More

    ಕಾಂಗ್ರೆಸ್‌ನಲ್ಲಿ ಪಕ್ಷನಿಷ್ಠ ಕಾರ್ಯಕರ್ತರ ಕಡೆಗಣನೆ

    ಶಿಕಾರಿಪುರ: ತಾಲೂಕಿನಲ್ಲಿ ಮೂಲ ಕಾಂಗ್ರೆಸಿಗರು, ಸ್ವಾಭಿಮಾನಿ ಕಾರ್ಯಕರ್ತರಿಗೆ ಕವಡೆ ಕಿಮ್ಮತ್ತಿಲ್ಲ. ನಾವು ಕಷ್ಟಪಟ್ಟು (ಹುತ್ತ) ಪಕ್ಷ ಕಟ್ಟಿದರೆ ನಾಗರಹಾವೊಂದು ಸೇರಿಕೊಂಡು ನಿಷ್ಠಾವಂತರನ್ನು ಹೊರಗೆ ಹಾಕಿಸುತ್ತಿದೆ. ಸ್ವಾಭಿಮಾನಕ್ಕೆ ಧಕ್ಕೆ ಬಂದರೆ ಅಲ್ಲಿ ನಮ್ಮ ಪಾದರಕ್ಷೆಯನ್ನೂ ಬಿಡಬಾರದು ಎನ್ನುವ ಡಾ. ಅಂಬೇಡ್ಕರ್ ಸಂದೇಶದಂತೆ ನಾವು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದೇವೆ ಎಂದು ಪುರಸಭೆ ಸದಸ್ಯ ಹುಲ್ಮಾರ್ ಮಹೇಶ್ ಹೇಳಿದರು.

    ಸಚಿವ ಮಧು ಬಂಗಾರಪ್ಪ ಅವರ ದುರಹಂಕಾರ, ಸರ್ವಾಧಿಕಾರಿ ಧೋರಣೆ ನಮ್ಮನ್ನು ಘಾಸಿಗೊಳಿಸಿದೆ. ಮಧು ಬಂಗಾರಪ್ಪ ಹಿತ್ತಾಳೆ ಕಿವಿಯಾಗಿ ಯಾರದೋ ಮಾತಿಗೆ ತಲೆಯಾಡಿಸುತ್ತಿದ್ದಾರೆ. ಇದರ ಫಲ ಈ ಚುನಾವಣೆಯಲ್ಲಿ ಗೊತ್ತಾಗುತ್ತದೆ. ಈ ಚುನಾವಣೆಯಲ್ಲಿ ಗೀತಾ ಶಿವರಾಜ್‌ಕುಮಾರ್ ಸೋತರೆ ಅದಕ್ಕೆ ಸಚಿವ ಮಧು ಬಂಗಾರಪ್ಪ ಅವರ ವರ್ತನೆಯೇ ಕಾರಣ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ಹೊರಹಾಕಿದರು.
    ದಶಕಗಳಿಂದ ಪಕ್ಷ ಕಟ್ಟಿದವರು ನಾವು, ನಮ್ಮ ಸ್ವಾಭಿಮಾನಕ್ಕೆ ಧಕ್ಕೆ ಬಂದರೆ ಸಹಿಸಲ್ಲ. ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿ ವಿರುದ್ಧ ಕೆಲಸ ಮಾಡಿದವರು ಈಗ ತಾಲೂಕಿನಲ್ಲಿ ಆಟ ಆಡುತ್ತಿದ್ದಾರೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಹಿಂದಿನ ಗಿಮಿಕ್ ನಡೆಯುವುದಿಲ್ಲ. ಪಕ್ಷದ ನಿಷ್ಠಾವಂತರಿಗೆ ಮಾಡುತ್ತಿರುವ ಅವಮಾನದ ಫಲವನ್ನು ಇವರು ಉಣ್ಣಲೇಬೇಕು ಎಂದರು.
    ಅಭಿವೃದ್ಧಿಯ ಹರಿಕಾರ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಜನಪರ ಕಾಳಜಿ, ಅಭಿವೃದ್ಧಿ ಚಿಂತನೆಗಳನ್ನು ಮೆಚ್ಚಿ ನಾನು ಬೇಷರತ್ ಬಿಜೆಪಿ ಸೇರಿದ್ದೇನೆ. ರಾಷ್ಟ್ರ ರಕ್ಷಣೆಯ ದೃಷ್ಟಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿಯಾಗಬೇಕು ಎಂದು ಆಶಿಸಿದರು.
    ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದವರಿಗೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನಾನು ಸ್ಪರ್ಧಿ ಆಗಬಹುದು ಎಂಬ ಭಯದಿಂದ ಇಂತಹ ಹುನ್ನಾರ ಮಾಡಲಾಗಿದೆ. ಅವರು ಯಾವ ಕಾರಣಕ್ಕೂ ಗೆಲ್ಲುವುದಿಲ್ಲ. ಕಳೆದ ಚುನಾವಣೆ ಆದಂತೆ ಮುಂದೆಯೂ ಆಗುತ್ತದೆ ಎಂಬ ಭ್ರಮೆಯಲ್ಲಿದ್ದಾರೆ. ಅದು ಯಾವ ಕಾರಣಕ್ಕೂ ಸಾಧ್ಯವಿಲ್ಲ. ಮೊದಲು ಭ್ರಮೆಯಿಂದ ಹೊರಬರಲಿ ಎಂದರು.
    ಮೊದಲು ಮಧು ಬಂಗಾರಪ್ಪ ಅವರ ವರ್ತನೆ ಬದಲಾಗಬೇಕು. ಬದಲಾಗದಿದ್ದರೆ ಆ ಪಕ್ಷಕ್ಕೇ ದೊಡ್ಡ ನಷ್ಟ. ಸಂಸದ ಬಿ.ವೈ.ರಾಘವೇಂದ್ರ ಈ ಬಾರಿ ಎರಡು ಲಕ್ಷ ಮತಗಳ ಭಾರಿ ಅಂತರದಿಂದ ಗೆಲುವು ಸಾಧಿಸಲಿದ್ದಾರೆ. ಅವರ ಗೆಲುವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಶಿವಮೊಗ್ಗ ಜಿಲ್ಲೆಯ ಜನ ನಿಜವಾದ ನಾಯಕನಿಗೆ ಮತ ನೀಡುತ್ತಾರೆ ಎಂದು ಅಭಿಪ್ರಾಯಪಟ್ಟರು.
    ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಎಂ.ಬಿ.ಚನ್ನವೀರಪ್ಪ, ಪುರಸಭೆ ಸದಸ್ಯ ಪ್ರಶಾಂತ್ ಜೀನಳ್ಳಿ, ರಾಘವೇಂದ್ರ, ಮಿಲಿಟರಿ ಬಸವರಾಜ್, ಹಳ್ಳೂರು ಪರಮೇಶ್ವರಪ್ಪ, ಡಿ.ಎಲ್.ಬಸವರಾಜ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts