More

    ಆಯೋಗದ ಕಣ್ಣು, ಕಿವಿಯಾಗಿ ಕೆಲಸ ಮಾಡಿ

    ದಾವಣಗೆರೆ : ಲೋಕಸಭಾ ಚುನಾವಣೆಯನ್ನು ನ್ಯಾಯ ಸಮ್ಮತ, ಪಾರದರ್ಶಕ ಹಾಗೂ ಮುಕ್ತವಾಗಿ ನಡೆಸಲು ಚುನಾವಣಾ ಅಧಿಕಾರಿಗಳು ಆಯೋಗದ ಕಣ್ಣು, ಕಿವಿಯಾಗಿದ್ದು ಪ್ರಾಮಾಣಿಕವಾದ ಕೆಲಸ ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಹೇಳಿದರು.
     ಜಿಲ್ಲಾಡಳಿತ ಭವನದಲ್ಲಿ ಬುಧವಾರ, ಸಹಾಯಕ ಚುನಾವಣಾಧಿಕಾರಿಗಳು, ಫ್ಲೈಯಿಂಗ್ ಸ್ಕ್ವಾಡ್, ಸ್ಟ್ಯಾಟಿಕ್ ಸರ್ವಲೆನ್ಸ್ ಟೀಮ್ ಮುಖ್ಯಸ್ಥರಿಗೆ ಚುನಾವಣಾ ಕರ್ತವ್ಯಗಳು ಮತ್ತು ಅನುಸರಿಸಬೇಕಾದ ಕ್ರಮ, ನಿಯಮಗಳು, ಮಾದರಿ ನೀತಿ ಸಂಹಿತೆ ಅನುಷ್ಠಾನದ ಕುರಿತಂತೆ ಏರ್ಪಡಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.
     ಫ್ಲೈಯಿಂಗ್ ಸ್ಕ್ವಾಡ್‌ಗೆ ಕಾರ್ಯನಿರ್ವಾಹಕ ದಂಡಾಧಿಕಾರಿಯ ಅಧಿಕಾರ ನೀಡಲಾಗಿದೆ. ಯಾವುದೇ ಸಂದರ್ಭದಲ್ಲಿ ಚುನಾವಣಾ ಅಕ್ರಮಗಳ ಬಗ್ಗೆ ತನಿಖೆ ಮಾಡಬಹುದು. ಚುನಾವಣಾ ಉದ್ದೇಶಕ್ಕೆ ಹಂಚಿಕೆ ಮಾಡಲು ಸಂಗ್ರಹಿಸಲಾದ ಹಣ, ಮದ್ಯ, ಉಚಿತ ಕೊಡುಗೆಗಳಾದ ಸೀರೆ, ಶಾಲು, ಆಭರಣ, ಕೂಪನ್‌ಗಳು, ಅಡುಗೆ ಮನೆಯ ವಸ್ತುಗಳು ಕಂಡುಬಂದಲ್ಲಿ ವಶಕ್ಕೆ ಪಡೆದು ತನಿಖೆ ಮಾಡಿ ಅಕ್ರಮ ಎಂದಾದಲ್ಲಿ ಪ್ರಕರಣ ದಾಖಲಿಸುವ ಅಧಿಕಾರ ಇರುತ್ತದೆ ಎಂದರು.
     ಚೆಕ್‌ಪೋಸ್ಟ್ನಲ್ಲಿ ಕಾರ್ಯ ನಿರ್ವಹಿಸುವ ಅಧಿಕಾರಿಗಳು ಆಯಾ ಮಾರ್ಗದಲ್ಲಿ ಸಾಗುವ ವಾಹನಗಳನ್ನು ತಪಾಸಣೆ ಮಾಡಿ ಕಳುಹಿಸಬೇಕು. ಯಾವುದೇ ವಾಹನದಲ್ಲಿ ಒಬ್ಬರು 50 ಸಾವಿರಕ್ಕಿಂತ ಹೆಚ್ಚು ನಗದು ಕೊಂಡೊಯ್ಯುವಂತಿಲ್ಲ. ಹೆದ್ದಾರಿಯಲ್ಲಿರುವ ಚೆಕ್‌ಪೋಸ್ಟ್ಗಳಲ್ಲಿ ಬಸ್, ಲಾರಿ, ಬೈಕ್, ಕಾರ್‌ಗಳ ಪರಿಶೀಲನೆ ನಡೆಸಬೇಕು. ವಾಹನದ ದಟ್ಟಣೆ ಹೆಚ್ಚಾಗದಂತೆ ವಿವೇಚನೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ತಿಳಿಸಿದರು.
     ಜಿಲ್ಲಾ ಪಂಚಾಯಿತಿ ಸಿಇಒ ಸುರೇಶ್ ಬಿ. ಇಟ್ನಾಳ್ ಮಾತನಾಡಿ, ಮತದಾರರ ಮೇಲೆ ಆಮಿಷವೊಡ್ಡಲು ಚೆಕ್‌ಪೋಸ್ಟ್ ಬದಲಾಗಿ ಸ್ವ ಸಹಾಯ ಗುಂಪುಗಳಿಗೆ ನೇರವಾಗಿ ಹಣ ನೀಡುವ ಮೂಲಕ ಹಂಚಿಕೆ ಮಾಡುವ ಸಂಭವವಿರುತ್ತದೆ. ಲೇವಾದೇವಿ ವ್ಯವಹಾರಗಾರರ ಮೂಲಕವೂ ವ್ಯವಹಾರ ನಡೆಯುವ ಸಾಧ್ಯತೆ ಇರುತ್ತದೆ.
     ಮತದಾರರಿಗೆ ಯಾವುದೋ ಖಾತೆಯಿಂದ ನೆಫ್ಟ್ೃ, ಆರ್.ಟಿ.ಜಿ.ಎಸ್ ಮಾಡಬಹುದು. ಮತಗಟ್ಟೆ ಬಳಿಯೇ ಹಣ ಹಂಚಿಕೆ ಮಾಡುವ ಸಾಧ್ಯತೆ ಇರುತ್ತದೆ. ಹಣ ನೀಡಿ ರ‌್ಯಾಲಿಗೆ ಕರೆದುಕೊಂಡು ಬರುವ ಸಾಧ್ಯತೆ ಇರುತ್ತದೆ. ಆಂಬುಲೆನ್ಸ್ ಮೂಲಕ, ವಾಹನದ ಟೈರ್‌ಗಳಲ್ಲಿ, ಬಾನೆಟ್ ಒಳಗೆ, ನೀರು, ಹಾಲಿನ ಟ್ಯಾಂಕರ್‌ನಲ್ಲಿ ಹಣ ಸಾಗಣೆ, ಸರಕು ವಾಹನಗಳಲ್ಲಿ ಹಣ ಸಾಗಣೆ ಸಂಭವವಿರುತ್ತದೆ ಎಂದರು.
     ಎಸ್ಪಿ ಉಮಾ ಪ್ರಶಾಂತ್ ಮಾತನಾಡಿ ಸಾಮಾಜಿಕ ಜಾಲತಾಣದಲ್ಲಿ ಜಾತಿ, ಧರ್ಮದ ಆಧಾರದಲ್ಲಿ ಪೋಸ್ಟ್ ಮಾಡುವವರ ಮೇಲೆ ನಿಗಾ ವಹಿಸಬೇಕು. ಎಫ್‌ಎಸ್‌ಟಿ, ಎಸ್‌ಎಸ್‌ಟಿ ತಂಡಗಳಿಗೆ ಬೇಕಾದ ಎಲ್ಲ ಬಂದೋಬಸ್ತ್ ಮತ್ತು ಇಲಾಖೆ ಸಿಬ್ಬಂದಿಗಳನ್ನು ನಿಯೋಜಿಸಲಾಗುತ್ತದೆ ಎಂದು ತಿಳಿಸಿದರು.
     ಚುನಾವಣಾ ವೆಚ್ಚ ಮೇಲ್ಚಿಚಾರಣಾ ಸಮಿತಿ ನೋಡಲ್ ಅಧಿಕಾರಿ ಗಿರೀಶ್, ಪ್ರಜಾ ಪ್ರತಿನಿಧಿ ಕಾಯ್ದೆ ನಿಯಮಗಳು ಮತ್ತು ವೆಚ್ಚಕ್ಕೆ ಸಂಬಂಧಿಸಿದಂತೆ ಪ್ರತಿನಿತ್ಯ ಕಳುಹಿಸಬೇಕಾದ ವರದಿಗಳ ಬಗ್ಗೆ ತಿಳಿಸಿದರು.
     ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತ ಮಂಜುನಾಥ್ ಜಿ.ಎಸ್.ಟಿ. ನಿಯಮಗಳು ಮತ್ತು ಸರಕು ಸಾಗಾಣಿಕೆ ವೇಳೆ ಏನೆಲ್ಲಾ ದಾಖಲೆಗಳನ್ನು ಪರಿಶೀಲನೆ ಮಾಡಬೇಕೆನ್ನುವ ಬಗ್ಗೆ ಮಾಹಿತಿ ನೀಡಿದರು. ಅಬಕಾರಿ ಉಪ ಆಯುಕ್ತೆ ಟಿ.ವಿ. ಶೈಲಜಾ ಮದ್ಯ ಸಾಗಣೆ, ಅಂಗಡಿಗಳ ಕಾರ್ಯ ನಿರ್ವಹಣೆ ಸಮಯ ಮತ್ತು ನಿಯಮಗಳ ಬಗ್ಗೆ ಹೇಳಿದರು. ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts