More

    ಚಳ್ಳಕೆರೇಲಿ ವೀರಭದ್ರಸ್ವಾಮಿ ದೊಡ್ಡ ರಥೋತ್ಸವ

    ಚಳ್ಳಕೆರೆ: ನಗರದ ಗ್ರಾಮ ದೇವರಾದ ವೀರಭದ್ರಸ್ವಾಮಿಯ ದೊಡ್ಡ ರಥೋತ್ಸವ ಬುಧವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆಯಿತು.

    ಹಳೇಟೌನ್‌ನಲ್ಲಿರುವ ಸ್ವಾಮಿಯ ದೇವಸ್ಥಾನದಿಂದ ಪಾದಗಟ್ಟೆಯವರೆಗೆ ಭಕ್ತರು ತೇರು ಎಳೆದು ರಥಕ್ಕೆ ಹೂವು, ಹಣ್ಣು-ಕಾಯಿ ಸಮರ್ಪಿಸಿ ಭಕ್ತಿ ಮೆರೆದರು.

    ವೀರಭದ್ರಸ್ವಾಮಿ ದೊಡ್ಡ ರಥೋತ್ಸವ ಅಂಗವಾಗಿ ಮೇ 18ರಿಂದ ಸ್ವಾಮಿಗೆ ಏಕಾದಶಿ ರುದ್ರಾಭಿಷೇಕ, ಕಂಕಣಧಾರಣೆ, ಹೋಮ ಸ್ಥಾಪನೆ ಮೂಲಕ ವಿಶೇಷ ಧಾರ್ಮಿಕ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು.

    ಬಳಿಕ ದೊಡ್ಡ ರಥಕ್ಕೆ ಕಳಸ ಸ್ಥಾಪನೆ, ಸ್ವಾಮಿ ಉತ್ಸವ, ಪುರಂತರ ವೀರನಾಟ್ಯ, ರಥಕ್ಕೆ ತೈಲಾಭಿಷೇಕ, ಸ್ವಾಮಿಗೆ ವೀರಗಾಸೆ ಬೆಳ್ಳಿ ಪಲ್ಲಕ್ಕಿಯಲ್ಲಿ ಗಂಗಾದೇವತೆ ಉತ್ಸವ, ಅಗ್ನಿಕುಂಡ ನೆರವೇರಿದ ಬಳಿಕ ಸ್ವಾಮಿಯ ಪೂಜಾ ಪರಂಪರೆಯಂತೆ ದೊಡ್ಡ ರಥೋತ್ಸವ ನೆರವೇರಿತು.

    ಸ್ವಾಮಿ ಹಿನ್ನೆಲೆ: 400 ವರ್ಷಗಳ ಹಿಂದೆ ಹರ್ತಿಪಾಟೀಲ್ ಎಂಬಾತ ತನ್ನ ಗ್ರಾಮಸ್ಥರೊಂದಿಗೆ ಹಂಪಿಯಿಂದ ಎತ್ತಿನಗಾಡಿಯಲ್ಲಿ ವೀರಭದ್ರಸ್ವಾಮಿ ವಿಗ್ರಹವನ್ನು ಚಳ್ಳಕೆರೆ ಮಾರ್ಗವಾಗಿ ಕೊಂಡೊಯ್ಯುವ ಸಂದರ್ಭದಲ್ಲಿ ಊಟಕ್ಕಾಗಿ ಬೀಡು ಬಿಡಲಾಗಿತ್ತು.

    ಆ ವೇಳೆ ಹಗ್ಗಗಳಿಂದ ಕಟ್ಟಲಾಗಿದ್ದ ಮೂರ್ತಿ, ಹಗ್ಗಗಳನ್ನು ತುಂಡರಿಸಿಕೊಂಡು ಎತ್ತಿನಗಾಡಿಯಿಂದ ಕೆಳಗೆ ಪ್ರತಿಷ್ಠಾಪನೆ ಆಗಿತ್ತು ಎನ್ನಲಾಗಿದೆ.

    ಇಷ್ಟದಂತೆ ಈ ಗ್ರಾಮದಲ್ಲಿ ನೆಲೆಯೂರಿರುವಂತೆ ಸ್ವಾಮಿಯ ಪೂಜಾ ಸ್ಥಳವಾಗಲೆಂದು ಕೈಮುಗಿದು ಬರಿಗೈಯಲ್ಲೆ ತಮ್ಮ ಊರುಗಳಿಗೆ ತೆರಳಿದ್ದರು ಎನ್ನುವ ಹಿನ್ನೆಲೆಯನ್ನು ಸ್ಥಳೀಯ ಹಿರಿಯರು ಈಗಲೂ ಹೇಳುವ ವಾಡಿಕೆ ಇದೆ.

    ಜಾತ್ರಾ ಪದ್ಧತಿ: ಐದು ದಿನಗಳ ಕಾಲ ಸ್ವಾಮಿಯ ರಥೋತ್ಸವಕ್ಕೆ ಕಂಕಣ ಕಟ್ಟಿದ ಮೊದಲ ದಿನದಿಂದ ಗ್ರಾಮದ ಭಕ್ತರ ಮನೆಗಳಲ್ಲಿ ಮುದ್ದೆ ಕೋಲು ಬಳಸಿ ಅಡುಗೆ ಮಾಡುವುದಿಲ್ಲ. ಹಂಚು ಇಡುವುದಿಲ್ಲ. ಮಾಂಸದೂಟ ಮಾಡುವುದಿಲ್ಲ.

    ವಿಶೇಷ ಅಗ್ನಿಕುಂಡ ಹಾಯುವವರು ಒಂದೊತ್ತು ಇದ್ದು ಹರಕೆ ತೀರಿಸುತ್ತಾರೆ. ಪೂಜಾ ಕಾರ್ಯಗಳು ಜಾತ್ಯಾತೀತವಾಗಿ ಎಲ್ಲ ಸಮುದಾಯಗಳು ಪಾಲ್ಗೊಂಡು ನೆರವೇರಿಸುವ ಪದ್ಧತಿ ಇಲ್ಲಿದೆ.

    ರಥೋತ್ಸವದ ಪೂಜಾ ಕಾರ್ಯಕ್ರಮದಲ್ಲಿ ಅರ್ಚಕ ಎಚ್.ವಿ.ಕುಮಾರಸ್ವಾಮಿ ಹಿರೇಮಠ್, ಸಚಿವ ಡಿ.ಸುಧಾಕರ್, ಶಾಸಕರಾದ ಟಿ.ರಘುಮೂರ್ತಿ, ಕೆ.ಸಿ.ವೀರೇಂದ್ರಪಪ್ಪಿ, ಮುಖಂಡರಾದ ಟಿ.ಪ್ರಭುದೇವ್, ಪಿ.ತಿಪ್ಪೇಸ್ವಾಮಿ, ಸಿ.ಟಿ.ಶ್ರೀನಿವಾಸ್, ಡಿ.ಕೆ.ಕಾಟಯ್ಯ, ಗಾಂಧಿನಗರ ಕೃಷ್ಣ, ಪಾಲಣ್ಣ, ಬಿ.ಟಿ.ರಮೇಶ್‌ಗೌಡ, ಜಿ.ಟಿ.ಶಶಿಧರ, ಹೊಸ್ಮನೆ ಸ್ವಾಮಿ, ಶಾಂತಕುಮಾರ್, ಸುರೇಶ್, ಕೆ.ಪಿ.ಲೋಕೇಶ್, ಕೋಟೆ ಚಂದ್ರಶೇಖರ್, ಉಮೇಶ್, ರಾಜಣ್ಣ, ಶಂಕ್ರಿ, ರುದ್ರೇಶ್, ಬಾಬು ಇತರರಿದ್ದರು.

    ಮುಕ್ತಿ ಬಾವುಟಕ್ಕೆ 30 ಲಕ್ಷ ರೂ.: ರಥೋತ್ಸವದ ಮುಕ್ತಿ ಬಾವುಟವನ್ನು ಹರಾಜಿನಲ್ಲಿ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ 30 ಲಕ್ಷ ರೂ.ಗಳಿಗೆ ತನ್ನದಾಗಿಸಿಕೊಂಡಿದ್ದಾರೆ. ಸಚಿವ ಡಿ.ಸುಧಾಕರ್, ಎಚ್.ವಿ.ತಿಪ್ಪೇಸ್ವಾಮಿ, ಡಿ.ಕೆ.ಕಾಟಯ್ಯ ನಡುವೆ ಹರಾಜು ನಡೆದರೂ ಸುಧಾಕರ್ 27 ಲಕ್ಷ ರೂ. ಕೂಗಿದ ಬಳಿಕ 30 ಲಕ್ಷ ಕೂಗಿದ ವೀರೇಂದ್ರ ಪಪ್ಪಿ ಪಡೆದುಕೊಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts