More

    ಸೇವಾ ವಾಹನಗಳೀಗ ಸಂಚಾರ ಮುಕ್ತ

    ಬೆಳಗಾವಿ: ತಾಲೂಕಿನ ಬಾಚಿ ಗ್ರಾಮದ ಬಳಿ ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿರುವ ಚೆಕ್‌ಪೋಸ್ಟ್‌ನಲ್ಲಿ ಇದೀಗ ಸೇವಾ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ.

    ಬೆಳಗಾವಿ-ವೆಂಗುರ್ಲಾ ರಸ್ತೆ ಮಾರ್ಗವು ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಇದೇ ರಸ್ತೆಯಲ್ಲಿ ಬಾಚಿ ಬಳಿ ಕರ್ನಾಟಕ-ಮಹಾರಾಷ್ಟ್ರ ಗಡಿ ಇದೆ. ಆದರೆ, ಬೆಳಗಾವಿ ಜಿಲ್ಲೆಯಲ್ಲಿ ಕರೊನಾ ಪ್ರಕರಣ ಹೆಚ್ಚುತ್ತಿರುವುದರಿಂದ ಮಹಾರಾಷ್ಟ್ರದ ಚಂದಗಡ ತಾಲೂಕಾಡಳಿತ ತನ್ನ ವ್ಯಾಪ್ತಿಯ ರಸ್ತೆಯ ಮೇಲೆ ಮಣ್ಣು ಸುರಿದು ಎಲ್ಲ ವಾಹನ ಸಂಚಾರಕ್ಕೆ ತಡೆ ಮಾಡಿತ್ತು.

    ಮಹಾರಾಷ್ಟ್ರ ಸರ್ಕಾರದ ಕ್ರಮ ಪ್ರಶ್ನಿಸಿ ಚಂದಗಡ ತಾಲೂಕಿನ ವಿವಿಧ ಗ್ರಾಮಗಳ ಜನರು ಅಲ್ಲಿನ
    ತಹಸೀಲ್ದಾರ್‌ಗೆ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡುವಂತೆ ಮನವಿ ಸಲ್ಲಿಸಿದ್ದರು. ನಾವು ಭೌಗೋಳಿಕವಾಗಿ ಮಹಾರಾಷ್ಟ್ರದಲ್ಲಿದ್ದೇವೆ. ಆದರೆ, ಕೃಷಿ ಉತ್ಪನ್ನಗಳ ಮಾರಾಟ, ವೈದ್ಯಕೀಯ ಸೇವೆಗಾಗಿ ಬೆಳಗಾವಿ ಅವಲಂಬಿಸಿದ್ದೇವೆ. ಹಲಕರ್ಣಿ ಮತ್ತು ಶಿನೋಳಿ (ಬಿಕೆ) ಕೈಗಾರಿಕೆಗಳಲ್ಲಿ ಬೆಳಗಾವಿಯ ಸಾವಿರಾರು ಕಾರ್ಮಿಕರು ದುಡಿಯುತ್ತಾರೆ. ಹಾಗಾಗಿ ಈ ರಸ್ತೆಯನ್ನು ವಾಹನ ಸಂಚಾರಕ್ಕೆ ಮುಕ್ತಗೊಳಿಸಿ ಎಂದು ಒತ್ತಾಯಿಸಿದ್ದರು.

    ಪ್ರಧಾನಿಗೆ ಪತ್ರ: ಉದ್ಯಮಿ ಅಶ್ವತ್ಥರಾಜ್ ಭಟ್ ಎಂಬುವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇದೇ ವಿಚಾರವಾಗಿ ಪತ್ರ ಬರೆದಿದ್ದರು. ಇದರಿಂದ ಎಚ್ಚೆತ್ತ ಚಂದಗಡ ತಾಲೂಕಾಡಳಿತ ಸದ್ಯ ಅವಶ್ಯ ಸೇವೆ ಒದಗಿಸುವ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲು ರಸ್ತೆ ಮೇಲೆ ಸುರಿದ್ದಿದ್ದ ಮಣ್ಣನ್ನು ಸ್ವಲ್ಪ ತೆರವು ಮಾಡಿದೆ. ಆದರೆ, ಮಣ್ಣು ಪೂರ್ಣ ತೆರವುಗೊಳಿಸಿ ಎಲ್ಲ ಬಗೆಯ ವಾಹನ ಸಂಚಾರಕ್ಕೆ ಅವಕಾಶ ನೀಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

    ಮಹಾರಾಷ್ಟ್ರದಿಂದ ನಿಯಮಬಾಹಿರವಾಗಿ ಯಾವುದೇ ವಾಹನಗಳು ಬೆಳಗಾವಿ ಪ್ರವೇಶಿಸದಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಅವಶ್ಯ ಸೇವೆ ಒದಗಿಸುವ ವಾಹನಗಳ ಮೇಲೂ ನಿಗಾ ವಹಿಸಲಾಗಿದೆ ಎಂದು ಬೆಳಗಾವಿ ಮಹಾನಗರ ಪೊಲೀಸ್ ಆಯುಕ್ತ ಬಿ.ಎಸ್. ಲೋಕೇಶಕುಮಾರ್ ತಿಳಿಸಿದ್ದಾರೆ.

    ಮಹಾರಾಷ್ಟ್ರದಿಂದ ಬಾಚಿ ಚೆಕ್‌ಪೋಸ್ಟ್ ಮೂಲಕ ಬರುವ ಪ್ರತಿಯೊಬ್ಬರ ಆರೋಗ್ಯ ಪರೀಕ್ಷಿಸಲಾಗುತ್ತಿದೆ. ಈವರೆಗೆ ಯಾರಲ್ಲೂ ಕರೊನಾ ಸೋಂಕಿನ ಲಕ್ಷಣ ಕಂಡುಬಂದಿಲ್ಲ.
    | ಡಾ. ಎಸ್.ವಿ. ಮುನ್ಯಾಳ ಡಿಎಚ್‌ಒ, ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts