More

    ಸಿಂಧನೂರು ನಗರಸಭೆಗೆ 4.50 ಲಕ್ಷ ರೂ. ನಿವ್ವಳ ಲಾಭ

    ಸಿಂಧನೂರು: ನಗರಸಭೆ 2023-24ನೇ ಸಾಲಿನ ಆಯ-ವ್ಯಯದಲ್ಲಿ 34.08 ಕೋಟಿ ರೂ. ನಿರೀಕ್ಷಿತ ಆದಾಯದಲ್ಲಿ 34.04 ಕೋಟಿ ರೂ. ನಿರೀಕ್ಷಿತ ಖರ್ಚಾಗಲಿದೆ. 4.50 ಲಕ್ಷ ರೂ. ನಿವ್ವಳ ಲಾಭಾಂಶವಾಗಿದೆ ಎಂದು ನಗರಸಭೆ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷೆ ಲಕ್ಷ್ಮೀದೇವಿ ಭಂಗಿ ಘೋಷಿಸಿದರು.

    ಕಚೇರಿ ಸಭಾಂಗಣದಲ್ಲಿ ಗುರುವಾರ ಬಜೆಟ್ ಮಂಡನೆ ಸಭೆಯಲ್ಲಿ ಮಾತನಾಡಿ, ಆಸ್ತಿ ತೆರಿಗೆ 4.36 ಕೋಟಿ ರೂ., ಜಾಹೀರಾತು ತೆರಿಗೆ 2 ಲಕ್ಷ ರೂ., ಖಾತಾ ನಕಲು ಶುಲ್ಕ 4 ಲಕ್ಷ, ಖಾತಾ ಬದಾಲಾವಣೆ 10 ಲಕ್ಷ ರೂ., ಕಟ್ಟಡ ಪರವಾನಗಿ ಶುಲ್ಕ 15 ಲಕ್ಷ ರೂ., ಅಭಿವೃದ್ಧಿ ಶುಲ್ಕ 6 ಲಕ್ಷ ರೂ., ವಾಣಿಜ್ಯ ಮಳಿಗೆ ಬಾಡಿಗೆ 8.55 ಲಕ್ಷ ರೂ., ಲೇಔಟ್ ಮೇಲ್ವಿಚಾರಣೆ, ಅಭಿವೃದ್ಧಿ ಶುಲ್ಕ 27 ಲಕ್ಷ ರೂ., ಹೊಸ ನಳ ಜೋಡಣೆ ಶುಲ್ಕ 12 ಲಕ್ಷ ರೂ., ನೀರು ಸರಬರಾಜು ಶುಲ್ಕ 1.89 ಕೋಟಿ ರೂ. ಸೇರಿ ಒಟ್ಟಾರೆ 34.08 ಕೋಟಿ ರೂ. ನಿರೀಕ್ಷಿತ ಆದಾಯಗಳಾಗಿವೆ ಎಂದು ವಿವರಿಸಿದರು.

    ಕಾಯಂ ಸಿಬ್ಬಂದಿ ವೇತನ 5.25 ಕೋಟಿ ರೂ., ದಿನಗೂಲಿ ವೇತನ 1.25 ಕೋಟಿ ರೂ., ಸದಸ್ಯರ ಗೌರವಧನ 10 ಲಕ್ಷ ರೂ., ಮುದ್ರಣ, ಲೇಖನ ಸಾಮಗ್ರಿ 7 ಲಕ್ಷ ರೂ., ನೋಡಲ್ ಇಂಜಿನಿಯರ್ ಹಾಗೂ ಸೀನಿಯರ್ ಪ್ರೋಗ್ರಾಮರ್ ವೇತನ 8 ಲಕ್ಷ ರೂ., ವೃತ್ತಿ ತಜ್ಞರ ಶುಲ್ಕಗಳು 12 ಲಕ್ಷ ರೂ., ಜಾಹೀರಾತು ಮತ್ತು ಪ್ರಚಾರ ಶುಲ್ಕ 12 ಲಕ್ಷ ರೂ., ಕಚೇರಿ ವೆಚ್ಚಗಳು 22 ಲಕ್ಷ ರೂ., ಲೆಕ್ಕಪರಿಶೋಧನಾ ಶುಲ್ಕ 12 ಲಕ್ಷ ರೂ., ಬೀದಿ ದೀಪ ಹಾಗೂ ಟ್ರಾಫಿಕ್ ಸಿಗ್ನಲ್ ಇತ್ಯಾದಿಗಳ ವಿದ್ಯುತ್ ವೆಚ್ಚ ಹಾಗೂ ನೀರಿಗೆ 1.65 ಕೋಟಿ ರೂ. ಸೇರಿ 34.04 ಕೋಟಿ ರೂ. ವ್ಯಯವಾಗಲಿದೆ ಎಂದು ಸಭೆಗೆ ಮಾಹಿತಿ ನೀಡಿದರು. ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರು, ಉಪಾಧ್ಯಕ್ಷ ಮುರ್ತುಜಾ ಹುಸೇನ್ ಇದ್ದರು.

    ಎಇಇಗೆ ಸದಸ್ಯರಿಂದ ತೀವ್ರ ತರಾಟೆ: ಸಭೆಯಲ್ಲಿ ಪರಿಸರ ಮತ್ತು ನೈರ್ಮಲ್ಯ ವಿಭಾಗದ ಎಇಇ ಮಹೇಶ ಅವರನ್ನು ಸರ್ವ ಸದಸ್ಯರು ತೀವ್ರ ತರಾಟೆ ತೆಗೆದುಕೊಂಡರು. ನಗರಸಭೆ ಸದಸ್ಯೆ ಉಮಾ ಸುರೇಶ ಜಾಧವ್ ಮಾತನಾಡಿ, ಜನತಾ ಕಾಲನಿ ವಾರ್ಡ್‌ನಲ್ಲಿ ಸೊಳ್ಳೆಗಳು ಹೆಚ್ಚಾಗಿವೆ. ಫಾಗಿಂಗ್ ಮಾಡುತ್ತಿಲ್ಲ. ಚರಂಡಿ ತ್ಯಾಜ್ಯ ವಿಲೇವಾರಿ ಮಾಡುತ್ತಿಲ್ಲ ಎಂದರು. ಇದಕ್ಕೆ ದನಿಗೂಡಿಸಿದ ಮುನೀರ್ ಪಾಷಾ ಮತ್ತು ಚಂದ್ರಶೇಖರ ಮೈಲಾರ, ವಾರ್ಡ್‌ಗಳಲ್ಲಿ ಫಾಗಿಂಗ್ ಏಕೆ ಮಾಡುತ್ತಿಲ್ಲ? ನಿಮ್ಮ ಬೇಜವಾಬ್ದಾರಿಯಿಂದ ಜನರಿಗೆ ತೊಂದರೆಯಾಗಿದೆ ಎಂದು ತರಾಟೆಗೆ ತೆಗೆದುಕೊಂಡರು. ಮಧ್ಯಪ್ರವೇಶಿಸಿದ ಮಲ್ಲಿಕಾರ್ಜುನ ಪಾಟೀಲ್ ಹಾಗೂ ಪೌರಾಯುಕ್ತ ಮಂಜುನಾಥ ಗುಂಡೂರು, ನಾಳೆಯಿಂದ ವಾರ್ಡ್‌ಗಳಲ್ಲಿ ಫಾಗಿಂಗ್ ಮಾಡಬೇಕು. ಆ ಫೋಟೋ ವಾಟ್ಸಪ್‌ನಲ್ಲಿ ಹಾಕಬೇಕು. ನಿರ್ಲಕ್ಷಿಸಿದರೆ, ಸಸ್ಪೆಂಡ್ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

    ವಿಜಯವಾಣಿ ‘ವಾರ್ಡ್ ವಾಚ್’ ವಿಷಯ ಪ್ರಸ್ತಾಪ: ‘ವಿಜಯವಾಣಿ’ ಪತ್ರಿಕೆಯಲ್ಲಿ ವಿವಿಧ ವಾರ್ಡ್‌ಗಳ ಸಮಸ್ಯೆ, ಉದ್ಯಾನ ಅಭಿವೃದ್ಧಿ ಬಗ್ಗೆ ವಾರ್ಡ್‌ವಾಚ್‌ನಲ್ಲಿ ಬೆಳಕು ಚೆಲ್ಲಿದ್ದನ್ನು ಪ್ರಸ್ತಾಪಿಸಿದ ಎಚ್.ಬಾಷಾ ಮತ್ತು ಕೆ.ಹನುಮೇಶ, ನಗರದಲ್ಲಿರುವ ಉದ್ಯಾನಗಳನ್ನು ಅಭಿವೃದ್ಧಿ ಮಾಡಬೇಕು. ಕೆರೆ ಹತ್ತಿರದ ಭಗೀರಥ ಪಾರ್ಕ್ ಅಭಿವೃದ್ಧಿಪಡಿಸುವ ಜತೆಗೆ ಎಲ್ಲ ಉದ್ಯಾನಗಳ ಪ್ರಗತಿಗೆ ಶ್ರಮಿಸುವ ಜತೆಗೆ ಕೆಲವೆಡೆ ಇರುವ ಸಮಸ್ಯೆಗಳಿಗೆ ಮುಕ್ತಿ ನೀಡಬೇಕೆಂದು ಪ್ರಸ್ತಾಪಿಸಿದರು. ಮಲ್ಲಿಕಾರ್ಜುನ ಪಾಟೀಲ್ ಮಾತನಾಡಿ, ಕೆರೆ ಹಾಗೂ ಉದ್ಯಾನ ಅಭಿವೃದ್ಧಿಗೆ 5 ಕೋಟಿ ರೂ. ಮಂಜೂರಾಗಿದ್ದು, ಭಗೀರಥ ಉದ್ಯಾನ ಸೇರಿ ಎಲ್ಲ ಪಾರ್ಕ್‌ಗಳನ್ನು ಅಭಿವೃದ್ಧಿಪಡಿಸಲಾಗುವುದೆಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts