More

    ಸನಾತನ ಧರ್ಮಕ್ಕೆ ಅನ್ಯಾಯವಾಗಲು ಬಿಡುವುದಿಲ್ಲ: ಹಿಂದು ಜನ ಜಾಗೃತಿ ಕಾರ್ಯಕ್ರಮ

    ಬಂಕಾಪುರ: ನಾವೆಲ್ಲಾ ಶ್ರೇಷ್ಟವಾದ ಸನಾತನ ಧರ್ಮಕ್ಕೆ ಸೇರಿದವರು. ವಿಶ್ವದ ಕಲ್ಯಾಣಕ್ಕಾಗಿ ಇರುವವರು. ಇದನ್ನು ಕೆಲವರು ಅವಹೇಳನ ಮಾಡುತ್ತಿದ್ದಾರೆ. ನಮಗೆ ಅನ್ಯಾಯವಾದರೆ ಸುಮ್ಮನೆ ಕೂಡುವುದಿಲ್ಲ. ನಮ್ಮ ಸಂಸ್ಕೃತಿ ವಿರುದ್ಧ ಮಾತನಾಡುವವರಿಗೆ ಪಾಠ ಕಲಿಸಲು ನಾವೆಲ್ಲ ಒಂದಾಗಬೇಕು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

    ಪಟ್ಟಣದ ನೆಹರು ಗಾರ್ಡನ್​ನಲ್ಲಿ ಪ್ರತಿಷ್ಠಾಪಿಸಿರುವ ಹಿಂದು ಮಹಾಗಣಪತಿ ಸೇವಾ ಸಮಿತಿ ಶನಿವಾರ ಆಯೋಜಿಸಿದ್ದ ಹಿಂದು ಜನ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

    ಭಾರತ ಸನಾತನ ಸಂಸ್ಕೃತಿಯ ಆಧಾರದ ಮೇಲೆ ಎಲ್ಲರನ್ನು ಒಗ್ಗೂಡಿಸಿಕೊಂಡು ಬಂದಿದೆ. ನಮ್ಮ ಮೈಯಲ್ಲಿ ಸನಾತನ ಹಿಂದು ಧರ್ಮದ ರಕ್ತ ಹರಿಯುತ್ತಿದೆ. ನಾವು ಯಾರಿಗೂ ಅನ್ಯಾಯ ಮಾಡುವುದಿಲ್ಲ. ಆದರೆ, ನಮ್ಮನ್ನು ತಡವಿದರೆ ಸುಮ್ಮನೆ ಕುಳಿತು ಕೊಳ್ಳುವುದಿಲ್ಲ. ಕೆಲವರಿಗೆ ಭಾರತ ಶಕ್ತಿಶಾಲಿಯಾಗುವುದು ಇಷ್ಟವಿಲ್ಲ. ನಮ್ಮ ಸರ್ಕಾರ ಗಲಭೆಯಾದಾಗ ದಂಗೆಕೋರರಿಗೆ ತಕ್ಕ ಶಿಕ್ಷೆ ನೀಡಿದೆ. ಆದರೆ, ಇಂದಿನ ಸರ್ಕಾರ ಅವರ ಮೇಲಿನ ಕೇಸನ್ನು ಖುಲಾಸೆ ಮಾಡಲು ಹೊರಟಿದೆ ಎಂದು ಟೀಕಿಸಿದರು.

    ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಬೆಳಗಾವಿಯಲ್ಲಿ ಪಾಕಿಸ್ತಾನದ ಧ್ವಜ ಹಾರಾಡಿದೆ. ಶಿವಮೊಗ್ಗ, ಕೋಲಾರದಲ್ಲಿ ಕೋಮು ಗಲಭೆಗಳಾಗಿವೆ. ಪೋಲಿಸರ ಮೇಲೆ ಕಲ್ಲು ತೂರಾಡಿದ್ದು ಸಣ್ಣ ಘಟನೆ ಎಂದು ಗೃಹ ಸಚಿವರು ಹೇಳುತ್ತಿದ್ದಾರೆ. ನಮ್ಮ ಹುಡುಗುರು ಇನ್ನೊಬ್ಬರ ವೇಷ ಹಾಕಿಕೊಂಡು ಗಲಭೆ ಮಾಡುವಂಥ ಹೇಡಿಗಳಲ್ಲ. ಭಾರತವನ್ನು ಶ್ರೇಷ್ಠ, ಬಲಿಷ್ಠ ರಾಷ್ಟ್ರವಾಗಿಸಲು ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯಾಗಿಸಲು ಎಲ್ಲರೂ ಕಂಕಣಬದ್ಧರಾಗಿರಬೇಕು ಎಂದರು.

    ಕಾಂಗ್ರೆಸ್​ನಿಂದ ತುಷ್ಟೀಕರಣ ನೀತಿ

    ಕೇಂದ್ರ ಸಚಿವ ಪ್ರಲ್ಹಾದ ಜೋಷಿ ಮಾತನಾಡಿ, ನಮ್ಮ ದೇಶದಲ್ಲಿ ಶೇ. 80ರಷ್ಟು ಹಿಂದುಗಳಿದ್ದರೂ ಕಾಂಗ್ರೆಸ್ ತುಷ್ಟೀಕರಣ ನೀತಿಯಿಂದ ಗಣಪನ ವಿಸರ್ಜನೆಗೆ ತೊಂದರೆಯಾಗುತ್ತಿದೆ. ಕೋರ್ಟ್ ಆದೇಶ ಇದ್ದರೂ ಹುಬ್ಬಳ್ಳಿಯ ಇದ್ಗಾ ಮೈದಾನದಲ್ಲಿ ಗಣಪನನ್ನು ಇಡಲು ಕಾಂಗ್ರೆಸ್​ನವರು ಒಪ್ಪುತ್ತಿಲ್ಲ. ಕೋಲಾರ ಮತ್ತು ಶಿವಮೊಗ್ಗದಲ್ಲಿ ಖಡ್ಗವನ್ನು ಹಿಡಿದು ಮೆರವಣಿಗೆ ಮಾಡಿದವರನ್ನು ಕೇಳುವ ಧೈರ್ಯವಿಲ್ಲ. ಪೊಲೀಸ್ ಸ್ಟೇಷನ್ ಸುಟ್ಟು ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದ ಗಲಭೆಕೋರರನ್ನು ಡಿ.ಕೆ. ಶಿವಕುಮಾರ ಖುಲಾಸೆ ಮಾಡಲು ಮುಂದಾಗಿದ್ದಾರೆ. ಹುಬ್ಬಳ್ಳಿಯ ಗಲಭೆಕೋರರ ಮೇಲಿನ ಕೇಸನ್ನು ಹಿಂತೆಗೆಯಲು ಮುಂದಾಗಿದ್ದು ಶಿವಮೊಗ್ಗ ಗಲಭೆಗೆ ಕಾರಣವಾಗಿದೆ ಎಂದರು.

    ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ಈ ಮೊದಲು ಕಾಂಗ್ರೆಸ್ ಸರ್ಕಾರ ಡಿಸಿಯವರ ಮೂಲಕ ಗಣೇಶ ಉತ್ಸವಕ್ಕೆ ನಿರ್ಬಂಧ ಹೇರಿದ್ದರು. ಬೊಮ್ಮಾಯಿ ಅವರು ಬಂದ ಮೇಲೆ ಎಲ್ಲವನ್ನೂ ಕಿತ್ತೊಗೆಯಲಾಯಿತು ಎಂದರು.

    ಸಭೆಗೂ ಮುನ್ನ ಹಿಂದು ಕಾರ್ಯಕರ್ತರು ಬೈಕ್ ರ‍್ಯಾಲಿ ನಡೆಸಿದರು.

    ಹಿಂದು ಮಹಾಗಣಪತಿ ಸೇವಾ ಸಮಿತಿ ಅಧ್ಯಕ್ಷ ಈರಣ್ಣ ಬಳಿಗಾರ, ಆರ್​ಎಸ್​ಎಸ್ ಮುಖಂಡ ಗಂಗಾಧರ ಮಾಮ್ಲೇಪಟ್ಟಣಶೆಟ್ಟರ, ಸೋಮಶೇಖರ ಗೌರಿಮಠ, ಶಿವಾನಂದ ದೇವಸೂರ, ಹೊನ್ನಪ್ಪ ಹೂಗಾರ, ಉಮೇಶ ಅಂಗಡಿ, ಮುತ್ತಪ್ಪ ಕುರಿ, ಶಿವಾನಂದ ಮ್ಯಾಗೇರಿ, ನರಹರಿ ಕಟ್ಟಿ ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts