More

    ಭಕ್ತ ಮಹಾಸಾಗರದ ನಡುವೆ ಸಾಗಿದ ಮಹಾಕಾಯ: ಚಿತ್ರದುರ್ಗದಲ್ಲಿ ಹಿಂದು ಮಹಾಗಣಪತಿಯ ಶೋಭಾಯಾತ್ರೆ

    ಚಿತ್ರದುರ್ಗ: ಚಿತ್ರದುರ್ಗದಲ್ಲಿ ಶನಿವಾರ ನಡೆದ ಹಿಂದು ಮಹಾಗಣಪತಿಯ ವೈಭವದ ಶೋಭಾಯಾತ್ರೆಗೆ ಲಕ್ಷಾಂತರ ಭಕ್ತರು ಸಾಕ್ಷಿಯಾದರು.

    ವಿಎಚ್‌ಪಿ, ಬಜರಂಗದಳದ ಪ್ರತಿಷ್ಠಾಪಿಸಿದ್ದ ಧನುರ್ಧಾರಿ ಗಣೇಶನಿಗೆ ವೀರ ಸಾವರ್ಕರ್ ಮಂಟಪದಲ್ಲಿ ಪೂಜೆ ಸಲ್ಲಿಸಲಾಯಿತು. ಮಂಟಪದ ಹೊರಭಾಗದಲ್ಲಿ ಅಲಂಕೃತ ಟ್ರಾೃಕ್ಟರ್‌ನಲ್ಲಿ ಗಣಪತಿಯನ್ನು ಸ್ಥಾಪಿಸಿದ ನಂತರ ಅಖಿಲ ಭಾರತೀಯ ವಿಶ್ವ ಹಿಂದು ಪರಿಷತ್ ಸಹ ಕಾರ್ಯದರ್ಶಿ ಹೊಸದಿಲ್ಲಿಯ ಅಂಬರೀಷ್ ಸಿಂಗ್, ಮಠಾಧೀಶರು ಪುಷ್ಪಾರ್ಚನೆ ಮಾಡುವ ಮೂಲಕ ಶೋಭಾಯಾತ್ರೆಗೆ ಚಾಲನೆ ನೀಡಿದರು.

    ಶೋಭಾಯಾತ್ರೆ ಸಾಗಿದ ಬಿ.ಡಿ. ರಸ್ತೆಯುದ್ದಕ್ಕೂ ಕೇಸರಿ ಶಾಲು, ಪೇಟ ಧರಿಸಿದ್ದ ಯುವಕ, ಯುವತಿಯರು, ಮಕ್ಕಳು ಡಿಜೆ ಸದ್ದಿಗೆ ಕುಣಿದು ಕುಪ್ಪಳಿಸಿದರು. ನಾಲ್ಕೂವರೆ ಕಿ.ಮೀ.ಗೂ ಅಧಿಕ ದೂರದ ಮೆರವಣಿಗೆ ಮಾರ್ಗದಲ್ಲಿ ಒಂದೂವರೆ -ಎರಡು ಕಿ.ಮೀ.ವರೆಗೂ ಜನರು ಕಿಕ್ಕಿರಿದು ಸೇರಿದ್ದರು. ಕೋವಿಡ್ ಕಾರಣಕ್ಕೆ ಕಳೆದ ಎರಡು ವರ್ಷಗಳಿಂದ ಸರಳವಾಗಿದ್ದ ಶೋಭಾಯಾತ್ರೆಯ ಸಂಭ್ರಮಕ್ಕೆ ಈ ವರ್ಷ ಕೋಡಿ ಬಿದ್ದಿತ್ತು.

    ಗಣಪತಿಯ ಮುಂಭಾಗದಲ್ಲಿ ಅಲಂಕೃತ ಶ್ರೀರಾಮ, ಆಂಜನೇಯ, ವೀರ ಸಾವರ್ಕರ್, ಛತ್ರಪತಿ ಶಿವಾಜಿ ಮಹಾರಾಜ್, ಭಾರತಾಂಬೆ ಭಾವಚಿತ್ರಗಳು ಸಾಗಿದವು. ಮದಕರಿನಾಯಕ ವೃತ್ತದಲ್ಲಿ ವಿನಾಯಕನ ಮೇಲೆ ಹೆಲಿಕಾಪ್ಟರ್ ಮೂಲಕ ಪುಷ್ಪವೃಷ್ಟಿ ಸುರಿದಾಗ ಜನರು ಭಕ್ತಿಯ ಪರಾಕಾಷ್ಠೆಗೆ ತಲುಪಿದರು. ಗಣಪತಿ ಬಪ್ಪಾ ಮೋರಯಾ ಎಂಬ ಘೋಷಣೆ ಮೊಳಗಿಸಿದರು.ಭಕ್ತ ಮಹಾಸಾಗರದ ನಡುವೆ ಸಾಗಿದ ಮಹಾಕಾಯ: ಚಿತ್ರದುರ್ಗದಲ್ಲಿ ಹಿಂದು ಮಹಾಗಣಪತಿಯ ಶೋಭಾಯಾತ್ರೆ

    ಕಲಾ ತಂಡಗಳ ಮೆರುಗು

    ಮಹಾರಾಷ್ಟ್ರದ ನಾಸಿಕ್‌ನ ರಣರಂಗ್ ತಂಡದ ಡೋಲು ನೃತ್ಯ ಪ್ರಮುಖ ಆಕರ್ಷಣೆಯಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯ ಚಂಡೆ ಮದ್ದಳೆ ನಿನಾದ ಭಕ್ತಿಭಾವ ಹೊರಹೊಮ್ಮಿಸಿತು. ಪ್ರತಿ ನಿಮಿಷಕ್ಕೂ ಬದಲಾಗುತ್ತಿದ್ದ ಇಂಪಾದ ಸದ್ದು ಕಿವಿಗೆ ಮುದ ನೀಡುತ್ತಿತ್ತು. ಸ್ಥಳೀಯ ಡೊಳ್ಳು, ಉರುಮೆ, ತಮಟೆ ಸಹಿತ ನಾನಾ ಕಲಾ ತಂಡಗಳು ಶೋಭಾಯಾತ್ರೆಯ ಮೆರುಗು ಹೆಚ್ಚಿಸಿದವು.

    ಶೋಭಾಯಾತ್ರೆಗೆ ಜಿಲ್ಲೆಯ ಜತೆಗೆ ಬೆಂಗಳೂರು, ತುಮಕೂರು, ಬೆಳಗಾವಿ, ಹುಬ್ಬಳ್ಳಿ, ಹಾವೇರಿ, ಶಿವಮೊಗ್ಗ, ತುಮಕೂರು, ದಾವಣಗೆರೆ, ಬಳ್ಳಾರಿ ಹಾಗೂ ಹೊರ ರಾಜ್ಯದಿಂದಲೂ ಭಕ್ತ ಸಮೂಹ ಹರಿದು ಬಂದಿತ್ತು.ಭಕ್ತ ಮಹಾಸಾಗರದ ನಡುವೆ ಸಾಗಿದ ಮಹಾಕಾಯ: ಚಿತ್ರದುರ್ಗದಲ್ಲಿ ಹಿಂದು ಮಹಾಗಣಪತಿಯ ಶೋಭಾಯಾತ್ರೆ

    ದಾರಿಯುದ್ದಕ್ಕೂ ನಾನಾ ಸಂಘಟನೆಗಳು, ವರ್ತಕರು, ದಾನಿಗಳು, ಭಕ್ತರಿಗೆ ಉಪಾಹಾರ, ಊಟ, ಮಜ್ಜಿಗೆ, ನೀರು, ತಂಪು ಪಾನೀಯದ ವ್ಯವಸ್ಥೆ ಮಾಡಿದ್ದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದರು.

    ಶೋಭಾಯಾತ್ರೆಯ ನಂತರ ರಾತ್ರಿ ನಗರದ ಹೊರವಲಯದಲ್ಲಿರುವ ಚಂದ್ರವಳ್ಳಿ ಕೆರೆಯಲ್ಲಿ ಗಣೇಶನನ್ನು ವಿಸರ್ಜಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts