More

    ‘ಸ್ಕೂಲ್​ ಆನ್​ ವೀಲ್​’ ಕೊಳೆಗೇರಿಗೆ ಹೋಗಿ ಪಾಠ ಹೇಳಿಕೊಡಲು ಸಜ್ಜಾದ ಬಿಎಂಟಿಸಿ ಬಸ್ಸುಗಳು

    ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಕೊಳೆಗೇರಿಯಲ್ಲಿ ವಾಸಿಸುವ ಮಕ್ಕಳು ಹಾಗೂ ಭಿಕ್ಷಾಟನೆಯಿಂದ ಶಾಲೆಯಿಂದ ಹೊರಗುಳಿದ ಮಕ್ಕಳಿಗೆ ಬಿಬಿಎಂಪಿ ವತಿಯಿಂದ ‘ಸ್ಕೂಲ್ ಆನ್ ವೀಲ್’ ಯೋಜನೆ ಅಡಿ ಮೊಬೈಲ್ ಶಾಲೆ ಮೂಲಕ ಶಿಕ್ಷಣ ಪ್ರಸಾರ ಮಾಡಲಾಗುತ್ತಿದೆ.

    ನಗರದಲ್ಲಿ ಭಿಕ್ಷಾಟನೆ ಮಾಡುವ ಮಕ್ಕಳ ರಕ್ಷಣೆ ಹಾಗೂ ಕೊಳೆಗೇರಿಗಳಲ್ಲಿ ವಾಸಿಸುವ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಿ ಶಿಕ್ಷಣ ನೀಡುವಂತೆ ಹೈಕೋರ್ಟ್, ಪಾಲಿಕೆಗೆ ಸೂಚನೆ ನೀಡಿತ್ತು. ಸಮೀಕ್ಷೆ ಮೂಲಕ ಮಕ್ಕಳನ್ನು ಗುರುತಿಸಿದ ಬಿಬಿಎಂಪಿ ‘ಸ್ಕೂಲ್ ಆನ್‌ವೀಲ್ಸ್’ ಯೋಜನೆಯಡಿ ಮೊಬೈಲ್ ಶಾಲೆ ಮೂಲಕ ಶಿಕ್ಷಣ ನೀಡಲು ಮುಂದಾಗಿದೆ. ಮೊಬೈಲ್ ಶಾಲೆ ತಯಾರಿಸಲು ಬಿಎಂಟಿಸಿ 10 ಹಳೆಯ ಬಸ್‌ಗಳನ್ನು ತಲಾ 4 ಲಕ್ಷ ರೂ.ಗಳಂತೆ ಖರೀದಿಸಿ, ಶಾಲಾ ಕೊಠಡಿ ರೂಪದಲ್ಲಿ ಪರಿವರ್ತಿಸಲಾಗಿದೆ. ಬಸ್‌ಗಳಲ್ಲಿ ಬರವಣಿಗೆಗೆ ಬೋರ್ಡ್‌ಗಳು, ಕುಳಿತುಕೊಳ್ಳಲು ಆಸನ, ಕಿಟಕಿ, ಶುದ್ಧ ಕುಡಿಯುವ ನೀರು ಸೇರಿ ಕೆಲವು ಸೌಲಭ್ಯಗಳನ್ನು ಬಸ್‌ನಲ್ಲಿ ಅಳವಡಿಸಲಾಗಿದೆ.

    ಪಾಲಿಕೆ ಶಿಕ್ಷಕರ ಬಳಕೆ:
    ಬಿಎಂಟಿಸಿ ಬಸ್‌ಗಳನ್ನು ಪರಿವರ್ತಿಸುವ ಕಾರ್ಯ ಶೇ.90 ಪೂರ್ಣಗೊಂಡಿದ್ದು, ಮೊಬೈಲ್ ಶಾಲೆಗಳ ರೀತಿಯಲ್ಲಿ ಕೊಳೆಗೇರಿ ಮತ್ತು ವಲಸೆ ಕಟ್ಟಡ ಕಾರ್ಮಿಕರು ನೆಲೆಸಿರುವ ಸ್ಥಳಗಳಿಗೆ ತೆರಳಲು ಸಜ್ಜಾಗಿವೆ. ಇಲ್ಲಿ ಅನೌಪಚಾರಿಕ ಶಿಕ್ಷಣ ನೀಡಲು ಪಾಲಿಕೆಯ ಶಿಕ್ಷಕರನ್ನು ಬಳಸಿಕೊಳ್ಳಲಾಗುತ್ತಿದೆ. ಪ್ರಸ್ತುತ ಹೊಸಕೆರೆಹಳ್ಳಿ ಮತ್ತು ದೊಡ್ಡಗೊಲ್ಲರಹಟ್ಟಿಯ ಕೊಳೆಗೇರಿ ಪ್ರದೇಶಗಳಲ್ಲಿ ಶಾಲೆಯಿಂದ ಹೊರಗುಳಿದ ಹೆಚ್ಚು ಮಕ್ಕಳನ್ನು ಗುರುತಿಸಲಾಗಿದೆ. ಪಾಲಿಕೆ ಶಿಕ್ಷಕರೊಂದಿಗೆ ಬಸ್‌ಗಳು ಇಲ್ಲಿಗೆ ಹೋಗಲಿದ್ದು, ಗುರುತಿಸಿದ ಮಕ್ಕಳಿಗೆ ಪಾಠ ಭೋದನೆ ನಡೆಯಲಿದೆ. ತರಗತಿಗೆ ಬರುವ ಮಕ್ಕಳಿಗೆ ಮಧ್ಯಾಹ್ನದ ಊಟವನ್ನೂ ಕೊಡಲಾಗುತ್ತದೆ. ಏ.10ರೊಳಗೆ ಯೋಜನೆ ಜಾರಿಗೆ ಬರಲಿದೆ ಎಂದು ಪಾಲಿಕೆ ಅಧಿಕಾರಿ ಮಾಹಿತಿ ನೀಡಿದರು.

    ಭಿಕ್ಷಾಟನೆ ಮಕ್ಕಳ ಸಮೀಕ್ಷೆ ಗೌಪ್ಯ:
    ನಗರದ ಟ್ರಾಫಿಕ್ ಸಿಗ್ನಲ್ ಮತ್ತು ಧಾರ್ಮಿಕ ಕೇಂದ್ರಗಳ ಬಳಿ ಭಿಕ್ಷಾಟನೆ ಮಾಡುವ ಮತ್ತು ಶಾಲೆಯಿಂದ ಹೊರಗುಳಿದು ಗೊಂಬೆ, ಬಲೂನ್, ಪೆನ್, ಕ್ಯಾಲೆಂಡರ್ ಸೇರಿ ಇತರೆ ಆಟಿಕೆ ವಸ್ತುಗಳನ್ನು ಮಾರಾಟ ಮಾಡುವ ಮಕ್ಕಳನ್ನು ಸಮೀಕ್ಷೆ ಮೂಲಕ ಗುರುತಿಸುವಂತೆ ಹೈಕೋರ್ಟ್ ಪಾಲಿಕೆಗೆ ಸೇಚಿಸಿತ್ತು. ಈ ಆದೇಶದನ್ವಯ ಮಕ್ಕಳನ್ನು ಖಾಸಗಿ ಸಂಸ್ಥೆಗಳು ಹಾಗೂ ಸ್ವಯಂ ಸೇವಕರ ನೆರವಿನೊಂದಿಗೆ ಸಮೀಕ್ಷೆ ಮೂಲಕ ಮಕ್ಕಳನ್ನು ಗುರುತಿಸಲಾಗಿದೆ. ಆದರೆ, ಮಕ್ಕಳ ಭಿಕ್ಷಾಟನೆ ಒಂದು ದಂಧೆಯಾಗಿದ್ದು, ಭಿಕ್ಷಾಟನೆ ಮಾಡುವ ಮಕ್ಕಳ ಸಮೀಕ್ಷೆ ಪಟ್ಟಿ ಬಹಿರಂಗ ಪಡಿಸುತ್ತಿಲ್ಲ. ನೇರವಾಗಿ ಹೈಕೋರ್ಟ್ ಸಮೀಕ್ಷೆ ಸಲ್ಲಿಕೆ ಮಾಡಲಿದ್ದು, ಅಲ್ಲಿಂದಲೇ ವರದಿ ಬಹಿರಂಗವಾಗಲಿದೆ ಎಂದು ಪಾಲಿಕೆ ಅಧಿಕಾರಿ ತಿಳಿಸಿದ್ದಾರೆ.

    ಬೆಂಗಳೂರಿಗರಿಗೆ ಕರೊನಾ ಶಾಕ್​! ನಗರದಲ್ಲಿ ಒಂದೇ ದಿನ 2,900ಕ್ಕೂ ಅಧಿಕ ಪ್ರಕರಣ ಪತ್ತೆ, 18 ಸಾವು!

    ಗಂಡನಿಗೆ ಸರ್ಕಾರಿ ಕೆಲಸ ಸಿಗಲೆಂದು, ಲವರ್​ ಜತೆ ಸೇರಿ ಮಾವನ ಕೊಲೆಗೆ ಸುಪಾರಿ ಕೊಟ್ಟ ಸೊಸೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts