More

    ಪ್ರಿಯಾಂಕ ಉಪೇಂದ್ರ ‘ಉಗ್ರಾವತಾರ’; ‘ಅಯ್ಯೋ ನನ್ನ ದೇವರೇ..’ ಅಂದ್ರು ‘ಟಿಣಿಂಗ ಮಿಣಿಂಗ ಟಿಶ್ಯಾ’ ಸಿಸ್ಟರ್ಸ್…

    ಬೆಂಗಳೂರು: ನಟಿ ಪ್ರಿಯಾಂಕ ಉಪೇಂದ್ರರ ‘ಉಗ್ರಾವತಾರ’ಕ್ಕೆ ಇದೀಗ ‘ಟಿಣಿಂಗ ಮಿಣಿಂಗ ಟಿಶ್ಯಾ’ ಸಿಸ್ಟರ್ಸ್​ ‘ಅಯ್ಯೋ ನನ್ನ ದೇವರೇ.’ ಎಂದಿದ್ದಾರೆ. ಮಾತ್ರವಲ್ಲ.. ‘ನಾವು ಕಷ್ಟದಲ್ಲಿ ಇದ್ದೇವೆ, ನಮ್ಮನ್ನು ಬಂದು ಕಾಪಾಡಿ..’ ಎಂದೂ ಹೇಳಿದ್ದಾರೆ.

    ಹಾಗಂತ ಅವರ ಮೇಲೇನೂ ಪ್ರಿಯಾಂಕ ಉಗ್ರಾವತಾರ ತೋರಿಲ್ಲ. ಬದಲಿಗೆ ಪ್ರಿಯಾಂಕರ ನೂತನ ಸಿನಿಮಾ ‘ಉಗ್ರಾವತಾರ’ಕ್ಕೆ ‘ಟಿಣಿಂಗ ಮಿಣಿಂಗ ಟಿಶ್ಯಾ’ ಸಹೋದರಿಯರ ‘ಗೀಗಿ’ ಪದ ಸಿದ್ಧಿಸಿದೆ. ಅಂದರೆ ‘ಸಲಗ’ ಚಿತ್ರದಲ್ಲಿ ‘ಟಿಣಿಂಗ ಮಿಣಿಂಗ ಟಿಶ್ಯಾ’ ಎಂದು ಹಾಡಿ ಜನಪ್ರಿಯತೆ ಗಳಿಸಿರುವ ಸಿದ್ದಿ ಜನಾಂಗದ ಸಹೋದರಿಯರಾದ ಗೀತಾ ಸಿದ್ದಿ ಹಾಗೂ ಗಿರಿಜಾ ಸಿದ್ದಿ ಅಂಥದ್ದೇ ಒಂದು ಶೈಲಿಯ ಗೀತೆಯನ್ನು ‘ಉಗ್ರಾವತಾರ’ಕ್ಕೂ ಹಾಡಿದ್ದಾರೆ.

    ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಂಚಿಕೇರಿ ಗ್ರಾಮದ ಈ ಸಹೋದರಿಯರು ಬಸೋಬಿ ಸಾಹಿತ್ಯದ ಕೊಂಕಣಿ ಭಾಷೆಯ ‘ಅಯ್ಯೋ ಮಾಜೋದೇವ, ಅಯ್ಯಯ್ಯೋ ಮಾಜೋದೇವ..’ ಎಂಬ ಗೀತೆಯನ್ನು ‘ಉಗ್ರಾವತಾರ’ ಚಿತ್ರಕ್ಕಾಗಿ ಹಾಡಿದ್ದಾರೆ. ಕನ್ನಡದಲ್ಲಿ ಈ ಸಾಹಿತ್ಯ ‘ಅಯ್ಯೋ ನನ್ನ ದೇವರೇ.. ನಾವು ಕಷ್ಟದಲ್ಲಿ ಇದ್ದೇವೆ, ನಮ್ಮನ್ನು ಬಂದು ಕಾಪಾಡಿ..’ ಎಂಬ ಅರ್ಥವನ್ನು ಹೊಂದಿದೆ.
    ಪ್ರಿಯಾಂಕ ಉಪೇಂದ್ರ ಖಡಕ್ ಪೋಲೀಸ್ ಇನ್ಸ್‌ಪೆಕ್ಟರ್ ಆಗಿ ನಟಿಸುತ್ತಿರುವ ’ಉಗ್ರಾವತಾರ’ ಚಿತ್ರಕ್ಕೆ ಈ ವಿಶೇಷ ಗೀತೆಯನ್ನು ರಾಧಾಕೃಷ್ಣ ಬಸ್ರೂರು ಅವರ ಸಂಗೀತದಲ್ಲಿ ಇತ್ತೀಚೆಗೆ ಧ್ವನಿ ಮುದ್ರಿಸಿಕೊಳ್ಳಲಾಯಿತು. ಗೀತೆಯ ಚಿತ್ರೀಕರಣ ಸದ್ಯದಲ್ಲೇ ನಡೆಯಲಿದ್ದು, ಅದರಲ್ಲೂ ಈ ಸಹೋದರಿಯರು ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ನಿರ್ದೇಶಕ ಗುರುಮೂರ್ತಿ ತಿಳಿಸಿದ್ದಾರೆ.

    ಎಸ್.ಜಿ. ಸತೀಶ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾದಲ್ಲಿ ಸುಮನ್, ಪವಿತ್ರಾ ಲೋಕೇಶ್, ಶೋಭಾ, ನಟರಾಜ್ ಮುಂತಾದವರು ಅಭಿನಯಿಸಿದ್ದಾರೆ. ನಂದಕುಮಾರ್ ಛಾಯಾಗ್ರಹಣ, ಕಿನ್ನಾಳ್‌ ರಾಜ್ ಸಾಹಿತ್ಯ-ಸಂಭಾಷಣೆ, ವಿನೋದ್-ಮಾಸ್‌ ಮಾದ-ಅಶೋಕ್ ಅವರ ಸಾಹಸ ಸಂಯೋಜನೆ, ವೆಂಕಿ-ಯುಡಿವಿ ಸಂಕಲನ ವೆಂಕಿ ಈ ಚಿತ್ರಕ್ಕಿದೆ. ಕೊನೆಯ ಹಂತದ ಚಿತ್ರೀಕರಣ ಬಾಕಿ ಇದ್ದು, ಇನ್ನೆರಡು ತಿಂಗಳಲ್ಲಿ ಸಿನಿಮಾ ಬಿಡುಗಡೆ ಮಾಡುವ ಗುರಿ ಇರಿಸಿಕೊಂಡಿದೆ ಚಿತ್ರತಂಡ.

    ಪ್ರಿಯಾಂಕ ಉಪೇಂದ್ರ 'ಉಗ್ರಾವತಾರ'; 'ಅಯ್ಯೋ ನನ್ನ ದೇವರೇ..' ಅಂದ್ರು 'ಟಿಣಿಂಗ ಮಿಣಿಂಗ ಟಿಶ್ಯಾ' ಸಿಸ್ಟರ್ಸ್...
    ಸಿದ್ದಿ ಸಹೋದರಿಯರೊಂದಿಗೆ ಪ್ರಿಯಾಂಕ ಉಪೇಂದ್ರ

    ಹಿಸ್ಟರಿ ರಿಪೀಟ್ಸ್​.. ಇದು ಚರಿತ್ರೆ ಸೃಷ್ಟಿಸೋ ಅವತಾರ: ಭಕ್ತರ ಆವೇಶಕ್ಕೆ ಪೊಲೀಸರ ಸರ್ಪಗಾವಲೂ ತತ್ತರ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts