More

    ಗ್ಯಾರಂಟಿ ಯೋಜನೆಗಳೇ ಕಾಂಗ್ರೆಸ್ ಪಕ್ಷದ ಗೆಲುವಿಗೆ ಶ್ರೀರಕ್ಷೆ

    ಲೋಕಾಪುರ: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಐದು ಗ್ಯಾರಂಟಿ ಯೋಜನೆಗಳೇ ಕಾಂಗ್ರೆಸ್ ಪಕ್ಷದ ಗೆಲುವಿಗೆ ಶ್ರೀರಕ್ಷೆಯಾಗಿವೆ. ರಾಜ್ಯದಲ್ಲಿ 20 ಸ್ಥಾನಗಳಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಲಿದೆ ಎಂದು ಜಿಲ್ಲಾ ಉಸ್ತುವಾರಿ- ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ವಿಶ್ವಾಸ ವ್ಯಕ್ತಪಡಿಸಿದರು.

    ಪಟ್ಟಣದಲ್ಲಿ ಭಾನುವಾರ ಕಾಂಗ್ರೆಸ್ ಕಚೇರಿಯಲ್ಲಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಮಹಿಳೆಯರು, ಬಡವರು, ದೀನದಲಿತರು ಹಾಗೂ ರೈತರ ಪರವಾದ ಪಕ್ಷವಾಗಿದೆ. ಅವರೆಲ್ಲರ ಅನುಕೂಲಕ್ಕಾಗಿ ಸರ್ಕಾರ 5 ಗ್ಯಾರಂಟಿ ಯೋಜನೆ ಜಾರಿ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಕೆಲವೇ ಕೆಲವು ಶ್ರೀಮಂತ ಉದ್ಯಮಿಗಳ ಪರವಾಗಿದ್ದಾರೆ. ಆಹಾರ ಉತ್ಪಾದನೆಗೆ ಬೆಂಬಲ ಬೆಲೆಗೆ ದೆಹಲಿಯಲ್ಲಿ ಅನ್ನದಾತರು ಪ್ರತಿಭಟಿಸಿದ್ದರೂ ಅವರ ಬಗ್ಗೆ ಅನುಕಂಪ ತೋರುತ್ತಿಲ್ಲ ಎಂದು ಆರೋಪಿಸಿದರು.

    ವಿರೋಧ ಪಕ್ಷದವರನ್ನು ಐಟಿ, ಈಡಿ ಮತ್ತು ಸಿಬಿಐ ಸಂಸ್ಥೆಗಳ ಮೂಲಕ ಬೆದರಿಸಿ ಅವರ ಮೇಲೆ ಪ್ರಕರಣ ದಾಖಲು ಮಾಡಿ ಜೈಲಿಗೆ ಅಟ್ಟುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಬ್ಯಾಂಕ್ ಅಕೌಂಟ್‌ಗಳನ್ನು ಮುಟ್ಟುಗೋಲು ಹಾಕಿ ಹೆದರಿಸುತ್ತಿದ್ದಾರೆ. ಚುನಾವಣೆ ಬಾಂಡ್ ಮೂಲಕ ಸಾವಿರಾರು ಕೋಟಿ ರೂ. ಹಣವನ್ನು ಉದ್ಯಮಿದಾರರಿಂದ ವಸೂಲಿ ಮಾಡಿದ್ದಾರೆ. ಪ್ರಧಾನಿ ಅವರಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ರಾಜ್ಯದಲ್ಲಿ ಬರಗಾಲ ಇದ್ದರೂ ರಾಜ್ಯ ಸರ್ಕಾರಕ್ಕೆ ಬರ ಪರಿಹಾರ ನೀಡದೆ ಸತಾಯಿಸುತ್ತಿದ್ದಾರೆ ಎಂದು ಟೀಕಿಸಿದರು.

    ಬಾಗಲಕೋಟೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ ಅವರು 20 ವರ್ಷ ಸಂಸದರಾಗಿ ಜಿಲ್ಲೆಯನ್ನು ಪ್ರತಿನಿಧಿಸಿದ್ದು, ಅವರ ಕೊಡುಗೆ ಜಿಲ್ಲೆಗೆ ಶೂನ್ಯವಾಗಿದೆ. ಚುನಾವಣೆಗೆ ಬಂದಾಗ ಮಾತ್ರ ಕಾಣಿಸಿಕೊಳ್ಳುತ್ತಾರೆ ಎಂದು ಹೇಳಿದರು.

    ಟಿಕೆಟ್ ಆಕಾಂಕ್ಷಿಯಾಗಿದ್ದ ವೀಣಾ ಕಾಶಪ್ಪನವರ ಅವರು ಟಿಕೆಟ್ ವಂಚಿತರಾಗಿದ್ದರಿಂದ ಸಹಜವಾಗಿ ಅವರ ಮನಸ್ಸಿಗೆ ನೋವಾಗಿದೆ. ಇನ್ನೆರಡು ದಿನಗಳಲ್ಲಿ ಜಿಲ್ಲಾ ನಾಯಕರು ಎಲ್ಲರೂ ಸೇರಿ ಶಾಸಕ ವಿಜಯಾನಂದ ಕಾಶಪ್ಪನವರ ಮತ್ತು ಪತ್ನಿ ವೀಣಾ ಕಾಶಪ್ಪನವರ ಜತೆ ಕುಳಿತು ಮಾತನಾಡಿ ಅಸಮಾಧಾನವನ್ನು ದೂರು ಮಾಡುತ್ತೇವೆ. ಮುಂದಿನ ದಿನಮಾನಗಳಲ್ಲಿ ವೀಣಾ ಅವರಿಗೆ ಪಕ್ಷ ಹೆಚ್ಚಿನ ಅಧಿಕಾರ, ಸ್ಥಾನಮಾನ ನೀಡಲು ಹೈಕಮಾಂಡ್‌ಗೆ ಮನವಿ ಮಾಡುತ್ತೇನೆ. ಹೈಕಮಾಂಡ್ ನಿರ್ಧಾರಕ್ಕೆ ನಾವೆಲ್ಲರೂ ಬದ್ಧರಾಗಬೇಕು. ಪಕ್ಷದ ಅಭ್ಯರ್ಥಿ ಸಂಯುಕ್ತಾ ಪಾಟೀಲ ಅವರನ್ನು ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಲು ಕಾರ್ಯಕರ್ತರು ಶ್ರಮಿಸಬೇಕು ಎಂದು ಸಚಿವ ತಿಮ್ಮಾಪುರ ಮನವಿ ಮಾಡಿದರು.

    ಬಿಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಶಿವಾನಂದ ಉದಪುಡಿ, ರಾಜುಗೌಡ ನ್ಯಾಮಗೌಡ, ಜಿಲ್ಲಾ ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿಯ ಉಪಾಧ್ಯಕ್ಷ ರಫೀಕ ಭೈರಕದಾರ, ಕೆಎಂಎ್ ನಿರ್ದೇಶಕ ಲಕ್ಷ್ಮಣ ಮಾಲಗಿ, ಅಹಿಂದ ತಾಲೂಕಾಧ್ಯಕ್ಷ ಗೋವಿಂದಪ್ಪ ಕೌಲಗಿ, ಪಿಕೆಪಿಎಸ್ ಸದಸ್ಯರಾದ ಭೀಮನಗೌಡ ಪಾಟೀಲ, ಚನ್ನಯ್ಯ ಗಣಾಚಾರಿ, ತಾಲೂಕು ಗ್ಯಾರಂಟಿ ಯೋಜನೆ ಸದಸ್ಯ ಹಣಮಂತಗೌಡ ಪಾಟೀಲ, ಹೊಳಬಸು ದಂಡಿನ, ಶಿವಯೋಗಿ ಗಂಗಣ್ಣವರ, ಬಸವರಾಜ ಕಾತರಕಿ, ಬೀರಪ್ಪ ಮಾಯಣ್ಣವರ, ಕೃಷ್ಣಾ ಹೂಗಾರ, ಕೃಷ್ಣಾ ಜಟ್ಟೆನ್ನವರ, ಮುತ್ತಪ್ಪ ಗಡ್ಡದವರ, ರವಿ ರೊಡ್ಡಪ್ಪನವರ, ಮಹೇಶ ಪೂಜಾರ, ರೇಖಾ ಚಿಗರಡ್ಡಿ, ಗೋವಿಂದಪ್ಪ ದಾಸರ, ಮಹಾಂತೇಶ ಕಡಕೋಳಮಠ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts