More

    ಗರ್ಭಿಣಿ ಪತ್ನಿಯ ಹತ್ಯೆ ಪ್ರಕರಣ: ಪೊಲೀಸರ ಬಂಧನದಿಂದ ತಪ್ಪಿಸಲು ಆರೋಪಿ ಆಡಿದ್ದ ಆಟ ಅಷ್ಟಿಷ್ಟಲ್ಲ; ತನಿಖೆಯಿಂದ ಹೊರಬಿತ್ತು ಸ್ಫೋಟಕ ಸತ್ಯ!

    ಬೆಂಗಳೂರು: ಪತ್ನಿಯನ್ನು ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಸದ್ದುಗುಂಟೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಬಂಧಿತ ಆರೋಪಿ ಪತ್ನಿ ನಾಝ್​ಳನ್ನು ಕೊಲೆ ಮಾಡಿ ಎಸ್ಕೇಪ್ ಅಗಿದ್ದ.

    ಹೆಂಡತಿ ನಾಝ್​ಳನ್ನು ಕೊಲೆ ಮಾಡಲು ಪತಿ ನಾಸಿರ್ ಹುಸೇನ್ ರೂಪಿಸಿದ್ದ ಮಾಸ್ಟರ್ ಪ್ಲ್ಯಾನ್ ಬಯಲಾಗಿತ್ತು. ಕೊಲೆಯಾದ ನಾಝ್​, ಸಾಫ್ಟ್‌ವೇರ್ ಹುಡುಗ ಎಂದು ನಾಸಿರ್ ಹುಸೇನ್​ನನ್ನು ಪ್ರೀತಿಸಿ ವಿವಾಹವಾಗಿದ್ದಳು. ಅರೋಪಿ ನಾಸಿರ್ ಮೂಲತಃ ಪಶ್ಚಿಮ ಬಂಗಾಳದವನಾಗಿದ್ದ ಎಂದು ಪ್ರಾಥಮಿಕ ತನಿಖೆಯಿಂದ ಹೇಳಲಾಗಿತ್ತು. ಆದರೆ ಆರೋಪಿಯನ್ನು ನಿರಂತರ ತನಿಖೆಗೆ ಒಳಪಡಿಸಿದ ಪೊಲೀಸರು, ಆತ ಬಂಗಾಳದವನಲ್ಲ, ಬಾಂಗ್ಲಾದೇಶದವನು ಎಂಬ ಮಾಹಿತಿಯನ್ನು ಖಚಿತ ಪಡಿಸಿದ್ದಾರೆ.

    ಜನವರಿ 16 ರಂದು ಪತಿ ನಾಸಿರ್ ಹುಸೇನ್ನಿಂದ ಪತ್ನಿ ನಾಝ್ ಕೊಲೆಯಾಗಿದ್ದಳು. ಆರೋಪಿ ಪತಿ ನಾಸಿರ್ ಹುಸೇನ್ ಇತಿಹಾಸ ಕೆದಕಿದ ಪೊಲೀಸರು, ಆತ ಬಾಂಗ್ಲಾದೇಶದವನಾಗಿದ್ದು ಅಕ್ರಮವಾಗಿ ಬೆಂಗಳೂರಲ್ಲಿ ಬಂದು ವಾಸಿಸುತ್ತಿದ್ದ. ದೆಹಲಿ ಅಡ್ರೆಸ್​ನಲ್ಲಿ ಆಧಾರ್ ಕಾರ್ಡ್ ಮತ್ತು ಕೊಲ್ಕತ್ತಾ ಅಡ್ರೆಸ್​ನಲ್ಲಿ ಪಾನ್ ಕಾರ್ಡ್ ಮಾಡಿಸಿಕೊಂಡಿದ್ದ. ಬೆಂಗಳೂರು ಅಡ್ರೆಸ್​ಲ್ಲಿ ವೋಟರ್ ಐಡಿ ಹೊಂದಿದ್ದ ಎಂಬ ಸತ್ಯ ಇದೀಗ ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ.

    ನಾಸಿರ್ ಹುಸೇನ್ ತನ್ನ ಬಗ್ಗೆ ಯಾವುದೇ ಮಾಹಿತಿ ನೀಡದೇ ನಾಝ್​ಳನ್ನು ವಿವಾಹವಾಗಿದ್ದ. 6 ತಿಂಗಳ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿ, ಪತ್ನಿಯ ಶೀಲ ಶಂಕಿಸಿ ಕೊಲೆ ಮಾಡಿದ್ದ.

    ಕೊಲೆ ಮಾಡಿ ಬೆಂಗಳೂರಿನಿಂದ ದೆಹಲಿಗೆ ಪ್ರಯಾಣ ಬೆಳೆಸಿ, ಬಾಂಗ್ಲಾಗೆ ಪರಾರಿಯಾಗಲು ನಾಸಿರ್ ಹುಸೇನ್ ಯತ್ನಿಸಿದ್ದ. ದೆಹಲಿಯಿಂದ ಸಿಲಿಗುರಿಗೆ ಹೊರಟಿದ್ದ ಹುಸೇನ್. ಆದರೆ ಪಶ್ಚಿಮ ಬಂಗಾಳ ಪೊಲೀಸರ ಸಹಾಯದಿಂದ ಬಾಂಗ್ಲಾ ಗಡಿ ಭಾಗದ ಸಿಲಿಗುರಿ ಸಮೀದ ಇಸ್ಲಾಂಪುರ್ ಜಿಲ್ಲೆಯಲ್ಲಿ ನಾಸಿರ್ ಹುಸೇನ್ ಸಿಕ್ಕಿಬಿದ್ದಿದ್ದ.

    ಢಾಕಾದಲ್ಲಿ ಹಾರ್ಡ್​ವೇರ್ ಇಂಜಿನಿಯರಿಂಗ್ ತರಬೇತಿ ಪಡೆದಿದ್ದ, ನಾಸಿರ್ ಹುಸೇನ್ ಪದವಿ ಪೂರ್ಣ ಗೊಳಿಸಿರಲಿಲ್ಲ. ಆದರೆ ಲ್ಯಾಪ್​ಟಾಪ್, ಮೊಬೈಲ್ ರಿಪೇರಿಯಲ್ಲಿ ಪರಿಣಿತಿ ಹೊಂದಿದ್ದ. ಆ್ಯಪಲ್ ಕಂಪನಿಯ ಸಿಸ್ಟಂ, ಲ್ಯಾಪ್ಟಾಪ್ ಸರಿ ಮಾಡಿಕೊಡುವುದನ್ನು ಚೆನ್ನಾಗಿ ಕಲಿತಿದ್ದ.

    ಹಾಗಾದ್ರೆ ಆರೋಪಿ ಭಾರತಕ್ಕೆ ಕಾಲಿಟ್ಟಿದ್ದು ಹೇಗೆ?
    ಆರೋಪಿ‌ ಸಿಲಿಗುರಿ ಮೂಲಕ ಕೊಲ್ಕತ್ತಾಗೆ ಪ್ರವೇಶ ಪಡೆದಿದ್ದ. ನಂತರ ನಕಲಿ ದಾಖಲೆ ಸೃಷ್ಟಿಸಿಕೊಂಡು ಕೆಲಸ ಶುರು ಮಾಡಿದ್ದ. ನಂತರ ಮುಂಬೈ, ದೆಹಲಿ ಸೇರಿದಂತೆ ಗುರ್ಗಾಂವ್​ನಲ್ಲಿ ತನ್ನದೇ ಮೊಬೈಲ್ ರಿಪೇರಿ ಅಂಗಡಿ ಹೊಂದಿದ್ದ. 2019 ರಂದು ಬೆಂಗಳೂರಿಗೆ ಬಂದು ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ. ಪ್ರತಿ ತಿಂಗಳು ನಾಸಿರ್ ಹುಸೇನ್ 75 ಸಾವಿರ ಸಂಬಳ ಪಡೆಯುತ್ತಿದ್ದ. ತಾನು ವಾಸವಿದ್ದ ಮನೆ ಪಕ್ಕದಲ್ಲೇ ಇದ್ದ ನಾಝ್​ಳೊಂದಿಗೆ ಪ್ರೇಮಾಂಕುರವಾಗಿತ್ತು. ಹೀಗಾಗಿ ತಾನು ಯಾರೆಂಬ ಮಾಹಿತಿ ಬಹಿರಂಗ ಪಡಿಸಿದೆ ವಿವಾಹವಾಗಿದ್ದ.

    ಪೊಲೀಸರ ದಿಕ್ಕು ತಪ್ಪಿಸಲು ಆರೋಪಿ ಆಡಿದ್ದ ಆಟ ಅಷ್ಟಿಷ್ಟಲ್ಲ!
    ಆರೋಪಿ‌ ನಾಸಿರ್ ಹುಸೇನ್ ತನ್ನದೇ ಹೆಸರಿನಲ್ಲಿ ಎರಡೆರಡು ವಿಮಾನದ ಟಿಕೆಟ್ ಬುಕ್ ಮಾಡಿದ್ದಲ್ಲದೆ, ಎರಡೆರಡು ಓಯೋ ರೂಂ ಬುಕ್ ಮಾಡಿದ್ದ. ಒಂದು ಕಡೆ ಚೆಕ್ ಇನ್ ಮಾಡಿ ಮತ್ತೊಂದು ಕಡೆ ವಾಸ್ತವ್ಯ ಹೂಡುತ್ತಿದ್ದ. ಆಗಾಗ ಮೊಬೈಲ್ ಆನ್ ಮಾಡಿ ಆಫ್ ಮಾಡುತ್ತಿದ್ದ. ನಂತರ ಕ್ಷಣಾರ್ಧದಲ್ಲಿ ಬೇರೆ ಕಡೆಗೆ ಹೊರಟು ಹೋಗುತ್ತಿದ್ದ. ಆರೋಪಿಯನ್ನು ಪೊಲೀಸರು ಬೆನ್ನಟ್ಟಿ ತಲುಪುವುದರೊಳಗೆ ಒಂದೂವರೆ ಗಂಟೆಯಷ್ಟು ದೂರ ಮುಂದೆ ಸಾಗುತ್ತಿದ್ದ. ಆದರೆ ಪೊಲೀಸರ ಬುದ್ಧಿವಂತೆಕೆ ಮಧ್ಯೆ ನಾಸಿರ್ ಹುಸೇನ್ ತನ್ನ ಜಾಣತನ ಪ್ರದರ್ಶಿಸುವಲ್ಲಿ ಸೋತಿದ್ದ. ಪಶ್ಚಿಮ ಬಂಗಾಳದ ಏಳು ಜನ ಎಸ್​ಪಿ ಅಧಿಕಾರಿಗಳ ಜತೆ ನಿರಂತರ ಸಂಪರ್ಕದಲ್ಲಿದ್ದ ಈಶಾನ್ಯ ವಿಭಾಗ ಡಿಸಿಪಿ ಸಿಕೆ ಬಾಬಾ, ಆರೋಪಿ ನಾಸಿರ್ ಹುಸೇನ್​ನನ್ನು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts