More

    ವೈಲ್ಡ್​ಲೈಫ್ ಫೋಟೊಗ್ರಫಿ; ಹವ್ಯಾಸಕ್ಕೂ ಸೈ ಹಣಗಳಿಕೆಗೂ ಜೈ!

    ವೈಲ್ಡ್​ಲೈಫ್ ಫೋಟೊಗ್ರಫಿ; ಹವ್ಯಾಸಕ್ಕೂ ಸೈ ಹಣಗಳಿಕೆಗೂ ಜೈ!| ಸುನೀಲ್​ ಬಾರ್ಕೂರ್​
    ಕಳೆದ ಜುಲೈಯ ಮಾತಿದು. ನಾಗರಹೊಳೆ ಕಾಡಿನಲ್ಲಿ ತಾನು ಕ್ಲಿಕ್ಕಿಸಿದ ಕರಿಚಿರತೆಯ ಚಿತ್ರವೊಂದನ್ನು ಉದಯೋನ್ಮುಖ ಛಾಯಾಚಿತ್ರಕಾರನೊಬ್ಬ ಜಾಲತಾಣವೊಂದರ ತನ್ನ ಖಾತೆಯಲ್ಲಿ ಪ್ರಕಟಿಸಿದ. ಮಿರಿಮಿರಿ ಮಿರುಗುವ ಕಪ್ಪು ಮೈ, ನೋಟದಲ್ಲೇ ನುಂಗುವಷ್ಟು ಕ್ರೂರ ಕಣ್ಣುಗಳು, ಅದಕ್ಕೆ ಸರಿಹೊಂದುವಂತೆ ಕಾಡಿನ ಕಗ್ಗತ್ತಲೆಯ ನಿಗೂಢತೆಯನ್ನು ತುಂಬಿಕೊಂಡಂತಿರುವ ಹಿನ್ನೆಲೆ… ಮೊದಲ ನೋಟದಲ್ಲೇ ಎಂಥವರನ್ನೂ ಸೆಳೆಯಲು ಆ ಚಿತ್ರಕ್ಕೆ ಅಷ್ಟು ಸಾಕಿತ್ತು. ಚಿತ್ರ ಪ್ರಕಟವಾದ ಕೆಲಕ್ಷಣಗಳಲ್ಲೇ ವೈರಲ್ ಆಗಿ ಮಿಲಿಯನ್​ಗಟ್ಟಲೆ ವೀಕ್ಷಣೆಯನ್ನು ಪಡೆದುಕೊಂಡಿತು. ಜನ ಅದರ ಛಾಯಾಚಿತ್ರಕಾರನ ಕುಲಗೋತ್ರವನ್ನು ಜಾಲಾಡತೊಡಗಿದರು. ಆ ಚಿತ್ರದ ರೂವಾರಿ ಶಾಜ ಜಂಗ್. ಭಾರತದ ಕ್ರಿಕೆಟ್ ಮಾಜಿ ಆಟಗಾರ ಸಾದ ಬಿನ್ ಜಂಗ್ ಅವರ ಪುತ್ರ. ಪಟೌಡಿ ಮನೆತನದ ಕುಡಿ. ವಿದೇಶದಲ್ಲಿ ಉನ್ನತ ವ್ಯಾಸಂಗ ಮುಗಿಸಿ ಆ ಕ್ಷೇತ್ರದಲ್ಲಿ ಮುಂದುವರೆಯಲು ಅವಕಾಶವಿದ್ದರೂ ತನ್ನ ಹವ್ಯಾಸದ ಬೆನ್ನು ಹತ್ತಿ ವನ್ಯಜೀವಿ ಛಾಯಾಚಿತ್ರಗ್ರಹಣವನ್ನು ವೃತ್ತಿಯನ್ನಾಗಿ ಆಯ್ಕೆ ಮಾಡಿಕೊಂಡ ವ್ಯಕ್ತಿ. ನೋಡನೋಡುತ್ತಿದ್ದಂತೆಯೇ ಸ್ಟಾರ್​ಗಿರಿಯ ಪಟ್ಟಕ್ಕೇರಿದ ಶಾಜ ಆ ಒಂದು ಕ್ಷಣಕ್ಕಾಗಿ ಪ್ರತಿನಿತ್ಯ 12 ಗಂಟೆಗಳಂತೆ 4 ವರ್ಷ ಸತತವಾಗಿ ನಾಗರ ಹೊಳೆಯ ದಟ್ಟಕಾಡುಗಳಲ್ಲಿ ಚಪ್ಪಲಿ ಸವೆಸಿದ್ದು ಹೆಚ್ಚಿನ ಜನರಿಗೆ ಗೊತ್ತಾಗಲಿಲ್ಲ.

    ಇದು ವನ್ಯಜೀವಿ ಛಾಯಾಗ್ರಹಣ ಲೋಕದ ಮಿಂಚುತಾರೆಯೊಂದರ ಚುಟುಕು ಕಥೆ. ಇಂದಿನ ಡಿಜಿಟಲ್ ಯುಗದಲ್ಲಿ ತಾಂತ್ರಿಕತೆ, ವಿಷಯ ಗ್ರಹಿಕೆ ಎಲ್ಲರ ಬೆರಳತುದಿಯಲ್ಲೇ ಇರುವುದರಿಂದ ಹೆಚ್ಚೆಚ್ಚು ಜನ ಛಾಯಾಗ್ರಹಣ ಕ್ಷೇತ್ರದತ್ತ ಆಕರ್ಷಿತರಾಗುತ್ತಿದ್ದಾರೆ. ಇನ್​ಸ್ಟ್ಟಾಗ್ರಾಂನಂತಹ ಆ್ಯಪ್​ಗಳು, ಉತ್ತಮ ದರ್ಜೆಯ ಕ್ಯಾಮರಾಗಳಿರುವ ಬಜೆಟ್ ಫೋನ್​ಗಳು ಮತ್ತು ಚಿತ್ರಗಳ ಶ್ರೀಮಂತಿಕೆ ಹೆಚ್ಚಿಸುವ ತಂತ್ರಜ್ಞಾನ ಬಂದಿರುವುದರಿಂದ ಛಾಯಾಗ್ರಹಣ ಇಂದಿನ ಯುವ ಪೀಳಿಗೆಯ ಅತ್ಯಂತ ಜನಪ್ರಿಯ ಹವ್ಯಾಸಗಳಲ್ಲಿ ಒಂದಾಗಿದೆ. ತಾವು ತೆಗೆದ ಚಿತ್ರಗಳನ್ನು ತಕ್ಷಣವೇ ಜಾಲತಾಣಗಳಲ್ಲಿ ಹಂಚಿಕೊಂಡು ಲೈಕ್, ಕಾಮೆಂಟ್​ಗಳನ್ನು ಪಡೆಯುವ ತರಾತುರಿಯೂ ಯುವಜನರಲ್ಲಿ ಹೆಚ್ಚಾಗಿದೆ. ಆದರೆ ಮೊಬೈಲ್ ಛಾಯಾಗ್ರಹಣಕ್ಕೂ ವನ್ಯಜೀವಿ ಛಾಯಾಗ್ರಹಣಕ್ಕೂ ಭೂಮ್ಯಾಕಾಶದ ಅಂತರ. ಇಲ್ಲಿ ಫೀಲ್ಡಿಗಿಳಿಯುವ ಮೊದಲು ಬಹಳಷ್ಟು ಪೂರ್ವತಯಾರಿ ಬೇಕಾಗುತ್ತದೆ. ನಾವು ಹೋಗುವ ಪರಿಸರ, ಅಲ್ಲಿ ಎದುರಾಗಬಹುದಾದ ಪ್ರಾಣಿ-ಪಕ್ಷಿಗಳು, ಅವುಗಳ ಸ್ವಭಾವ, ಜೊತೆಗೆ ಅಲ್ಲಿ ಅನುಸರಿಸಬೇಕಾದ ನೀತಿನಿಯಮಗಳು, ಕ್ಷಣಮಾತ್ರದಲ್ಲಿ ತಮ್ಮ ಇರುವಿಕೆಯನ್ನು ತೋರಿಸಿ ಮಾಯವಾಗುವ ಕಾಡುಪ್ರಾಣಿಗಳನ್ನು ಕ್ಯಾಮರಾದಲ್ಲಿ ಸೆರೆ ಹಿಡಿಯಬಲ್ಲ ಚಾಕಚಕ್ಯತೆ, ಇವುಗಳೆಲ್ಲವುಗಳ ಅರಿವಿನ ಜೊತೆಗೆ ಬೆಟ್ಟದಷ್ಟು ತಾಳ್ಮೆಯೂ ಅತಿಮುಖ್ಯ. ಏಕೆಂದರೆ ಕಾಡಿನಲ್ಲಿ ಓಡಾಡುವ ಪ್ರಾಣಿಗಳು ಪೋಸು ಕೊಡುವ ಮಾಡೆಲ್ಲುಗಳಲ್ಲ. ಅವುಗಳ ಮೂಡನ್ನನುಸರಿಸಿ ನಾವು ಕೆಲಸ ಮಾಡಬೇಕಾಗುತ್ತದೆ.

    ಹವ್ಯಾಸ, ವೃತ್ತಿ… ಜತೆಜತೆಯಲ್ಲೇ…: ವನ್ಯಜೀವಿ ಛಾಯಾಚಿತ್ರಗ್ರಹಣ ಬಹಳಷ್ಟು ಪರಿಶ್ರಮ ಬೇಡುತ್ತದೆ. ಇದೊಂದು ಹವ್ಯಾಸ. ವೃತ್ತಿಯನ್ನಾಗಿಸಿಕೊಳ್ಳುವುದು ಬಹಳ ಕಷ್ಟ. ಯುವಜನತೆ ಇದನ್ನೇ ಪೂರ್ಣಪ್ರಮಾಣದ ವೃತ್ತಿಯಾಗಿಸಿಕೊಳ್ಳಬೇಕೆಂದರೆ ಮೊದಲು ಶಾಸ್ತ್ರೀಯವಾಗಿ ಕಲಿತು ಮದುವೆ ಸಮಾರಂಭಗಳ ಛಾಯಾಚಿತ್ರಣದಲ್ಲಿ ತೊಡಗಿಸಿಕೊಳ್ಳುವುದು ಉತ್ತಮ. ಅಲ್ಲಿ ಹಣ ಗಳಿಸಲು ಮತ್ತು ಬೆಳೆಯಲು ಅವಕಾಶ ಇರುವುದರಿಂದ ಅದನ್ನೇ ಆರ್ಥಿಕ ಆಸರೆಯಾಗಿಟ್ಟುಕೊಂಡು ಜೊತೆಯಲ್ಲಿ ವನ್ಯಜೀವಿ ಛಾಯಾಗ್ರಹಣವನ್ನು ಮುಂದುವರಿಸಬಹುದು. ಜಾಲತಾಣಗಳಲ್ಲಿ ಯಾರೋ ಕೊಟ್ಟ ಶಹಬ್ಬಾಸಗಿರಿಯನ್ನೇ ನಂಬಿಕೊಂಡು ಬೀಗಿ ಈ ಕ್ಷೇತ್ರಕ್ಕೆ ಧುಮುಕಿದರೆ ನಿರಾಸೆ ಕಟ್ಟಿಟ್ಟ ಬುತ್ತಿ ಎನ್ನುತ್ತಾರೆ ಖ್ಯಾತ ವನ್ಯಜೀವಿ ಛಾಯಾಚಿತ್ರಕಾರ ವಿನೋದಕುಮಾರ.

    ತರಬೇತಿ ಕೋರ್ಸ್​ಗಳು ಎಲ್ಲೆಲ್ಲಿವೆ?: ಛಾಯಾಗ್ರಹಣವನ್ನು ಶಾಸ್ತ್ರೀಯವಾಗಿ ಅಭ್ಯಸಿಸಲು ನಮ್ಮಲ್ಲಿ ಹಲವಾರು ಸಮಸ್ಯೆ ಗಳಿವೆ. ಈ ಕ್ಷೇತ್ರದಲ್ಲಿನ ಖ್ಯಾತನಾಮರ ಜೊತೆಗೆ ಕೆಲ ಕ್ಯಾಮರಾ ಕಂಪನಿಗಳೂ ತರಬೇತಿ ಶಿಬಿರಗಳನ್ನು ನಡೆಸುತ್ತವೆ. ಕೆಲವು ಶಿಕ್ಷಣ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳು ಸಹ ಪೂರ್ಣಪ್ರಮಾಣದ ಕೋರ್ಸ್​ಗಳನ್ನು ನೀಡುತ್ತಿವೆ. ನ್ಯಾಶನಲ್ ಇನ್ಸ್​ಟಿಟ್ಯೂಟ್ ಆಫ್ ಡಿಸೈನ್ ಅಹಮದಾಬಾದ್, ಏಷ್ಯನ್ ಅಕಾಡೆಮಿ ಆಫ್ ಫಿಲ್ಮ್ ಆಂಡ್ ಟೆಲಿವಿಷನ್ ನೊಯ್ಡಾ, ಫರ್ಗಸನ್ ಕಾಲೇಜ್ ಪುಣೆ, ಜವಾಹರಲಾಲ್ ನೆಹರು ಆರ್ಕಿಟೆಕ್ಚರ್ ಅಂಡ್ ಫೈನ್ ಆರ್ಟ್ಸ್​ ಯುನಿವರ್ಸಿಟಿ ಹೈದರಾಬಾದ್, ಡೆಲ್ಲಿ ಕಾಲೇಜ್ ಆಫ್ ಫೋಟೊಗ್ರಫಿ ದೆಹಲಿ, ನ್ಯಾಷನಲ್ ಇನ್ಸ್​ಟಿಟ್ಯೂಟ್ ಆಫ್ ಫೋಟೊಗ್ರಫಿ ಮುಂಬೈ ಅಂಥವುಗಳಲ್ಲಿ ಕೆಲ ಪ್ರಮುಖ ಸಂಸ್ಥೆಗಳು.

    ಕೈಚಳಕ ತೋರಿದರೆ ಕೈಹಿಡಿಯುತ್ತೆ…: ವೃತ್ತಿಪರ ಸಂಸ್ಥೆಗಳಲ್ಲಿ ಫೋಟೊಗ್ರಫಿ ತರಬೇತಿ ಪಡೆದು ಹೊರಬಂದವರು ಜಾಲತಾಣಗಳಲ್ಲಿ, ಛಾಯಾಚಿತ್ರಣವನ್ನು ಉತ್ತೇಜಿಸುವ ಕ್ಲಬ್​ಗಳನ್ನು ಸೇರಿಕೊಂಡು ತಮ್ಮ ಕೈಚಳಕ ತೋರುತ್ತ ಪ್ರತಿಷ್ಠಿತ ಸಂಸ್ಥೆಗಳು ನಡೆಸುವ ವನ್ಯಜೀವಿ ಛಾಯಾಗ್ರಹಣ ಸ್ಪರ್ಧೆಗಳಲ್ಲಿ ಭಾಗವಹಿಸುತ್ತ ತಮ್ಮದೇ ಛಾಪನ್ನು ಮೂಡಿಸಲು ಪ್ರಯತ್ನಿಸಬೇಕು. ಈ ಕ್ಷೇತ್ರದ ಖ್ಯಾತನಾಮರ ಗಮನ ಸೆಳೆದು ಅವರ ತಂಡ ಸೇರಿಕೊಂಡರೆ ಅವರ ಆರ್ಥಿಕ ಮತ್ತು ತಾಂತ್ರಿಕ ಸಹಾಯದಿಂದ ಮತ್ತಷ್ಟು ಮೇಲಕ್ಕೇರಬಹುದು. ಇವೆಲ್ಲವದರ ನಡುವೆ ವನ್ಯಜೀವಿ ಛಾಯಾಗ್ರಹಣವು ಸಾಮಾನ್ಯರಲ್ಲಿ ಪರಿಸರದ ಬಗ್ಗೆ ಅರಿವು ಮೂಡಿಸುವಂತಹ ಒಂದು ಕಲಾಪ್ರಕಾರ ಮಾತ್ರ. ಅದನ್ನು ವಾಣಿಜ್ಯ ಕಾರಣಕ್ಕೆ ಬಳಸಿಕೊಳ್ಳುವುದು ಎಷ್ಟು ಸರಿ ಎಂಬ ಜಿಜ್ಞಾಸೆ ಕೂಡ ಇದೆ. ಯೋಚಿಸಬೇಕಾದದ್ದೇ.

    ಚಿತ್ರಗಳು: ವಿನೋದಕುಮಾರ ವಿ.ಕೆ.

    ಹುಬ್ಬಳ್ಳಿಯಲ್ಲಿ ರಾಬರ್ಟ್; ಚಪ್ಪಲಿ ಬದಿಗಿಟ್ಟು ಮಾತನಾಡಿದ ದರ್ಶನ್..

    ವಿಡಿಯೋ: ಬಾಲಿವುಡ್ ನಟ ಅಜಯ್ ದೇವಗನ್ ಕಾರ್ ಅಡ್ಡಹಾಕಿದ ಯುವಕ, ಕಾರಣ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts