More

    ಕಳ್ಳನೆಂಬ ಅನುಮಾನದಿಂದ ಯುವಕನನ್ನು ಹೊಡೆದು ಕೊಂದ ಸೆಕ್ಯುರಿಟಿ ಗಾರ್ಡ್‌ಗಳು!

    ಬೆಂಗಳೂರು: ಕಳವು ಮಾಡಲು ಅಪಾರ್ಟ್‌ಮೆಂಟ್‌ಗೆ ನುಗ್ಗಿದ್ದಾನೆ ಎಂದು ಅನುಮಾನಿಸಿ ಯುವಕನನ್ನು ಹೊಡೆದು ಕೊಂದಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

    ಆರ್.ಸಿ.ಪುರ ನಿವಾಸಿ ಜಗನ್ (23) ಕೊಲೆಯಾದ ವ್ಯಕ್ತಿ. ಜಗನ್ ಸೆಂಟ್ರಿಂಗ್ ಕೆಲಸ ಮಾಡಿಕೊಂಡಿದ್ದ. ಮೇ 31ರಂದು ಮಧ್ಯಾಹ್ನ ಶ್ರೀರಾಂಪುರದ ಅಪಾರ್ಟ್‌ಮೆಂಟೊಂದರ ಬಳಿ ತೆರಳಿದ್ದ. ಇದಕ್ಕೂ ವಾರದ ಹಿಂದೆ ಅಪಾರ್ಟ್‌ಮೆಂಟ್‌ನಲ್ಲಿ ಕಳ್ಳತನವಾಗಿತ್ತು. ಅಲ್ಲಿಗೆ ತೆರಳಿದ್ದ ಜಗನ್ ಕಳ್ಳತನ ಮಾಡಲು ಬಂದಿದ್ದಾನೆ ಎಂದು ಭದ್ರತಾ ಸಿಬ್ಬಂದಿಗಳು ಅನುಮಾನಿಸಿದ್ದರು. ಕುಡಿದ ಮತ್ತಿನಲ್ಲಿ ಜಗನ್‌ನನ್ನು ಹಿಡಿದು ಮನಸೋ ಇಚ್ಛೇ ಥಳಿಸಿದ್ದರು. ಇದೇ ವೇಳೆ ಅಲ್ಲಿಗೆ ತೆರಳಿದ್ದ ಅಪಾರ್ಟ್‌ಮೆಂಟ್ ವ್ಯವಸ್ಥಾಪಕ, ಬಿಟ್ಟು ಕಳುಹಿಸುವಂತೆ ಸೂಚಿಸಿದ್ದ.

    ಅಸ್ವಸ್ಥಗೊಂಡಿದ್ದ ಜಗನ್ ಮನೆಗೆ ತೆರಳುವಾಗ ಆರ್.ಸಿ.ಪುರದ 3ನೇ ಕ್ರಾಸ್‌ನಲ್ಲಿರುವ ಚರಂಡಿ ಮೋರಿಯಲ್ಲಿ ಬಿದ್ದಿದ್ದ. ಇದನ್ನು ಗಮನಿಸಿದ ಸ್ನೇಹಿತರು ಮನೆಗೆ ಕರೆದೊಯ್ದು ನೀರು ಕುಡಿಸಿ ಕಳುಹಿಸಿದ್ದರು. ಸಂಜೆ 6 ಗಂಟೆಯಲ್ಲಿ ರಸ್ತೆ ಬದಿ ಬಿದ್ದು ಮೃತಪಟ್ಟಿದ್ದ. ಈ ವಿಚಾರ ಗೊತ್ತಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಗಿತ್ತು. ಮೃತನ ಮೈಮೇಲೆ ಗಾಯಗಳಾಗಿರುವುದು ಕಂಡು ಬಂದಿತ್ತು. ಈ ಸಂಬಂಧ ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿ, ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ ತನಿಖೆ ಕೈಗೊಳ್ಳಲಾಗಿತ್ತು.

    ಇದನ್ನೂ ಓದಿ ರಬ್ಬರ್ ತೋಟದಲ್ಲಿ ಕಳವು ಮಾಡಿದ್ದ ಮೂವರ ಬಂಧನ

    ಅಪಾರ್ಟ್‌ಮೆಂಟ್‌ನ 5-6 ಮಂದಿ ಸೆಕ್ಯೂರಿಟಿ ಗಾರ್ಡ್‌ಗಳು ಹೊಡೆದಿರುವ ವಿಚಾರವನ್ನು ಜಗನ್ ತನ್ನ ಸ್ನೇಹಿತರ ಮುಂದೆ ಹೇಳಿದ್ದ. ಜಗನ್ ಮೃತಪಟ್ಟಿರುವ ವಿಚಾರ ಆತನ ಸ್ನೇಹಿತರಿಗೆ ರಾತ್ರಿ 9 ಗಂಟೆಯಲ್ಲಿ ಗೊತ್ತಾಗಿದ್ದು, ಅವರು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು. ಅಪಾರ್ಟ್‌ಮೆಂಟ್‌ನ ಸಿಬ್ಬಂದಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೃತ್ಯದ ಬಗ್ಗೆ ತಪ್ಪೊಪ್ಪಿಕೊಂಡಿದ್ದಾರೆ.

    ಅಪಾರ್ಟ್‌ಮೆಂಟ್‌ನ ಭದ್ರತಾ ಸಿಬ್ಬಂದಿಗಳಾದ ತಾಪಸ್ ಬರ್ಮನ್ (27), ಜಯರಾಮ್ (32), ದೀಪಕ್ ಬೋರಾ (19), ನಾರಾಯಣ್ ಬರ್ಮನ್ (29), ಜೋಯಾದೀಪ್ (22) ಹಾಗೂ ಧನಂಜಯ್ (20) ಬಂಧಿತರು ಎಂದು ಉತ್ತರ ವಿಭಾಗದ ಡಿಸಿಪಿ ಎನ್.ಶಶಿಕುಮಾರ್ ತಿಳಿಸಿದ್ದಾರೆ.

    ಕೊಲೆಯಾದ ಜಗನ್ ಈ ಹಿಂದೆ ಕಳ್ಳತನದಲ್ಲಿ ತೊಡಗಿದ್ದ. ಆತನ ವಿರುದ್ಧ ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ 1 ಕಳ್ಳತನ ಪ್ರಕರಣ ದಾಖಲಾಗಿದೆ. ಶೋಭಾ ಅಪಾರ್ಟ್‌ಮೆಂಟ್‌ನಲ್ಲಿ ಕೃತ್ಯಕ್ಕೂ ಎರಡು ದಿನ ಮುಂಚೆ ಕಳ್ಳತನವಾಗಿತ್ತು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಅಪಾರ್ಟ್‌ಮೆಂಟ್‌ನಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾ ವಶಕ್ಕೆ ಪಡೆದು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಇದನ್ನೂ ಓದಿ ಸೈಬರ್ ಖದೀಮರಿಂದ ಲೆಕ್ಕ ಪರಿಶೋಧಕನ ಕಂಪ್ಯೂಟರ್ ಹ್ಯಾಕ್: ಐನೂರು ಗ್ರಾಹಕರ ಡೇಟಾ ಕಳವು!

    ಕೆಲವೇ ದಿನಗಳ ಹಿಂದೆ ಇಂಥದೇ ಇನ್ನೊಂದು ಘಟನೆ ನಡೆದಿತ್ತು. ಮೇ 31ರಂದು ದೊಡ್ಡಗುಬ್ಬಿ ರಸ್ತೆಯಲ್ಲಿ ಮೊಬೈಲ್ ಕಳ್ಳತನಕ್ಕೆ ಯತ್ನಿಸಿದ್ದ ಸಲ್ಮಾನ್ ಎಂಬುವನನ್ನು ಸಾರ್ವಜನಿಕರು ಬೆನ್ನಟ್ಟಿ ಹಿಡಿದು ಥಳಿಸಿದ್ದರು. ಇದರಿಂದ ಅಸ್ವಸ್ಥಗೊಂಡಿದ್ದ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಲಿಸದೇ ಮೃತಪಟ್ಟಿದ್ದ. ಕೊತ್ತನೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದರು.

    ಕಳ್ಳನಲ್ಲ, ಆದರೂ ಬೈಕ್ ಕಳವು ಮಾಡಿದ: 2 ವಾರ ಬಳಿಕ ಬೈಕ್ ಮಾಲೀಕನಿಗೂ ಶಾಕ್ ನೀಡಿದ್ದ​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts