More

    ಫಲಾನುಭವಿಗಳ ಆಯ್ಕೆ ಶೀಘ್ರ ನಡೆಸಿ

    ಚಿತ್ರದುರ್ಗ: ನಿಗದಿತ ಕಾಲಮಿತಿಯೊಳಗೆ ಫಲಾನುಭವಿಗಳ ಆಯ್ಕೆ ಪೂರ್ಣಗೊಳಿಸಿ ಅರ್ಹರಿಗೆ ಸೌಲಭ್ಯ ಒದಗಿಸುವಂತೆ ಜಿಲ್ಲಾಧಿಕಾರಿ ಜಿಆರ್‌ಜೆ ದಿವ್ಯಾಪ್ರಭು ಅಧಿಕಾರಿಗಳಿಗೆ ತಾಕೀತು ಮಾಡಿದರು.

    ಡಿಸಿ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಉಪಯೋಜನೆ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದರು.
    ಅಂಬೇಡ್ಕರ್, ತಾಂಡ, ಅಲೆಮಾರಿ, ವಾಲ್ಮೀಕಿ ಸೇರಿ ವಿವಿಧ ಅಭಿವೃದ್ಧಿ ನಿಗಮಗಳಲ್ಲಿ ಫಲಾನುಭವಿಗಳ ಆಯ್ಕೆ ತಕ್ಷಣ ಪೂರ್ಣವಾಗಬೇಕು ಎಂದರು.

    ಆದರೆ, ಅಂಬೇಡ್ಕರ್, ತಾಂಡಾ ಸೇರಿ ಕೆಲವು ನಿಗಮಗಳಿಂದ ಫಲಾನುಭವಿಗಳ ಆಯ್ಕೆಯಾಗಿಲ್ಲ. ಅನುದಾನ ಏಕೆ ಖರ್ಚು ಮಾಡಿಲ್ಲವೆಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಡಿಸಿ, ವಿಧಾನಸಭಾ ಚುನಾವಣಾ ನೀತಿ ಸಂಹಿತೆ ಜಾರಿಗೊಂಡಲ್ಲಿ ಫಲಾನುಭವಿಗಳ ಆಯ್ಕೆ, ಸೌಲಭ್ಯ ಒದಗಿಸಲು ಅವಕಾಶ ಲಭಿಸುವುದಿಲ್ಲ ಎಂದು ಹೇಳಿದರು.

    ಒಂದು ವೇಳೆ ಹಾಗೇನಾದರೂ ಆದರೆ ನೀವು ಜನರಿಗೆ ಅನ್ಯಾಯ ಮಾಡಿದಂತಾಗುತ್ತದೆ. ಆದ್ದರಿಂದ ಶಾಸಕರನ್ನು ಸಂಪರ್ಕಿಸಿ, ಆಯ್ಕೆಪಟ್ಟಿ ಅಂತಿಮಗೊಳಿಸಿ ಎಂದು ಸೂಚನೆ ನೀಡಿದರು.

    ಎಸ್ಸಿ, ಎಸ್ಟಿ ಸಮುದಾಯದ ಅನುದಾನ ಖರ್ಚಾಗಬೇಕು. ಇದನ್ನು ಬದಲಾಯಿಸುವಂತಿಲ್ಲ. ದೂರುಗಳು ಬರಬಾರದು. ಎಸ್‌ಸಿಎಸ್‌ಪಿ, ಟಿಎಸ್‌ಪಿ ಕಾಮಗಾರಿಗಳು ಬೇರೆ, ಬೇರೆ ಯೋಜನೆಗಳಡಿ ಪುನರಾವರ್ತನೆ ಆಗಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳ ಬೇಕು. ಗುಣಮಟ್ಟದ ಕೆಲಸ ಆಗಬೇಕು ಎಂದರು.

    ಜಿಲ್ಲೆಯ ಬಹುತೇಕ ನಗರಸಭೆ, ಪಪಂ, ಪುರಸಭೆಗಳು ಪರಿಶಿಷ್ಟರ ಅಭ್ಯುದಯಕ್ಕಾಗಿ ಒದಗಿಸಿರುವ ಎಸ್‌ಸಿಎಸ್‌ಪಿ, ಟಿಎಸ್‌ಪಿ ಅನುದಾನ ಬಳಕೆಯಲ್ಲಿ ಪ್ರಗತಿ ಸಾಧಿಸಿಲ್ಲ. ಪರಿಶಿಷ್ಟರ ಕಾಲನಿಗಳ ಅಭಿವೃದ್ಧಿಗೆ ಅನುದಾನ ಬಿಡುಗಡೆಯಾಗಿದ್ದರೂ ಕೆಲವೆಡೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿಲ್ಲ, ಇನ್ನು ಕೆಲವೆಡೆ ನಿಗದಿತ ಅವಧಿಯೊಳಗೆ ಕಾಮಗಾರಿಗಳಾಗಿಲ್ಲ ಎಂದು ಬೇಸರಿಸಿದರು.

    ಇಂತಹ ನಿರ್ಲಕ್ಷೃ ಧೋರಣೆ ಸಹಿಸಲಾಗದು. ತಕ್ಷಣ ಕಾಮಗಾರಿಗಳು ಪ್ರಾರಂಭವಾಗಬೇಕು. ಪ್ರಗತಿಯಲ್ಲಿರುವ ಕೆಲಸಗಳನ್ನು ಬೇಗ ಪೂರ್ಣಗೊಳಿಸಿ ಉದ್ಘಾಟಿಸಬೇಕೆಂದು ಸಂಸ್ಥೆಗಳ ಮುಖ್ಯಾಧಿಕಾರಿಗಳಿಗೆ ಸೂಚಿಸಿದರು. ಜಿಪಂ ಮುಖ್ಯಯೋಜನಾಧಿಕಾರಿ ಗಾಯತ್ರಿ, ಕೈಗಾರಿಕೆ ಇಲಾಖೆ ಜಂಟಿನಿರ್ದೇಶಕ ಬಿ.ಆನಂದ್, ಡಿಎಚ್‌ಒ ಡಾ.ಆರ್.ರಂಗನಾಥ್, ಡಿಡಿಪಿಐ ರವಿಶಂಕರ್‌ರೆಡ್ಡಿ ಇತರರಿದ್ದರು.

    *ಆಯೋಗಕ್ಕೆ ದೂರು ಎಚ್ಚರಿಕೆ
    ಪ್ರಸಕ್ತ ಆರ್ಥಿಕ ಸಾಲಿನ ಎಸ್‌ಸಿಎಸ್‌ಪಿ, ಟಿಎಸ್‌ಪಿ ಅನುದಾನ ಲ್ಯಾಪ್ಸ್ ಆದಲ್ಲಿ ಎಸ್‌ಸಿ, ಎಸ್‌ಟಿ ಸಮುದಾಯಕ್ಕೆ ನೀವು ಅನ್ಯಾಯ ಮಾಡಿದಂತೆ. ಇಂತಹ ಅಸಡ್ಡೆ ನಡೆ ವಿರುದ್ಧ ಸಂಬಂಧಿಸಿದ ಅಧಿಕಾರಿಗಳಿಂದ ವೇತನದಲ್ಲಿ ವಸೂಲಾತಿ ಮಾಡಿ, ಶಿಸ್ತು ಕ್ರಮಕ್ಕೆ ಶಿಫಾರಸ್ಸು ಮಾಡಲಾಗುವುದು. ಎಸ್‌ಸಿ, ಎಸ್‌ಟಿ ಆಯೋಗಕ್ಕೆ ವರದಿ ಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts