More

    ಸಿಸಿಬಿ ಬಲೆಗೆ ಬಿದ್ದ ಸ್ನೇಹಿತ, ನಟಿ ರಾಗಿಣಿ ದ್ವಿವೇದಿಗೂ ಬಂಧನ ಭೀತಿ

    ಬೆಂಗಳೂರು: ಕನ್ನಡ ಚಲನಚಿತ್ರರಂಗಕ್ಕೆ ಮಾದಕ ದ್ರವ್ಯದ ಮಾಫಿಯಾ ನಂಟಿನ ಪ್ರಕರಣದಲ್ಲಿ ಸಿಸಿಬಿ ಪೊಲೀಸರು, ನಟಿ ರಾಗಿಣಿ ದ್ವಿವೇದಿ ಆಪ್ತ ರವಿ ಅಲಿಯಾಸ್ ರವಿಶಂಕರ್​ನನ್ನು ಗುರುವಾರ ಬಂಧಿಸಿದ್ದಾರೆ. ಇದರ ಬೆನ್ನಲ್ಲೆ ನಟಿ ರಾಗಿಣಿ ದ್ವಿವೇದಿಗೂ ಬಂಧನ ಭೀತಿ ಶುರುವಾಗಿದೆ. ಈಗಾಗಲೇ ಪ್ರಕರಣ ಸಂಬಂಧ ನೋಟಿಸ್ ಪಡೆದಿರುವ ರಾಗಿಣಿ ಸಿಸಿಬಿ ವಿಚಾರಣೆಗೆ ಗುರುವಾರ ಗೈರಾಗಿದ್ದಾರೆ.

    ಸಿಸಿಬಿ ಪೊಲೀಸರು ಬುಧವಾರ ವಶಕ್ಕೆ ಪಡೆದಿದ್ದ ನಟಿಯ ಗೆಳೆಯ ಮತ್ತು ಸಾರಿಗೆ ಇಲಾಖೆ ದ್ವಿತೀಯ ದರ್ಜೆ ಸಹಾಯಕ ರವಿಯನ್ನು 24 ಗಂಟೆ ವಿಚಾರಣೆ ಬಳಿಕ ಬಂಧಿಸಿದರು. ರಾಗಿಣಿಗೆ 2ನೇ ನೋಟಿಸ್ ನೀಡಲಾಗಿದ್ದು, ಮತ್ತೆ ಗೈರಾದರೆ ಕಠಿಣ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆ ರವಾನಿಸಲಾಗಿದೆ. ಬಂಧಿತ ರವಿ, ಸಿಸಿಬಿ ಪೊಲೀಸರ ವಿಚಾರಣೆ ವೇಳೆ ಸ್ಪೋಟಕ ಮಾಹಿತಿ ನೀಡಿದ್ದಾನೆ. ರಾಗಿಣಿ ಸ್ನೇಹಿತ ಆಗಿರುವ ರವಿ, ಪಬ್, ಪಂಚತಾರ ಹೋಟೆಲ್ ಮತ್ತು ಹೊರವಲಯದ ರೆಸಾರ್ಟ್​ಗಳಲ್ಲಿ ನಡೆದಿದ್ದ ಪಾರ್ಟಿಗಳಲ್ಲಿ ನಟಿ ಜತೆ ಕಾಣಿಸಿಕೊಂಡಿದ್ದ. ದೇಶ-ವಿದೇಶಗಳಲ್ಲೂ ಗೆಳೆಯನ ಜತೆ ರಾಗಿಣಿ ಪ್ರವಾಸ ಮಾಡಿದ್ದರು. ರವಿ ಆಯೋಜಿಸುತ್ತಿದ್ದ ಪಾರ್ಟಿಗಳಲ್ಲಿ ಡ್ರಗ್ಸ್ ಸೇವನೆ ನಡೆದಿರಬಹುದು ಎಂಬ ಶಂಕೆ ಮೇರೆಗೆ ರಾಗಿಣಿ ವಿಚಾರಣೆಗೆ ಸಿಸಿಬಿ ಪೊಲೀಸರು ಮುಂದಾಗಿದೆ.

    ಮಾದಕ ದ್ರವ್ಯ ದಂಧೆಯಲ್ಲಿ ಶಾಮೀಲಾದವರು ಯಾವುದೇ ರಂಗ, ಎಷ್ಟೇ ದೊಡ್ಡವರಾಗಿರಲಿ. ಯಾರನ್ನೂ ಸುಮ್ಮನೆ ಬಿಡುವುದಿಲ್ಲ. ದಂಧೆಯ ಜಾಲ ಬೇಧಿಸಲೆಂದು ವ್ಯವಸ್ಥಿತ ತನಿಖೆ ನಡೆಯುತ್ತಿದ್ದು, ಲಭ್ಯ ಸಾಕ್ಷ್ಯಾಧಾರಗಳ ಆಧಾರದಲ್ಲಿ ಸಂಬಂಧಿಸಿದವರಿಗೆ ನೋಟಿಸ್ ನೀಡಿ ಕರೆದು ವಿಚಾರಣೆ ನಡೆಸಲಾಗುತ್ತಿದೆ.

    | ಬಸವರಾಜ ಬೊಮ್ಮಾಯಿ ಗೃಹ ಸಚಿವ

    ಡ್ರಗ್ಸ್ ವಿಚಾರದಲ್ಲಿ ಹಲವರು ನನಗೆ ಕರೆ ಮಾಡುತ್ತಿದ್ದಾರೆ. ಯಾವ ಕರೆಗೂ ನಾನು ಪ್ರತಿಕ್ರಿಯೆ ನೀಡುತ್ತಿಲ್ಲ. ಹಾಗಂತ ನಾನು ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿಲ್ಲ. ಅರೆಸ್ಟ್ ಆಗಿರುವ ರಾಹುಲ್ ನನ್ನ ರಾಖಿ ಸಹೋದರ. ಅವನು ಒಳ್ಳೆಯವನಷ್ಟೇ ಅಲ್ಲ, ನನ್ನನ್ನು ಅಕ್ಕ ಎಂದೇ ಕರೆಯುತ್ತಾನೆೆ. ರಿಯಲ್ ಎಸ್ಟೇಟ್​ನಲ್ಲಿ ತೊಡಗಿಸಿಕೊಂಡಿರುವ ಆತ ಡ್ರಗ್ಸ್ ಹಗರಣದಿಂದ ದೂರ ಇದ್ದಾನೆ. ಸೋಷಿಯಲ್ ಮೀಡಿಯಾದಲ್ಲಿ ಅವನು ಬಹಳ ಜನಪ್ರಿಯನಾಗಿರುವುದರಿಂದ ಅವನನ್ನು ಬಲಿಪಶು ಮಾಡಲಾಗುತ್ತಿದೆ.
    | ಸಂಜನಾ ಗಲ್ರಾನಿ ನಟಿ

    ಜಮೀರ್​ಗೆ ಡ್ರಗ್ಸ್ ಕಿಂಗ್​ಪಿನ್​ಗೆ ನಂಟು?

    ಡ್ರಗ್ಸ್ ಮಾಫಿಯಾದಲ್ಲಿ ಕಿಂಗ್​ಪಿನ್ ಎಂದೇ ಗುರುತಿಸಿಕೊಂಡಿರುವ ಇಮ್ತಿಯಾಜ್ ಖಾತ್ರಿಗೂ, ಶಾಸಕ ಜಮೀರ್ ಅಹ್ಮದ್ ಖಾನ್​ಗೂ ಏನು ಸಂಬಂಧ ಎಂದು ಪೊಲೀಸರು ತನಿಖೆ ಮಾಡಬೇಕು ಎಂದು ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಆಗ್ರಹಿಸಿದ್ದಾರೆ. ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಬರಗಿ, 2 ವರ್ಷಗಳ ಹಿಂದೆ ಖಾತ್ರಿ ಕೊಟ್ಟ ಪಾರ್ಟಿಯಲ್ಲಿ ಕರ್ನಾಟಕದಿಂದ ಹಲವರು ಭಾಗವಹಿಸಿದ್ದರು ಎಂಬ ಆರೋಪವಿದ್ದು, ಈ ಪಾರ್ಟಿಗೆ ಯಾರ್ಯಾರು ಹೋಗಿದ್ದರು ಎಂಬುದರ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.

    ಕಾಂಗ್ರೆಸ್ ಶಾಸಕ ಎನ್.ಎ. ಹ್ಯಾರಿಸ್ ಪುತ್ರ ಮಹಮದ್ ಹ್ಯಾರಿಸ್ ನಲಪಾಡ್ ಯುವಕನೊಬ್ಬನ ಮೇಲೆ ಹಲ್ಲೆ ನಡೆಸಿದ ಪ್ರಕರಣವನ್ನು ಮರು ತನಿಖೆಗೆ ಒಳಪಡಿಸಬೇಕು. ಡ್ರಗ್ ಸೇವನೆಯಿಂದಲೇ ಗಲಾಟೆಯಾಗಿತ್ತು ಎಂದು ಸಂಸದೆ ಶೋಭಾ ಕರಂದ್ಲಾಜೆ ಆಗ ಆರೋಪ ಮಾಡಿದ್ದರು. ಈಗ ಬಿಜೆಪಿಯ ಸರ್ಕಾರವೇ ಇರುವುದರಿಂದ ಪ್ರಕರಣದ ತನಿಖೆ ಮಾಡಿಸಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಬೇಕು.
    | ಪ್ರಮೋದ ಮುತಾಲಿಕ್ ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ

    ಪ್ರಚಾರಕ್ಕೆ ಬಂದಿಲ್ಲ, ಜಾಗೃತಿಗೆ ಬಂದಿದ್ದೇನೆ!

    ಸ್ಯಾಂಡಲ್​ವುಡ್​ನಲ್ಲಿ ಡ್ರಗ್ಸ್ ಜಾಲಕ್ಕೆ ನಂಟಿದೆ ಎಂಬ ಹೇಳಿಕೆಗೆ ಬದ್ಧವಾಗಿದ್ದು, ಸಿಸಿಬಿಗೆ ಪೂರಕ ದಾಖಲೆ ಒದಗಿಸುವುದಾಗಿ ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ. ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಇಂದ್ರಜಿತ್, ಡ್ರಗ್ಸ್ ವಿರುದ್ಧ ಜಾಗೃತಿ ಮೂಡಿಸಲು ಹೋರಾಟ ಶುರು ಮಾಡಿದ್ದೇನೆ. ಚಿತ್ರರಂಗದ ಕೆಲವರು ಕರೆ ಮಾಡಿ ಬೆಂಬಲ ವ್ಯಕ್ತಪಡಿಸಿ ಹೋರಾಟ ನಿಲ್ಲಿಸದಂತೆ ಸಲಹೆ ನೀಡಿದ್ದಾರೆ. ನನ್ನ ಹೇಳಿಕೆಗೆ ಬದ್ಧನಾಗಿದ್ದೇನೆ ಎಂದು ಸ್ಪಷ್ಟಪಡಿಸಿದರು.

    ಗಾಂಜಾ ಮಾರಾಟಗಾರರ ಬಂಧನ

    ಹುಬ್ಬಳ್ಳಿ: ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಉಪನಗರ ಠಾಣೆ ಪೊಲೀಸರು ಬಂಧಿಸಿದ್ದು, ಅವರಿಂದ 97,400 ರೂ. ಮೌಲ್ಯದ ಗಾಂಜಾ, ವಶಪಡಿಸಿಕೊಂಡಿದ್ದಾರೆ. ಗದಗ ಜಿಲ್ಲೆ ತಿಮ್ಮಾಪುರ ಗ್ರಾಮದ ಮಾರುತಿ ಕಲ್ಲಪ್ಪ ಹರನಶಿಕಾರಿ (21) ಹಾಗೂ ಚಂದಪ್ಪ ಸಿದ್ದಪ್ಪ ಹರನಶಿಕಾರಿ (25) ಬಂಧಿತರು. ಮಾರುತಿ ಹರಿಣಶಿಕಾರಿ ಪಿಯುಸಿ ವಿದ್ಯಾರ್ಥಿಯಾಗಿದ್ದಾನೆ. ಹುಬ್ಬಳ್ಳಿ- ಧಾರವಾಡದ ವಿದ್ಯಾರ್ಥಿಗಳೇ ಬಂಧಿತರ ಟಾರ್ಗೆಟ್ ಆಗಿದ್ದರು ಎನ್ನಲಾಗಿದೆ. ಗದಗದಲ್ಲೂ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಲಾಗಿದ್ದು, 14 ಸಾವಿರ ರೂ. ಮೌಲ್ಯದ ಸುಮಾರು ಗಾಂಜಾ ವಶಪಡಿಸಿಕೊಳ್ಳಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts