More

    ರಂಗಭೂಮಿಯಿಂದ ಶಾಂತಿ, ನೆಮ್ಮದಿ

    ದಾವಣಗೆರೆ : ನಾಟಕ ಮನುಷ್ಯನಿಗೆ ಅತ್ಯಂತ ಆನಂದ ನೀಡುವ ಕಲೆಯಾಗಿದ್ದು, ವಿಶ್ವದಲ್ಲಿ ಶಾಂತಿ ಮತ್ತು ನೆಮ್ಮದಿಗಾಗಿ ರಂಗಭೂಮಿ ಕೆಲಸ ನಿರ್ವಹಿಸುತ್ತಿದೆ ಎಂದು ರಂಗತಜ್ಞ ಡಾ.ಎಂ.ಜಿ. ಈಶ್ವರಪ್ಪ ಹೇಳಿದರು.
     ಪ್ರತಿಮಾ ಸಭಾ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಗರದ ಎವಿಕೆ ಕಾಲೇಜು ಆವರಣದ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ನಾಟಕ ಪ್ರದರ್ಶನ ಉದ್ಘಾಟಿಸಿ  ಮಾತನಾಡಿದರು.
     ಎಲ್ಲಿ ಶಾಂತಿ ನೆಲೆಸಿರುತ್ತದೆಯೋ ಅಲ್ಲಿ ಕಲೆ ಇರುತ್ತದೆ. ಇದು ಬದುಕಿನಲ್ಲಿ ಸಾಮರಸ್ಯದ ಜತೆಗೆ ಸುಖ, ಶಾಂತಿ ಹಾಗೂ ನೆಮ್ಮದಿ ತಂದುಕೊಡುತ್ತದೆ. ಮನುಷ್ಯ ಸುಸಂಸ್ಕೃತನಾಗಿ ಬಾಳಲು ಕಲೆ, ಸಾಹಿತ್ಯ ಮತ್ತು ಸಂಗೀತವನ್ನು ಆಸ್ವಾದಿಸಬೇಕು ಎಂದು ತಿಳಿಸಿದರು.
     ಮಹಿಳೆಯರನ್ನು ಅತ್ಯಂತ ಗೌರವದಿಂದ ಕಾಣುವ ದೇಶ ನಮ್ಮದಾಗಿದೆ. ಮಹಿಳೆಯರ ಹಿರಿಮೆ ಕುರಿತು ಅನೇಕರು ಸಾಹಿತ್ಯ ರಚಿಸಿದ್ದಾರೆ. ಪ್ರಪಂಚದಲ್ಲೇ ಅನನ್ಯ ಸಾಧನೆ ಮಾಡಿರುವ ಮೇರಿ ಕ್ಯೂರಿ, ಸರೋಜಿನಿ ದೇವಿ ನಾಯ್ಡು, ಕಸ್ತೂರ ಬಾ ಮೊದಲಾದವರು ಬದುಕಿಗೆ ಮಾರ್ಗದರ್ಶನವಾಗಲಿ ಎಂದು ಆಶಿಸಿದರು.
     ಎಸ್‌ಎಸ್‌ಎಂಬಿ ಶಿಕ್ಷಣ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಡಾ.ಅನಿತಾ ಎಚ್. ದೊಡ್ಡಗೌಡರ್ ಮಾತನಾಡಿ, ಆಧುನಿಕ ದಿನಮಾನಗಳಲ್ಲೂ ಸಮಾಜದಲ್ಲಿ ಇಂದಿಗೂ ಮಹಿಳೆ ಎರಡನೇ ದರ್ಜೆಯ ಪ್ರಜೆಯಾಗಿಯೇ ಉಳಿದಿದ್ದಾಳೆ ಎಂದು ವಿಷಾದಿಸಿದರು.
     ಮಹಿಳೆಯರನ್ನು ನಿಕೃಷ್ಟವಾಗಿ ಕಾಣುತ್ತಿದ್ದ ಕಾಲದಲ್ಲಿ ಹನ್ನೆರಡನೆಯ ಶತಮಾನದ ಶಿವಶರಣರು ಲಿಂಗ ಸಮಾನತೆ ತಂದುಕೊಡುವ ಮೂಲಕ ಹೆಣ್ಣಿಗೂ ಸರಿಸಮಾನ ನ್ಯಾಯ ಒದಗಿಸುವ ಕೆಲಸ ಮಾಡಿದರು. ತದನಂತರ ಮಹಿಳೆ ಅನೇಕ ಸಂಕಷ್ಟಗಳ ಸರಮಾಲೆ ಎದುರಿಸುತ್ತಿದ್ದಾಳೆ ಎಂದು ತಿಳಿಸಿದರು.
     ಸಮಾಜದಲ್ಲಿ ಜನತೆ ಅಜ್ಞಾನ, ಬಡತನ, ಮೂಢನಂಬಿಕೆಗಳಿಂದ ತೊಳಲಾಡುತ್ತಿದ್ದು, ಶಿಕ್ಷಣದ ಮೂಲಕ ಇವುಗಳನ್ನು ತೊಡೆದು ಹಾಕಬೇಕು. ಮಹಿಳೆಯರು ಒಂದುಕಡೆ ಸುಶಿಕ್ಷಿತರಾಗುತ್ತಿದ್ದರೂ ನಾಗರಿಕತೆ ಮರೆಯುತ್ತಿದ್ದಾರೆ. ಕುಟುಂಬದ ಹಿರಿಯರು ವೃದ್ಧಾಶ್ರಮ ಸೇರುತ್ತಿದ್ದಾರೆ. ಇದು ಸರಿಯಲ್ಲ ಎಂದು ಕಿವಿಮಾತು ಹೇಳಿದರು.
     ಎವಿಕೆ ಕಾಲೇಜು ಪ್ರಾಚಾರ್ಯೆ ಪ್ರೊ. ಕಮಲಾ ಸೊಪ್ಪಿನ್ ಅಧ್ಯಕ್ಷತೆ ವಹಿಸಿದ್ದರು. ಮೈಸೂರಿನ ಶಶಿ ಥಿಯೇಟರ್ ಮುಖ್ಯಸ್ಥೆ ಬಿ.ಎನ್. ಶಶಿಕಲಾ ಇದ್ದರು. ಉಪನ್ಯಾಸಕ ರಣಧೀರ ಸ್ವಾಗತಿಸಿದರು.
     ನಂತರ ಮೈಸೂರಿನ ಶಶಿ ಥಿಯೇಟರ್ ಸದಸ್ಯರಿಂದ ಕಾಲೇಜಿನ ಹಿರಿಯ ವಿದ್ಯಾರ್ಥಿನಿ ಬಿ.ಎನ್. ಶಶಿಕಲಾ ನಾಟಕ ನಿರ್ದೇಶನದ, ಕವಿ ಡಾ.ಎಚ್.ಎಸ್. ವೆಂಕಟೇಶ್‌ಮೂರ್ತಿ ಅವರ ‘ಉರಿಯ ಉಯ್ಯಲೆ’ ನಾಟಕ ಪ್ರದರ್ಶಿಸಲಾಯಿತು.
     —-

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts