More

    ಟೀಮ್ ಇಂಡಿಯಾದಲ್ಲಿ ವಿರಾಟ್ ಕೊಹ್ಲಿ-ರವಿಶಾಸ್ತ್ರಿ ಯುಗ ಇಂದು ಮುಕ್ತಾಯ

    ದುಬೈ: ಭಾರತ ತಂಡ ಸೋಮವಾರ ನಮೀಬಿಯ ವಿರುದ್ಧ ಔಪಚಾರಿಕ ಪಂದ್ಯ ಆಡುವ ಮೂಲಕ ಟಿ20 ವಿಶ್ವಕಪ್ ಅಭ್ಯಾನ ಕೊನೆಗೊಳಿಸಲಿದೆ. ಇದೇ ವೇಳೆ ಕಳೆದ ಕೆಲ ವರ್ಷಗಳಿಂದ ಟೀಮ್ ಇಂಡಿಯಾದಲ್ಲಿ ಏಳು-ಬೀಳುಗಳನ್ನು ಕಂಡಿರುವ ನಾಯಕ ವಿರಾಟ್ ಕೊಹ್ಲಿ ಮತ್ತು ಕೋಚ್ ರವಿಶಾಸ್ತ್ರಿ ಜೋಡಿಯ ಯುಗವೂ ಮುಕ್ತಾಯ ಕಾಣಲಿದೆ.

    ಹಾಲಿ ವಿಶ್ವಕಪ್ ಬಳಿಕ ಟಿ20 ತಂಡದ ನಾಯಕತ್ವ ತ್ಯಜಿಸುವುದಾಗಿ ವಿರಾಟ್ ಕೊಹ್ಲಿ ಈಗಾಗಲೆ ಘೋಷಿಸಿರುವುದರಿಂದ ನಮೀಬಿಯ ವಿರುದ್ಧದ ಪಂದ್ಯ ಅವರ ನಾಯಕತ್ವದಲ್ಲಿ ಟೀಮ್ ಇಂಡಿಯಾಗೆ ಕೊನೇ ಚುಟುಕು ಕ್ರಿಕೆಟ್ ಪಂದ್ಯವಾಗಿರಲಿದೆ. ಕೊಹ್ಲಿ ನಾಯಕತ್ವದಲ್ಲಿ ಇದುವರೆಗೆ ಆಡಿದ 49 ಟಿ20 ಪಂದ್ಯಗಳಲ್ಲಿ ಭಾರತ 29ರಲ್ಲಿ ಗೆದ್ದಿದ್ದು, 16ರಲ್ಲಿ ಸೋತಿದೆ. 2 ಟೈ ಆಗಿದ್ದರೆ, 2 ಪಂದ್ಯ ರದ್ದುಗೊಂಡಿದೆ. ಒಂದು ವೇಳೆ, ಟಿ20 ವಿಶ್ವಕಪ್ ವೈಫಲ್ಯದಿಂದಾಗಿ ಕೊಹ್ಲಿ ಏಕದಿನ ನಾಯಕತ್ವವನ್ನೂ ಕಳೆದುಕೊಂಡರೆ, ಇದು ಅವರ ನಾಯಕತ್ವದ ಕೊನೇ ಸೀಮಿತ ಓವರ್ ಪಂದ್ಯವಾಗಿರಲಿದೆ.

    ಈ ಪಂದ್ಯದೊಂದಿಗೆ ಟೀಮ್ ಇಂಡಿಯಾದ ಮಾರ್ಗದರ್ಶಕರಾಗಿ ಕಳೆದ 7 ವರ್ಷಗಳಿಂದ ಹೊಂದಿದ್ದ ನಂಟು ಅಂತ್ಯಗೊಳ್ಳಲಿದೆ. 2014ರಲ್ಲಿ ತಂಡದ ನಿರ್ದೇಶಕರಾಗಿ ನೇಮಕಗೊಂಡಿದ್ದ ರವಿಶಾಸ್ತ್ರಿ 2015ರ ಏಕದಿನ ವಿಶ್ವಕಪ್‌ವರೆಗೆ ಹುದ್ದೆಯಲ್ಲಿದ್ದರು. ಬಳಿಕ 2017ರ ಜುಲೈನಲ್ಲಿ ಮುಖ್ಯ ಕೋಚ್ ಆಗಿ ಮರಳಿದ್ದರು ಮತ್ತು 2019ರ ಆಗಸ್ಟ್‌ನಲ್ಲಿ ಮರುನೇಮಕಗೊಂಡಿದ್ದರು. ಈ ಮೊದಲೇ ಖಚಿತಗೊಂಡಿದ್ದಂತೆ ಟಿ20 ವಿಶ್ವಕಪ್ ಬಳಿಕ ಅವರು ಹುದ್ದೆಯಿಂದ ನಿರ್ಗಮಿಸಲಿದ್ದು, ಅವರ ಮಾರ್ಗದರ್ಶನದಲ್ಲಿ ನಮೀಬಿಯ ವಿರುದ್ಧ ಭಾರತ ತಂಡ ಕೊನೇ ಪಂದ್ಯವಾಡಲಿದೆ. ತಂಡದಿಂದ ಅವರಿಗೆ ಭರ್ಜರಿ ಗೆಲುವಿನ ಉಡುಗೊರೆ ಸಿಗುವ ನಿರೀಕ್ಷೆ ಇದೆ. ಆಸ್ಟ್ರೇಲಿಯಾದಲ್ಲಿ 2 ಬಾರಿ ಟೆಸ್ಟ್ ಸರಣಿ (2018-19, 2020-21) ಜಯಿಸಿದ್ದು, ಕಿವೀಸ್ ನೆಲದ ಟಿ20 ಸರಣಿಯಲ್ಲಿ 5-0 ಕ್ಲೀನ್‌ಸ್ವೀಪ್ ಸಾಧಿಸಿದ್ದು, ಚೊಚ್ಚಲ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸಿದ್ದು, ತವರಿನಲ್ಲಿ ಆಡಿದ ಎಲ್ಲ 7 ಟೆಸ್ಟ್ ಸರಣಿಗಳಲ್ಲಿ ಜಯಿಸಿದ್ದು ರವಿಶಾಸಿ ಮಾರ್ಗದರ್ಶನದಲ್ಲಿ ಭಾರತ ತಂಡ ಮಹತ್ವದ ಸಾಧನೆಗಳಾಗಿವೆ.

    ಮ್ಯಾಜಿಕ್ ಮಾಡಲಿಲ್ಲ ಧೋನಿ
    ಟಿ20 ವಿಶ್ವಕಪ್‌ಗೆ ಭಾರತ ತಂಡ ಪ್ರಕಟಿಸುವ ವೇಳೆ ಮಾಜಿ ನಾಯಕ ಎಂಎಸ್ ಧೋನಿ ಅವರನ್ನು ಮೆಂಟರ್ ಆಗಿ ನೇಮಿಸಿದ್ದು ಕ್ರಿಕೆಟ್ ಪ್ರೇಮಿಗಳಲ್ಲಿ ಭಾರಿ ನಿರೀಕ್ಷೆ ಮೂಡಿಸಿತ್ತು. ಆದರೆ ಮೆಂಟರ್ ಆಗಿ ಅವರು ಯಾವುದೇ ಮ್ಯಾಜಿಕ್ ಮಾಡಲಿಲ್ಲ. ಟಿ20 ಕ್ರಿಕೆಟ್‌ನಲ್ಲಿ ಗಮನಸೆಳೆದಿದ್ದ ಅವರ ಚಾಣಕ್ಷ ನಾಯಕತ್ವ ಸಲಹೆಗಾರ ಪಾತ್ರದಲ್ಲಿ ಪುನರಾವರ್ತನೆಯಾಗಲಿಲ್ಲ.

    ಟಿ20 ವಿಶ್ವಕಪ್​ನಿಂದ ಟೀಮ್ ಇಂಡಿಯಾ ಔಟ್, ಸೆಮೀಸ್‌ಗೇರಿದ ನ್ಯೂಜಿಲೆಂಡ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts