More

    ತಂತ್ರಜ್ಞಾನವನ್ನು ಜನರ ಉಪಯೋಗಕ್ಕೆ ಬಳಸಿಕೊಳ್ಳಿರಿ: ವಿಶ್ರಾಂತ ಕುಲಪತಿ ಪ್ರೊ.ಕೆ.ಸಿದ್ದಪ್ಪ ಸಲಹೆ

    ಮೈಸೂರು: ತಂತ್ರಜ್ಞಾನವನ್ನು ಜನರ ಉಪಯೋಗಕ್ಕೆ ಬಳಸುವ ಕಲೆ ಸಿದ್ಧಿಸಿಕೊಂಡಾಗ ಮಾತ್ರ ದೇಶ ಅಭಿವೃದ್ಧಿಯಾಗಲಿದೆ ಎಂದು ಬೆಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಕೆ.ಸಿದ್ದಪ್ಪ ಹೇಳಿದರು.
    ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಆಂತರಿಕ ಗುಣಮಟ್ಟ ಆಶ್ವಾಸನಾ ಕೇಂದ್ರ, ಸ್ಪರ್ಧಾತ್ಮಕ ತರಬೇತಿ ಕೇಂದ್ರ ಮತ್ತು ವಿಜಯ ವಿಠ್ಠಲ ವಿದ್ಯಾಸಂಸ್ಥೆ ವತಿಯಿಂದ ಕಾವೇರಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಹಾಗೂ ಕೆ-ಸಿಇಟಿ ಮತ್ತು ನೀಟ್ ಪರೀಕ್ಷಾ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು. ವಿಜ್ಞಾನ ಮುನ್ನಲೆಗೆ ಬಂದಿದ್ದರಿಂದ ತಂತ್ರಜ್ಞಾನದ ಬೆಳವಣಿಗೆ ಸಾಧ್ಯವಾಯಿತು. ಅವನ್ನು ಜನರ ಉಪಯೋಗಕ್ಕೆ ಬಳಸುವ ಕಲೆ ಸಿದ್ಧಿಸಿಕೊಂಡಾಗ ದೇಶ ಅಭಿವೃದ್ಧಿಯಾಗುತ್ತದೆ. ವಿಜ್ಞಾನ ಕ್ಷೇತ್ರದಲ್ಲಿ ಅದ್ಭುತ ಸೃಷ್ಟಿಸಲು ಆತ್ಮವಿಶ್ವಾಸ ಅಗತ್ಯ. ನಿರಂತರ ಶ್ರಮದಿಂದ ಸಾಧನೆ ಸಾಧ್ಯ ಎಂದರು.
    ಸರ್ ಸಿ.ವಿ.ರಾಮನ್ ಅವರ ಆವಿಷ್ಕಾರ ಭಾರತವನ್ನು ವಿಶ್ವಮಟ್ಟದಲ್ಲಿ ಗುರುತಿಸುವಂತೆ ಮಾಡಿತ್ತು. ಇಂದಿಗೂ ರಾಮನ್ ಪರಿಣಾಮದ ಕುರಿತು ತಿಂಗಳಿಗೆ 1,500ರಷ್ಟು ಸಂಶೋಧನೆಗಳು ನಡೆಯುತ್ತಿರುವುದು ಆಶ್ಚರ್ಯಕರ. ಅವರನ್ನು ಆದರ್ಶವಾಗಿಟ್ಟುಕೊಂಡು ಹೊಸ ಆವಿಷ್ಕಾರಕ್ಕಾಗಿ ಕೆಲಸ ಮಾಡಬೇಕು. ವಿಜ್ಞಾನ ಕ್ಷೇತ್ರದಲ್ಲಿ ಹೊಸ ಆವಿಷ್ಕಾರಗಳು ಸಮಾಜವನ್ನು ಬದಲಾಯಿಸುತ್ತವೆ ಎಂದರು.
    ಸಿಂಧೂ ಕಣಿವೆ ನಾಗರಿಕತೆ ಕಾಲದಿಂದಲೂ ಜನಜೀವನದ ನಡುವೆ ವಿಜ್ಞಾನವನ್ನು ಅಳವಡಿಸಿಕೊಳ್ಳಲಾಗಿದೆ. ಅಲ್ಲಿನ ತಂತ್ರಜ್ಞಾನಗಳು, ಶಿಲ್ಪಕಲೆ, ನಾಗರಿಕತೆಯ ವ್ಯವಸ್ಥೆಯ ಮೇಲೆ ವೈಜ್ಞಾನಿಕತೆ ಬೆಳಕು ಚೆಲ್ಲಿತ್ತು. ಉತ್ಖನನದ ಸಮಯದಲ್ಲಿ ಇಲ್ಲಿನ ಕಟ್ಟಡಗಳ ವಿನ್ಯಾಸವನ್ನು ಕಂಡು ವಿಶ್ವವೇ ಬೆರಗಾಗಿತ್ತು. ಹೀಗಾಗಿ ನಮ್ಮ ಹಿರಿಯರ ಜ್ಞಾನವನ್ನು ಉಪಯೋಗಿಸಿಕೊಂಡು ಹೊಸ ಆವಿಷ್ಕಾರದಲ್ಲಿ ತೊಡಗಿಕೊಳ್ಳಬೇಕು. ಭಾರತೀಯರಲ್ಲಿ ವಿಜ್ಞಾನದ ಜ್ಞಾನ ರಕ್ತಗತವಾಗಿ ಬಂದಿದೆ. ವಿಜ್ಞಾನದ ಮಹತ್ವವನ್ನು ಭಾರತೀಯರು ಸಾಧಿಸಿ ತೋರಿಸಿದ್ದಾರೆ ಎಂದು ಹೇಳಿದರು.
    ವಿಜಯ ವಿಠ್ಠಲ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ ಆರ್.ವಾಸುದೇವ ಭಟ್ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿಗಳಲ್ಲಿ ವ್ಯಾವಹಾರಿಕ ಉದ್ದೇಶವೇ ತುಂಬಿಕೊಂಡಿದೆ. ಇದರಿಂದಾಗಿ ಪ್ರತಿಭಾನ್ವಿತ ಬಡ ವಿದ್ಯಾರ್ಥಿಗೆ ಅವಕಾಶ ಕಡಿಮೆಯಾಗುತ್ತಿದೆ. ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೂ ಕೈಗೆಟುಕುವ ತರಬೇತಿ ಶಿಬಿರಗಳು ಆಯೋಜಿಸುವ ಅಗತ್ಯತೆ ಇದೆ. ಶಿಬಿರಗಳು ವಿದ್ಯಾರ್ಥಿಗಳ ಭವಿಷ್ಯ ರೂಪಿಸಬೇಕು ಎಂದರು.
    ಕಾರ್ಯಕ್ರಮದಲ್ಲಿ ಮುಕ್ತ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ, ಕುಲಸಚಿವ ಪ್ರೊ.ಕೆ.ಬಿ.ಪ್ರವೀಣ, ಶೈಕ್ಷಣಿಕ ಡೀನ್ ಪ್ರೊ.ಎನ್.ಲಕ್ಷ್ಮೀ, ಅಧ್ಯಯನ ವಿಭಾಗದ ಡೀನ್ ಪ್ರೊ.ರಾಮನಾಥಂ ನಾಯ್ಡು, ವಿಜಯ ವಿಠ್ಠಲ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಎಚ್.ಸತ್ಯಪ್ರಸಾದ್, ಎಸ್.ನಿರಂಜನ್‌ರಾಜ್, ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts