್ಲ. ಕೋವಿಡ್ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಅನುಮತಿ ನೀಡಿದಾಗ ಮಾತ್ರ ಶೇ.26.71ಕ್ಕೆ ಹೋಗಿದ್ದು ಈ ಹಣಕಾಸು ವರ್ಷದಲ್ಲಿ ಶೇ.23.76ಕ್ಕೆ ಇಳಿದಿದೆ. ಆದರೆ, 2023-24ರ ಹಣಕಾಸು ವರ್ಷಕ್ಕೆ ಮತ್ತೆ ಶೇ.24.02ಕ್ಕೆ ಏರಿಕೆಯಾಗಿದೆ. ಹದಿ ನೈದನೇ ಹಣಕಾಸು ಆಯೋಗದಿಂದ ಉಂಟಾಗಿರುವ ಸಮಸ್ಯೆ, ಹೆಚ್ಚುತ್ತಿರುವ ಸಾಲ ಮತ್ತು ಬಡ್ಡಿ ಪಾವತಿ ತಗ್ಗಿಸುವ ಸಲಹೆ ಜಾರಿ ಪ್ರಯತ್ನ ನಡೆದಿಲ್ಲ. ತೆರಿಗೆ ಹೆಚ್ಚಳ ಎಂದರೆ ತೆರಿಗೆಯ ವ್ಯಾಪ್ತಿಯ ಹೆಚ್ಚಳವಾಗಬೇಕು, ಆದರೆ, ಆ ಪ್ರಯತ್ನ ಕಾಣುತ್ತಿಲ್ಲ. ಏಕೆಂದರೆ ಅಬಕಾರಿ, ಮೋಟಾರ್ ವಾಹನ ಹಾಗೂ ನೋಂದಣಿಯಲ್ಲಿ ತೆರಿಗೆ ಪ್ರಮಾಣ ಏರುಗತಿಯಲ್ಲಿದ್ದರೆ, ವಾಣಿಜ್ಯ ತೆರಿಗೆ ಇಳಿಕೆಯ ಹಾದಿಯಲ್ಲಿದೆ. ತೆರಿಗೆ ಸಂಗ್ರಹ ಶೇ.4.61 ರಿಂದ ಶೇ.4.16ಕ್ಕೆ ಕಡಿಮೆಯಾಗಿದೆ.ರಾಜಸ್ವ ಉಳಿತಾಯ ಸಾಧಿಸಿರುವುದಾಗಿ ಸರ್ಕಾರ ಹೇಳುತ್ತಿದೆ. ವಿವಿಧ ಕಾರಣಗಳಿಂದ ತೆರಿಗೆ ಸಂಗ್ರಹ ಹೆಚ್ಚಾಗಿರುವುದರಿಂದ ಉಳಿತಾಯ ಸಾಧ್ಯವಾಗಿದೆ. ಆದರೆ, ರಾಜಸ್ವ ವೆಚ್ಚ 2022-23 ರಲ್ಲಿ 2,18,356 ಕೋಟಿ ರೂ.ಗಳಿದ್ದದ್ದು, 2023- 24ಕ್ಕೆ 2,25,507 ಕೋಟಿ ರೂ.ಗಳಿಗೆ ಏರಿಕೆಯಾಗಲಿದೆ. ಈ ವೆಚ್ಚ ಕಡಿಮೆ ಯಾಗಬೇಕೆಂಬುದು ಎಲ್ಲ ಸಲಹೆಗಳ ಒಟ್ಟಾರೆ ಆಶಯ.

    ಮುಕ್ತ ಮಾರುಕಟ್ಟೆಯ ಸಾಲವನ್ನು ಕಡಿಮೆ ಮಾಡಿಕೊಳ್ಳುವ ಮೂಲಕ ಆರ್​ಬಿಐನ ತಾತ್ಕಾಲಿಕ ನಗದು ವ್ಯವಸ್ಥೆಯ ಮೇಲೆ ಹೆಚ್ಚಿನ ಅವಲಂಬನೆಗೆ ಸೂಚನೆಗಳಿವೆ. ಆದರೆ, ಸರ್ಕಾರ ಬಹಿರಂಗ ಮಾರುಕಟ್ಟೆಯ ಸಾಲವನ್ನೇ ಹೆಚ್ಚಿನ ಪ್ರಮಾಣದಲ್ಲಿ ನೆಚ್ಚಿಕೊಂಡಿದೆ. ಪ್ರಮುಖವಾಗಿ ಸ್ವಂತ ಸಂಪನ್ಮೂಲ ಸಂಗ್ರಹ ಹೆಚ್ಚಾಗಬೇಕು, ಆದರೆ, ಜನರ ಮೇಲೆ ತೆರಿಗೆ ಹೊರೆ ಬೀಳಬಾರದು. ಅಂದರೆ ತೆರಿಗೆಯ ವ್ಯಾಪ್ತಿಗೆ ಇನ್ನಷ್ಟು ಉದ್ಯಮಿಗಳು ಸೇರ್ಪಡೆಯಾಗಬೇಕಾಗಿದೆ.

    ವಿದ್ಯುತ್ ಕಂಪನಿಗಳ ಸುಧಾರಣೆ
    ವಿದ್ಯುತ್ ಕಂಪನಿಗಳ ಸುಧಾರಣೆ ಬಗ್ಗೆ ಪರಿಶೀಲನಾ ಸಮಿತಿ ನೀಡಿರುವ ಸಲಹೆಯನ್ನು ಗಮನಿಸಿರುವುದು ಬಜೆಟ್​ನಲ್ಲಿ ಪ್ರಸ್ತಾಪವಾಗಿದೆ. ಅದನ್ನು ಎಷ್ಟರಮಟ್ಟಿಗೆ ಜಾರಿಗೊಳಿಸಲಾಗುತ್ತದೆ ಎಂಬುದು ಮುಂದಿನ ಸರ್ಕಾರದ ಮೇಲೆ ಅವಲಂಬಿತವಾಗಿದೆ.

    ಐದು ವರ್ಷ ಸವಾಲು
    ಹದಿನೈದನೇ ಹಣಕಾಸು ಆಯೋಗದ ವರದಿಯಲ್ಲಿ ಕೇಂದ್ರದಿಂದ ರಾಜ್ಯಕ್ಕೆ ತೆರಿಗೆ ಪಾಲಿನ ವರ್ಗಾವಣೆ ಕಡಿಮೆಯಾಗಿರುವುದರಿಂದ ಮುಂದಿನ ಐದು ವರ್ಷ ರಾಜ್ಯಕ್ಕೆ ಸವಾಲಿನ ದಿನಗಳೆಂದು ಆರ್ಥಿಕ ಸಮೀಕ್ಷೆ ಎಚ್ಚರಿಕೆ ನೀಡಿದೆ. 14ನೇ ಹಣಕಾಸು ಆಯೋಗದಲ್ಲಿ ಶೇ.4.7 ರಷ್ಟು ಇದ್ದ ತೆರಿಗೆ ವರ್ಗಾವಣೆ, 15ನೇ ಹಣಕಾಸು ಆಯೋಗದಲ್ಲಿ ಶೇ.3.7ಕ್ಕೆ ಇಳಿದಿದೆ.

    ಎಂಟಿಎಫ್​ಪಿ ಸೂಚನೆ
    * ಸಂಬಳ, ಪಿಂಚಣಿ, ಬಡ್ಡಿ, ಸಹಾಯಧನ ಕಡಿಮೆ ಮಾಡಬೇಕು
    * ಸಿಬ್ಬಂದಿ ಗಾತ್ರ ತಗ್ಗಿಸಬೇಕು
    ಸಬ್ಸಿಡಿ ಇಳಿಕೆ
    ರಾಜ್ಯ ಸರ್ಕಾರ ನೀಡುವ ಸಬ್ಸಿಡಿಗಳ ಪ್ರಮಾಣ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಶೇ.2.4 ಇದ್ದ ಸಬ್ಸಿಡಿ ಪ್ರಮಾಣ ಈಗ ಶೇ.1.2ಕ್ಕೆ ಇಳಿದಿದೆ.

    ಎಂಟಿಎಫ್​ಪಿ ಆದ್ಯತೆಗಳು
    * ರಾಜಸ್ವ ಸಂಗ್ರಹ ಹೆಚ್ಚಳ
    * ಕೃಷಿ, ಆರೋಗ್ಯ, ಶಿಕ್ಷಣ, ಕೌಶಲ, ಕುಡಿಯುವ ನೀರು, ನೀರಾವರಿ, ಗ್ರಾಮೀಣಾಭಿವೃದ್ಧಿ, ಲಾಜಿಸ್ಟಿಕ್ಸ್, ಆರ್ ಅಂಡ್ ಡಿಗೆ ಪ್ರಧಾನ ಅಭಿವೃದ್ಧಿ ವೆಚ್ಚ
    * ಹೆಚ್ಚಿನ ಬಂಡವಾಳ ವೆಚ್ಚದ ಮೂಲಕ ಆರ್ಥಿಕ ಅಭಿವೃದ್ಧಿಯಾಗಿ ಉದ್ಯೋಗ ಸೃಷ್ಟಿ
    * ಸಾರ್ವಜನಿಕ ವೆಚ್ಚದ ಗುಣಮಟ್ಟ ಹೆಚ್ಚಳ
    * ಅವಧಿಪೂರ್ವ ಪಾವತಿ ಮೂಲಕ ಸಾಲ ತಗ್ಗಿಸಬೇಕು

    ಸಾಲವೇ ಬಂಡವಾಳ
    ಬಂಡವಾಳ ವೆಚ್ಚಕ್ಕೆ ಸಾಲವೇ ಬಂಡವಾಳ ಎಂಬ ಸ್ಥಿತಿ ಎದುರಾಗಿರುವುದು ಆತಂಕದ ವಿಚಾರವೆಂದು ಎಂಟಿಎಫ್​ಪಿ ಗುರುತಿಸಿದೆ. ಸಾಲವನ್ನು ಬಂಡವಾಳ ವೆಚ್ಚಕ್ಕೆ ಖರ್ಚು ಮಾಡಿರುವ ಪ್ರಮಾಣ 2022-23 ರಲ್ಲಿ ಶೇ.90.5 ಇದ್ದದ್ದು 2023-24ಕ್ಕೆ ಶೇ.101ಕ್ಕೆ ಏರಿಕೆಯಾಗುತ್ತಿದೆ. ಅಂದರೆ, ರಾಜಸ್ವ ವೆಚ್ಚಕ್ಕೆ ಕಡಿವಾಣ ಹಾಕಿಲ್ಲ ಎಂಬುದು ಕಂಡುಬರುತ್ತದೆ.

    ಕುಸಿಯಲಿರುವ ಬೆಳವಣಿಗೆ ದರ
    ರಾಜ್ಯದ ಒಟ್ಟಾರೆ ಬೆಳವಣಿಗೆ ದರ ಶೇ.7.9 ಇದೆ ಎಂದು ಆರ್ಥಿಕ ಸಮೀಕ್ಷೆ ಹೇಳಿದೆ. ವಾಸ್ತವವಾಗಿ ಕಡಿಮೆಯಾಗುವ ಸಾಧ್ಯತೆಯನ್ನು ಅರ್ಥಶಾಸ್ತ್ರಜ್ಞರು ಗುರುತಿಸಿದ್ದಾರೆ. 2023-24ಕ್ಕೆ ಶೇ.7 ಆಗಬಹುದೆಂದು ಸಮೀಕ್ಷೆ ಹೇಳಿದೆ.

    2023-24 ನೇ ಸಾಲಿನ ಯೋಜನಾ ಆಧಾರಿತ ಬದ್ಧವೆಚ್ಚಗಳು (ಕೋಟಿ ರೂ.ಗಳಲ್ಲಿ)
    ಸಹಾಯಧನ- 31,367
    ಸಾಮಾಜಿಕ ಭದ್ರತೆ- 10,401
    ಆರ್ಥಿಕ ನೆರವು- 5,972
    ವೇತನಾನುದಾನ- 2,910
    ಸ್ಥಳೀಯ ಸಂಸ್ಥೆಗಳಿಗೆ- 20,920

    ಯೋಜನೇತರ ಬದ್ಧವೆಚ್ಚಗಳು (ಕೋಟಿ ರೂ.ಗಳಲ್ಲಿ)
    ವೇತನ- 68,491
    ಪಿಂಚಣಿ- 26,980
    ಬಡ್ಡಿ ಪಾವತಿ- 34,023
    ಆಡಳಿತ ವೆಚ್ಚ- 5,383

    ತೆರಿಗೆ ಸಂಗ್ರಹ ಕುಸಿತ
    * 2019-20 ಶೇ.7.25
    * 2023-24 ಶೇ.7.05

    ವಿತ್ತೀಯ ಸಮಿತಿ ಸಲಹೆಗಳು
    * ಸ್ವಂತ ತೆರಿಗೆ ಹೆಚ್ಚಿಸಬೇಕು
    * ವೆಚ್ಚ ಸಮರ್ಪಕ ನಿರ್ವಹಣೆ
    * ಸಾಲ ಕಡಿಮೆ ಮಾಡಿ ಸುಸ್ಥಿರ ವಿತ್ತೀಯ ಮಾರ್ಗ ಅನುಸರಣೆ
    * ಮುಕ್ತ ಮಾರುಕಟ್ಟೆ ಸಾಲ ಕಡಿಮೆ ಮಾಡಿ ಆರ್​ಬಿಐನ ತಾತ್ಕಾಲಿಕ ನಗದು ವ್ಯವಸ್ಥೆ ಕಡೆ ಗಮನ
    * ಅನುದಾನಗಳನ್ನು ಸೂಕ್ತ ಸಮಯದಲ್ಲಿ ಮಾತ್ರ ಬಿಡುಗಡೆ ಮಾಡಬೇಕು
    * ಸಹಾಯಾನುಧಾನ ಸಂಸ್ಥೆಗಳು ಅನುದಾನವನ್ನು ಬ್ಯಾಂಕ್​ಗಳಲ್ಲಿ ಠೇವಣಿಯನ್ನು ಇಡುವ ಪ್ರವೃತ್ತಿಗೆ ಕಡಿವಾಣ
    * ತೆರಿಗೆಯೇತರ ರಾಜಸ್ವ ಎಲ್ಲೆಲ್ಲಿ ಹೆಚ್ಚಳವೋ ಅಲ್ಲಿ ಹೆಚ್ಚಿಸಬೇಕು
    * ವಿದ್ಯುತ್ ಕಂಪನಿಗಳ ಸುಧಾರಣೆ ಅತ್ಯಗತ್ಯ
    * ಸಹಾಯಧನ ಫಲಾನುಭವಿ ಕೇಂದ್ರಿತವಾಗಬೇಕು

    ಸಾಲದ ವಾಸ್ತವ ಸ್ಥಿತಿ?
    ರಾಜ್ಯ ಸರ್ಕಾರದ ಸಾಲ 2024ರ ಮಾರ್ಚ್ ಅಂತ್ಯಕ್ಕೆ 5.64 ಲಕ್ಷ ಕೋಟಿ ರೂ.ಗಳಾಗುತ್ತದೆ ಎಂದು ಸಿಎಂ ಬೊಮ್ಮಾಯಿ ಬಜೆಟ್ ಭಾಷಣದಲ್ಲಿ ಹೇಳಿದ್ದಾರೆ. ಕೇಂದ್ರದ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ 2023ರ ಫೆಬ್ರವರಿ 7 ರಂದು ರಾಜ್ಯಸಭೆಯಲ್ಲಿ ನೀಡಿರುವ ಉತ್ತರದಲ್ಲಿ 2022ರ ಮಾರ್ಚ್ ಅಂತ್ಯಕ್ಕೆ ರಾಜ್ಯದ ಸಾಲದ ಪ್ರಮಾಣ 4,73,437.9 ಕೋಟಿ ರೂ.ಗಳಾಗಿದೆ. 2022-23ರ ಆರ್ಥಿಕ ವರ್ಷದಲ್ಲಿ 68 ಸಾವಿರ ಕೋಟಿ ರೂ.ಗಳ ಸಾಲ ಮಾಡಲಾಗಿದೆ. ಅದರ ಜತೆಗೆ 2023-24ರ ಬಜೆಟ್​ನಲ್ಲಿ 77 ಸಾವಿರ ಕೋಟಿ ರೂ.ಗಳ ಸಾಲ ಮಾಡುವುದಾಗಿ ಹೇಳಿದ್ದಾರೆ. ಅಂದರೆ ರಾಜ್ಯದ ಸಾಲ 6.18 ಲಕ್ಷ ಕೋಟಿ ರೂ.ಗಳಿಗೆ ತಲುಪಲಿದೆ ಎಂದು ಹೇಳಲಾಗುತ್ತಿದೆ.

    ಆರ್​ಬಿಐ ಸಂಪರ್ಕ
    ಹೆಚ್ಚಿನ ಬಡ್ಡಿ ಪಾವತಿಸುವ ಸಾಲಗಳನ್ನು ಕಡಿಮೆ ಮಾಡಿ ಕೊಳ್ಳಲು ಅವಧಿಪೂರ್ವ ಪಾವತಿ ಬಗ್ಗೆ ಆರ್​ಬಿಐ ಜತೆ ಸಂಪರ್ಕ ಸಾಧಿಸುವಂತೆ ವಿತ್ತೀಯ ನಿರ್ವಹಣೆ, ಪರಿಶೀಲನಾ ಸಮಿತಿ ಸಲಹೆ ನೀಡಿದೆ. ಆದರೆ, ಆ ನಿಟ್ಟಿನಲ್ಲಿ ಪ್ರಯತ್ನಗಳೇನು ಎಂಬ ಬಗ್ಗೆ ಸರ್ಕಾರ ಹೇಳಿಲ್ಲ.

    ಗಾಡಿ ಹರಾಜು ಗೋಲ್ಮಾಲ್: ವಾಹನ ಸಿಕ್ಕರೂ ಮಾಲೀಕರಿಗೆ ಕೊಡಲ್ಲ! ಪೊಲೀಸರ ಕಳ್ಳಾಟ ಬಯಲು

    ಲಿವ್ ಇನ್ ಸಂಗಾತಿ ಕೊಂದು ಶವ ಫ್ರಿಜ್​ನಲ್ಲಿಟ್ಟ ಕೇಸ್: ಆರೋಪಿಗೆ ಕಾನ್​​ಸ್ಟೇಬಲ್​ ನೆರವು, ಸ್ಫೋಟಕ ಮಾಹಿತಿ ಬಯಲು

    ಮದ್ವೆ ಮಾಡಿಕೊಳ್ಳುವ ಬಯಕೆ ವ್ಯಕ್ತಪಡಿಸಿದ ಪುತ್ರನನ್ನು ಹೊಡೆದು ಕೊಂದ ತಂದೆ-ತಾಯಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts