More

    ಕೆಲಸವಿಲ್ಲದೇ ಸಂಬಳ?; ನೂರಾರು ಶಿಕ್ಷಕರಿಗೆ ಕುಳಿತಲ್ಲೇ ವೇತನ ಭಾಗ್ಯ

    | ವಿಲಾಸ ಮೇಲಗಿರಿ ಬೆಂಗಳೂರು

    ಸಾಕ್ಷರತಾ ಸಂಯೋಜಕರ ಸ್ಥಾನದಲ್ಲಿ ಗಟ್ಟಿಯಾಗಿ ಪ್ರತಿಷ್ಠಾಪನೆಯಾಗಿರುವ ರಾಜ್ಯದ ನೂರಾರು ಶಿಕ್ಷಕರು ಆಯುಕ್ತರ ಸ್ಪಷ್ಟ ಆದೇಶವಿದ್ದರೂ ಮಾತೃ ಇಲಾಖೆಗೆ ಮರಳದೆ, ಕೆಲಸವನ್ನೂ ಮಾಡದೆ ಸಂಬಳ ಎಣಿಸುತ್ತಿದ್ದಾರೆ. ಸಚಿವರು, ಸಂಸದರು, ಶಾಸಕರು ಹಾಗೂ ಪ್ರಭಾವಿಗಳಿಂದ ಬಿಇಒ ಮೇಲೆ ಒತ್ತಡ ಹೇರುವ ಮೂಲಕ ನಿಯೋಜಿತ ಸ್ಥಳದಲ್ಲೇ ಶಿಕ್ಷಕರು ಠಿಕಾಣಿ ಹೂಡಿದ್ದಾರೆ. ಒಂದು ಕಡೆ ಸಹಸ್ರಾರು ಶಿಕ್ಷಕರ ಹುದ್ದೆ ಖಾಲಿ ಇದ್ದು, ಶೈಕ್ಷಣಿಕ ಪ್ರಗತಿಗೆ ಧಕ್ಕೆ ಯಾಗುತ್ತಿದೆ. ಇನ್ನೊಂದೆಡೆ ನೂರಾರು ಶಿಕ್ಷಕರು ಕೆಲಸವಿಲ್ಲದೆ ಮಾಸಿಕ 50 ರಿಂದ 60 ಸಾವಿರ ರೂ. ಸಂಬಳ ಜೇಬಿಗಿಳಿಸುತ್ತಿದ್ದಾರೆ. ಇಂಥ ಶಿಕ್ಷಕರ ನಿಯೋಜನೆ ರದ್ದುಗೊಳಿಸುವ ಆಯುಕ್ತರ ಆದೇಶಕ್ಕೂ ಶಿಕ್ಷಣ ಇಲಾಖೆಯಲ್ಲಿ ಕಿಮ್ಮತ್ತಿಲ್ಲದಾಗಿದೆ. ಕೆಲವೇ ಕೆಲವು ಜಿಲ್ಲೆಗಳಲ್ಲಿ ಮಾತ್ರ ಸಂಯೋಜಕರಾಗಿದ್ದ ಶಿಕ್ಷಕರನ್ನು ಮಾತೃ ಇಲಾಖೆಗೆ ಕಳುಹಿಸಲಾಗಿದೆ. ಉಳಿದೆಡೆ ಯಥಾರೀತಿ ಮುಂದುವರಿದಿದ್ದಾರೆ. ಅಷ್ಟೇ ಅಲ್ಲ, ಕೆಲವು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಆಯುಕ್ತರ ಆದೇಶ ತಲುಪದಂತೆ ನೋಡಿಕೊಂಡಿರುವ ಅನುಮಾನಗಳೂ ಇವೆ. ವಿಚಿತ್ರವೆಂದರೆ ಆಯುಕ್ತರು ಮಾತ್ರ ತಮ್ಮ ಆದೇಶ ಪಾಲನೆಯಾಗಿದ್ದು, ಎಲ್ಲಾ ಸಂಯೋಜಕರು ಮಾತೃ ಇಲಾಖೆಗೆ ಹಿಂದಿರುಗಿದ್ದಾರೆ ಎಂದುಕೊಂಡಿದ್ದಾರೆ!

    ಪ್ರಭಾವದ ಬ್ರೇಕ್: ಆಯುಕ್ತರು ವಿವರಣಾತ್ಮಕ ಅಧಿಕೃತ ಜ್ಞಾಪನಾ ಪತ್ರ ಹೊರಡಿಸಿದ್ದರೂ ಶಿಕ್ಷಣ ಸಚಿವರು ಮುಂದಿನ ಆದೇಶದವರೆಗೆ ಯಥಾಸ್ಥಿತಿ ಮುಂದುವರಿಸುವಂತೆ ಸೂಚಿಸಿದ್ದಾರೆ. ಅದಕ್ಕೆ ಮಾರುತ್ತರ ನೀಡಿರುವ ಆಯುಕ್ತರು, ಸಂಯೋಜಕರ ನಿಯೋಜನೆ ರದ್ದುಪಡಿಸುವ ಅನಿವಾರ್ಯತೆ ಸ್ಪಷ್ಟಪಡಿಸಿದ್ದಾರೆ. ಆದರೂ ಅನೇಕ ತಾಲೂಕುಗಳಲ್ಲಿ ಸಂಯೋಜಕರು ತಮ್ಮ ಪ್ರಭಾವ ಬಳಸಿ ನಿಯೋಜನೆ ರದ್ದು ಆದೇಶಕ್ಕೆ ಬ್ರೇಕ್ ಹಾಕಿದ್ದಾರೆ.

    ಇದರಿಂದ ಶಿಕ್ಷಣ ಇಲಾಖೆ ಆಯುಕ್ತರು ಮಾಡಿದ ಕಟ್ಟು ನಿಟ್ಟಿನ ಆದೇಶಕ್ಕೆ ಕವಡೆಕಾಸಿನ ಕಿಮ್ಮತ್ತು ಇಲ್ಲದಾಗಿದೆ. ಜತೆಗೆ ಅಧಿಕಾರಿ ಮತ್ತು ಶಿಕ್ಷಣ ಸಚಿವರ ನಡುವೆ ಹಗ್ಗಜಗ್ಗಾಟಕ್ಕೂ ಕಾರಣವಾಗಿದೆ. ಹುದ್ದೆ ಖಾಲಿ, ನ್ಯಾಯಾಂಗ ನಿಂದನೆ, ಮಾತೃ ಇಲಾಖೆಯಲ್ಲಿ ಶಿಕ್ಷಕರ ಅವಶ್ಯಕತೆ, ಸಂಯೋಜಕರ ಹುದ್ದೆಗೆ ಸಿ.ಆರ್.ಪಿ./ಬಿ.ಆರ್.ಪಿ. ಬಳಕೆ ಸೇರಿದಂತೆ ನಾನಾ ಕಾರಣಗಳನ್ನು ಉಲ್ಲೇಖಿಸಿ ಆಯುಕ್ತರು ಅನ್ಯ ಇಲಾಖೆಗೆ ನಿಯೋಜನೆಗೆ ತೆರಳಿದವರನ್ನು ವಾಪಸ್ ಕರೆಸಲು ಫರ್ವನು ಹೊರಡಿಸಿದ್ದರೂ ಪ್ರಯೋಜನವಾಗಿಲ್ಲ.

    ಮುಸುಕಿನ ಗುದ್ದಾಟಕ್ಕೆ ಮುನ್ನುಡಿ: ಸಂಯೋಜಕರ ನಿಯೋಜನೆ ರದ್ದುಗೊಳಿಸುವ ಆದೇಶ ಹಿಂಪಡೆಯಲು ಶಿಕ್ಷಣ ಸಚಿವರು ಆಯುಕ್ತರಿಗೆ ಸೂಚನೆ ನೀಡಿದ್ದಾರೆ. ಇದನ್ನೇ ನೆಪವಾಗಿಟ್ಟುಕೊಂಡ ಅನೇಕ ತಾಲೂಕು ಸಾಕ್ಷರತಾ ಸಂಯೋಜಕರು ತಮ್ಮ ತಮ್ಮ ಕ್ಷೇತ್ರಗಳ ಸಚಿವರು ಹಾಗೂ ಶಾಸಕರ ಮೂಲಕ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗಳ ಮೇಲೆ ಆದೇಶ ಹಿಂಪಡೆಯಲು ಒತ್ತಡ ತರುತ್ತಿದ್ದಾರೆ. ಇದು ಈಗ ಸಚಿವರು ಮತ್ತು ಅಧಿಕಾರಿಗಳ ನಡುವಿನ ಮುಸುಕಿನ ಗುದ್ದಾಟಕ್ಕೆ ಕಾರಣವಾಗಿದೆ.

    ಹಲವು ಬಾರಿ ಆದೇಶ: ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಸರ್ಕಾರ ಕಾಯ್ದೆಯಡಿ ಕಡ್ಡಾಯಗೊಳಿಸಿರುವ ಚುನಾವಣಾ ಕಾರ್ಯ, ಜನಗಣತಿ ಹಾಗೂ ಮಕ್ಕಳ ಗಣತಿ ಕಾರ್ಯಕ್ರಮಗಳನ್ನು ಹೊರತುಪಡಿಸಿ ಇತರ ಇಲಾಖಾ ಕಾರ್ಯಕ್ರಮಗಳಿಗೆ ನಿಯೋಜನೆ ನಿಷೇಧಿಸಿರುವುದಾಗಿ ಸುತ್ತೋಲೆ ಜಾರಿಯಲ್ಲಿದೆ.

    ನ್ಯಾಯಾಲಯ ನಿಂದನೆ?: ಉಚ್ಛ ನ್ಯಾಯಾಲಯದ ಆದೇ ಶದ ಹಿನ್ನೆಲೆಯಲ್ಲಿ ಶಿಕ್ಷಕರನ್ನು ಬೋಧಕೇತರ ಕಾರ್ಯಗಳಿಗೆ / ಕಚೇರಿಗಳಿಗೆ ನಿಯೋಜಿಸಿದಲ್ಲಿ ನ್ಯಾಯಾಲಯದ ನಿಂದನೆಗೆ ಗುರಿಯಾಗ ಬೇಕಾಗಿರುವುದರಿಂದ ಈ ಬೋಧಕ ರನ್ನು ಯಾವುದೇ ಕಾರಣಕ್ಕೂ ಬೋಧ ಕೇತರ ಕಾರ್ಯಗಳಿಗೆ/ಕಚೇರಿಗಳಿಗೆ ನಿಯೋ ಜನೆ ಮಾಡುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಸ್ಪಷ್ಟಪಡಿಸಿದ್ದಾರೆ.

    25,000 ಖಾಲಿ ಹುದ್ದೆ: ಶಿಕ್ಷಣ ಇಲಾಖೆಯಲ್ಲಿ 25,000ಕ್ಕೂ ಹೆಚ್ಚು ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆ ಖಾಲಿ ಇದೆ. ಅವುಗಳ ಭರ್ತಿಯೂ ಆಗುತ್ತಿಲ್ಲ. ಜತೆಗೆ ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಶಿಕ್ಷಕರ ಸೇವೆ ಅವಶ್ಯಕತೆ ಇರುತ್ತದೆ.

    ತಾಲೂಕು ಸಾಕ್ಷರತಾ ಸಂಯೋಜಕರ ನಿಯೋಜನೆ ರದ್ದುಪಡಿಸುವಂತೆ ಸ್ಪಷ್ಟ ನಿರ್ದೇಶನ ನೀಡಿದ್ದೇನೆ. ಶಿಕ್ಷಕರಿಗೆ ಅನ್ಯ ಕೆಲಸ ಸರಿಯಲ್ಲ. ಬೋಧಕರಾಗಿಯೇ ಕೆಲಸ ಮಾಡಬೇಕೆಂದು ಹೈಕೋರ್ಟ್ ಕೂಡ ಹೇಳಿದೆ. ಬಿಇಒಗಳು ನಿಯೋಜನೆ ಹಿಂಪಡೆಯ ಬೇಕು. ಸಾಕ್ಷರತಾ ಸಂಯೋಜಕರ ಕೆಲಸವನ್ನು ಬೇಕಿದ್ದರೆ ಸಿಆರ್​ಪಿ, ಬಿಆರ್​ಪಿಗಳಿಂದ ಮಾಡಿಸಿಕೊಳ್ಳಬಹುದು.

    | ಡಾ. ಆರ್.ವಿಶಾಲ್ ಆಯುಕ್ತರು, ಸಾರ್ವಜನಿಕ ಶಿಕ್ಷಣ ಇಲಾಖೆ

    300ಕ್ಕೂ ಹೆಚ್ಚು ಸಿಬ್ಬಂದಿ..: ಪ್ರಸ್ತುತ ರಾಜ್ಯದ ಉಪ ನಿರ್ದೇಶಕರುಗಳಿಂದ ಪಡೆದ ಮಾಹಿತಿಯಂತೆ 84 ಜನ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರು ಅನ್ಯ ಇಲಾಖೆಯಲ್ಲಿ ಬೋಧಕ/ಬೋಧಕೇತರ ವೃಂದದಲ್ಲಿ ಕರ್ತವ್ಯ ನಿರ್ವಹಿಸುತ್ತಿರು ವುದು ಕಂಡು ಬಂದಿದೆ. ಆದರೆ, ಇನ್ನೊಂದು ಮೂಲದ ಪ್ರಕಾರ 300 ಕ್ಕೂ ಹೆಚ್ಚು ಶಿಕ್ಷಕರು ನಿಯೋಜನೆ ಮೇಲೆ ಅನ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದಾಗಿ ಹೇಳಲಾಗಿದೆ.

    ನಿಯೋಜನೆ ಹಿನ್ನೆಲೆ?: ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರುಗಳನ್ನು ವಿವಿಧ ಸಾಕ್ಷರತಾ ಕಾರ್ಯಕ್ರಮಗಳ ಅನುಷ್ಠಾನಕ್ಕೆ ರಾಜ್ಯದ 30 ಜಿಲ್ಲೆಗಳ ಎಲ್ಲ ತಾಲೂಕುಗಳಿಗೆ ಒಬ್ಬರಂತೆ ತಾಲೂಕು ಸಂಯೋಜಕರುಗಳನ್ನಾಗಿ ನಿಯೋಜನೆ ಮೇರೆಗೆ ನೇಮಕ ಮಾಡಿಕೊಳ್ಳಲು ಜಿಲ್ಲಾ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಿಗೆ ಅನುಮತಿ ನೀಡಿ ಅದೇಶಿಸಲಾಗಿತ್ತು. ಅದರಂತೆ ಜಿಲ್ಲಾ ಸಿಇಒಗಳು 2018-19 ರಿಂದ 2020-21ನೇ ಸಾಲಿನವರೆಗೆ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರುಗಳನ್ನು ಸಾಕ್ಷರತಾ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ನಿಯೋಜಿಸಿದ್ದರು. ಈ ಶಿಕ್ಷಕರ ನಿಯೋಜನೆ ಮಾರ್ಚ್-2021ಕ್ಕೆ ಅಂತ್ಯವಾಗಿದೆ. ಜತೆಗೆ ಕೆಲವು ಶಿಕ್ಷಕರನ್ನು ಬೋಧಕೇತರ ಕಾರ್ಯಗಳಿಗೂ ಬೇರೆ ಬೇರೆ ಇಲಾಖೆಗಳಿಗೆ ನಿಯೋಜಿಸಲಾಗಿದೆ.

    ಡಾ.ರಾಜ್​ ಸಿನಿಮಾ ಹೆಸರಲ್ಲೊಂದು ಕನಸು, ಪಾರ್ವತಮ್ಮನವರ ಜನ್ಮದಿನದಂದು ನನಸು: ಡಿ. 6ರಂದು ಅಪ್ಪು ರೋಮಾಂಚಕ ಅನುಭವದ ಝಲಕ್​

    ಬೆಂಗಳೂರಿನಲ್ಲಿ ನಡೆದ ಅಂತಾರಾಷ್ಟ್ರೀಯ ವೈದ್ಯರ ಸಮ್ಮೇಳನದಲ್ಲೇ ಹರಡಿತು ಒಮಿಕ್ರಾನ್!: ಎಲ್ಲವೂ ಗುಟ್ಟುಗುಟ್ಟು.. ಮಾಡಲಾಯಿತೇ ನಿರ್ಲಕ್ಷ್ಯ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts