More

    ಹನಿ ನೀರಾವರಿ ಸಬ್ಸಿಡಿಗೆ ಕೊಕ್ಕೆ?: ರಾಜ್ಯದ ಪಾಲು ಕಡಿತಕ್ಕೆ ನಿರ್ಧಾರ, ಸಣ್ಣ-ಅತಿಸಣ್ಣ ರೈತರಿಗೆ ಸಂಕಷ್ಟ

    ವಿ.ಕೆ.ರವೀಂದ್ರ ಕೊಪ್ಪಳ

    ರಸಗೊಬ್ಬರ ಬೆಲೆ ಏಕಾಏಕಿ ಏರಿಕೆಯಿಂದ ರೈತರು ಕಂಗಾಲಾಗಿರುವ ಬೆನ್ನಲ್ಲೆ, ಹನಿ ನೀರಾವರಿಗೆ ಇರುವ ರಾಜ್ಯದ ಪಾಲಿನ ಸಬ್ಸಿಡಿ ಕೈ ಬಿಡಲು ಸರ್ಕಾರ ನಿರ್ಧರಿಸಿದೆ. ಇದು ಕೃಷಿಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ತೋಟಗಾರಿಕೆ, ರೇಷ್ಮೆ, ಕೃಷಿ ಬೆಳೆಗಳ ಉತ್ತೇಜನಕ್ಕೆ ಹನಿ ನೀರಾವರಿ ಪದ್ಧತಿಯನ್ನು ಕೇಂದ್ರ-ರಾಜ್ಯ ಸರ್ಕಾರ ಪ್ರೋತ್ಸಾಹಿಸುತ್ತಾ ಬಂದಿವೆ. ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ (ಪಿಎಂಕೆಎಸ್​ವೈ), ಕೃಷಿ ಯಾಂತ್ರೀಕರಣ ಉಪ ಅಭಿಯಾನ (ಎಸ್​ಎಂಎಎಂ), ರಾಷ್ಟ್ರೀಯ ತೋಟಗಾರಿಕಾ ಅಭಿಯಾನ (ಎನ್​ಎಚ್​ಎಂ) ಯೋಜನೆಗಳಡಿ ರೈತರಿಗೆ ಹನಿ ನೀರಾವರಿ ಸೌಲಭ್ಯ (ಡ್ರಿಪ್ ಇರಿಗೇಷನ್) ನೀಡುತ್ತಿದ್ದು, ಶೇ.90 ಸಬ್ಸಿಡಿ ನೀಡುತ್ತಿದೆ. 

    ಇದರಲ್ಲಿ ಕೇಂದ್ರದ ಪಾಲು ಶೇ.50 ಇದ್ದರೆ, ರಾಜ್ಯದ ಪಾಲು ಶೇ.40 ಇದೆ. ಉಳಿದ ಶೇ.10 ಅನ್ನು ರೈತರು ಭರಿಸಬೇಕಿದೆ. ಸಂಪೂರ್ಣ ಡ್ರಿಪ್ ಅಳವಡಿಕೆ ನಂತರ ಪ್ರೋತ್ಸಾಹಧನ ಬಿಡುಗಡೆಯಾಗುತ್ತದೆ. ಇದರಿಂದ 2-5 ಎಕರೆವರೆಗೆ ಭೂಮಿ ಹೊಂದಿರುವ ರೈತರಿಗೆ ಅನುಕೂಲವಾಗಿದ್ದು, ತಮ್ಮ ಪಾಲಿನ ಮೊತ್ತ ಕಟ್ಟಿ ಹನಿ ನೀರಾವರಿ ಅಳವಡಿಸಿಕೊಂಡು ಬದುಕು ಕಂಡುಕೊಳ್ಳುತ್ತಿದ್ದಾರೆ. ಕಳೆದ ವರ್ಷ ವಿತರಕರ ಹಸ್ತಕ್ಷೇಪಕ್ಕೆ ಬ್ರೇಕ್ ಹಾಕಲೆಂದು ಅವರ ಬಿಲ್​ಗಳನ್ನು ಸರ್ಕಾರ ಅಮಾನ್ಯ ಮಾಡಿದೆ. ಈ ಮೊದಲು ವಿತರಕರು ಡ್ರಿಪ್ ಅಳವಡಿಸಿ, ಬಳಿಕ ಸರ್ಕಾರಕ್ಕೆ ಬಿಲ್ ಸಲ್ಲಿಸಿ ಪ್ರೋತ್ಸಾಹಧನದ ಮೊತ್ತ ಪಡೆಯುತ್ತಿದ್ದರು. ಕರೊನಾ ಕಾರಣಕ್ಕೆ ಕಳೆದೆರೆಡು ವರ್ಷದಿಂದ ಯೋಜನೆಗಳಿಗೆ ಬರಬೇಕಾದ ಪ್ರೋತ್ಸಾಹಧನವೂ ಬಿಡುಗಡೆಯಾಗಿಲ್ಲ. ಕೊಪ್ಪಳ ಜಿಲ್ಲೆಯೊಂದರಲ್ಲೇ 14 ಕೋಟಿ ರೂ. ಅಧಿಕ ಮೊತ್ತ ಬರಬೇಕಿದೆ. ಹೀಗಾಗಿ ರೈತರು ಡ್ರಿಪ್ ಅಳವಡಿಕೆಗೆ ಹಿಂದೇಟು ಹಾಕುತ್ತಿದ್ದಾರೆ. ಇದೀಗ ಇರುವ ಸಬ್ಸಿಡಿಯನ್ನು ಕಡಿತಗೊಳಿಸಲು ಸರ್ಕಾರ ಹೆಜ್ಜೆ ಇಟ್ಟಿದ್ದು, ಸಣ್ಣ ರೈತರು ಹನಿ ನೀರಾವರಿ ಸೌಲಭ್ಯದಿಂದ ವಂಚಿತರಾಗುವಂತಾಗಲಿದೆ.

    ರಾಜ್ಯದ ಪಾಲಿಗೆ ಕೊಕ್?: ಹನಿ ನೀರಾವರಿ ಯೋಜನೆಗಳಡಿ ರಾಜ್ಯದ ಪಾಲಿನ ಸಬ್ಸಿಡಿ ಕಡಿತಗೊಳಿಸಿ, ಕೇಂದ್ರದ ಮಾರ್ಗಸೂಚಿಯಂತೆ ಅನ್ವಯವಾಗುವ ಪ್ರೋತ್ಸಾಹಧನ ನೀಡಲು ಆರ್ಥಿಕ ಇಲಾಖೆ ನಿರ್ಧರಿಸಿದೆ. ಈ ಸಂಬಂಧ ಕೃಷಿ, ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆಗಳಿಗೆ ಮಾ.25ರಂದೇ ಆದೇಶ ಕಳುಹಿಸಿದೆ. ಅಲ್ಲದೆ, ಯೋಜನೆ ನಿಯಮಾವಳಿಗಳಲ್ಲಿ ತಿದ್ದುಪಡಿ ಮಾಡಿ ನೂತನ ಆದೇಶ ಹೊರಡಿಸಲು ಸೂಚಿಸುವ ಮೂಲಕ ಸಬ್ಸಿಡಿ ಕಡಿತಕ್ಕೆ ಸರ್ಕಾರ ಹೆಜ್ಜೆ ಇಟ್ಟಿದೆ.

    ಹನಿ ನೀರಾವರಿ ಸಬ್ಸಿಡಿಗೆ ಕೊಕ್ಕೆ?: ರಾಜ್ಯದ ಪಾಲು ಕಡಿತಕ್ಕೆ ನಿರ್ಧಾರ, ಸಣ್ಣ-ಅತಿಸಣ್ಣ ರೈತರಿಗೆ ಸಂಕಷ್ಟಹನಿ ನೀರಾವರಿ ಯೋಜನೆಗಳಡಿ ಪ್ರೋತ್ಸಾಹಧನ ವಿತರಣೆಗೆ ಅನುದಾನ ಬಿಡುಗಡೆಯಾದ ನಂತರ ವಿತರಿಸಲಾಗುವುದು. ಪಿಎಂಕೆಎಸ್​ವೈ, ಎನ್​ಎಚ್​ಎಂ ಸೇರಿ ಇತರ ಯೋಜನೆಗಳಡಿ ನೀಡುವ ಸಬ್ಸಿಡಿ ಕಡಿತಗೊಳಿಸುವ ಬಗ್ಗೆ ಸರ್ಕಾರದ ಹಂತದಲ್ಲಿ ಚರ್ಚೆಯಲ್ಲಿದೆ.

    | ಫೌಜಿಯಾ ತರನ್ನುಮ್ ತೋಟಗಾರಿಕೆ ಇಲಾಖೆ ನಿರ್ದೇಶಕಿ, ಬೆಂಗಳೂರು

     

    ಈಗಾಗಲೆ ರಸಗೊಬ್ಬರ ಬೆಲೆ ಏರಿಕೆ ಯಿಂದ ದಿಕ್ಕು ತೋಚದಾಗಿದೆ. ಇದೀಗ ಸರ್ಕಾರ ಡ್ರಿಪ್​ಗೆ ಇರುವ ಸಬ್ಸಿಡಿ ಕಡಿತಗೊಳಿಸಿದರೆ ಕೃಷಿ ಚಟುವಟಿಕೆ ಮತ್ತಷ್ಟು ಕಷ್ಟವಾಗಲಿದೆ.

    | ನಜೀರಸಾಬ್ ಮೂಲಿಮನಿ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ, ಕೊಪ್ಪಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts