More

    ಕುವೆಂಪು ಕಾದಂಬರಿಗೆ ಸಮಾಜ ಕಟ್ಟುವ ಹೊಣೆಗಾರಿಕೆ

    ಶಿವಮೊಗ್ಗ: ಕುವೆಂಪು ಅವರ ಕಾದಂಬರಿಗಳು ಸಮಾಜ ಕಟ್ಟುವ ಸಾಮಾಜಿಕ ಹೊಣೆಗಾರಿಕೆಯನ್ನು ಹೊಂದಿವೆ ಎಂದು ಚಿಂತಕಿ, ಬರಹಗಾರ್ತಿ ಪ್ರೊ. ಸಬಿತಾ ಬನ್ನಾಡಿ ಬಣ್ಣಿಸಿದರು.
    ಸಹ್ಯಾದ್ರಿ ಕಲಾ ಕಾಲೇಜಿನ ಸಭಾಂಗಣದಲ್ಲಿ ಶನಿವಾರ ಕುವೆಂಪು ವಿವಿ, ಸಹ್ಯಾದ್ರಿ ಕಲಾ ಕಾಲೇಜಿನ ಭಾಷಾಶಾಸ್ತ್ರ ಮತ್ತು ಪಿಜಿ ಇಂಗ್ಲಿಷ್ ವಿಭಾಗಗಳು ಹಾಗೂ ಕಡೆಕೊಪ್ಪಲು ಪ್ರತಿಷ್ಠಾನದಿಂದ ಕುವೆಂಪು: ನಾಡು ನುಡಿಯ ರೂಪಕ ಕುರಿತ ಎರಡು ದಿನಗಳ ವಿಚಾರ ಸಂಕಿರಣದಲ್ಲಿ ಕಾದಂಬರಿ ಕುರಿತು ಅವರು ವಿಷಯ ಮಂಡಿಸಿದರು.
    ಕುವೆಂಪು ಅವರ ಕಾದಂಬರಿಗಳು ತಾಂತ್ರಿಕತೆಯನ್ನು ಕಟ್ಟಿಕೊಡುತ್ತವೆ. ಅವರ ಕಾದಂಬರಿಗಳು ಕೇವಲ ಓದು ಮತ್ತು ಅನುಭವವಷ್ಟೇ ಆಗಿರಲಿಲ್ಲ. ಅವುಗಳು ತಮ್ಮ ಚಿಂತನೆಗಳನ್ನು ಬದಲಿಸುತ್ತವೆ. ಕಾದಂಬರಿಗಳನ್ನು ಓದುವ ಜತೆಗೆ ನಮಗೇ ಅರಿವಿಲ್ಲದೆ ನಮ್ಮ ಬೆಳವಣಿಗೆಯೂ ಆಗುತ್ತದೆ. ಹಾಗಾಗಿ ಕುವೆಂಪು ಅವರನ್ನು ಇಡಿಯಾಗಿ ನೋಡಬೇಕೋ ವಿನಃ ಬಿಡಿಯಾಗಿ ನೋಡಲು ಸಾಧ್ಯವಿಲ್ಲ ಎಂದರು.
    18 ವರ್ಷದಿಂದ ಆರಂಭಗೊಂಡ ಕುವೆಂಪು ಅವರು ಬರವಣಿಗೆ ಸರಿಸುಮಾರು 65 ವರ್ಷದವರೆಗೆ ಮುಂದುವರಿದಿತ್ತು. ಅದು ಕೇವಲ ಬರವಣಿಗೆ ಮಾತ್ರ ಆಗಿರಲಿಲ್ಲ, ಅವರ ಬದುಕಾಗಿತ್ತು. ಬರವಣಿಗೆ ಎನ್ನುವುದು ದೊಡ್ಡ ಹೊಣೆಗಾರಿಕೆಯಾಗಿದ್ದು, ಅದನ್ನು ಇಷ್ಟಬಂದಂತೆ ಬರೆಯಲು ಆಗುವುದಿಲ್ಲ. ಲೋಕ, ನಾಡು ಕಟ್ಟುವುದರಲ್ಲಿಯೂ ಬರವಣಿಗೆ ಪಾತ್ರ ದೊಡ್ಡದಿದೆ ಎಂದು ಹೇಳಿದರು.
    ಕುವೆಂಪು ಅವರು ಮಲೆನಾಡಿನಲ್ಲಿ ಜನಿಸಿದ್ದರೂ ಯಾವುದಕ್ಕೂ ಅಂಟಿಕೊಳ್ಳದ ವ್ಯಕ್ತಿತ್ವ ಅವರದ್ದು. ಹಾಗಾಗಿ ಅವರ ಕಾದಂಬರಿಗಳು ಮಲೆನಾಡನ್ನು ಕಟ್ಟುವ ಜವಾಬ್ದಾರಿ ಹೊತ್ತಿವೆ. ಆದರೆ ಪ್ರಸ್ತುತ ವರ್ತಮಾನಗಳಿಂದ ಇಡೀ ಮಲೆನಾಡನ್ನೇ ರಕ್ತ ಸಿಕ್ತವನ್ನಾಗಿಸುವ ಪ್ರಯತ್ನ ನಡೆಯುತ್ತಿದೆ ಎಂದರು.
    ಕುವೆಂಪು: ಭಾಷಿಕ ಚಿಂತನೆಗಳು ಕುರಿತು ಮೈಸೂರಿನ ಚಿಂತಕ ಡಾ. ಆರ್.ಚಲಪತಿ ಮತ್ತು ವೈಚಾರಿಕತೆ ಕುರಿತು ಪ್ರಾಧ್ಯಾಪಕ ಪ್ರೊ. ಮೇಟಿ ಮಲ್ಲಿಕಾರ್ಜುನ ಅವರು ವಿಷಯ ಮಂಡಿಸಿದರು. ಮಧ್ಯಾಹ್ನ ಸಾಗರದ ಸ್ಪಂದನ ತಂಡದಿಂದ ಮಹಾ ಕವಿ ಕುವೆಂಪು ರಚನೆ, ಎಂ.ವಿ.ಪ್ರತಿಭಾ ನಿರ್ದೇಶನದ ಮಹಾರಾತ್ರಿ ನಾಟಕ ಪ್ರದರ್ಶನಗೊಂಡಿತು.
    ಸಹ್ಯಾದ್ರಿ ಕಾಲೇಜಿನ ಪ್ರಾಚಾರ್ಯರಾದ ಡಾ. ಕೆ.ಬಿ.ಧನಂಜಯ್, ಡಾ. ಎಂ.ಕೆ.ವೀಣಾ, ವಿಚಾರ ಸಂಕಿರಣದ ಸಂಘಟನಾ ಕಾರ್ಯದರ್ಶಿ ಪ್ರೊ. ಟಿ.ಅವಿನಾಶ್, ಉಪನ್ಯಾಸಕ ಜಿ.ಆರ್.ಲವ ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts