More

    ಚಪ್ಪಲಿ ಬಿಟ್ಟು ಮಾತನಾಡಿದ ಆ ವ್ಯಕ್ತಿ ಕೇಳಿದ ಪ್ರಶ್ನೆಯಿಂದ ಕಸಿವಿಸಿಯಾಯಿತು- ಸುರೇಶ‌ಕುಮಾರ್‌

    ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಸದಾ ತಮ್ಮ ಅನುಭವಗಳನ್ನು ಹಂಚಿಕೊಳ್ಳುವ ಕೆಲವೇ ಕೆಲವು ಸಚಿವರ ಪೈಕಿ ಶಿಕ್ಷಣ ಸಚಿವ ಸುರೇಶ್‌ಕುಮಾರ್‌ ಕೂಡ ಒಬ್ಬರು. ಮಕ್ಕಳಿಂದ ಹಿಡಿದು ವಯೋವೃದ್ಧರವರೆಗಿನ ಜನರ ಕುರಿತು ತಮಗಾಗಿರುವ ಅನುಭವಗಳನ್ನು ಅವರು ಸದಾ ಹಂಚಿಕೊಳ್ಳುತ್ತಲೇ, ಜನರಿಗೆ ಅತಿ ಹತ್ತಿರವಾಗಿದ್ದಾರೆ.

    ಅಂಥದ್ದೇ ಒಂದು ಪ್ರಸಂಗವನ್ನು ಅವರು ಈಗ ತಮ್ಮ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಕೆಲವು ರಾಜಕಾರಣಿಗಳು ಮಾಡುವ ಕೆಟ್ಟ ಕೆಲಸಗಳಿಂದಾಗಿ ರಾಜಕಾರಣಿಗಳು ಎಂದರೆ ನಕಾರಾತ್ಮಕ ಭಾವಗಳೇ ಎಲ್ಲೆಡೆ ತುಂಬಿ ತುಳುಕಾಡುತ್ತಿರುವ ಈ ಸಂದರ್ಭದಲ್ಲಿಯೂ ರಾಜಕೀಯದವರು ಎಂದರೆ ದೇವರು ಎಂದೇ ಭಾವಿಸುವ ಮುಗ್ಧರೂ ಇದ್ದಾರೆ ಎನ್ನುವುದಕ್ಕೆ ಈ ಒಂದು ಘಟನೆಯೂ ಸಾಕ್ಷಿ ಎನ್ನಬಹುದು.

    ಅಂದಹಾಗೆ ಸುರೇಶ್‌ಕುಮಾರ್‌ ಏನು ಬರೆದಿದ್ದಾರೆ ನೋಡಿ:
    ಕಸಿವಿಸಿ ಜೊತೆಗೆ ಎಚ್ಚರಿಕೆ ಕೊಟ್ಟ ಪ್ರಸಂಗ ಸಾರ್ವಜನಿಕ ಬದುಕಿನಲ್ಲಿ ಆಗಾಗ ಜರುಗುವ ಈ ರೀತಿಯ ಪ್ರಸಂಗಗಳು ಕಸಿವಿಸಿ ಉಂಟು ಮಾಡುತ್ತವೆ. ಜೊತೆಗೆ ಎಚ್ಚರಿಕೆಯನ್ನೂ ಸಹ. ಇಂದು ಬೆಳಗ್ಗೆ ಬೆಂಗಳೂರಿಗೆ (ಬಾಗಲಕೋಟೆಯಿಂದ) ವಾಪಸ್ಸು ಬರುತ್ತಿದ್ದಾಗ, ಬೆಳಗಿನ ಜಾವದ ಆ ವಾತಾವರಣದಲ್ಲಿ ಸ್ವಲ್ಪ ದೂರ ನಡೆಯೋಣ ಎಂದೆನಿಸಿ ಹೈವೇನಲ್ಲಿ ನಡೆಯಲು ಪ್ರಾರಂಭಿಸಿದೆ.

    ಸ್ವಲ್ಪ ದೂರ ನಡೆದ ನಂತರ ನನ್ನ ಮುಂದೆ ಒಂದು ಟಿವಿಎಸ್ 50 ಗಾಡಿ ನಿಂತುಕೊಂಡಿತು. ಓರ್ವ ವ್ಯಕ್ತಿ ನನ್ನನ್ನು ಮಾತನಾಡಿಸಲು ಬಂದರು. ವಿಜಯಕುಮಾರ್ ಎಂದು ಅವರ ಹೆಸರು. ಹತ್ತಿರದ ಹಳ್ಳಿಯೊಂದರಲ್ಲಿ ಕಿರಾಣಿ ಅಂಗಡಿ ಇಟ್ಟುಕೊಂಡು ಸಣ್ಣ ವ್ಯಾಪಾರ ಮಾಡುತ್ತಿದ್ದಾರೆ. ಎಷ್ಟೇ ಹೇಳಿದರೂ ಚಪ್ಪಲಿ ಹಾಕಿಕೊಳ್ಳಲಿಲ್ಲ ನನ್ನೊಡನೆ ಮಾತನಾಡುವಾಗ ತನ್ನ ಚಪ್ಪಲಿ ಬಿಟ್ಟೇ ಮಾತನಾಡತೊಡಗಿದ ವಿಜಯ ಕುಮಾರ್ ಅವರು, ನಾನು ಎಷ್ಟೇ ಹೇಳಿದರೂ ಚಪ್ಪಲಿ ಹಾಕಿಕೊಳ್ಳಲಿಲ್ಲ. ತನ್ನ ಮಕ್ಕಳ ಶಾಲೆ ತರಗತಿ (2 ಮತ್ತು 4ನೆ ತರಗತಿಗಳು) ಯಾವಾಗ ಪ್ರಾರಂಭವಾಗುತ್ತದೆ ಎಂದು ಕೇಳುವುದು ಅವರ ಉದ್ದೇಶವಾಗಿತ್ತು.

    ಆ ವ್ಯಕ್ತಿಯ ಮುಗ್ಧತೆ ನನ್ನ ಮನಸ್ಸನ್ನು ಬಹಳಷ್ಟು ಸಮಯ ಕಾಡಿತು. ಇಂತಹ ಪ್ರಸಂಗಗಳು ಮುಜುಗರ ಉಂಟು ಮಾಡುವ ಜೊತೆಗೆ ಇಂತಹವರು ನನ್ನ ಮೇಲೆ ಇಟ್ಟಿರುವ ಭಾವನೆ ನನ್ನ ಜವಾಬ್ದಾರಿಯನ್ನೂ ಹೆಚ್ಚಿಸುತ್ತದೆ ಎಂದು ಬರೆದುಕೊಂಡಿದ್ದಾರೆ.

    ಕರೊನಾ ಭೀತಿಯ ನಡುವೆ ಎಷ್ಟೋ ಪಾಲಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿರುವ ಈ ಸಂದರ್ಭದಲ್ಲಿ ತಮ್ಮ ಮಕ್ಕಳ ಶೈಕ್ಷಣಿಕ ಭವಿಷ್ಯವೇ ಹಾಳಾಗಿಬಿಡುತ್ತದಲ್ಲ ಎನ್ನುವ ಆತಂಕದಲ್ಲಿ ಇನ್ನಷ್ಟು ಪಾಲಕರು ಇದ್ದಾರೆ. ಮಕ್ಕಳು ಶಾಲೆಗೆ ಹೋಗದಿದ್ದರೆ ಎಂಬ ಚಿಂತೆಯಲ್ಲಿ ಇರುವ ಪಾಲಕರಿಗೆ ಉದಾಹರಣೆ ವಿಜಯ್‌ಕುಮಾರ್‌ ಅವರು.

    ನಿತ್ಯ ಭವಿಷ್ಯ| ಈ ರಾಶಿಯವರಿಂದು ಅತಿ ವೇಗದ ವಾಹನ ಚಲಾಯಿಸದಿರಿ

    ವಿಮಾನ ದುರಂತ: ಟೂರ್ನಿಯಲ್ಲಿ ಪಾಲ್ಗೊಳ್ಳಲು ತೆರಳಿದ್ದ ಫುಟ್‌ಬಾಲ್‌ ಆಟಗಾರರ ಸಾವು

    ಪತ್ನಿಯ ಜತೆ ಲೈಂಗಿಕಕ್ರಿಯೆ ನಡೆಸಲು ಆಗುತ್ತಿಲ್ಲ, ನನ್ನ ಈ ಚಟ ಕಾರಣವಾಗಿಹೋಯ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts