More

    ಸಂಸತ್ತಿನ ಬಜೆಟ್ ಅಧಿವೇಶನ: ವಿಪಕ್ಷಗಳಿಗೆ ಖಡಕ್​ ಎಚ್ಚರಿಕೆ ನೀಡಿದ ಪ್ರಧಾನಿ ಮೋದಿ

    ನವದೆಹಲಿ: ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಮಾರ್ಗದರ್ಶನ ಮತ್ತು ನಾಳೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಅವರ ಮಧ್ಯಂತರ ಬಜೆಟ್​ ಮಂಡನೆಯು ಒಂದು ರೀತಿಯಲ್ಲಿ ನಾರಿ ಶಕ್ತಿಯ ಹಬ್ಬವಾಗಿದೆ ಎಂದು ಪ್ರಧಾನಿ ಮೋದಿ ಅವರು ಹೇಳಿದರು. ಇದೇ ಸಂದರ್ಭದಲ್ಲಿ ಅಧಿವೇಶನಕ್ಕೆ ಅಡ್ಡಿಪಡಿಸದಂತೆ ವಿಪಕ್ಷಗಳಿಗೆ ಮೋದಿ ಖಡಕ್​ ಎಚ್ಚರಿಕೆ ಸಹ ನೀಡಿದರು.

    ಇಂದಿನಿಂದ ಕೇಂದ್ರ ಬಜೆಟ್​ ಅಧಿವೇಶನ ಹಿನ್ನೆಲೆಯಲ್ಲಿ ಹೊಸ ಸಂಸತ್​ ಭವನದ ಹೊರಭಾಗದಲ್ಲಿ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಈ ಹೊಸ ಸಂಸತ್ತಿನ ಕಟ್ಟಡದಲ್ಲಿ ಕರೆದ ಮೊದಲ ಅಧಿವೇಶನದ ಕೊನೆಯಲ್ಲಿ, ಸಂಸತ್ತು ಒಂದು ಉತ್ತಮ ನಿರ್ಧಾರವನ್ನು ತೆಗೆದುಕೊಂಡಿತು. ಅದೇ ನಾರಿ ಶಕ್ತಿ ವಂದನ್ ಅಧಿನಿಯಮ್ ಎಂದರು. ಮಹಿಳೆಯರಿಗೆ ಲೋಕಸಭೆ, ರಾಜ್ಯ ವಿಧಾನಸಭೆಗಳಲ್ಲಿ ಮೂರನೇ ಒಂದರಷ್ಟು ಮೀಸಲಾತಿ ಕಲ್ಪಿಸುವ ಸಂವಿಧಾನ ತಿದ್ದುಪಡಿ ಮಸೂದೆಯಾಗಿದ್ದು, ರಾಷ್ಟ್ರಪತಿಗಳ ಅಂಕಿತ ಪಡೆದು ಕಾಯ್ದೆಯಾಗಿದೆ.

    ನಾರಿ ಶಕ್ತಿ ವಂದನ್ ಅಧಿನಿಯಮ್ ಬಳಿಕ ಜನವರಿ 26 ರಂದು ಇಡೀ ದೇಶವು ನಾರಿ ಶಕ್ತಿಯ ಸಾಮರ್ಥ್ಯ, ಶೌರ್ಯ ಮತ್ತು ಅವರ ಸಂಕಲ್ಪದ ಶಕ್ತಿಯನ್ನು ನೋಡಿದೆ. ಇಂದು, ಬಜೆಟ್ ಅಧಿವೇಶನ ಪ್ರಾರಂಭವಾಗುವಾಗ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಮಾರ್ಗದರ್ಶನ ಮತ್ತು ನಾಳೆ ನಿರ್ಮಲಾ ಸೀತಾರಾಮನ್ ಅವರು ಮಧ್ಯಂತರ ಬಜೆಟ್ ಅನ್ನು ಮಂಡಿಸುವಾಗ ಒಂದು ರೀತಿಯಲ್ಲಿ ಇದು ನಾರಿ ಶಕ್ತಿಯ ಹಬ್ಬವಾಗಿದೆ ಎಂದು ಪ್ರಧಾನಿ ಹೇಳಿದರು.

    ಹೊಸ ಸರ್ಕಾರ ರಚನೆಯಾದ ನಂತರ ಪೂರ್ಣ ಪ್ರಮಾಣದ ಬಜೆಟ್ ಮಂಡಿಸುವ ಸಂಪ್ರದಾಯವನ್ನು ನಾವು ಅನುಸರಿಸಲಿದ್ದೇವೆ. ಈ ಬಾರಿ ದೇಶದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ‘ದಿಶಾ-ನಿರ್ದೇಶಕ್ ಬಾತೇನ್’ ಮೂಲಕ ಬಜೆಟ್ ಮಂಡಿಸಲಿದ್ದಾರೆ. ಪ್ರತಿ ದಿನವೂ ಪ್ರಗತಿಯ ಹೊಸ ಎತ್ತರಗಳನ್ನು ದಾಟುವ ಮೂಲಕ ದೇಶವು ಮುನ್ನಡೆಯುತ್ತಿದೆ ಎಂಬ ದೃಢ ನಂಬಿಕೆ ನನಗಿದೆ. ಸರ್ವತೋಮುಖ ಮತ್ತು ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ಧಿ ಸಾಗುತ್ತಿದೆ. ಜನರ ಆಶೀರ್ವಾದದಿಂದ ಈ ಯಾತ್ರೆ ಹೀಗೆ ಮುಂದುವರಿಯಲಿದೆ ಎಂದು ಪ್ರಧಾನಿ ಹೇಳಿದರು.

    ಇದೇ ಸಂದರ್ಭದಲ್ಲಿ ಸಂಸತ್ತಿನ ಅಧಿವೇಶನಕ್ಕೆ ಅಡ್ಡಿಪಡಿಸುವ ವಿಪಕ್ಷಗಳ ಸದಸ್ಯರನ್ನು ಗುರಿಯಾಗಿಸಿ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಿತ್ತುಹಾಕುವ ಅಭ್ಯಾಸ ಇರುವ ಸಂಸದರು, ತಮ್ಮ ಸಂಸತ್ತಿನ ಅವಧಿಯಲ್ಲಿ ಏನು ಮಾಡಿದ್ದಾರೆ ಎಂಬುದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುತ್ತಾರೆಂದು ನಾನು ಭಾವಿಸುತ್ತೇನೆ. ಸಂಸತ್ತಿಗೆ ಧನಾತ್ಮಕ ಕೊಡುಗೆ ನೀಡಿದವರನ್ನು ಮಾತ್ರ ಎಲ್ಲರೂ ನೆನಪಿಸಿಕೊಳ್ಳುತ್ತಾರೆ. ಆದರೆ, ಅಡ್ಡಿಪಡಿಸುವ ಸದಸ್ಯರನ್ನು ಒಳ್ಳೆಯ ರೀತಿಯಲ್ಲಿ ನೆನೆಯುವುದಿಲ್ಲ. ಹೀಗಾಗಿ ಈ ಬಜೆಟ್ ಅಧಿವೇಶನವು ಸಕಾರಾತ್ಮಕ ಹೆಜ್ಜೆಗುರುತುಗಳನ್ನು ಬಿಡಲು ಅಂಥವರಿಗೆ ಒಂದು ಅವಕಾಶವಾಗಿದೆ. ಈ ಅವಕಾಶವನ್ನು ಕಳೆದುಕೊಳ್ಳಬೇಡಿ ಮತ್ತು ತಮ್ಮ ಅತ್ಯುತ್ತಮ ಪ್ರದರ್ಶನವನ್ನು ನೀಡಬೇಕೆಂದು ನಾನು ಎಲ್ಲ ಸಂಸದರನ್ನು ಕೋರುತ್ತೇನೆ ಎನ್ನುವ ಮೂಲಕ ವಿಪಕ್ಷಗಳಿಗೆ ಪ್ರಧಾನಿ ಮೋದಿ ಎಚ್ಚರಿಕೆ ನೀಡಿದರು. (ಏಜೆನ್ಸೀಸ್​)

    ಬೆಳ್ಳುಳ್ಳಿ ದರ ಏರಿಕೆ, ಕೆಜಿಗೆ 400-500 ರೂ; ದಿಢೀರ್ ಕುಸಿದ ಈರುಳ್ಳಿ ಬೆಲೆ ಕೆಜಿಗೆ 20 ರೂ.

    ಚಹಾ, ಕಾಫಿ, ಹಾಲು ಕುಡಿದ ನಂತ್ರ ನೀರು ಕುಡಿದ್ರೆ ಅನಾರೋಗ್ಯ ಕಟ್ಟಿಟ್ಟಬುತ್ತಿ; ಇರಲಿ ಎಚ್ಚರ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts