More

    ಸವದಿ ಕುಟುಂಬದ ರಾಜಕೀಯ ಕ್ಷೇತ್ರದ ಗೊಂದಲ ಬೇಡ

    ಸಿಂದಗಿ: ಸವದಿ ಕುಟುಂಬದ ರಾಜಕೀಯ ಕ್ಷೇತ್ರ ಅಥಣಿಯಾಗಿದೆ. ಕಳೆದ ಬಾರಿ ಚುನಾವಣೆಯಲ್ಲಿ ಸವದಿ ಕುಟುಂಬ ಸಿಂದಗಿಯಿಂದ ಸ್ಪರ್ಧಿಸುತ್ತದೆ ಎಂಬ ಮಾತು ಕೇಳಿ ಬಂದಿತ್ತು. ಆದರೆ, ಅಥಣಿ ಹೊರತಾಗಿ ನಮ್ಮ ಕುಟುಂಬ ಯಾವ ಕ್ಷೇತ್ರದಲ್ಲೂ ರಾಜಕೀಯ ನಡೆಸದು. ಈ ಬಗ್ಗೆ ನಮ್ಮ ಸಮಾಜದವರಲ್ಲಿ ಯಾವುದೇ ಗೊಂದಲ ಬೇಡ ಎಂದು ಯುವ ಮುಖಂಡ ಚಿದಾನಂದ ಸವದಿ ಹೇಳಿದರು.

    ಪಟ್ಟಣದ ಮಾಂಗಲ್ಯ ಭವನದಲ್ಲಿ ಭಾನುವಾರ ತಾಲೂಕು ಗಾಣಿಗ ಸಮಾಜ ಸಂಘದಿಂದ ಹಮ್ಮಿಕೊಂಡಿದ್ದ ಗಾಮದೇವತೆ ವೃತ್ತ ಭೂಮಿಪೂಜೆ, ಗಾಣರತ್ನ ಗ್ರಂಥ ಬಿಡುಗಡೆ, ಪ್ರತಿಭಾ ಪುರಸ್ಕಾರ ಹಾಗೂ ಸಮಾಜದ ಗಣ್ಯರ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

    ಸಿಂದಗಿ ಮತಕ್ಷೇತ್ರಕ್ಕೆ ಸವದಿ ಕುಟುಂಬ ಬರುವುದು ಸಮಾಜದ ಶೈಕ್ಷಣಿಕ ಮತ್ತು ಸಾಮಾಜಿಕ ಬಲ ಗಟ್ಟಿಗೊಳಿಸಲು ಮಾತ್ರ. ಆ ನಿಟ್ಟಿನಲ್ಲಿ ನಾವೆಲ್ಲರೂ ಒಗ್ಗಟ್ಟು ಪ್ರದರ್ಶಿಸಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಲಿರುವ ಮಾಜಿ ಶಾಸಕ ರಮೇಶ ಭೂಸನೂರ ಗೆಲುವಿಗೆ ಸಹಕರಿಸೋಣ ಎಂದರು.

    ಗಾಣಿಗರು ಇರುವುದರಲ್ಲೇ ಬದುಕಿನ ಸಂತೃಪ್ತಿ ಕಾಣುವವರು. ಇತರ ಸಮಾಜಗಳ ವಿಶ್ವಾಸಕ್ಕೂ ಹೆಸರಾದವರು. ನಮ್ಮ ಸಮಾಜದ ಹೆಣ್ಣುಮಕ್ಕಳ ಉಜ್ವಲ ಜೀವನಕ್ಕೆ ನೌಕರಸ್ಥ ಕುಟುಂಬಗಳನ್ನು ಹುಡುಕದೆ, ರೈತ ಕುಟುಂಬಗಳೊಂದಿಗೆ ಸಂಬಂಧ ಬೆಸೆಯುವ ಚಿಂತನೆ ಅಗತ್ಯವಾಗಿದೆ. ಏಕೆಂದರೆ, ದೇಶಕ್ಕೆ ಅನ್ನದಾತನಾಗಿರುವ ರೈತನ ಮನೆಯಲ್ಲಿ ನಮ್ಮ ಮನೆ ಮಗಳು ಸದಾ ಹಸನ್ಮುಖಿಯಾಗಿರಲು ಸಾಧ್ಯ ಎಂದರು.

    ಹಂಪಿ ಕನ್ನಡ ವಿವಿಯ ಸಂಶೋಧನಾರ್ಥಿ ಮೇಘನಾ ಉಪನ್ಯಾಸ ನೀಡಿ, ಈ ಸಮಾಜ ಪ್ರಾಚೀನ ಜನಾಂಗ. ಕಷ್ಟ ಜೀವಿಗಳು, ಪುರಾಣದಲ್ಲೂ ಗಾಣಿಗ ವೃತ್ತಿಯ ಉಲ್ಲೇಖವಿದೆ. ಗಾಣಿಗ ವೃತ್ತಿ ಶ್ರೀಮಂತಿಕೆಯ ಸಂಕೇತ. ಈಗ ಈ ವೃತ್ತಿ ಕಾಣದಂತಾಗಿದ್ದು, ಮತ್ತೆ ಕುಲಕಸುಬಿಗೆ ಜೀವಂತಿಕೆ ತುಂಬುವ ಕೆಲಸ ಮಾಡಬೇಕಿದೆ. ಸಮಾಜದ ಸಾಂಸ್ಕೃತಿಕ ನೆಲೆಗಟ್ಟನ್ನು ಮನಗಂಡು ಕುಲವೃತ್ತಿಯ ಪ್ರಗತಿಗಾಗಿ ಸರ್ಕಾರಗಳು ಸೌಲಭ್ಯ ಒದಗಿಸುತ್ತಿವೆ. ಮೂಲ ಗಾಣಿಗ ಉಲ್ಲೇಖ ಜಾತಿ ಪ್ರಮಾಣಪತ್ರದಲ್ಲಿ ನಮೂದಿಸಿದ್ದರೂ ಸೌಲಭ್ಯ ವಂಚಿತರಾಗುತ್ತಿದ್ದಾರೆ. ನಮ್ಮ ವೃತ್ತಿಯನ್ನು ಪೀಳಿಗೆಯಿಂದ ಪೀಳಿಗೆಗೆ ಪರಿಚಯಿಸುವ ಕೆಲಸ ನಿರಂತರವಾಗಬೇಕು. ನಮ್ಮ ಯುವಕರು ಸಾಮಾಜಿಕ ಜಾಲತಾಣಗಳ ಮನರಂಜನೆ ತೊರೆದು ಸಮಾಜದ ಜನರ ಜೀವನ ಪ್ರಗತಿಗಾಗಿ ಪ್ರೀತಿ, ಕಾಳಜಿ ಜತೆಗೆ ಒಗ್ಗಟ್ಟು ಪ್ರದರ್ಶಿಸಬೇಕು. ಸಮಾಜದ ರೈತರಿಗೆ ಬಲ ಹೆಚ್ಚಿಸುವ ಕೆಲಸ, ಅಗತ್ಯ ಮಾರುಕಟ್ಟೆ, ವ್ಯಾಪಾರ ಮತ್ತು ವಹಿವಾಟಿಗೆ ಪೂರಕವಾಗಿ ಸಮಾಜದ ಬಲ ತುಂಬುವ ಕೆಲಸ ಮಾಡಬೇಕು. ಶೈಕ್ಷಣಿಕವಾಗಿ ಮುಂದುವರಿಯುವಂತೆ ಮಕ್ಕಳನ್ನು ಪ್ರೇರೇಪಿಸಬೇಕು ಎಂದರು.

    ಶಿವಾನಂದ ಪಾಟೀಲ(ಸೋಮಜ್ಯಾಳ) ಗಾಣದೇವತೆ ವೃತ್ತದ ಉದ್ಘಾಟನೆ ನೆರವೇರಿಸಿ ಮಾತಮಾಡಿದರು. ಕೊಲ್ಹಾರದ ಕಲ್ಲಿನಾಥ ದೇವರು ಹಾಗೂ ಸೋಮಜ್ಯಾಳದ ಅಮೃತಲಿಂಗ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಸಮಾಜದ ಸಂಸ್ಥಾಪಕ ಅಧ್ಯಕ್ಷ ಬಸವಂತ್ರಾಯ ಮಲಘಾಣ ಸಮ್ಮುಖ ವಹಿಸಿದ್ದರು. ತಾಲೂಕು ಸಮಾಜದ ಅಧ್ಯಕ್ಷ ಮಲ್ಲಣ್ಣ ಮನಗೂಳಿ ಅಧ್ಯಕ್ಷತೆ ಹಾಗೂ ಮಾಜಿ ಶಾಸಕ ರಮೇಶ ಭೂಸನೂರ ನೇತೃತ್ವ ವಹಿಸಿದ್ದರು.

    ಮಾಜಿ ಶಾಸಕ ಎಸ್.ಕೆ. ಬೆಳ್ಳುಬ್ಬಿ, ಜಿಪಂ, ತಾಪಂ ಹಾಗೂ ಗ್ರಾಪಂ ಸದಸ್ಯರು ಸೇರಿ ಸಮಾಜದ ಇತರ ಗಣ್ಯರು ಇದ್ದರು. ರಾಜ್ಯದಲ್ಲಿ ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಮಾಜದ ನೌಕರರನ್ನು ಹಾಗೂ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅಧಿಕ ಅಂಕ ಪಡೆದು ಸಾಧನೆ ತೋರಿದ ವಿದ್ಯಾರ್ಥಿಗಳನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ಶ್ರೀಶೈಲ ಪರಗೊಂಡ ಸ್ವಾಗತಿಸಿದರು. ಕೆರುಟಗಿಯ ಮಾತಾಜಿ ಪಾಟೀಲ, ಶಿಕ್ಷಕ ಎಸ್.ಬಿ. ಚೌದರಿ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts