More

    ನಂಗೆ ಸಾಯಲು ಇಷ್ಟ ಇಲ್ಲ ಆಂಟಿ… ಪ್ಲೀಸ್‌ ಏನಾದ್ರೂ ಹೇಳಿ…

    ನಂಗೆ ಸಾಯಲು ಇಷ್ಟ ಇಲ್ಲ ಆಂಟಿ... ಪ್ಲೀಸ್‌ ಏನಾದ್ರೂ ಹೇಳಿ...ನಾನು ಹೈಸ್ಕೂಲ್‌ ಹೋಗುವ ಹುಡುಗಿ. ನಮ್ಮ ಮನೆಯಲ್ಲಿ ನನ್ನನ್ನು ಕಂಡರೆ ಯಾರಿಗೂ ಆಗುವುದಿಲ್ಲ. ನಾನು ಏನು ಮಾಡಿದರೂ ನನ್ನದೇ ತಪ್ಪು ಅನ್ನುತ್ತಾರೆ. ನನಗೆ ದೊಡ್ಡವಳಾದ ಮೇಲೆ ಏನಾದರೂ ಸಾಧಿಸ ಬೇಕೆನ್ನುವ ಆಸೆ. ಆದರೆ ಹೀಗೆ ಎಲ್ಲರೂ ಬಯ್ಯುವುದು ನೋಡಿ ನನಗೆ ಸಾಯಬೇಕೆಂದು ಅನ್ನಿಸುತ್ತದೆ. ನಾವು ಶ್ರೀಮಂತರಲ್ಲ. ನನ್ನ ಎಲ್ಲ ಕಷ್ಟಗಳಿಗೆ ಸಾವೊಂದೇ ಪರಿಹಾರವೇ? ನನಗೆ ನಮ್ಮ ಮನೆಯಲ್ಲಿ ಯಾರಾದರೂ ಬೈದರೆ ಸಿಟ್ಟು ಬರುತ್ತದೆ. ಆತ್ಮಹತ್ಯೆ ಮಾಡಿಕೊಳ್ಳಬೇಕೆನಿಸುತ್ತದೆ. ನನಗೆ ಸಾಯಲು ಮನಸ್ಸಿಲ್ಲ ನನ್ನ ಪತ್ರ ನಿಮಗೆ ಸ್ಪಷ್ಟವಾಗಿ ಅರ್ಥವಾಗಿಲ್ಲವೆನಿಸುತ್ತದೆ. ನನ್ನ ಕಷ್ಟ ಹೇಗೆ ಹೇಳಲೋ ಗೊತ್ತಾಗ್ತಿಲ್ಲ. ಆದರೂ ದಯವಿಟ್ಟು ನನ್ನ ಸಮಸ್ಯೆಗೆ ಪರಿಹಾರ ತಿಳಿಸಿ ಆಂಟಿ… ನನಗೆ ಸಾಯಬೇಕೆನಿಸಿದರೂ ಒಂದೊಂದು ಬಾರಿ ಭಯವಾಗುತ್ತದೆ. ಮನಸ್ಸಿಗೆ ತುಂಬಾ ನೋವಾಗುತ್ತದೆ. ಏನು ಮಾಡಲಿ ತಿಳಿಸಿ.

    ಉತ್ತರ: ಮಗೂ ಈಗ ಏನು ಮಾಡಬೇಕು ಅಂತ ನಾನು ತಿಳಿಸುತ್ತೇನೆ. ತಪ್ಪದೇ ಮಾಡುವಿಯಾ? ಈ ನಿನ್ನ ಸಿಟ್ಟು ಭಯ ಕೋಪ ಎಲ್ಲವೂ ತಾನಾಗಿಯೇ ಹೊರಟುಹೋಗುತ್ತದೆ. ಕನ್ನಡಿಯಲ್ಲಿ ನಿನ್ನನ್ನು ನೀನು ನೋಡಿಕೋ. ನಿನ್ನ ಕಣ್ಣುಗಳು ನಿನ್ನ ಪ್ರತಿಬಿಂಬವನ್ನು ನೋಡುತ್ತಿದೆಯಲ್ಲವೇ? ನಿನ್ನ ಕಣ್ಣಿನಲ್ಲಿರುವ ಬೆಳಕನ್ನು ನೋಡು. ನಿನ್ನ ಕಣ್ಣುಗಳು ಫಳಫಳನೆ ಹೊಳೆಯುತ್ತಿದೆಯಲ್ಲವೇ? ಈಗ ನಿನ್ನ ಎರಡು ಹಸ್ತಗಳನ್ನು ನಿನ್ನ ಮುಖದ ಮುಂದೆ ಹಿಡಿದುಕೋ. ಬೆರಳುಗಳನ್ನು ಮುಚ್ಚು ತೆಗೆ . ಹೀಗೆ ಐದು ಸಲ ಮಾಡು. ನಿನ್ನ ಬೆರಳುಗಳು ನೀಳವಾಗಿ ಸುಂದರವಾಗಿ ಕಾಣುತ್ತಿದೆಯಲ್ಲವೇ? ಸುಲಭವಾಗಿ ಮುಚ್ಚಿ ತೆಗೆದು ಮಾಡಲು ಆಗುತ್ತದೆಯಲ್ಲವೇ? ಈಗ ನಿನ್ನ ಕಿವಿಗಳನ್ನು ನಿನ್ನ ಕಿರು ಬೆರಳಿನಿಂದ ಗಟ್ಟಿಯಾಗಿ ಮುಚ್ಚಿಕೊಂಡು ಕೇಳಿಸದಂತೆ ಮಾಡಿಕೋ..ನಿನ್ನ ಹೆಸರನ್ನು ಹೇಳಿಕೋ. ಕೇಳಿಸಲಿಲ್ಲ ಅಲ್ಲವೇ? ಈಗ ಬೆರಳನ್ನು ತೆಗೆ, ಹೆಸರನ್ನು ಪಿಸುಮಾತಿನಲ್ಲಿ ಹೇಳು. ಕೇಳಿಸಿತಲ್ಲವೇ? ಇದಾದನಂತರ ಕನ್ನಡಿಯನ್ನು ಬಿಟ್ಟು, ನಿನ್ನ ಕಾಲುಗಳನ್ನು ನೋಡಿಕೋ. ಒಂದೆರಡು ಹೆಜ್ಜೆ ನಡೆದಾಡು. ಖುಷಿಯಲ್ಲಿ ಒಮ್ಮೆ ಕುಣಿ. ಒಂಟಿ ಕಾಲಿನಲ್ಲಿ ಕುಂಟೇಬಿಲ್ಲೆಯಾಡು.

    ಈಗ ಐದು ನಿಮಿಷ ಕಣ್ಣು ಮುಚ್ಚಿ ದೇವರ ಸ್ಮರಣೆ ಮಾಡಿ. ನಂತರ ಕಣ್ಣುಮುಚ್ಚಿಕೊಂಡೇ ನಿನ್ನನ್ನು ನೀನು ಕೇಳಿಕೋ. ” ಭಗವಂತ ನನಗೆ ಸುಂದರವಾದ ಕಣ್ಣುಗಳನ್ನು ಕೊಟ್ಟಿದ್ದಾನೆ. ಅವು ನಕ್ಷತ್ರದಂತೆ ಹೊಳೆಯುತ್ತಿವೆ. ಇದು ದೇವರ ಉಡುಗೊರೆ. ನಾನು ಸತ್ತರೆ ದೇವರ ಉಡುಗೊರೆಯನ್ನು ತಿರಸ್ಕರಿಸಿದಂತೆ ಆಗುತ್ತದೆ. ಕಣ್ಣು ನಾಶವಾಗುತ್ತದೆ. ದೇವರಿಗೆ ಬೇಸರವಾಗುತ್ತದೆ. ನನ್ನ ಕೈ ಬೆರಳುಗಳು ಎಷ್ಟು ಚೆನ್ನಾಗಿ ಮುಚ್ಚಿ ತೆಗೆಯುತ್ತವೆ. ಇದರಿಂದ ನಾನು ಬೇಕಾದಷ್ಟು ಕೆಲಸ ಮಾಡಲಿ ಎಂದು ದೇವರು ಚೆನ್ನಾಗಿರುವ ಕೈಗಳನ್ನು ಕೊಟ್ಟಿದ್ದಾನೆ. ನಾನು ಕಣ್ಣುಗಳಿಂದ ಓದಿ, ಕೈಗಳಿಂದ ಬರೆದು ಅವನಿಗೆ ಧನ್ಯವಾದಗಳನ್ನು ಅರ್ಪಿಸಬೇಕು. ನನ್ನ ಕಾಲುಗಳು ಬಲಿಷ್ಠವಾಗಿವೆ. ಓಡಬಲ್ಲೆ ಕುಣಿಯಬಲ್ಲೆ. ಇದು ಭಗವಂತ ಕೊಟ್ಟಿರುವ ವರ. ಇದನ್ನು ಉಪಯೋಗಿಸುತ್ತಾ ದೇವಾಲಯದಲ್ಲಿ ಪ್ರದಕ್ಷಿಣೆ ಬಂದು ಭಗವಂತನಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ.” ಈಗ ಕಣ್ಣು ಬಿಡು. ಸುತ್ತಲಿನ ಜಗತ್ತನ್ನು ನೋಡು. ಯೋಚನೆ ಮಾಡು. ನಿನಗೆ ಆರೋಗ್ಯಕರವಾದ ಶರೀರವಿದೆ. ಕಣ್ಣುಗಳಿವೆ.ಕೈಕಾಲುಕಿವಿಗಳಿವೆ. ಈಗ ಇವೆಲ್ಲವೂ ನಿನ್ನ ಅರಿವಿಗೆ ಬಂತಲ್ಲವೇ?

    ಎಷ್ಟೋ ಜನಕ್ಕೆ ಕಣ್ಣೀರುವುದಿಲ್ಲ. ಆದರೂ ಅವರು ಶಾಲೆಗೆ ಹೋಗುತ್ತಾರೆ. ತರಗತಿಯಲ್ಲಿ ತನ್ಮಯತೆಯಿಂದ ಪಾಠ ಕೇಳುತ್ತಾರೆ. ಪರೀಕ್ಷೆಯಲ್ಲಿ ಉತ್ತರಗಳನ್ನು ಬಾಯಿಂದ ಹೇಳುತ್ತಾ ಯಾರಿಂದಲೋ ಬರೆಸುತ್ತಾರೆ. ಹೀಗೇ ಗುರಿ ಸಾಧಿಸಿ ಐ.ಎ.ಎಸ್ ಮಾಡಿದ ಧೀರರಿದ್ದಾರೆ. ನಿನಗೆ ಕಣ್ಣೂಗಳು ಚೆನ್ನಾಗಿವೆ. ಒಂದು ಪದವಿಯನ್ನಾದರೂ ಪಡೆಯ ಬೇಕಲ್ಲವೇ? ಎಷ್ಟೋ ಜನಕ್ಕೆ ಕೈಗಳೇ ಇರುವುದಿಲ್ಲ. ಅವರು ಕಾಲಿನಿಂದ ಬರೆದು ಪರೀಕ್ಷೆಗಳನ್ನು ಪಾಸು ಮಾಡಿ, ವೀಲ್ ಛೇರಿನಲ್ಲಿ ಓಡಾಡುತ್ತಾ ಉನ್ನತ ಹುದ್ದೆಗಳನ್ನು ನಿಭಾಯಿಸುತ್ತಿದ್ದಾರೆ. ನಿನಗೆ ಕೈಗಳಿವೆ ಕಾಲುಗಳಿವೆ ಅವನ್ನೆಲ್ಲಾ ನಿಷ್ಪ್ರಯೋಜವನ್ನಾಗಿಸುತ್ತೀಯಾ? ನೀನೇ ಯೋಚಿಸು. ನಾವು ಶ್ರೀಮಂತರಲ್ಲ ಎಂದು ಬರೆದಿದ್ದೀಯೆ. ಶ್ರೀಮಂತಿಕೆಯೆಂದರೆ ಏನು? ಕೇವಲ ಹಣದಿಂದ ಮಾತ್ರ ಶ್ರೀಮಂತಿಕೆ ಬರುತ್ತದೆಯೇ? ಕಣ್ಣು ಕೈಕಾಲು ಇಲ್ಲದವರಿಗೆ ಇವೆಲ್ಲಾ ಇರುವವರೇ ಶ್ರೀಮಂತರಾಗಿ ಅದೃಷ್ಟವಂತರಾಗಿ ಕಾಣಿಸುತ್ತಾರೆ. ಅವರಿಗಿಂತಾ ನೀನು ಶ್ರೀಮಂತೆಯಲ್ಲವೇ? ಕೆಟ್ಟಗುಣಗಳಿರುವವರಿಗಿಂತಾ ಒಳ್ಳೆಯ ಗುಣವಿರುವವರು ಹೆಚ್ಚು ಶ್ರೀಮಂತರಲ್ಲವೇ? ಮನೆಯವರು ಬಯ್ಯುವುದು ಮಕ್ಕಳು ಬುದ್ಧಿ ಕಲಿಯಲಿ ಎಂದು ಅವರೇನು ನಿನ್ನ ಶತೃಗಳಲ್ಲವಲ್ಲ? ಅವರು ಬಯ್ಗಳ ನಿನಗೆ ಆಶೀರ್ವಾದವಿದ್ದಂತೆ. ನನ್ನ ಒಳ್ಳೆಯದಕ್ಕೇ ಬಯ್ಯುತ್ತಿದ್ದಾರೆಂದು ಭಾವಿಸು. ಆಗ ನಿನಗೆ ನೋವಾಗುವುದೇಇಲ್ಲ. ಹರಿದಾಸರು ಹೇಳಿರುವ ಒಂದು ಮಾತನ್ನು ನೀವು ಶಾಲೆಯ ಪುಸ್ತಕದಲ್ಲಿ ಓದಿದ್ದೀಯೆಂದು ಭಾವಿಸುತ್ತೇನೆ. ” ಈಸಬೇಕು ಇದ್ದು ಜೈಸಬೇಕು” !! ಈ ಬದುಕು ಎನ್ನುವುದು ಒಂದು ಸಮುದ್ರದಂತೆ ಇದರಲ್ಲಿ ಈಜಿ ದಡಸೇರಬೇಕು. ಆಗಲೇ ಗೆದ್ದಂತೆ.

    ನೀನು ಏನಾದರೂ ಸಾಧಿಸಬೇಕೆಂದು ಆಸೆ ಎಂದು ಬರೆದಿದ್ದೀಯೆ. ಸಾಧಿಸುವುದು ಎಂದರೇನು? ಕಷ್ಟಗಳನ್ನು ಎದುರಿಸಿ ಬದುಕುವುದೇ ದೊಡ್ಡ ಸಾಧನೆ. ಅದನ್ನೇ ಬಿಟ್ಟು ಸಾಯುತ್ತೇನೆ ಎಂದರೆ ಏನನ್ನು ಸಾಧಿಸಿದ ಹಾಗಾಯಿತು? ತಪ್ಪಿಲ್ಲದ ನಿನ್ನ ಅಕ್ಷರಗಳನ್ನು ನೋಡಿ ಖುಷಿಯಾಯಿತು. ನಿನ್ನ ಪತ್ರ ಸ್ಪಷ್ಟವಾಗಿ ಅರ್ಥವಾಗಿರುವುದಷ್ಟೇ ಅಲ್ಲ, ನಿನ್ನ ಮನಸ್ಸೂ ಅರ್ಥವಾಯಿತು. ಜಾಣೆ ನೀನು. ಖುಷಿಯಾಗಿರುವುದನ್ನು ಕಲಿತುಕೋ.

    ಡಾ.ಶಾಂತಾ ನಾಗರಾಜ್​ ಅವರ ಆಪ್ತ ಸಲಹೆಗಾಗಿ ಕ್ಲಿಕ್ಕಿಸಿ:

    https://www.vijayavani.net/category/%e0%b2%a8%e0%b2%82%e0%b2%a6%e0%b3%8a%e0%b2%82%e0%b2%a6%e0%b3%81-%e0%b2%95%e0%b2%a5%e0%b3%86/

    ಮೊದಲ ರಾತ್ರಿಯೇ ಎಲ್ಲ ವಿಷಯ ಹೇಳಿದಾಗ ಪತ್ನಿ ಒಪ್ಪಿಕೊಂಡ ಮೇಲೂ ಚಿಂತೆಪಡುವಿರೇಕೆ?

    ಹೆಣ್ಣುಮಕ್ಕಳೆಂದ್ರೆ ಏನೆಂದುಕೊಂಡಿದ್ದೀರಿ? ಅವಳಿಗೆ ಮಕ್ಕಳಾದ್ರೆ ನಿಮ್ಮನ್ನ ಅಪ್ಪ ಎನ್ನಬೇಕೊ? ಅವಳ ಪತಿಯನ್ನೊ?

    ಗಂಡನಿಗೆ ಪತ್ನಿಯ ಮೇಲೆ ದೈಹಿಕ ಕಾಮನೆಗಳೇ ಬರದುದಕ್ಕೆ ಕಾರಣಗಳು ಇವೆಲ್ಲಾ ಇರುತ್ತವಮ್ಮಾ…

    ಗಂಡಿಗಿಂತ ಮೊದ್ಲು ಹುಡುಗಿ ಅವನ ಸಂಬಳ ನೋಡೋದ್ರಿಂದ ಇಷ್ಟೆಲ್ಲಾ ಸಮಸ್ಯೆಯಾಗ್ತಿರೋದು

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts