More

  ಯಾರದೋ ತಪ್ಪು, ಯಾರಿಗೋ ಶಿಕ್ಷೆ!

  ಯಾರದೋ ತಪ್ಪು, ಯಾರಿಗೋ ಶಿಕ್ಷೆ!| ಡಾ. ಡಿ.ವಿ. ಗುರುಪ್ರಸಾದ್​ (ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)

  ಆಂಧ್ರಪ್ರದೇಶದ ಗ್ರಾಮವೊಂದರಲ್ಲಿ ರಾಜಶೇಖರ ಎನ್ನುವ ಮಧ್ಯಮವರ್ಗದ ರೈತನಿದ್ದ. ಅವನಿಗೆ ಪ್ರೇಮರಾಜ್ ಮತ್ತು ಧನಂಜಯ ಎಂಬ ಇಬ್ಬರು ಮಕ್ಕಳು. ಅವರಿಬ್ಬರೂ ವಿದ್ಯಾರ್ಥಿವೇತನ ಪಡೆದೇ ಎರಡು ವರ್ಷಗಳ ಅಂತರದಲ್ಲಿ ಇಂಜಿನಿಯರಿಂಗ್ ಪದವಿ ಪಡೆದರು. ಹಿರಿಯನಾದ ಪ್ರೇಮರಾಜ್​ನಿಗೆ ಹೈದರಾಬಾದಿನಲ್ಲಿ ಬಹುರಾಷ್ಟ್ರೀಯ ಕಂಪನಿಯಲ್ಲಿ ನೌಕರಿ ಸಿಕ್ಕಿತು. ಹಾಗೆಯೇ ಧನಂಜಯನಿಗೆ ಬೆಂಗಳೂರಿನಲ್ಲಿ ನೌಕರಿ ಸಿಕ್ಕಿತು. ಇಬ್ಬರೂ ಮಕ್ಕಳಿಗೆ ಬೇಗನೇ ಮದುವೆ ಮಾಡಿ ತನ್ನ ಜವಾಬ್ದಾರಿ ಕಳೆದುಕೊಳ್ಳಬೇಕೆಂದು ರಾಜಶೇಖರ ಯೋಚಿಸಿದ. ಆದರೆ ಅವರಿಬ್ಬರೂ ಲಗ್ನಕ್ಕೆ ಇನ್ನೂ ತಯಾರಾಗಿರಲಿಲ್ಲ.

  ಏತನ್ಮಧ್ಯೆ ಕರೊನಾ ಮಹಾಮಾರಿ ಎಲ್ಲೆಲ್ಲೂ ವ್ಯಾಪಿಸಿತು. ಐಟಿ ಕಂಪನಿಗಳು ಕಚೇರಿಗಳನ್ನು ಮುಚ್ಚಿ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಂ ಮಾಡಲು ಸೂಚಿಸಿದವು. ಸೋದರರಿಬ್ಬರೂ ಸ್ವಗ್ರಾಮಕ್ಕೆ ಬಂದರು. ಅಲ್ಲಿ ಕೆಲವೊಮ್ಮೆ ಮಾತ್ರ ಇಂಟರ್​ನೆಟ್ ಸಂಪರ್ಕ ಸಿಗುತ್ತಿದ್ದುದರಿಂದ ಪ್ರೇಮರಾಜ್ ಪುಸ್ತಕಗಳನ್ನೋದುವುದರಲ್ಲಿ ಮಗ್ನನಾದರೆ, ಧನಂಜಯ ತಂದೆ-ತಾಯಿಯೊಡನೆ ಹೊಲಕ್ಕೆ ಹೋಗಿ ಬೇಸಾಯ ಮಾಡುತ್ತಿದ್ದ.

  ಒಂದು ದಿನ ಪಕ್ಕದ ಜಮೀನಿನಲ್ಲಿ ಸುಂದರ ಯುವತಿಯನ್ನು ಕಂಡ ಧನಂಜಯ ಆಕೆ ಯಾರೆಂದು ತಾಯಿಯನ್ನು ಕೇಳಿದ. 22 ವರ್ಷದ ಶ್ರೀದೇವಿ ಆ ಜಮೀನಿನ ಮಾಲೀಕ ರಾಮಕೃಷ್ಣನ ಪತ್ನಿಯೆಂದು ಹೇಳಿದ ಆಕೆ, ಕೆಲವೇ ತಿಂಗಳ ಹಿಂದೆ ಶ್ರೀದೇವಿ ತವರುಮನೆಯಿಂದ ಗಂಡನ ಮನೆಗೆ ಬಂದಿರುವುದಾಗಿ ತಿಳಿಸಿದಳು. ಶ್ರೀದೇವಿ ಪಟ್ಟಣ ನಿವಾಸಿಯಾಗಿದ್ದು ಪದವೀಧರೆಯೂ ಹೌದು ಎಂದಳು. ಧನಂಜಯ ಕೆಲವೇ ದಿನಗಳಲ್ಲಿ ಶ್ರೀದೇವಿಯ ಪರಿಚಯ ಮಾಡಿಕೊಂಡ. ಪಟ್ಟಣದಲ್ಲಿ ಇಂಜಿನಿಯರ್ ಆಗಿದ್ದ ಧನಂಜಯ ಹೈಸ್ಕೂಲ್ ಮೆಟ್ಟಿಲನ್ನೂ ಹತ್ತಿರದ ತನ್ನ ಗಂಡನಿಗಿಂತ ಮೇಲೆಂದು ಭಾವಿಸಿದ ಶ್ರೀದೇವಿ ಅವನತ್ತ ಆಕರ್ಷಣೆಗೊಂಡಳು. ಪ್ರತಿದಿನವೂ ಅವರಿಬ್ಬರೂ ಇತರರ ಕಣ್ಣುತಪ್ಪಿಸಿ ಸಂಧಿಸತೊಡಗಿದರು.

  ಏತನ್ಮಧ್ಯೆ ತನ್ನ ಕಚೇರಿ ತೆರೆದಿದ್ದರಿಂದ ಪ್ರೇಮರಾಜ್ ಹೈದರಾಬಾದಿಗೆ ಹೊರಟುಹೋದ. ಧನಂಜಯನ ಕಂಪನಿ ಆರಂಭವಾಗದ ಕಾರಣ ಆತ ಗ್ರಾಮದಲ್ಲಿಯೇ ಉಳಿದ. ಒಂದು ದಿನ ಶ್ರೀದೇವಿಯ ಕುಟುಂಬದವರೆಲ್ಲರೂ ಲಗ್ನಕ್ಕೆಂದು ಬೇರೊಂದು ಊರಿಗೆ ಹೋದರು. ಕಾರಣಾಂತರದಿಂದ ಶ್ರೀದೇವಿ ಮನೆಯಲ್ಲಿಯೇ ಉಳಿದಿದ್ದಳು. ಸಮಯ ಸಾಧಿಸಿದ ಧನಂಜಯ ಅವಳ ಮನೆಗೆ ಹೋಗಿ ಅವಳೊಡನೆ ಚಕ್ಕಂದವಾಡತೊಡಗಿದ. ಆಗ ಇದ್ದಕ್ಕಿದ್ದಂತೆ ಮನೆಯೊಳಗೆ ಬಂದ ಸೇವಕನೊಬ್ಬ ಅವರಿಬ್ಬರ ಪ್ರೇಮದಾಟ ನೋಡಿಬಿಟ್ಟ. ಆ ಸಂಜೆ ರಾಮಕೃಷ್ಣ ಮನೆಗೆ ವಾಪಸಾದಾಗ ಆ ಸೇವಕ ನಡೆದ ವಿಷಯವನ್ನು ಅವನಿಗೆ ತಿಳಿಸಿದ. ಕ್ರೋಧಗೊಂಡ ರಾಮಕೃಷ್ಣ ಶ್ರೀದೇವಿಗೆ ಥಳಿಸತೊಡಗಿದಾಗ ಆಕೆ ಧನಂಜಯನೇ ಮನೆಗೆ ಬಂದು ರೇಪ್ ಮಾಡಲು ಯತ್ನಿಸಿದನೆಂದಳು. ಕ್ರೋಧಗೊಂಡ ರಾಮಕೃಷ್ಣ ಕುಟುಂಬದವರೊಡನೆ ರಾಜಶೇಖರನ ಮನೆಗೆ ಬಂದ. ಅಲ್ಲಿದ್ದ ಧನಂಜಯನನ್ನು ಹೊರಗೆಳೆದುಕೊಂಡು ಹೋದ. ಅವನನ್ನು ಮರಕ್ಕೆ ಕಟ್ಟಿಹಾಕಿದ ರಾಮಕೃಷ್ಣನ ಮನೆಯವರು ಅವನನ್ನು ಮನಬಂದಂತೆ ಥಳಿಸಿದರು. ಮಾರನೆಯ ದಿನವೇ ಈ ವಿಷಯದ ಬಗ್ಗೆ ಗ್ರಾಮದಲ್ಲಿ ಪಂಚಾಯಿತಿ ಸಭೆ ನಡೆಯಿತು. ಪರಸ್ತ್ರೀಯನ್ನು ಬಲಾತ್ಕಾರ ಮಾಡಿದ ಯತ್ನಕ್ಕಾಗಿ ಧನಂಜಯನಿಗೆ 25,000 ದಂಡ ಹಾಕಿದ್ದಲ್ಲದೆ ಇನ್ನೊಂದು ಬಾರಿ ಶ್ರೀದೇವಿಯ ತಂಟೆಗೆ ಬಂದರೆ ಧನಂಜಯನ ಇಡೀ ಕುಟುಂಬವನ್ನು ಗ್ರಾಮದಿಂದ ಗಡೀಪಾರು ಮಾಡುವುದಾಗಿ ತೀರ್ವನವಾಯಿತು.

  ರಾಜಶೇಖರ್ ಕೂಡಲೇ ನಡೆದ ವಿಷಯವನ್ನು ಪ್ರೇಮರಾಜ್​ಗೆ ತಿಳಿಸಿದ. ತನ್ನ ಸೋದರನ ಕುಕೃತ್ಯ ಪ್ರೇಮರಾಜ್​ಗೆ ಕೋಪವಲ್ಲದೆ ಹೇಸಿಗೆಯನ್ನೂ ತರಿಸಿತ್ತು. ಆತ ಕೂಡಲೇ ತನ್ನ ಮನೆಗೆ ಬಂದ. ಧನಂಜಯನಿಗೆ ಮನಬಂದಂತೆ ಥಳಿಸಿ ಇನ್ನು ಮುಂದೆ ಆತ ಆ ಗ್ರಾಮದಲ್ಲಿರುವುದೇ ಬೇಡವೆಂದು, ಸೋದರನನ್ನು ತನ್ನೊಡನೆ ಹೈದರಾಬಾದಿಗೆ ಕರೆದುಕೊಂಡು ಹೋಗಿ ತನ್ನ ಕೋಣೆಯಲ್ಲಿಯೇ ವಾಸಿಸಲು ಹೇಳಿದ.

  ಏತನ್ಮಧ್ಯೆ ಗ್ರಾಮಸ್ಥರು ರಾಜಶೇಖರ್ ದಂಪತಿಗೆ ಸಾಮಾಜಿಕ ಬಹಿಷ್ಕಾರ ಹಾಕಿದರು. ಇದನ್ನರಿತು ಪ್ರೇಮರಾಜ್ ಗ್ರಾಮಕ್ಕೆ ಬಂದ. ರಾಮಕೃಷ್ಣನ ಮನೆಗೆ ಹೋಗಿ ಆತನ ಕಾಲಿಗೆರಗಿ, ‘ನನ್ನ ತಮ್ಮ ತಪ್ಪು ಮಾಡಿದ್ದಾನೆ, ಅವನನ್ನು ನಾನು ಸರಿದಾರಿಗೆ ತರುವೆ. ಅವನ ತಪ್ಪಿಗಾಗಿ ನೀವು ನನ್ನ ತಂದೆ-ತಾಯಿಯನ್ನು ದಂಡಿಸಬೇಡಿ’ ಎಂದು ವಿನಂತಿಸಿದ. ಸ್ಥಳದಲ್ಲಿದ್ದ ರಾಮಕೃಷ್ಣನ ಸೋದರಮಾವ, ‘ಆಗಲಿ, ನಾವು ನಿನ್ನ ಕುಟುಂಬವನ್ನು ಕ್ಷಮಿಸುತ್ತೇವೆ. ಆದರೆ ಒಂದು ಷರತ್ತು. ಧನಂಜಯ ಒಂದು ಬಾಂಡ್ ಪೇಪರಿನ ಮೇಲೆ ತನ್ನ ತಪ್ಪನ್ನು ಒಪ್ಪಿಕೊಂಡು ಇನ್ನು ಮುಂದೆ ಹೀಗೆ ಮಾಡುವುದಿಲ್ಲವೆಂದು ಬರೆದು ಕೊಡಬೇಕು’ ಎಂದ. ಈ ಷರತ್ತಿಗೆ ಪ್ರೇಮರಾಜ್ ಒಪ್ಪಿದಾಗ, ‘ನಿನ್ನ ತಮ್ಮ ಎಲ್ಲಿದ್ದಾನೆಯೋ ಅಲ್ಲಿಗೇ ನಮ್ಮನ್ನು ಕರೆದುಕೊಂಡು ಹೋಗಿ ಅವನಿಂದ ಮುಚ್ಚಳಿಕೆ ಬರೆಸಿ ಅದನ್ನು ನೋಟರಿಯಿಂದ ಸಹಿ ಮಾಡಿಸಿ ಕೊಡು’ ಎಂದ. ಇದಕ್ಕೂ ಒಪ್ಪಿದ ಪ್ರೇಮರಾಜ್ ಮಾರನೆಯ ದಿನವೇ ತನ್ನ ಕಾರಿನಲ್ಲಿ ರಾಮಕೃಷ್ಣ ಹಾಗೂ ಅವನ ಕುಟುಂಬದ ಮೂವರನ್ನು ಕೂರಿಸಿಕೊಂಡು ಹೈದರಾಬಾದಿಗೆ ಹೊರಟ.

  ***

  ಒಂದು ಬೆಳಗ್ಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನ ಚಾಲಕನೊಬ್ಬ ರಸ್ತೆಯ ಬದಿಯ ಕೊರಕಲಿನಲ್ಲಿ ಉರಿದು ಬಿದ್ದಿದ್ದ ಒಂದು ಕಾರನ್ನು ನೋಡಿದ. ಸುಟ್ಟಿದ್ದ ಕಾರಿನ ಚಾಲಕನ ಸೀಟಿನಲ್ಲಿ ಯಾರೋ ಇದ್ದದ್ದು ಕಂಡಿತು. ಕೂಡಲೇ ಆತ ಕಾರೊಂದು ಅಪಘಾತಕ್ಕೀಡಾಗಿದೆ ಎಂದು ಪೊಲೀಸರಿಗೆ ಮಾಹಿತಿಯಿತ್ತ. ಪೊಲೀಸರು ಸ್ಥಳಕ್ಕೆ ಬಂದು ರಸ್ತೆಯಿಂದ ಐದು ಅಡಿಗಳ ಕೆಳಗೆ ಬಂಡೆಕಲ್ಲೊಂದರ ಆಧಾರದ ಮೇಲೆ ನಿಂತಿದ್ದ ಕಾರನ್ನು ಕ್ರೇನ್ ಮೂಲಕ ರಸ್ತೆಗೆ ತಂದರು. ಕಾರಿನ ಬಾಗಿಲನ್ನು ಒಡೆದು ತೆರೆದಾಗ ಅದರಲ್ಲಿ ಸುಟ್ಟು ಕರಕಲಾದ ಚಾಲಕನ ದೇಹವಿತ್ತು. ಅಪಘಾತದ ಪ್ರಕರಣ ದಾಖಲಿಸಿ ಚಾಲಕನ ದೇಹದ ಮೇಲೆ ಮಹಜರ್ ಮಾಡಿ ಅದನ್ನು ಮರಣೋತ್ತರ ಪರೀಕ್ಷೆಗೆ ಕಳಿಸಿದರು.

  ಮೃತವ್ಯಕ್ತಿಯ ಗುರುತು ಗೊತ್ತಾಗದ್ದರಿಂದ ಕಾರಿನ ನೋಂದಣಿ ಸಂಖ್ಯೆ ಮೂಲಕ ಅದು ಪ್ರೇಮರಾಜ್ ಎನ್ನುವವನಿಗೆ ಸೇರಿದ್ದೆಂದು ತಿಳಿದ ಪೊಲೀಸರು ಆತನ ವಿಳಾಸಕ್ಕೆ ಹೋದರು. ತನ್ನ ಕಾರಿನಲ್ಲಿ ಪ್ರೇಮರಾಜ್, ರಾಮಕೃಷ್ಣ ಮತ್ತವನ ಮನೆಯವರ ಜತೆಗೂಡಿ, ಹೈದರಾಬಾದಿಗೆ ಹೋದನೆಂದು ಪೊಲೀಸರಿಗೆ ತಿಳಿಯಿತು. ಕೂಡಲೇ ಅವರು ರಾಮಕೃಷ್ಣನ ಮನೆಗೆ ಹೋಗಿ ವಿಚಾರಿಸಿದರು. ‘ನಾವು ಪ್ರೇಮರಾಜ್ ಜತೆಯಲ್ಲಿ ಹೋದದ್ದು ಸತ್ಯ. ಆದರೆ ಮಾರ್ಗಮಧ್ಯದಲ್ಲಿ ನನಗೆ ತುರ್ತು ಫೋನ್ ಕರೆಯೊಂದು ಬಂದ ಕಾರಣ ನಾನು ಮತ್ತು ನನ್ನ ಜತೆಗಾರರು ಮನೆಗೆ ಮರಳಿದೆವು’ ಎಂದು ರಾಮಕೃಷ್ಣ ತಿಳಿಸಿದ.

  ಇಷ್ಟರಲ್ಲಿ ಶವಾಗಾರದಲ್ಲಿದ್ದ ಶವವನ್ನು ತನ್ನ ಮಗ ಪ್ರೇಮರಾಜ್​ನದ್ದೆಂದು ಗುರುತಿಸಿದ ರಾಜಶೇಖರ್, ರಾಮಕೃಷ್ಣ ಮತ್ತು ಅವನ ಸಂಗಡಿಗರೇ ಪ್ರೇಮರಾಜ್​ನ ಕೊಲೆ ಮಾಡಿದ್ದಾರೆಂದು ದೂರಿತ್ತ. ಅದೇ ದಿನವೇ ಮರಣೋತ್ತರ ಪರೀಕ್ಷೆ ವರದಿಯೂ ಬಂದು ಮೃತನನ್ನು ಉಸಿರುಗಟ್ಟಿಸಿ ಕೊಲೆ ಮಾಡಿ ನಂತರ ದೇಹಕ್ಕೆ ಬೆಂಕಿ ಹಚ್ಚಲಾಗಿದೆ ಎಂದು ಗೊತ್ತಾಯಿತು. ಆಗ ಪೊಲೀಸರು ಕೊಲೆ ಕೇಸನ್ನು ದಾಖಲಿಸಿ ರಾಮಕೃಷ್ಣ ಮತ್ತವನ ಜತೆಯಲ್ಲಿ ಹೋದವರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದರು.

  ಆಗ ರಾಮಕೃಷ್ಣನ ಸಂಬಂಧಿಕ ಸುಂದರ್ ಹೀಗೆಂದ:

  ‘ಧನಂಜಯನಿಗೆ ಗ್ರಾಮ ಪಂಚಾಯಿತಿ ಕೊಟ್ಟ ಶಿಕ್ಷೆ ಕಡಿಮೆಯೆಂದು ರಾಮಕೃಷ್ಣನಿಗೆ ಅನಿಸಿತ್ತು. ಧನಂಜಯನ ತಲೆಯೇ ಅವನಿಗೆ ಬೇಕಾಗಿತ್ತು. ಅಕಸ್ಮಾತ್ತಾಗಿ ಪ್ರೇಮರಾಜ್ ಅವನ ಮನೆಗೆ ಬಂದು ತಾನು ತನ್ನ ಸೋದರನಿಂದ ಮುಚ್ಚಳಿಕೆ ಬರೆಸಿಕೊಡುವುದಾಗಿ ತಿಳಿಸಿದಾಗ ತನಗೆ ಧನಂಜಯನನ್ನು ಹೈದರಾಬಾದಿನಲ್ಲಿ ಕೊಲೆ ಮಾಡುವ ಅವಕಾಶ ಸಿಕ್ಕಿತೆಂದು ರಾಮಕೃಷ್ಣ ಭಾವಿಸಿ ನಮ್ಮನ್ನೂ ಜತೆಯಲ್ಲಿ ಬರಹೇಳಿದ. ಮಾರ್ಗಮಧ್ಯದಲ್ಲಿ ಢಾಬಾವೊಂದನ್ನು ನೋಡಿದ ನಾವು ಊಟ ಮಾಡಲೆಂದು ಕಾರನ್ನು ನಿಲ್ಲಿಸಲು ಪ್ರೇಮರಾಜ್​ಗೆ ಹೇಳಿದೆವು. ಆತ ಅಲ್ಲಿ ವಾಹನ ನಿಲ್ಲಿಸಿದ. ನಾವು ಕೆಳಗಿಳಿದು ಢಾಬಾದ ಪಕ್ಕದಲ್ಲಿದ್ದ ಬಾರ್​ಗೆ ಕುಡಿಯಲು ಹೋದೆವು. ಪ್ರೇಮರಾಜ್ ನಮ್ಮೊಡನೆ ಬರದೆ ತಾನೊಬ್ಬನೇ ಊಟ ಮಾಡಿ ತನ್ನ ಕಾರಿಗೆ ಹೋಗಿ ಕುಳಿತ. ಆಗ ನಾವು ಹೈದರಾಬಾದಿನಲ್ಲಿ ಧನಂಜಯನನ್ನು ಕೊಲೆ ಮಾಡುವುದು ಹೇಗೆಂದು ರ್ಚಚಿಸತೊಡಗಿದಾಗ ಅಲ್ಲಿ ಅವನ ಕೊಲೆ ಅಸಾಧ್ಯವೆಂದು ಮನಗಂಡೆವು. ಹಾಗಾಗಿ ಅವನ ಬದಲು ನಮ್ಮೊಡನಿರುವ ಪ್ರೇಮರಾಜ್​ನನ್ನೇ ಕೊಂದು ಆ ಕುಟುಂಬದ ಮೇಲೆ ಪ್ರತೀಕಾರ ತೋರಲು ನಿರ್ಧರಿಸಿದೆವು.

  ಊಟ ಮುಗಿಸಿ ನಾವು ಮುಂದೆ ಹೊರಟಾಗ ಬೆಟ್ಟಗುಡ್ಡದ ಪ್ರದೇಶ ಕಂಡಿತು. ನಾವು ಮೂತ್ರ ಮಾಡಬೇಕೆಂದು ಅಲ್ಲಿಯೇ ಕಾರನ್ನು ನಿಲ್ಲಿಸಲು ಪ್ರೇಮರಾಜ್​ಗೆ ಹೇಳಿದೆವು. ಕಾರು ನಿಂತಾಗ ಪ್ರೇಮರಾಜ್​ನನ್ನು ಹೊರಗೆಳೆದು ಅವನ ಕೈಕಾಲುಗಳನ್ನು ನಾವು ಮೂರು ಜನ ಬಿಗಿಯಾಗಿ ಹಿಡಿದೆವು. ರಾಮಕೃಷ್ಣ ತನ್ನ ಟವೆಲನ್ನು ಅವನ ಕತ್ತಿಗೆ ಬಿಗಿದು ಅವನ ಕೊಲೆ ಮಾಡಿದ. ಆನಂತರ ನಾವು ಶವವನ್ನು ಚಾಲಕನ ಸೀಟಿನಲ್ಲಿಟ್ಟು ಸೀಟ್​ಬೆಲ್ಟ್ ಕಟ್ಟಿದೆವು. ಕಾರಿನಲ್ಲಿದ್ದ ಪೆಟ್ರೋಲನ್ನು ಪೈಪ್ ಮೂಲಕ ಹೊರತೆಗೆದು ಶವ ಮತ್ತು ಕಾರಿನ ಮೇಲೆ ಸುರಿದು ಬೆಂಕಿ ಹಚ್ಚಿದೆವು. ನಂತರ ಎಲ್ಲರೂ ಸೇರಿ ಕಾರನ್ನು ಪಕ್ಕದಲ್ಲಿದ್ದ ಪ್ರಪಾತಕ್ಕೆ ತಳ್ಳಿದೆವು. ಆದರೆ ಅದು ಕೆಳಗೆ ಬೀಳುವಾಗ ಬಂಡೆಯೊಂದಕ್ಕೆ ಬಡಿದು ಅಲ್ಲೇ ನಿಂತಿತು. ನಂತರ ನಾವೆಲ್ಲರೂ ಹಾದಿಯಲ್ಲಿ ಬರುತ್ತಿದ್ದ ಲಾರಿಯೊಂದನ್ನು ನಿಲ್ಲಿಸಿ ನಮ್ಮ ಊರಿಗೆ ವಾಪಸ್ಸಾದೆವು’.

  ಈ ಮಾಹಿತಿ ಮೇರೆಗೆ ನಾಲ್ವರು ಆರೋಪಿಗಳನ್ನೂ ಬಂಧಿಸಲಾಯಿತು. ಅವರಲ್ಲೊಬ್ಬನಿಂದ ಪ್ರೇಮರಾಜ್​ನ ವಾಚು ಮತ್ತು ಚೈನನ್ನು ವಶಪಡಿಸಿಕೊಳ್ಳಲಾಯಿತು. ತನಿಖೆ ಮುಗಿಸಿ ಆರೋಪಪಟ್ಟಿ ಸಲ್ಲಿಸಲಾಯಿತು. ಈ ಪ್ರಕರಣದಲ್ಲಿ ಯಾವುದೇ ಪ್ರತ್ಯಕ್ಷ ಸಾಕ್ಷಿಯಿರದಿದ್ದರಿಂದ ಸುಂದರ್​ನನ್ನೇ ಮಾಫಿ ಸಾಕ್ಷಿದಾರನೆಂದು ತೆಗೆದುಕೊಳ್ಳಲಾಯಿತು. ಅವನ ಹೇಳಿಕೆ ಮೇರೆಗೆ ನ್ಯಾಯಾಲಯ ರಾಮಕೃಷ್ಣನಿಗೆ ಜೀವಾವಧಿ ಶಿಕ್ಷೆ ನೀಡಿ ಉಳಿದ ಮೂವರನ್ನು ಖುಲಾಸೆ ಮಾಡಿತು. ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರು ತಮ್ಮ ಕವಿತೆಯೊಂದರಲ್ಲಿ, ‘ತಪ್ಪು ಯಾರದೋ, ಯಾರಿಗೋ ಶಿಕ್ಷೆ, ನ್ಯಾಯ ಉಳಿಯುವುದೋ ಉಳಿದುದೇ ನ್ಯಾಯವೋ?’ ಎಂದಂತೆ ತಪ್ಪು ಮಾಡದ ಪ್ರೇಮರಾಜ್ ಪ್ರಾಣವನ್ನು ಕಳೆದುಕೊಂಡರೂ ರಾಮಕೃಷ್ಣನಿಗೆ ಜೀವಾವಧಿ ಶಿಕ್ಷೆಯಾದದ್ದು ನ್ಯಾಯ ಉಳಿದಿದೆ ಎಂದು ಸಾಬೀತಾಯಿತು.

  ‘ಟಾಕ್ಸಿಕ್’ನಲ್ಲಿ ಕರೀನಾ ಕಪೂರ್, ಸಾಯಿ ಪಲ್ಲವಿ, ಶೃತಿ ಹಾಸನ್? ಆದ್ರೆ, ನಿರ್ಮಾಪಕರು ಹೇಳಿದ್ದು ಮಾತ್ರ ಬೇರೇ!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts