More

    ಶಾಲೆ ರಕ್ಷಣೆಗೆ ‘ಗ್ರಾಪಂ ಶಿಕ್ಷಣ ಪಡೆ’

    ಬೆಳಗಾವಿ: ಹಳ್ಳಿಗಳ ಸಮಗ್ರ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುವ ಗ್ರಾಮ ಪಂಚಾಯಿತಿಗಳಿಗೇ ಸರ್ಕಾರಿ ಶಾಲೆಗಳ ಸಂಪೂರ್ಣ ನಿರ್ವಹಣೆಯ ಜವಾಬ್ದಾರಿ ವಹಿಸಲು ತೀರ್ಮಾನಿಸಿದ್ದು, ‘ಗ್ರಾಪಂ ಶಿಕ್ಷಣ ಪಡೆ’ ರಚನೆಗೆ ಮುಂದಾಗಿದೆ.

    ಕೋವಿಡ್-19 ಕಾರಣದಿಂದ ಶಾಲೆಗಳು ಸಕಾಲದಲ್ಲಿ ತೆರೆಯದಿರುವ ಹಿನ್ನೆಲೆಯಲ್ಲಿ ಹಾಗೂ ಮಕ್ಕಳು ಶಾಲೆಗೆ ಹೋಗಲಾಗದ ಅನಿವಾರ್ಯ ಸ್ಥಿತಿ ನಿರ್ಮಾಣಗೊಂಡಿ ರುವುದರಿಂದ ಸರ್ಕಾರ ‘ಗ್ರಾಪಂ ಶಿಕ್ಷಣ ಪಡೆ’ ರಚಿಸಲು ಅಣಿ ಯಾಗಿದೆ. ಈ ಯೋಜನೆ ಶೀಘ್ರದಲ್ಲೇ ಅನುಷ್ಠಾನಗೊಳ್ಳಲಿದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

    ಶಿಕ್ಷಣಕ್ಕೆ ತೊಡಕು: ಗ್ರಾಮೀಣ ಪ್ರದೇಶಗಳಲ್ಲಿನ ಮಕ್ಕಳು ಶಾಲೆಯಿಂದ ದೂರ ಉಳಿಯುತ್ತಿದ್ದಾರೆ. ಅಲ್ಲದೆ, ಕೆಲ ಮಕ್ಕಳು ಕೂಲಿ ಹಾಗೂ ಇನ್ನಿತರ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಹೀಗಾಗಿ ವಿದ್ಯಾಗಮ ಕಾರ್ಯಕ್ರಮದಲ್ಲಿಯೂ ಪಾಲ್ಗೊಳ್ಳುತ್ತಿಲ್ಲ. ಇದರಿಂದಾಗಿ ಮಕ್ಕಳ ಹಾಜರಾತಿಯೂ ಸರ್ಕಾರಕ್ಕೆ ಖಚಿತವಾಗುತ್ತಿಲ್ಲ. ಕೆಲ ಶಾಲೆಗಳು ಮೂಲ ಸೌಕರ್ಯಗಳಿಲ್ಲದೆ ಸಮಸ್ಯೆ ಎದುರಿಸುತ್ತಿವೆ. ಈ ಹಿನ್ನೆಲೆಯಲ್ಲಿ ಶೈಕ್ಷಣಿಕ ಕ್ಷೇತ್ರಕ್ಕೆ ಉಂಟಾಗುತ್ತಿರುವ ತೊಡಕು ನಿವಾರಿಸಲು ಹಾಗೂ ಸರ್ಕಾರಿ ಶಾಲೆಗಳ ಸರ್ವತೋಮುಖ ಅಭಿವೃದ್ಧಿಗಾಗಿ ಆಯಾ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಥವಾ ಆಡಳಿತಾಧಿಕಾರಿಗಳ ಅಧ್ಯಕ್ಷತೆಯಲ್ಲಿ ‘ಗ್ರಾಪಂ ಶಿಕ್ಷಣ ಪಡೆ’ ರಚನೆಯಾಗಲಿದೆ.

    ಶಾಲೆಗಳಲ್ಲೂ ರಾಜಕೀಯ: ಈಗಾಗಲೇ ಸರ್ಕಾರವು ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಸಮಗ್ರ ನಿರ್ವಹಣೆಗಾಗಿ ಪಾಲಕರ ಅಧ್ಯಕ್ಷತೆಯಲ್ಲಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ರಚನೆ ಮಾಡಿದೆ. ಆದರೆ, ಸಮರ್ಪಕವಾಗಿ ಅವು ಕಾರ್ಯನಿರ್ವಹಣೆ ಮಾಡಿರಲಿಲ್ಲ. ಮಕ್ಕಳನ್ನು ಸರ್ಕಾರಿ ಶಾಲೆಗೆ ಕರೆ ತರುವಲ್ಲಿ ವಿಫಲವಾಗಿದ್ದವು. ಅಲ್ಲದೆ, ಸಮಿತಿ ಅಧ್ಯಕ್ಷ-ಸದಸ್ಯರು ರಾಜಕೀಯ ಪಕ್ಷದ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂಬ ದೂರು ಸಹ ಕೇಳಿಬರತೊಡಗಿತ್ತು. ಇವುಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳ ಸಂಪೂರ್ಣ ನಿರ್ವಹಣೆ, ಖರ್ಚು ವೆಚ್ಚಗಳ ನಿಗಾ ವಹಿಸುವ ಹೊಣೆಯನ್ನು ಆಯಾ ಗ್ರಾಮ ಪಂಚಾಯಿಇಗಳಿಗೆ ವಹಿಸಲಾಗುತ್ತಿದೆ.

    ಪಡೆಯಲ್ಲಿ ಯಾರ‌್ಯಾರು?: ಗ್ರಾಮ ಪಂಚಾಯಿತಿ ಶಿಕ್ಷಣ ಪಡೆಯ ಅಧ್ಯಕ್ಷತೆಯನ್ನು ಆಯಾ ಗ್ರಾಮ ಪಂಚಾಯಿತಿ ಅಧ್ಯಕ್ಷರು ಅಥವಾ ಆಡಳಿತಾಧಿಕಾರಿಗಳು ವಹಿಸುತ್ತಾರೆ. ಸಮಿತಿ ಸದಸ್ಯರಾಗಿ ಎಸ್‌ಡಿಎಂಸಿ ಅಧ್ಯಕ್ಷರು, ಪ್ರಾಥಮಿಕ ಮತ್ತು ಪ್ರೌಢಶಾಲೆಯ ಮುಖ್ಯೋಪಾಧ್ಯಾಯರು, ಅಂಗನವಾಡಿ ಕೇಂದ್ರದ ಮೇಲ್ವಿಚಾರಕರು, ಆಶಾ ಕಾರ್ಯಕರ್ತೆಯರು, ಗ್ರಂಥಪಾಲ ಮೇಲ್ವಿಚಾರಕರು ಹಾಗೂ ಪಿಡಿಒಗಳು ಸದಸ್ಯ ಕಾರ್ಯದರ್ಶಿಗಳಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಶೀಘ್ರದಲ್ಲಿ ಸರ್ಕಾರವು ‘ಶಿಕ್ಷಣ ಪಡೆ’ ರಚನೆ ಮಾಡಿ ಆದೇಶಿಸಲಿದೆ ಎಂದು ಚಿಕ್ಕೋಡಿ ಶೈಕ್ಷಣಿಕ ವಿಭಾಗದ ಡಿಡಿಪಿಐ ಗಜಾನನ ಮನ್ನಿಕೇರಿ, ಬೆಳಗಾವಿ ಶೈಕ್ಷಣಿಕ ವಿಭಾಗದ ಡಾ.ಎ.ಬಿ. ಪುಡಲೀಕ ತಿಳಿಸಿದ್ದಾರೆ.

    ಸುಳ್ಳು ದಾಖಲಾತಿಗೆ ಕಡಿವಾಣ

    ಗ್ರಾಪಂ ಶಿಕ್ಷಣ ಪಡೆ ರಚನೆಯಿಂದ ಹಳ್ಳಿಗಳಲ್ಲಿ ಕಲಿಕೆಯ ವಾತಾವರಣ ಸಂಪೂರ್ಣ ಬದಲಾಗಲಿದೆ. ಕಲಿಯುವ ಮಕ್ಕಳಿಗೆ ಸೂಕ್ತ ಸ್ಥಳ, ಸೌಲಭ್ಯ ಕಲ್ಪಿಸುವುದು, ಎಲ್ಲ ಮಕ್ಕಳಿಗೆ ಗ್ರಂಥಾಲಯ ಸೌಲಭ್ಯ, ಮಕ್ಕಳ ಹಾಜರಾತಿ ಖಚಿತ ಪಡಿಸಿಕೊಳ್ಳುವುದು, ನಿರಂತರವಾಗಿ ಗೈರು ಹಾಜರಾಗುತ್ತಿರುವ ಮಕ್ಕಳನ್ನು ಶಾಲೆಗೆ ಕರೆ ತರುವುದು, ಅಂಗನವಾಡಿ, ಶಾಲೆಗಳಲ್ಲಿ ಮಕ್ಕಳ ದಾಖಲಾತಿಗಳ ಪರಿಶೀಲನೆ ಮಾಡುವುದು ಶಿಕ್ಷಣ ಪಡೆಯ ಜವಾಬ್ದಾರಿಯಾಗಿದೆ. ಚೈಲ್ಡ್ ಟ್ರಾೃಕ್ ಮೂಲಕ ಮಕ್ಕಳು ಯಾವ್ಯಾವ ಶಾಲೆಗಳಲ್ಲಿ ಹಾಜರಾಗುತ್ತಿದ್ದಾರೆ ಎಂಬ ಬಗ್ಗೆಯೂ ಪಡೆ ಖಚಿತ ಪಡಿಸಿಕೊಳ್ಳಲಿದೆ. ಅಲ್ಲದೆ, ಸುಳ್ಳು ಹಾಜರಾತಿಗೆ ಸಂಪೂರ್ಣ ಕಡಿವಾಣ ಬೀಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸರ್ಕಾರಿ ಶಾಲೆಗಳಿಗೆ ಮೂಲ ಸೌಕರ್ಯ ಕಲ್ಪಿಸುವುದು, ಶಾಲೆಗಳಲ್ಲಿ ಸುರಕ್ಷಿತ ಪರಿಸರ ಕಲ್ಪಿಸುವುದು ಹಾಗೂ ಮಕ್ಕಳ ಶಿಕ್ಷಣ ಹಕ್ಕು ಜಾರಿಗೊಳಿಸುವ ನಿಟ್ಟಿನಲ್ಲಿ ಬೆಳಗಾವಿ ಜಿಲ್ಲೆಯ 506 ಗ್ರಾಪಂಗಳಲ್ಲಿ ‘ಗ್ರಾಮ ಪಂಚಾಯಿತಿ ಶಿಕ್ಷಣ ಪಡೆ’ ರಚನೆ ಮಾಡಲಾಗುತ್ತಿದೆ.
    | ಎಚ್.ವಿ.ದರ್ಶನ್ ಜಿಪಂ ಸಿಇಒ, ಬೆಳಗಾವಿ

    | ಮಂಜುನಾಥ ಕೋಳಿಗುಡ್ಡ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts