More

    ಲೋಕಸಭೆ ಮತದಾನಕ್ಕೆ ಸಕಲ ಸಿದ್ಧತೆ

    ಮೈಸೂರು: ರಾಜ್ಯದ ಮೊದಲ ಹಂತದ ಚುನಾವಣೆ ಏ.26ರಂದು ನಡೆಯಲಿದ್ದು, ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಯಾವುದೇ ಗೊಂದಲ ಇಲ್ಲದೇ ನಿರ್ಭೀತಿಯಿಂದ ಮತದಾನ ಮಾಡಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಅದ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ತಿಳಿಸಿದರು.
    ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 20,92,222 ಮತದಾರರಿದ್ದು, 10,26,324 ಪುರುಷರು, 10,65,714 ಮಹಿಳೆಯರು ಹಾಗೂ 184 ಲಿಂಗತ್ವ ಅಲ್ಪಸಂಖ್ಯಾತ ಮತದಾರರು ಇದ್ದಾರೆ. ಕ್ಷೇತ್ರದಲ್ಲಿ ಒಟ್ಟು 2202 ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗಿದೆ. ಈ ಎಲ್ಲ ಕೇಂದ್ರಗಳಿಗೆ ಒಟ್ಟಾರೆ 9809 ಮತಗಟ್ಟೆ ಅಧಿಕಾರಿ, ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
    7ರಿಂದ 6ರವರೆಗೆ ಮತದಾನ: ಬೆಳಗ್ಗೆ 7ರಿಂದ ಸಂಜೆ 6ರವರೆಗೆ ಮತದಾನ ನಡೆಯಲಿದ್ದು, ಮುಂಜಾನೆ 5.40 ರಿಂದ 90 ನಿಮಿಷಗಳವರೆಗೆ ಕಲ್ಪಿತ ಮತದಾನ ಪ್ರಕ್ರಿಯೆ ನಡೆಯಲಿದೆ. ಒಂದು ವೇಳೆ ಸಂಜೆ ಆರು ಗಂಟೆಯ ನಂತರವೂ ಮತದಾನ ಮುಗಿಯದೆ, ಮತದಾರರು ಮತಗಟ್ಟೆ ಬಳಿ ಸರತಿಯಲ್ಲಿದ್ದರೆ, ಅಂತಹವರಿಗೆ ಟೋಕನ್ ನೀಡಿ 7 ಗಂಟೆಯವರೆಗೆ ಮತದಾನಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದರು.
    ಈ ಬಾರಿ ಮತದಾನ ಮಾಡಿದ ಮತದಾರನ ಎಡಗೈ ತೋರು ಬೆರಳಿಗೆ ಅಳಿಸಲಾಗದ ಶಾಯಿ ಹಾಕಲಾಗುತ್ತಿದೆ. ಒಂದು ವೇಳೆ ತೋರು ಬೆರಳಿಲ್ಲದವರಿಗೆ ಅದರ ಪಕ್ಕದ ಬೆರಳಿಗೆ ಹಾಕಲಾಗುವುದು. ಅಂಗೈ ಇಲ್ಲದವರಿಗೆ ತೋಳಿಗೆ ಶಾಯಿ ಹಾಕಬಹುದು. ಎಡಗೈ ಇಲ್ಲದ ವ್ಯಕ್ತಿಗೆ ಬಲಗೈ ತೋರು ಬೆರಳಿಗೆ ಅಥವಾ ಎರಡೂ ಕೈಗಳಿಲ್ಲದಿದ್ದರೆ ಕಾಲು ಬೆರಳಿಗೆ ಶಾಯಿ ಹಾಕಲಾಗುತ್ತಿದೆ ಎಂದು ಹೇಳಿದರು.
    ಮತಗಟ್ಟೆಗಳಲ್ಲಿ ಸಿಸಿ ಕ್ಯಾಮರಾ:
    ಮತಗಟ್ಟೆಯಲ್ಲಿ ಯಾವುದೇ ಅಹಿತಕರ ಘಟನೆ, ಅಕ್ರಮಗಳು ನಡೆಯದಂತೆ ತಡೆಯಲು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲ್ಲ 2202 ಮತಗಟ್ಟೆಗಳಲ್ಲೂ ಈ ಬಾರಿ ಸಿಸಿ ಕ್ಯಾಮರಾ ಕಣ್ಗಾವಲು ಇರಿಸಲಾಗಿದೆ. ಜತೆಗೆ 435 ಕ್ರಿಟಿಕಲ್ ಮತಗಟ್ಟೆಗಳೆಂದು ಗುರುತಿಸಲಾಗಿದ್ದು, 41 ಮತಗಟ್ಟೆಗಳನ್ನು ವಲ್ನರವೆಲ್ ಎಂದು ಗುರುತಿಸಲಾಗಿದೆ. 495 ಮತಗಟ್ಟೆಯನ್ನು ಮೈಕ್ರೋ ಅಬ್ಸರ್ವರ್ ಎಂದು ಗುರುತು ಮಾಡಲಾಗಿದೆ ಎಂದು ತಿಳಿಸಿದರು.
    ಮತಗಟ್ಟೆಗಳಲ್ಲಿ ಮತಗಟ್ಟೆ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಶೌಚಗೃಹ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುವುದು. ಮತಗಟ್ಟೆಗೆ ಬರುವ ಮತದಾರರು ಬಿಸಿಲಿನಲ್ಲಿ ನಿಲ್ಲದಂತೆ ನೆರಳಿನ ವ್ಯವಸ್ಥೆ ಮಾಡಲಾಗುತ್ತಿದ್ದು, ಯಾವುದೇ ಗೊಂದಲ ಏರ್ಪಡದಂತೆ ಪೊಲೀಸ್ ಭದ್ರತೆ ಮಾಡಲಾಗಿದೆ ಎಂದರು.
    ಚುನಾವಣೆ ಕಾರ್ಯಕ್ಕೆ 473 ಬಸ್‌ಗಳ ವ್ಯವಸ್ಥೆ:
    ಮಸ್ಟರಿಂಗ್ ಕೇಂದ್ರದಿಂದ ಮತಗಟ್ಟೆಗೆ ಮತ್ತು ಮತಗಟ್ಟೆಯಿಂದ ಮಸ್ಟರಿಂಗ್ ಕೇಂದ್ರಕ್ಕೆ ಮತಯಂತ್ರ ಹಾಗೂ ಸಿಬ್ಬಂದಿಯನ್ನು ಕರೆದೊಯ್ಯಲು 473 ಕೆಎಸ್‌ಆರ್‌ಟಿ ಬಸ್‌ಗಳು, 33 ಜೀಪ್ ಹಾಗೂ 79 ಮಿನಿ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಮಡಿಕೇರಿ, ವಿರಾಜಪೇಟೆ, ಪಿರಿಯಾಪಟ್ಟಣ, ಹುಣಸೂರು, ಚಾಮುಂಡೇಶ್ವರಿ, ಕೃಷ್ಣರಾಜ, ಚಾಮರಾಜ ಹಾಗೂ ನರಸಿಂಹರಾಜ ವಿಧಾನಸಭಾ ಕ್ಷೇತ್ರದಲ್ಲಿ ತಲಾ ಒಂದರಂತೆ ಮಸ್ಟರಿಂಗ್ ಮತ್ತು ಡಿಮಸ್ಟರಿಂಗ್ ಕೇಂದ್ರ ತೆರೆಯಲಾಗಿದೆ ಎಂದು ತಿಳಿಸಿದರು.
    63 ವಿಶೇಷ ಮತಗಟ್ಟೆಗಳ ಸ್ಥಾಪನೆ:
    ಮತಗಟ್ಟೆಗಳಿಗೆ ಮತದಾರರನ್ನು ಆಕರ್ಷಿಸುವ ಸಲುವಾಗಿ ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ತಲಾ 5ರಂತೆ ಒಟ್ಟು 40 ಸಖಿ ಬೂತ್‌ಗಳು ಇರಲಿವೆ. ಜತೆಗೆ ಎರಡು ಸಾಂಪ್ರದಾಯಿಕ ಮತಗಟ್ಟೆ, 8 ದಿವ್ಯಾಂಗ ಮತಗಟ್ಟೆ, 8 ಯುವ ಮತದಾರರ ಬೂತ್‌ಗಳು ಹಾಗೂ 7 ವಿಷಯಾಧಾರಿತ ಬೂತ್, 9 ಬುಡಕಟ್ಟು ಬೂತ್ ತೆರೆಯಲಾಗುತ್ತಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಂ.ಗಾಯತ್ರಿ ಹೇಳಿದರು.
    ಅಂಗವಿಕಲರು ಮತ್ತು ಹಿರಿಯ ನಾಗರಿಕರು ಮತಗಟ್ಟೆಗೆ ಬರಲು ಅನುಕೂಲವಾಗುವಂತೆ ವಾಹನದ ವ್ಯವಸ್ಥೆ ಮಾಡಲಾಗಿದೆ. ಎಲ್ಲ ಮತಗಟ್ಟೆಗಳಿಗೂ ವ್ಹೀಲ್‌ಚೇರ್ ಹಾಗೂ ಭೂತಗನ್ನಡಿ ನೀಡಲಾಗಿದೆ. ದೃಷ್ಟಿ ದೋಷವುಳ್ಳವರಿಗೆ ಸಹಾಯವಾಗಲು ಬ್ರೈಲ್ ಬ್ಯಾಲೆಟ್ ಪೇಪರ್ ಸಹ ಮತಗಟ್ಟೆಗೆ ರವಾನೆ ಮಾಡಲಾಗಿದೆ ಎಂದು ವಿವರಿಸಿದರು.
    ನಗರ ಪೊಲೀಸ್ ಕಮಿಷನರ್ ಬಿ.ರಮೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್, ಅಪರ ಜಿಲ್ಲಾಧಿಕಾರಿ ಪಿ.ಶಿವರಾಜು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts