More

    ಸೂಪರ್ ಗುರು! ಐಪಿಎಲ್‌ನಲ್ಲಿದ್ದಾರೆ ಸ್ಟಾರ್ ತರಬೇತುದಾರರು

    ಬೆಂಗಳೂರು: ಐಪಿಎಲ್‌ನಲ್ಲಿ ಯಶಸ್ಸು ಗಳಿಸಬೇಕಾದರೆ ಬರೀ ಸ್ಟಾರ್ ಆಟಗಾರರಷ್ಟೇ ಇದ್ದರೆ ಸಾಲದು, ಸ್ಟಾರ್ ಕೋಚ್‌ಗಳೂ ಇರಬೇಕು. ಐಪಿಎಲ್ ತಂಡಗಳ ತರಬೇತಿ ಸಿಬ್ಬಂದಿ ಬಳಗವನ್ನು ಗಮನಿಸಿದಾಗ ಇದು ಸ್ಪಷ್ಟವಾಗುತ್ತದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕೋಚ್‌ಗಿಂತ ನಾಯಕನ ಮಾತಿಗೆ ಹೆಚ್ಚು ಬೆಲೆ. ಆದರೆ ಐಪಿಎಲ್‌ನಲ್ಲಿ ಕೋಚ್ ಕೂಡ ನಾಯಕನಷ್ಟೇ ಪ್ರಮುಖ. ಫುಟ್‌ಬಾಲ್ ತಂಡಗಳಂತೆ ಐಪಿಎಲ್‌ನಲ್ಲಿ ಕಾರ್ಯತಂತ್ರಗಳನ್ನು ರೂಪಿಸುವಲ್ಲಿ ಕೋಚ್‌ಗಳೂ ನಿರ್ಣಾಯಕರು. ರೋಹಿತ್ ಶರ್ಮ ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿ ಯಶಸ್ಸು ಗಳಿಸುವಲ್ಲಿ ತಂಡದ ಸ್ಟಾರ್ ಕೋಚಿಂಗ್ ಬಳಗವೂ ಪ್ರಮುಖ ಪಾತ್ರ ನಿರ್ವಹಿಸುತ್ತ ಬಂದಿದೆ ಎಂಬುದು ಸುಳ್ಳಲ್ಲ. ಇನ್ನು ರಾಷ್ಟ್ರೀಯ ತಂಡಗಳಿಗಿಂತ ಐಪಿಎಲ್ ತಂಡಗಳ ಕೋಚಿಂಗ್ ಕೂಡ ಭಿನ್ನ ಸವಾಲಿನದ್ದಾಗಿದೆ. ಹೀಗಾಗಿಯೇ ವಿಶ್ವಕಪ್ ವಿಜೇತ ತಂಡಗಳ ಕೋಚ್ ಆಗಿದ್ದ ಜಾನ್ ಬುಕಾನನ್ ಮತ್ತು ಗ್ಯಾರಿ ಕರ್ಸ್ಟನ್‌ರಂಥವರು ಈ ಹಿಂದೆ ಐಪಿಎಲ್‌ನಲ್ಲಿ ಹೆಚ್ಚಿನ ಯಶಸ್ಸು ಕಂಡಿಲ್ಲ.

    ಕಿಂಗ್ಸ್ ಇಲೆವೆನ್ ಪಂಜಾಬ್
    ಟೀಮ್ ಇಂಡಿಯಾ ಕೋಚ್ ಆಗಿ ಮೊದಲ ಸವಾಲಿನಲ್ಲಿ ಉತ್ತಮ ಯಶಸ್ಸನ್ನೇ ಕಂಡಿದ್ದರೂ, ವಿವಾದಾತ್ಮಕವಾಗಿ ಹೊರಬಿದ್ದಿದ್ದ ಕನ್ನಡಿಗ ಅನಿಲ್ ಕುಂಬ್ಳೆ, ಇದೀಗ ಐಪಿಎಲ್‌ನಲ್ಲಿ ಹೊಸ ರೀತಿಯ ಸವಾಲು ಎದುರಿಸಲು ಸಿದ್ಧರಾಗಿದ್ದಾರೆ. ಅವರಿಗೆ ಜಿಂಬಾಬ್ವೆಯ ಮಾಜಿ ಆಟಗಾರ ಹಾಗೂ ಈಗಾಗಲೆ ಇಂಗ್ಲೆಂಡ್ ಸಹಿತ ಕೆಲ ತಂಡಗಳ ಕೋಚ್ ಆಗಿ ಯಶಸ್ಸು ಕಂಡಿರುವ ಆಂಡಿ ಫ್ಲವರ್ ಸಹಾಯಕ ಕೋಚ್ ಆಗಿ ನೆರವಾಗಲಿದ್ದಾರೆ. ಜತೆಗೆ ಬ್ಯಾಟಿಂಗ್ ಕೋಚ್ ಆಗಿ ವಾಸಿಂ ಜಾರ್, ಫೀಲ್ಡಿಂಗ್ ಕೋಚ್ ಆಗಿ ಜಾಂಟಿ ರೋಡ್ಸ್ ಮತ್ತು ಬೌಲಿಂಗ್ ಕೋಚ್ ಆಗಿ ಚಾರ್ಲ್ ಲಾಂಗ್‌ವೆಲ್ಟ್ ಸಹಾಯ ಮಾಡಲಿದ್ದಾರೆ.

    ಮುಂಬೈ ಇಂಡಿಯನ್ಸ್
    ಮುಂಬೈ ತಂಡದಲ್ಲಿ ಯಾವಾಗಲೂ ಆಟಗಾರರಷ್ಟೇ ತರಬೇತಿ ಬಳಗವೂ ಸ್ಟಾರ್ ಆಕರ್ಷಣೆ ಹೊಂದಿರುತ್ತದೆ. ಕಳೆದ ವರ್ಷ ಮುಖ್ಯ ಕೋಚ್ ಆಗಿ ಪ್ರಶಸ್ತಿ ಗೆಲ್ಲಿಸಿಕೊಟ್ಟಿದ್ದ ಶ್ರೀಲಂಕಾದ ಮಹೇಲ ಜಯವರ್ಧನೆ ಈ ಬಾರಿಯೂ ಅದೇ ಯಶಸ್ಸು ಮುಂದುವರಿಸುವ ಛಲದಲ್ಲಿದ್ದಾರೆ. ಅವರಿಗೆ ರಾಬಿನ್ ಸಿಂಗ್ (ಬ್ಯಾಟಿಂಗ್ ಕೋಚ್), ಶೇನ್ ಬಾಂಡ್ (ಬೌಲಿಂಗ್ ಕೋಚ್), ಜೇಮ್ಸ್ ಪಮ್ಮೆಂಟ್ (ಫೀಲ್ಡಿಂಗ್ ಕೋಚ್) ನೆರವಾಗಲಿದ್ದಾರೆ. ಜತೆಗೆ ಮಾಜಿ ವೇಗಿ ಜಹೀರ್ ಖಾನ್ ಕ್ರಿಕೆಟ್ ನಿರ್ದೇಶಕರಾಗಿ ಸಹಾಯ ಮಾಡಲಿದ್ದಾರೆ. ದಿಗ್ಗಜ ಸಚಿನ್ ತೆಂಡುಲ್ಕರ್ ತಂಡದ ಐಕಾನ್ ಮತ್ತು ಮೆಂಟರ್ ಆಗಿದ್ದರೂ ಈ ಬಾರಿ ಯುಎಇಯ ಬಯೋ-ಬಬಲ್‌ಗೆ ತೆರಳುವುದು ಅನುಮಾನವೆನಿಸಿದೆ.

    ಆರ್‌ಸಿಬಿ
    ನ್ಯೂಜಿಲೆಂಡ್ ತಂಡ ಬಲಿಷ್ಠವಾಗಿ ರೂಪುಗೊಳ್ಳುವಲ್ಲಿ ಮತ್ತು 2015ರಲ್ಲಿ ಮೊದಲ ಬಾರಿ ವಿಶ್ವಕಪ್ ಫೈನಲ್‌ಗೇರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕೋಚ್ ಮೈಕೆ ಹೆಸ್ಸನ್, ಆರ್‌ಸಿಬಿ ತಂಡಕ್ಕೆ ಕ್ರಿಕೆಟ್ ನಿರ್ದೇಶಕರಾಗಿ ತರಬೇತಿಯ ಸಂಪೂರ್ಣ ಮೇಲ್ವಿಚಾರಣೆ ವಹಿಸಿಕೊಂಡಿದ್ದಾರೆ. ಈ ಮೂಲಕ ನಾಯಕ ಕೊಹ್ಲಿ ಕೈಬಲಪಡಿಸಿದ್ದಾರೆ. ಸೈಮನ್ ಕಾಟಿಚ್ ಮುಖ್ಯ ಕೋಚ್, ಆಡಂ ಗ್ರಿಫಿತ್ ಬೌಲಿಂಗ್ ಕೋಚ್, ಎಸ್. ಶ್ರೀರಾಮ್ ಬ್ಯಾಟಿಂಗ್-ಸ್ಪಿನ್ ಬೌಲಿಂಗ್ ಕೋಚ್, ಮಲೋಲನ್ ರಂಗರಾಜನ್ ಫೀಲ್ಡಿಂಗ್ ಕೋಚ್ ಆಗಿ ನೆರವಾಗಲಿದ್ದಾರೆ.

    ಇದನ್ನೂ ಓದಿ: ಮುಂಬೈ ಇಂಡಿಯನ್ಸ್ ತಂಡದಲ್ಲಿ ತೆಂಡುಲ್ಕರ್ ಪುತ್ರ ಅರ್ಜುನ್ ಏನು ಮಾಡುತ್ತಿದ್ದಾರೆ?

    ಡೆಲ್ಲಿ ಕ್ಯಾಪಿಟಲ್ಸ್
    ಆಸೀಸ್ ನಾಯಕರಾಗಿ ಮಿಂಚಿದ್ದ ರಿಕಿ ಪಾಂಟಿಂಗ್, ಐಪಿಎಲ್‌ನಲ್ಲಿ ಮುಂಬೈ ಕೋಚ್ ಆಗಿ ಮೊದಲ ಸವಾಲಿನಲ್ಲಿ ಗೆದ್ದಿದ್ದರು. ಇದೀಗ ಡೆಲ್ಲಿ ಕೋಚ್ ಆಗಿ ಅದನ್ನೇ ಪುನರಾವರ್ತಿಸುವ ಹಂಬಲದಲ್ಲಿದ್ದಾರೆ. ಮೊಹಮದ್ ಕೈಫ್​ ಸಹಾಯಕ ಕೋಚ್ ಆಗಿ ಅವರಿಗೆ ನೆರವಾಗುತ್ತಿದ್ದಾರೆ. ಸ್ಯಾಮ್ಯುಯೆಲ್ ಬದ್ರಿ ಸ್ಪಿನ್ ಬೌಲಿಂಗ್ ಕೋಚ್, ರ‌್ಯಾನ್ ಹ್ಯಾರಿಸ್ ಬೌಲಿಂಗ್ ಕೋಚ್ ಆಗಿ ಪಾಂಟಿಂಗ್‌ಗೆ ಬಲ ತುಂಬಿದ್ದಾರೆ.

    ಸನ್‌ರೈಸರ್ಸ್‌ ಹೈದರಾಬಾದ್
    ಕಳೆದ ವರ್ಷ ಇಂಗ್ಲೆಂಡ್ ತಂಡದ ಕೋಚ್ ಆಗಿ ವಿಶ್ವಕಪ್ ಗೆಲ್ಲಿಸಿಕೊಟ್ಟಿದ್ದ ಟ್ರೆವರ್ ಬೇಲಿಸ್ ಇದೀಗ ಐಪಿಎಲ್ ಸವಾಲಿಗೆ ಸಿದ್ಧರಾಗಿದ್ದಾರೆ. ವಿಶ್ವಕಪ್ ವಿಜೇತರು ಐಪಿಎಲ್‌ನಲ್ಲಿ ಯಶ ಕಾಣದ ಇತಿಹಾಸ ಬದಲಿಸುವ ಪ್ರಯತ್ನದಲ್ಲಿದ್ದಾರೆ. ಬ್ರಾಡ್ ಹ್ಯಾಡಿನ್ ಸಹಾಯಕ ಕೋಚ್, ಮುತ್ತಯ್ಯ ಮುರಳೀಧರನ್ ಬೌಲಿಂಗ್ ಕೋಚ್, ವಿವಿಎಸ್ ಲಕ್ಷ್ಮಣ್ ಮೆಂಟರ್ ಮತ್ತು ಬಿಜು ಜಾರ್ಜ್ ಫೀಲ್ಡಿಂಗ್ ಕೋಚ್ ಆಗಿ ನೆರವಾಗಲಿದ್ದಾರೆ.

    ಚೆನ್ನೈ ಸೂಪರ್‌ಕಿಂಗ್ಸ್
    ಧೋನಿ ಮತ್ತು ಸ್ಟೀಫನ್​ ಫ್ಲೆಮಿಂಗ್ ಅವರ ಕ್ಯಾಪ್ಟನ್-ಕೋಚ್ ಕಾಂಬಿನೇಷನ್ 2009ರಿಂದಲೂ ಉತ್ತಮ ಯಶಸ್ಸನ್ನು ಕಂಡಿದೆ. ನಡುವೆ ಪುಣೆ ಸೂಪರ್‌ಜೈಂಟ್ಸ್ ತಂಡದಲ್ಲೂ ಇವರು ಯಶ ಗಳಿಸಿದ್ದರು. ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗಿ ನಿರಾಳರಾಗಿರುವ ಧೋನಿಗೆ ಕಾರ್ಯತಂತ್ರ ರೂಪಿಸುವಲ್ಲಿ ಫ್ಲೆಮಿಂಗ್ ನೆರವಾಗಲಿದ್ದಾರೆ. ಮೈಕೆಲ್ ಹಸ್ಸೆ ಬ್ಯಾಟಿಂಗ್ ಕೋಚ್, ಎಲ್. ಬಾಲಾಜಿ ಬೌಲಿಂಗ್ ಕೋಚ್, ರಾಜೀವ್ ಕುಮಾರ್ ಫೀಲ್ಡಿಂಗ್ ಕೋಚ್, ಎರಿಕ್ ಸಿಮನ್ಸ್ ಫೀಲ್ಡಿಂಗ್ ಸಲಹೆಗಾರರಾಗಿ ನೆರವಾಗಲಿದ್ದಾರೆ.

    ಸೂಪರ್ ಗುರು! ಐಪಿಎಲ್‌ನಲ್ಲಿದ್ದಾರೆ ಸ್ಟಾರ್ ತರಬೇತುದಾರರು

    ರಾಜಸ್ಥಾನ ರಾಯಲ್ಸ್
    ಆಸ್ಟ್ರೇಲಿಯಾ ಕ್ರಿಕೆಟ್‌ನಲ್ಲಿ ಕೋಚ್ ಆಗಿ ಹೆಸರು ಮಾಡುತ್ತಿರುವ ಆಂಡ್ರೋ ಮೆಕ್‌ಡೊನಾಲ್ಡ್ ರಾಜಸ್ಥಾನ ತಂಡಕ್ಕೆ ಮುಖ್ಯ ಕೋಚ್ ಆಗಿದ್ದಾರೆ. ಇವರಿಗೆ ಭಾರತದ ಅಮೊಲ್ ಮುಜುಮ್ದಾರ್ ಬ್ಯಾಟಿಂಗ್ ಕೋಚ್, ಸಾಯಿರಾಜ್ ಬಹುತುಳೆ ಸ್ಪಿನ್ ಬೌಲಿಂಗ್ ಕೋಚ್ ಆಗಿ ನೆರವಾಗಲಿದ್ದಾರೆ. ಜತೆಗೆ ಸ್ಪಿನ್ ದಿಗ್ಗಜ ಶೇನ್ ವಾರ್ನ್ ತಂಡದ ಮೆಂಟರ್ ಆಗಿದ್ದರೆ, ಇಶ್ ಸೋಧಿ ಸ್ಪಿನ್ ಸಲಹೆಗಾರ, ಸ್ಟಿಫಾನ್ ಜೋನ್ಸ್ ವೇಗದ ಬೌಲಿಂಗ್ ಕೋಚ್ ಮತ್ತು ದಿಶಾಂತ್ ಯಾಗ್ನಿಕ್ ಫೀಲ್ಡಿಂಗ್ ಕೋಚ್ ಆಗಿರುತ್ತಾರೆ.

    ಕೋಲ್ಕತ ನೈಟ್‌ರೈಡರ್ಸ್‌
    ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಟ್ರಿನ್‌ಬಾಗೋ ನೈಟ್‌ರೈಡರ್ಸ್‌ ಕೋಚ್ ಆಗಿ ಮೊದಲ ಸವಾಲಿನಲ್ಲಿ ಯಶ ಕಂಡಿರುವ ನ್ಯೂಜಿಲೆಂಡ್ ಮಾಜಿ ನಾಯಕ ಬ್ರೆಂಡನ್ ಮೆಕ್ಕಲಂ ಇದೀಗ ಕೆಕೆಆರ್ ತಂಡದಲ್ಲೂ ಅದೇ ಲಿತಾಂಶ ಮರುಕಳಿಸುವ ಕನಸಿನಲ್ಲಿದ್ದಾರೆ. ಅಭಿಷೇಕ್ ನಾಯರ್ ಸಹಾಯಕ ಕೋಚ್, ಕೈಲ್ ಮಿಲ್ಸ್ ಬೌಲಿಂಗ್ ಕೋಚ್, ಡೇವಿಡ್ ಹಸ್ಸೆ ಮೆಂಟರ್, ಜೇಮ್ಸ್ ಫೋಸ್ಟರ್ ಫೀಲ್ಡಿಂಗ್ ಕೋಚ್ ಆಗಿ ನೆರವಾಗಲಿದ್ದಾರೆ.

    ಈ 6 ಕ್ರಿಕೆಟ್ ತಾರೆಯರು ಇಂಜಿನಿಯರ್ ಕೂಡ ಆಗಿದ್ದಾರೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts