More

    ಮೈಸೂರು ಟ್ರಾವಲ್ಸ್ ಅಸೋಸಿಯೇಶನ್‌ನಿಂದ ಮನವಿ ಸಲ್ಲಿಕೆ

    ಮೈಸೂರು: ಪ್ರವಾಸಿ ವಾಹನಗಳನ್ನು ತಡೆದು ಅಧಿಕಾರಿಗಳು, ಅವುಗಳನ್ನು ಚುನಾವಣಾ ಕರ್ತವ್ಯಕ್ಕೆ ಬಳಸಿಕೊಳ್ಳುವುದನ್ನು ನಿಲ್ಲಿಸುವಂತೆ ಒತ್ತಾಯಿಸಿ ಮೈಸೂರು ಟ್ರಾವೆಲ್ಸ್ ಅಸೋಸಿಯೇಶನ್‌ನಿಂದ ಮಂಗಳವಾರ ಸಾರಿಗೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
    ಕೆಲ ದಿನಗಳಿಂದ ಸಾರಿಗೆ ಅಧಿಕಾರಿಗಳು, ನಗರದಲ್ಲಿ ಸಂಚರಿಸುತ್ತಿರುವ ಪ್ರವಾಸಿ ವಾಹನಗಳನ್ನು ರಸ್ತೆ ಮಧ್ಯೆ ಏಕಾಏಕಿ ತಡೆಹಿಡಿಯುತ್ತಿದ್ದಾರೆ. ತಡೆ ಹಿಡಿದು ಪ್ರವಾಸಿಗರನ್ನು ಕೆಳಗೆ ಇಳಿಸಿ ಅಂತಹ ವಾಹನಗಳನ್ನು ಚುನಾವಣಾ ಕಾರ್ಯಕ್ಕಾಗಿ ವಶಕ್ಕೆ ಪಡೆಯುತ್ತಿದ್ದಾರೆ ಎಂದು ದೂರಿದರು.
    ಒಂದು ವೇಳೆ ಚುನಾವಣಾ ಕಾರ್ಯದ ಬಳಕೆಗೆ ವಾಹನ ಬೇಕಾದಲ್ಲಿ ಪ್ರಾದೇಶಿಕ ಸಾರಿಗೆ ಕಚೇರಿಯಿಂದ ನಮ್ಮ ಮೈಸೂರು ಟ್ರಾವಲ್ಸ್ ಅಸೋಸಿಯೇಶನ್‌ಗೆ ಅಧಿಕೃತವಾಗಿ ಪತ್ರ ನೀಡಬೇಕು. ಆಗ ನಾವೇ ಪೂರ್ವ ನಿರ್ಧಾರ ಮಾಡಿಕೊಂಡು ಪ್ರವಾಸಿಗರಿಗೆ ತೊಂದರೆ ಆಗದಂತೆ ಚುನಾವಣಾ ಕಾರ್ಯಕ್ಕೆ ವಾಹನಗಳನ್ನು ಕಳುಹಿಸಿಕೊಡುತ್ತೇವೆ ಎಂದು ಹೇಳಿದರು.
    ಪ್ರವಾಸಿ ವಾಹನ ಮಾಲೀಕರು, ಚಾಲಕರು ಸದಾ ಇಲಾಖೆಯ ಜತೆಗಿರುತ್ತೇವೆ. ಆದರೆ ಏಕಾಏಕಿ ಪ್ರವಾಸಿಗರನ್ನು ಇಳಿಸಿ ವಾಹನ ಪಡೆಯುವುದನ್ನು ನಾವು ವಿರೋಧಿಸುತ್ತೇವೆ. ಕಳೆದ ವರ್ಷ ನಾವು ಚುನಾವಣಾ ಕಾರ್ಯಕ್ಕೆ ನೀಡಿರುವ ವಾಹನಗಳ ಬಿಲ್‌ಗಳನ್ನೇ ಇನ್ನೂ ಪಾವತಿ ಮಾಡಿಲ್ಲ. ಈ ಬಾರಿ ಅಧಿಕೃತವಾಗಿ ಪತ್ರ ನೀಡಿ, ಹಳೆಯ ಬಿಲ್ ಪಾವತಿ ಮಾಡಿ ಈಗಿನ ಕೆಲಸಕ್ಕೆ ಮುಂಗಡ ನೀಡಬೇಕು ಎಂದು ಸಾರಿಗೆ ಇಲಾಖೆ ಅಧಿಕಾರ ದೇವಿಕಾ ಅವರಿಗೆ ಮನವಿ ಸಲ್ಲಿಸಿದರು.
    ಮೈಸೂರು ಟ್ರಾವೆಲ್ಸ್ ಅಸೋಸಿಯೇಶನ್‌ನ ಗೌರವಾಧ್ಯಕ್ಷ ಬಿ.ಎಸ್.ಪ್ರಶಾಂತ್, ಅಧ್ಯಕ್ಷ ಸಿ.ಎ.ಜಯಕುಮಾರ್, ಕಾರ್ಯದರ್ಶಿ ಎ.ಸಿ.ರವಿ, ಉಪಾಧ್ಯಕ್ಷ ಡೇವಿಡ್ ರಾಜ್, ಪಿಆರ್‌ಒ ಎಸ್.ಜೆ.ಅಶೋಕ್, ಡ್ರೈವರ್ಸ್ ಅಸೋಸಿಯೇಶನ್ ಅಧ್ಯಕ್ಷ ನಾಗರಾಜ್, ಉಪಾಧ್ಯಕ್ಷ ಪ್ರಭಾಕರ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts