ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ
ತಾಲೂಕಿನಲ್ಲಿ ಒಟ್ಟು 10 ಸಾವಿರ ಸಂಧ್ಯಾ ಸುರಕ್ಷಾ ಯೋಜನೆ ಫಲಾನುಭವಿಗಳಿದ್ದು, ಅದರಲ್ಲಿ ಮಹಿಳೆಯರದ್ದೇ ಸಿಂಹಪಾಲು. ತಾಲೂಕಿನ ವಿವಿಧ ಪಂಚಾಯಿತಿ ವ್ಯಾಪ್ತಿಯ ಸಂಧ್ಯಾ ಸುರಕ್ಷಾ ಯೋಜನೆ ಫಲಾನುಭವಿಗಳಲ್ಲಿ ಇನ್ನೂರು ಜನರಿಗೆ ಕಳೆದ ಜನವರಿಯಿಂದ ಹಣ ಬಂದಿಲ್ಲ.
ಶಿರೂರು, ಗಂಗೊಳ್ಳಿ, ಕಾಲ್ತೋಡು, ನಾಡಾ ಗುಡ್ಡೆಯಂಗಡಿ ಗ್ರಾಮ ಪಂಚಾಯಿತಿಗಳಲ್ಲಿ ಹೆಚ್ಚು ಸಂಧ್ಯಾ ಸುರಕ್ಷಾ ಯೋಜನೆ ಫಲಾನುಭವಿಗಳಿದ್ದಾರೆ. ಹಿಂದಿನಿಂದಲೂ ಒಂದೆರಡು ವಾರ ತಡವಾದರೂ ಹಣ ಬರುತ್ತಿದ್ದು, 200 ಜನರ ಹೊರತು ಪಡಿಸಿ, ಉಳಿದವರಿಗೆ ಹಣ ನಿರಂತರವಾಗಿ ಬರುತ್ತಿದೆ. ಫಲಾನುಭವಿಗಳಿಗೆ ಅನುದಾನ ಬಿಡುಗಡೆಯಾಗದಿರಲು ಸರ್ಕಾರವಾಗಲಿ, ತಾಲೂಕು ಆಡಳಿತವಾಗಲಿ ಕಾರಣವಲ್ಲ. ಫಲಾನುಭವಿಗಳ ಆಧಾರ್, ರೇಶನ್ ಕಾರ್ಡ್, ಬ್ಯಾಂಕ್ ಖಾತೆ ಹೊಂದಾಣಿಕೆಯಾಗದೆ ಅನುದಾನ ಬಿಡುಗಡೆಯಾಗಿಲ್ಲ. ಯಾರಿಗೆಲ್ಲ ಹಣ ಬಿಡುಗಡೆ ಆಗಿಲ್ಲವೋ ಅವರ ಸಮಸ್ಯೆ ಪರಿಹಾರ ಮಾಡಲಾಗಿದೆ. ಈಗಾಗಲೇ ಕೆಲವರಿಗೆ ಹಣ ಬಂದಿದ್ದು, ಉಳಿದವರಿಗೂ ಹಣ ಬರುತ್ತದೆ ಎಂದು ಅಧಿಕಾರಿಗಳ ಭರವಸೆ ನೀಡಿದ್ದಾರೆ.
ಪತಿ ಕಳೆದುಕೊಂಡವರು, ಮಕ್ಕಳು, ಮರಿ ಇಲ್ಲದವರು, ಒಂಟಿಯಾಗಿ ಜೀವನ ನಡೆಸುತ್ತಿರುವವರು ಸಂಧ್ಯಾ ಸುರಕ್ಷಾ ಅನುದಾನದಲ್ಲಿ ಜೀವನ ನಿರ್ವಹಣೆ ಮಾಡಿಕೊಂಡಿದ್ದು, ಚಿಕ್ಕಪುಟ್ಟ ಕೆಲಸ ಮಾಡುವ ಮೂಲಕ ತಮ್ಮ ಖರ್ಚಿಗೆ ಹಣ ಹೊಂದಿಸಿಕೊಳ್ಳುತ್ತಿದ್ದರು. ಕೆಲವರು ಬಾಡಿಗೆ ಮನೆಯಲ್ಲಿದ್ದು, ಹಣ ಇಲ್ಲದೆ ಬಾಡಿಗೆ ಕಟ್ಟಲಾಗದೆ, ರೇಶನಿಗೂ ತುಟ್ಟಿಯಾಗಿ ಜೀವನ ನಿರ್ವಹಣೆ ಕಷ್ಟವಾಗುತ್ತದೆ ಎನ್ನುವುದು ಫಲಾನುಭವಿಗಳ ಅಳಲು.
ಆಧಾರ್ ಹಾಗೂ ಬ್ಯಾಂಕ್ ಅಕೌಂಟ್ ನಂಬರ್ ಹೊಂದಾಣಿಕೆಯಾಗದ ಹಿನ್ನೆಲೆಯಲ್ಲಿ ಕೆಲವು ಹಿರಿಯರಿಗೆ ಸರ್ಕಾರದಿಂದ ಸಂಧ್ಯಾ ಸುರಕ್ಷಾ ಹಣ ಬಿಡುಗಡೆ ಮಾಡಲು ಅಡ್ಡಿಯಾಗಿದೆ. ಈಗಾಗಲೇ ಕೆಲ ಫಲಾನುಭವಿಗಳ ಸಮಸ್ಯೆ ಪರಿಹಾರ ಮಾಡಿದ್ದು, ಹಣ ಬಿಡುಗಡೆ ಆಗುತ್ತಿದೆ. ಇನ್ನುಳಿದವರಿಗೂ ಶೀಘ್ರ ಹಣ ಬರಲಿದೆ. ಆತಂಕ ಪಡುವ ಅಗತ್ಯವಿಲ್ಲ.
-ತಿಪ್ಪೇಸ್ವಾಮಿ, ತಹಸೀಲ್ದಾರ್, ಕುಂದಾಪುರಗುಲ್ವಾಡಿ ಗ್ರಾಪಂ ವ್ಯಾಪ್ತಿಯ ಆರು ಹಿರಿಯರಿಗೆ ಜನವರಿಯಿಂದ ಸಂಧ್ಯಾ ಸುರಕ್ಷಾ ಹಣ ಬಿಡುಗಡೆಯಾಗಿಲ್ಲ. ಈ ಹಣದಲ್ಲೇ ಜೀವನ ನಡೆಸುವ ಹಿರಿಯ ಜೀವಿಗಳಿಗೆ ಇದರಿಂದ ಸಮಸ್ಯೆಯಾಗಿದೆ. ಕೆಲಸವೂ ಇಲ್ಲದೆ ಹಿರಿಯ ಜೀವಿಗಳ ತುತ್ತು ಅನ್ನಕ್ಕೂ ಕಷ್ಟ ಪಡುವಂತಾಗಿದೆ. ಸರ್ಕಾರ ಸಂಧ್ಯಾ ಸುರಕ್ಷಾ ಹಣ ಯಾರಿಗೆಲ್ಲ ಸಿಕ್ಕಿಲ್ಲವೋ ಅಂತವರಿಗೆ ತಕ್ಷಣ ಹಣ ಬಿಡುಗಡೆ ಮಾಡುವ ಮೂಲಕ ನೆರವಾಗಬೇಕು.
-ಸುದೇಶ್ ಶೆಟ್ಟಿ, ಸದಸ್ಯ, ಗ್ರಾಮ ಪಂಚಾಯಿತಿ ಗುಲ್ವಾಡಿ