More

    ಹೆಚ್ಚಳವಾಗಲಿ ರಂಗಭೂಮಿ ಕಲಾವಿದರ ಪಿಂಚಣಿ

    ದಾವಣಗೆರೆ : ಹಿರಿಯ ರಂಗಭೂಮಿ ಕಲಾವಿದರ ಪಿಂಚಣಿಯನ್ನು ಮಾಸಿಕ ಕನಿಷ್ಠ 5 ಸಾವಿರ ರೂ.ಗೆ ಹೆಚ್ಚಳ ಮಾಡಬೇಕು. ಈ ನಿಟ್ಟಿನಲ್ಲಿ ಸರ್ಕಾರದ ಮೇಲೆ ಒತ್ತಡ ತರಲು ಸಂಘಟಿತ ಹೋರಾಟದ ಅಗತ್ಯವಿದೆ ಎಂದು ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿರಿಯ ರಂಗ ಕಲಾವಿದ ಬಿ.ಇ. ತಿಪ್ಪೇಸ್ವಾಮಿ ನಾರಶೆಟ್ಟಿಹಳ್ಳಿ ಹೇಳಿದರು.
     ಸ್ಫೂರ್ತಿ ಸಾಂಸ್ಕೃತಿಕ ಸೇವಾ ಸಂಘದಿಂದ ನಗರದ ರೋಟರಿ ಬಾಲಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿಶ್ವ ರಂಗಭೂಮಿ ದಿನಾಚರಣೆ ಮತ್ತು ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
     ಪ್ರಸ್ತುತ ರಾಜ್ಯ ಸರ್ಕಾರ ಮಾಸಿಕ ನೀಡುತ್ತಿರುವ 2 ಸಾವಿರ ರೂ. ಪಿಂಚಣಿ ಯಾವುದಕ್ಕೂ ಸಾಲದು. ಕನಿಷ್ಠ 5 ಸಾವಿರ ರೂ. ನೀಡಿದರೆ ಕಲಾವಿದರ ಮುಸ್ಸಂಜೆಯ ಬದುಕಿನ ಬಂಡಿ ಸಾಗಬಹುದು. ಇದಕ್ಕಾಗಿ ಮೊದಲು ನಾವು ಸಂಘಟಿತರಾಗಬೇಕಿದೆ. ರಂಗಾಸಕ್ತರ ನೇತೃತ್ವದಲ್ಲಿ ಬೆಂಗಳೂರಿಗೆ ತೆರಳಿ ಸಿಎಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರಿಗೆ ಒತ್ತಾಯ ಮಾಡಬೇಕಿದೆ ಎಂದರು.
     ರಂಗಭೂಮಿಗೆ ತಮ್ಮ ಬದುಕನ್ನೆ ಮುಡಿಪಾಗಿಟ್ಟಿರುವ ನೂರಾರು ಕಲಾವಿದರು ರಾಜ್ಯದಲ್ಲಿದ್ದಾರೆ. ಒಂದು ಕಾಲದಲ್ಲಿ ಕರ್ನಾಟಕ ರಂಗಕಲೆ ಮತ್ತು ಕಲಾವಿದರ ತವರು ಮನೆಯಾಗಿತ್ತು. ಇಲ್ಲಿ 68 ಹವ್ಯಾಸಿ ನಾಟಕ ಕಂಪನಿಗಳಿದ್ದವು, ಈ ಸಂಖ್ಯೆ ಈಗ 17 ಕ್ಕೆ ಇಳಿದಿದೆ. ಟಿವಿ, ಮೊಬೈಲ್ ಸೇರಿ ಆಧುನಿಕ ದೃಶ್ಯ ಮಾಧ್ಯಮಗಳ ಹೊಡೆತಕ್ಕೆ ರಂಗಕಲೆ ಮತ್ತು ಕಲಾವಿದರು ನಲುಗಿಹೋಗಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
     ಮನುಷ್ಯನನ್ನು ತಿದ್ದಿ, ತೀಡಿ ಆತನಿಗೆ ಜ್ಞಾನ ದಾಸೋಹ ನೀಡುವ ಶಕ್ತಿ ರಂಗಭೂಮಿಗಿದೆ. ಇಂಥಹ ಕಲೆಯನ್ನು ಉಳಿಸಿ, ಬೆಳೆಸಿ ಭವಿಷ್ಯದ ಪೀಳಿಗೆಗೆ ವರ್ಗಾಯಿಸುವ ಜವಾಬ್ದಾರಿ ಯುವ ಸಮೂಹಕ್ಕಿದೆ ಎಂದು ಹೇಳಿದರು.
     ಸಾಹಿತಿ ಎಚ್.ಕೆ. ಸತ್ಯಭಾಮಾ ಮಂಜುನಾಥ್ ಮಾತನಾಡಿ, ರಂಗಭೂಮಿ ಚಟುವಟಿಕೆ ನಿರತರಿಗೂ ಒಂದು ಸ್ಮರಣೀಯ ದಿನ ಬೇಕು ಎನ್ನುವ ಕಾರಣಕ್ಕೆ 1962 ರಿಂದ ವಿಶ್ವ ರಂಗಭೂಮಿ ದಿನವನ್ನು ಪ್ರತಿ ವರ್ಷ ಮಾರ್ಚ್ 27 ರಂದು ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
     ಸ್ಫೂರ್ತಿ ಸಾಂಸ್ಕೃತಿಕ ಸೇವಾ ಸಂಸ್ಥೆಯ ಅಧ್ಯಕ್ಷ ಎನ್.ಎಸ್. ರಾಜು ಪ್ರಾಸ್ತಾವಿಕವಾಗಿ ಮಾತನಾಡಿ, 31 ವರ್ಷಗಳಿಂದ ಸಂಸ್ಥೆ ಸ್ವಂತ ಅನುದಾನವಿಲ್ಲದೆ ದಾನಿಗಳು, ಆಸಕ್ತರ ನೆರವಿನಿಂದ ನಡೆಯುತ್ತಿದೆ. ಸಾಮಾಜಿಕ, ಸಾಂಸ್ಕೃತಿಕ ಸೇವೆಗಾಗಿ ಮೀಸಲಾದ ಈ ವೇದಿಕೆ ಕಲೆ ಮತ್ತು ಕಲಾವಿದರನ್ನು ಗುರುತಿಸಿ ಪುರಸ್ಕರಿಸುವ ಕೆಲಸ ಮಾಡುತ್ತಿದೆ ಎಂದರು.
     ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಐರಣಿ ಬಸವರಾಜ್ ವಿಶ್ವ ರಂಗಭೂಮಿ ಕುರಿತು ಉಪನ್ಯಾಸ ನೀಡಿದರು. ಶರಣ ಸಾಹಿತ್ಯ ಪರಿಷತ್ ದಾವಣಗೆರೆ ನಗರ ಘಟಕದ ಗೌರವಾಧ್ಯಕ್ಷ ಎಂ.ಎಸ್. ನಾಗರಾಜಪ್ಪ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಡಾ.ಎ. ಶಿವನಗೌಡ, ಡಿ.ಎಂ. ಕಲ್ಪನಾ ರಾಜ್, ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕಲಾವಿದ ಪಿ.ಜಿ. ಪರಮೇಶ್ವರಪ್ಪ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ವಿ. ಪರಮೇಶ್ವರಪ್ಪ ಇದ್ದರು.
     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts